ಮನೆಗಳ ತೆರವು: ಬೀದಿಗೆ ಬಿದ್ದ ಕುಟುಂಬಗಳು

| Published : Sep 09 2025, 01:01 AM IST

ಮನೆಗಳ ತೆರವು: ಬೀದಿಗೆ ಬಿದ್ದ ಕುಟುಂಬಗಳು
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡಪ್ರಭ ವಾರ್ತೆ ಸಿಂದಗಿ ಮನೆಗಳನ್ನು ತೆರವುಗೊಳಿಸುವಂತೆ ನ್ಯಾಯಾಲಯ ಆದೇಶ ನೀಡಿದ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು, ತಾಲೂಕು ಅಧಿಕಾರಿಗಳು ಪೊಲೀಸರ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು 84 ಮನೆಗಳನ್ನು ತೆರವುಗೊಳಿಸಿದರು. ಪಟ್ಟಣದ ಪುರಸಭೆ ವ್ಯಾಪ್ತಿಯ ಸ.ನಂ.842/2 ಪ್ರದೇಶದಲ್ಲಿ ವಾಸಿಸುವಂತೆ ಈ ಹಿಂದೆಯೇ ಪುರಸಭೆಯಿಂದ 84 ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ನೀಡಲಾಗಿತ್ತು.

ಕನ್ನಡಪ್ರಭ ವಾರ್ತೆ ಸಿಂದಗಿ

ಮನೆಗಳನ್ನು ತೆರವುಗೊಳಿಸುವಂತೆ ನ್ಯಾಯಾಲಯ ಆದೇಶ ನೀಡಿದ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು, ತಾಲೂಕು ಅಧಿಕಾರಿಗಳು ಪೊಲೀಸರ ಭದ್ರತೆಯಲ್ಲಿ ಕಾರ್ಯಾಚರಣೆ ನಡೆಸಿ ಸುಮಾರು 84 ಮನೆಗಳನ್ನು ತೆರವುಗೊಳಿಸಿದರು. ಪಟ್ಟಣದ ಪುರಸಭೆ ವ್ಯಾಪ್ತಿಯ ಸ.ನಂ.842/2 ಪ್ರದೇಶದಲ್ಲಿ ವಾಸಿಸುವಂತೆ ಈ ಹಿಂದೆಯೇ ಪುರಸಭೆಯಿಂದ 84 ಕುಟುಂಬಗಳಿಗೆ ನಿವೇಶನ ಹಕ್ಕುಪತ್ರ ನೀಡಲಾಗಿತ್ತು. ಆದರೆ, ಇದೀಗ ಕೋರ್ಟ್‌ ಆದೇಶದ ಹಿನ್ನೆಲೆಯಲ್ಲಿ ಮನೆಗಳನ್ನು ತೆರವುಗೊಳಿಸಲು ಕಾರ್ಯಾಚರಣೆ ಪ್ರಾರಂಭಿಸಲಾಯಿತು. ಪಟ್ಟಣದ ಪುರಸಭೆ ಸ.ನಂ.842/2ರ 2.10 ಎಕರೆ ಪ್ರದೇಶದಲ್ಲಿ 14ಪಕ್ಕಾ ಮನೆಗಳು, 20 ಕಚ್ಚಾ ಮನೆಗಳು, 41 ಶೆಡ್‌ಗಳು ಹಾಗೂ 9 ಖಾಲಿ ನಿವೇಶನಗಳಿವೆ.

ಮನೆ ತೆರವುಗೊಳಿಸಿದರೆ ಬಡ ನಿವಾಸಿಗಳು ಎಲ್ಲಿ ಹೋಗಬೇಕು ಎಂದು ಕಳೆದ 20 ವರ್ಷಗಳಿಂದ ಇಲ್ಲಿನ ವಾಸಿಗಳು ಪುರಸಭೆ ಅಧಿಕಾರಿಗಳಲ್ಲಿ ಅಳಲನ್ನು ತೋಡಿಕೊಂಡೆ ಬಂದಿದ್ದಾರೆ. ಆದರೆ, ಪುರಸಭೆ ಯಾವುದಕ್ಕು ತಲೆಕೆಡಿಸಿಕೊಂಡಿಲ್ಲ. ಇದೀಗ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕಾಗುತ್ತದೆ ಎಂದು ಪುರಸಭೆ ಸಿಬ್ಬಂದಿ ಪೊಲೀಸರ ಭದ್ರತೆಯೊಂದಿಗೆ ಬಂದು ತೆರವು ಕಾರ್ಯಾಚರಣೆ ಆರಂಭಿಸಿದ್ದಾರೆ.

ಇನ್ನು, ಫಲಾನುಭವಿ ನಿರಾಶ್ರಿತರಿಗೆ ಪಟ್ಟಣದ ಅಲ್ಪಸಂಖ್ಯಾತರ ವಸತಿ ನಿಲಯ, ವೆಂಕಟೇಶ್ವರ ಕಲ್ಯಾಣ ಮಂಟಪ, ಶಾದಿಮಹಲ್‌ ಸೇರಿದಂತೆ ವಿವಿಧೆಡೆ ತಾತ್ಕಾಲಿಕ ವಸತಿಗೆ ವ್ಯವಸ್ಥೆ ಮಾಡಲಾಗಿದೆ. ಪುರಸಭೆ ಅವರು ತೆರವು ಕಾರ್ಯಾಚರಣೆ ಪ್ರಾರಂಭಿಸುತ್ತಿದ್ದಂತೆ ಕೆಲ ಕುಟುಂಬಸ್ಥರು ಪ್ರತಿಭಟನೆ ನಡೆಸಿ ಅಧಿಕಾರಿಗಳೊಂದಿಗೆ ವಾಗ್ವಾದವನ್ನು ನಡೆಸಿದರು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಕೆಲವರು ಅಂಬೇಡ್ಕರ್ ವೃತ್ತದ ಬಳಿ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಮನೆ ತೆರವುಗೊಂಡ ಕುಟುಂಬಸ್ಥರು ತಮ್ಮ ಸಾಮಾನು ಸರಂಜಾಮುಗಳನ್ನು ರಸ್ತೆಯಲ್ಲಿ ಹಾಕಿಕೊಂಡು ದಿಕ್ಕು ತೋಚದೇ ಕುಳಿತುಕೊಂಡಿದ್ದರು. ಬಳಿಕ, ಪುರಸಭೆ ನಿಗದಿ ಪಡಿಸಿದ ವಸತಿ ಕೇಂದ್ರಕ್ಕೆ ಹೋಗಲು ತಯಾರಾದರು.

ತೆರವು ಕಾರ್ಯಾಚರಣೆಯಲ್ಲಿ ಪುರಸಭೆ ಮುಖ್ಯಾಧಿಕಾರಿ ರಾಜಶೇಖರ.ಎಸ್. ಸೇರಿ ಅಧಿಕಾರಿಗಳು, 45 ಪೌರಕಾರ್ಮಿಕರು, 25 ಜನ ನೀರು ಸರಬರಾಜು ಸಿಬ್ಬಂದಿ,15 ಟ್ರ್ಯಾಕ್ಟರ್, 2 ಜೆಸಿಬಿ ಬಳಸಲಾಗಿದೆ. ಪೊಲೀಸ್‌ ಇಲಾಖೆಯ 30 ಮಹಿಳಾ, 80 ಪುರುಷ ಸಿಬ್ಬಂದಿ, 6 ಜನ ಎಸ್ಸೈ, ಇಬ್ಬರು ಇನ್ಸಪೆಕ್ಟರ್‌, ಒಂದು ಐಆರ್‌ಬಿ ಮತ್ತು 2 ಡಿಆರ್ ತುಕಡಿಗಳನ್ನು ನಿಯೋಜನೆ ಮಾಡಲಾಗಿತ್ತು.

ಬಾಕ್ಸ್‌

ಪುರಸಭೆಯ ಯಡವಟ್ಟು ಕಾರಣವೇ..?

ಈ ಜಾಗದಲ್ಲಿ ವಾಸಿಸುತ್ತಿದ್ದ ನಿವಾಸಿಗಳಿಗೆ ವಾಸಿಸಲು ಪುರಸಭೆಯೇ ಈ ಹಿಂದೆ ಹಕ್ಕುಪತ್ರಗಳನ್ನು ನೀಡಿದೆ. ಆದರೆ, ಈ ಜಾಗ ಬೇರೆಯವರ ಹೆಸರಿನಲ್ಲಿದ್ದು, ಆ ಜಾಗದ ಮಾಲಿಕ ಕಳೆದ 20 ವರ್ಷಗಳಿಂದ ಜಾಗ ತನ್ನದೆಂದು ಪುರಸಭೆ ವಿರುದ್ದ ನ್ಯಾಯಾಲಯದಲ್ಲಿ ಹೋರಾಟ ನಡೆಸಿದ್ದ. ಅಂದಿನಿಂದ ಇಂದಿನವರೆಗೂ ಪುರಸಭೆ ಆಡಳಿತ, ಮುಖ್ಯಾಧಿಕಾರಿಗಳ ನಿರ್ಲಕ್ಷದಿಂದ ಪುರಸಭೆಯಿಂದ ಮುಖ್ಯಾಧಿಕಾರಿ ಆಗಲಿ ಅಥವಾ ಪುರಸಭೆ ಪರ ವಕೀಲರಾಗಲಿ ನ್ಯಾಯಾಲಯಕ್ಕೆ ಹಾಜರಾಗಿಲ್ಲ ಎನ್ನಲಾಗಿದೆ. ಹೀಗಾಗಿ, ಪುರಸಭೆ ಸ.ನಂ. 842/2ರ 2.10 ಎಕರೆ ಪ್ರದೇಶ ಮರಿಯಂಬಿ ಅಬ್ದುಲಸಾಹೇಬ ಕರ್ಜಗಿ ಅವರಿಗೆ ಸೇರಿದ್ದು, ಈ ಜಾಗದಲ್ಲಿ ಕಟ್ಟಲಾದ ಮನೆಗಳನ್ನು ತೆರವುಗೊಳಿಸಿ ಮೂಲ ಮಾಲಿಕನಿಗೆ ಆಸ್ತಿ ಸ್ವಾಧೀನಕ್ಕೆ ನೀಡುವಂತೆ ನ್ಯಾಯಾಲಯ ಆದೇಶ ಮಾಡಿದೆ. ಅಲ್ಲದೇ, ಮನೆಗಳನ್ನು ತೆರವು ಕೂಡ ಮಾಡಲಾಗಿದೆ.