ಸಾರಾಂಶ
ಚಾಮರಾಜನಗರದಲ್ಲಿ ಡಾ.ಅಂಬೇಡ್ಕರ್ ಆದಿದ್ರಾವಿಡ (ಪೌರಕಾರ್ಮಿಕರ) ಯುವಕರ ಅಭಿವೃದ್ಧಿ ಮಹಾಸಂಘದ ರಾಜ್ಯಾಧ್ಯಕ್ಷ ಡಿ.ಆರ್.ರಾಜು ಮತ್ತು ಗೌರವ ಕಾರ್ಯದರ್ಶಿ ನಂಜಪ್ಪ ಕೆ.ಬಸವನಗುಡಿ ಮಾತನಾಡಿದರು.
ಕನ್ನಡಪ್ರಭ ವಾರ್ತೆ ಚಾಮರಾಜನಗರ
ರಾಜ್ಯದ ಮೈಸೂರು, ಮಂಡ್ಯ, ಚಾಮರಾಜನಗರ, ರಾಮನಗರ, ಕೊಡಗು, ಹಾಸನ ಇನ್ನಿತರ ಜಿಲ್ಲೆಗಳಲ್ಲಿ ಒಟ್ಟು ಸುಮಾರು ೧೦ ರಿಂದ ೧೨ ಲಕ್ಷ ಜನ ಸಂಖ್ಯೆ ಹೊಂದಿರುವ ನಾವು ಗ್ರಾಮಕ್ಕೆ ಸಮೀಕ್ಷೆ ತಂಡ ಬಂದಾಗ ತಪ್ಪದೇ ಆದಿದ್ರಾವಿಡ ಮಾದಿಗ ಎಂದು ನಮೂದಿಸಬೇಕಾಗಿ ರಾಜ್ಯ ಡಾ.ಅಂಬೇಡ್ಕರ್ ಆದಿದ್ರಾವಿಡ (ಪೌರಕಾರ್ಮಿಕರ) ಯುವಕರ ಅಭಿವೃದ್ಧಿ ಮಹಾಸಂಘದ ರಾಜ್ಯಾಧ್ಯಕ್ಷ ಡಿ.ಆರ್.ರಾಜು ಮತ್ತು ಗೌರವ ಕಾರ್ಯದರ್ಶಿ ನಂಜಪ್ಪ ಕೆ.ಬಸವನಗುಡಿ ಪೌರಕಾರ್ಮಿಕರಲ್ಲಿ ಮನವಿ ಮಾಡಿದರು.ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪ ವರ್ಗೀಕರಣ ಮತ್ತು ಅತಿ ಹಿಂದುಳಿದವರಿಗೆ ಪ್ರತ್ಯೇಕ ಕೋಟಾಗಳನ್ನು (ಒಳಮೀಸಲಾತಿ) ನೀಡಲು ಅನುಮತಿಸಿ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದೆ ಮೀಸಲಾತಿ ಪಡೆಯುತ್ತಿರುವ ಯಾವುದೇ ವರ್ಗದಲ್ಲಿರುವ ಹೆಚ್ಚು ಹಿಂದುಳಿದ ಅಥವಾ ಅಂಚಿಗೆ ತಳ್ಳಲ್ಪಟ್ಟಿರುವ ಜಾತಿಗಳಿಗೆ ಆಯಾ ರಾಜ್ಯಗಳು ಒಳಮೀಸಲಾತಿ ನೀಡಬಹುದು ಎಂದು ಐತಿಹಾಸಿಕ ತೀರ್ಪು ನೀಡಿದೆ ಎಂದರು.ಈ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಜಾರಿಗೊಳಿಸುವ ವಿಚಾರಕ್ಕೆ ಸಂಬಂದಿಸಿದಂತೆ ರಾಜ್ಯ ಸರ್ಕಾರ ಕರ್ನಾಟಕ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಎಸ್.ನಾಗಮೋಹನ್ ದಾಸ್ ನೇತೃತ್ವದಲ್ಲಿ ಏಕ ಸದಸ್ಯ ಆಯೋಗವು ಈಗಾಗಲೇ ಮಧ್ಯಂತರ ವರದಿಯನ್ನು ರಾಜ್ಯಸರ್ಕಾರಕ್ಕೆ ಸಲ್ಲಿಸಿದ್ದು ಇದರನ್ವಯ ರಾಜ್ಯದ ಪರಿಶಿಷ್ಟ ಜಾತಿ ಯಲ್ಲಿರುವ ಉಪಜಾತಿಗಳ ವೈಜ್ಞಾನಿಕ ವರ್ಗೀಕರಣ ಮಾಡಲು ಹೊಸ ಸಮೀಕ್ಷೆ ನಡೆಸುವ ಮೂಲಕ ಅಗತ್ಯವಿರುವ ಪ್ರಶ್ನಾವಳಿ ಸಿದ್ದಪಡಿಸಿ ಸಮೀಕ್ಷೆ ತಂಡವು ಮೇ ೫ ರಿಂದ ಮೇ ೨೧ರವರೆಗೆ ಮನೆ ಮನೆಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡು ಇದರ ದತ್ತಾಂಶ ಸಂಗ್ರಹಣೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದಾರೆ ಎಂದರು.ನಮಗೆ ಸ್ವಾತಂತ್ರ್ಯ ಬಂದು ೭೫ ವರ್ಷಗಳ ನಂತರವು ಈಗಿರುವ ಮೀಸಲಾತಿಯನ್ನು ಕೆಲವೇ ಸಮುದಾಯಗಳು ಹೆಚ್ಚು ಪ್ರಯೋಜನ ಪಡೆದು, ಅದರಲ್ಲೂ ಕೂಡ ಇನ್ನಷ್ಟು ಇತರ ಸಮುದಾಯಗಳು ನಾನಾ ಕಾರಣಗಳಿಂದ ಮೀಸಲಾತಿಯ ಲಾಭ ಪಡೆಯದೆ ವಂಚಿತರಾಗಿದ್ದಾರೆ ಎಂದರು. ಲಾಭ ಪಡೆದ ಕೆಲವು ಸಮುದಾಯಗಳೇ ಮತ್ತೇ ಮತ್ತೇ ಮೀಸಲಾತಿಯನ್ನು ಪಡೆಯುತ್ತಾ ಎಲ್ಲೋ ಒಂದು ಕಡೆ ಮೀಸಲಾತಿ ಲಾಭದ ಅಂಕಿ ಅಂಶಗಳು ಕೇಂದ್ರೀಕೃತವಾಗಿ ಪುನಃ ಅದೇ ಬಲಾಡ್ಯ ಸಮುದಾಯ ಮತ್ತು ಕುಟುಂಬಗಳು ಪಡೆಯುತ್ತಿರುವ ಲಕ್ಷಣಗಳು ಗೋಚರಿಸುತ್ತಿರುವುದನ್ನು ಕಾಣಬಹುದು ಎಂದರು. ನಮ್ಮ ಆದಿದ್ರಾವಿಡ ಮಾದಿಗ ಜನಾಂಗವು ಈ ಸಮಾಜದ ಕಟ್ಟ ಕಡೆಯ ಸಮಾಜವಾಗಿದ್ದು ನಾವುಗಳು ಸಾಮಾಜಿಕವಾಗಿ, ಆರ್ಥಿವಾಗಿ, ಶೈಕ್ಷಣಿಕವಾಗಿ ಹಾಗೂ ರಾಜಕೀಯವಾಗಿ ತೀರ ಹಿಂದುಳಿದಿದ್ದು ವಂಚಿತರಾಗಿರುತ್ತೇವೆ ಹಾಗೂ ಕೆನೆ ಪದರದಲ್ಲಿರುತ್ತೇವೆ ಎಂದರು.
ಇಂದರಿಂದಾಗಿ ನಮ್ಮ ಆದಿದ್ರಾವಿಡ ಮಾದಿಗ ಜನಾಂಗದ ಬಂಧುಗಳು ಈಗಾಗಲೇ ಎಸ್ಸಿ ಜಾತಿ ಪ್ರಮಾಣ ಪತ್ರದಲ್ಲಿ ಆದಿದ್ರಾವಿಡ, ಆದಿಕರ್ನಾಟಕ, ಆದಿ ಆಂಧ್ರ, ಆದಿಜಾಂಬವ ಎಂದು ಯಾವುದೇ ಇದ್ದರೂ ನಮ್ಮ ಮೂಲ ಜಾತಿ ಆದ ಮಾದಿಗ ಎಂಬ ಕಾಲಂ ನಲ್ಲಿ ನಮೂದು ಮಾಡಬೇಕಾಗಿ ಮನವಿ ಮಾಡಿದರು. ಮಾದಿಗ ಸಮಾಜದ ಎಲ್ಲಾ ಸಂಘದ ಎಲ್ಲಾ ಉಪಶಾಖೆಯ ಯಜಮಾನರು ಹಾಗೂ ಸಂಘದ ಪದಾಧಿಕಾರಿಗಳು ಹಾಗೂ ಮುಖಂಡರುಗಳು ಈ ಕೆಲಸಕ್ಕೆ ಕೈ ಜೋಡಿಸಬೇಕೆಂದು ಕೇಳಿಕೊಂಡರು. ಪತ್ರಿಕಾಗೋಷ್ಠಿಯಲ್ಲಿ ಶ್ರೀನಿವಾಸ್, ತಂಗಮ್ಮ, ಮಾದಮ್ಮ, ಸಂಗೀತ, ದೊಡ್ಡಮಾದಮ್ಮ ಇದ್ದರು.