ಸಾರಾಂಶ
ಮಂಗಳೂರು ವಿಶ್ವವಿದ್ಯಾನಿಲಯವು ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಸಹಯೋಗದೊಂದಿಗೆ ಮಂಗಳೂರು ವಿ.ವಿ.ಕಾಲೇಜು ರವೀಂದ್ರ ಕಲಾಭವನದಲ್ಲಿ ಸೋಮವಾರ ‘ಶ್ರೀಸಾಮಾನ್ಯರಿಗೆ ಪ್ರಾಚೀನ ಕನ್ನಡ ಸಾಹಿತ್ಯ ಸರಣಿ’ ಉಪನ್ಯಾಸ ಮಾಲಿಕೆಯಡಿ ಪಂಪನ ಕಾವ್ಯಗಳು ವಿಷಯದ ಕುರಿತು ಉಪನ್ಯಾಸ ಏರ್ಪಡಿಸಿತ್ತು.
ಮಂಗಳೂರು ವಿಶ್ವವಿದ್ಯಾನಿಲಯದಿಂದ ಸರಣಿ ಉಪನ್ಯಾಸ ಉದ್ಘಾಟನೆ
ಉಳ್ಳಾಲ: ಪಂಪ ಕರ್ಣನ ಪಾತ್ರದ ಮೂಲಕ ಕುಲದ ಪ್ರಶ್ನೆಯನ್ನು ಚರ್ಚೆಗೆತ್ತಿಕೊಂಡು ಕುಲಕ್ಕೆ ಹೊಸ ವ್ಯಾಖ್ಯೆ ಬರೆದ. ಹುಟ್ಟಿನಿಂದ ಬರುವ ಕುಲ ಕುಲವಲ್ಲ. ಆರ್ಜಿಸಿಕೊಂಡು ಬಂದ ಗುಣ, ಸಾಮರ್ಥ್ಯದಿಂದ ಗೌರವ ಬರುವುದು ಎಂದು ಹೇಳಿ ಸಮಾನತೆಯ ಆಶಯವನ್ನು ಬಿತ್ತಿದ. ಮನುಷ್ಯ ಜಾತಿ ತಾನೊಂದೆ ವಲಂ ಎಂಬುದು ಅವನ ಒಟ್ಟು ಕಾವ್ಯದ ದರ್ಶನವಾಗಿದೆ ಎಂದು ಪಂಪ ಪ್ರಶಸ್ತಿ ಪುರಸ್ಕೃತ ವಿದ್ವಾಂಸ ಪ್ರೊ.ಬಿ.ಎ ವಿವೇಕ ರೈ ಹೇಳಿದ್ದಾರೆ.ಮಂಗಳೂರು ವಿಶ್ವವಿದ್ಯಾನಿಲಯವು ಎಸ್‌ವಿಪಿ ಕನ್ನಡ ಅಧ್ಯಯನ ಸಂಸ್ಥೆ ಸಹಯೋಗದೊಂದಿಗೆ ಮಂಗಳೂರು ವಿ.ವಿ.ಕಾಲೇಜು ರವೀಂದ್ರ ಕಲಾಭವನದಲ್ಲಿ ಸೋಮವಾರ ಆಯೋಜಿಸಿದ ‘ಶ್ರೀಸಾಮಾನ್ಯರಿಗೆ ಪ್ರಾಚೀನ ಕನ್ನಡ ಸಾಹಿತ್ಯ ಸರಣಿ’ ಉಪನ್ಯಾಸ ಮಾಲಿಕೆಯಡಿ ಪಂಪನ ಕಾವ್ಯಗಳು ವಿಷಯದ ಕುರಿತು ಅವರು ಮಾತನಾಡಿದರು.ಇಂದು ಮನುಷ್ಯ ಮಾತು ಮರೆತಿದ್ದಾನೆ. ಭಾಷೆಯ ಪ್ರೀತಿ ಕಡಿಮೆಯಾಗುತ್ತಿದೆ. ಇದು ಅಪಾಯಕಾರಿ. ಸಾಹಿತ್ಯದ ಓದು ನಮ್ಮ ಅಂತರಂಗವನ್ನು ಆನಂದವಾಗಿಡುತ್ತದೆ ಎಂದರು. ಉದ್ಘಾಟನೆ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಕುಲಸಚಿವ ಕೆ. ರಾಜು ಮೊಗವೀರ ಮಾತನಾಡಿ ಬನವಾಸಿ ಪಂಪನ ಮನಮೆಚ್ಚಿದ ಊರು. ಆ ಊರಿನಲ್ಲಿ ಪಂಪ ಪ್ರಶಸ್ತಿ ಪ್ರದಾನವಾಗುತ್ತದೆ. ಪಂಪ ಪ್ರಶಸ್ತಿ ಕನ್ನಡದ ಜ್ಞಾನಪೀಠ. ಅದನ್ನು ಇತ್ತೀಚೆಗೆ ಪಡೆದ ಪ್ರೊ.ವಿವೇಕ ರೈಗಳಿಂದ ಪಂಪನ ಕುರಿತ ಉಪನ್ಯಾಸ ನಡೆಯುತ್ತಿರುವುದು ಶ್ಲಾಘನೀಯ ಎಂದರು.ಮಂಗಳೂರು ವಿವಿ ಹಣಕಾಸು ಅಧಿಕಾರಿ ಪಂಚಲಿಂಗ ಸ್ವಾಮಿ, ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲ ಪ್ರೊ.ಗಣಪತಿ ಗೌಡ ಉಪಸ್ಥಿತರಿದ್ದರು. ಎಸ್ ವಿಪಿ ಕನ್ನಡ ಅಧ್ಯಯನ ಸಂಸ್ಥೆಯ ಅಧ್ಯಕ್ಷ ಡಾ.ನಾಗಪ್ಪ ಗೌಡ ಸ್ವಾಗತಿಸಿದರು. ಡಾ.ಧನಂಜಯ ಕುಂಬ್ಳೆ ನಿರೂಪಿಸಿದರು.