ಸಾರಾಂಶ
ಅಶೋಕ ಸೊರಟೂರ
ಕನ್ನಡಪ್ರಭ ವಾರ್ತೆ ಲಕ್ಷ್ಮೇಶ್ವರರಾಜ್ಯದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವ ವಿದ್ಯಾರ್ಥಿಗಳಲ್ಲಿ ಬಡವ ಬಲ್ಲಿದ ಎಂಬ ಭೇದ-ಭಾವ ಮೂಡದಿರಲಿ ಎನ್ನುವ ಉದ್ದೇಶದಿಂದ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ವಿತರಣೆಯಾಗುತ್ತಿತ್ತು. ಆದರೆ ರಾಜ್ಯ ಸರ್ಕಾರ 2025-26ನೇ ಸಾಲಿನ ಶೈಕ್ಷಣಿಕ ವರ್ಷ ಅರ್ಧ ಮುಗಿಯುತ್ತ ಬಂದಿದ್ದರೂ ಪ್ರಾಥಮಿಕ ಮತ್ತು ಪ್ರೌಢಶಾಲೆಯ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ನೀಡಿಲ್ಲವೆಂಬುದು ನೋವಿನ ಸಂಗತಿಯಾಗಿದೆ.
ಪ್ರತಿ ವರ್ಷ ಶಾಲಾ ಶೈಕ್ಷಣಿಕ ವರ್ಷ ಆರಂಭದ ತಿಂಗಳಲ್ಲಿ ವಿದ್ಯಾರ್ಥಿಗಳಿಗೆ ಪಠ್ಯಪುಸ್ತಕ, ಬಟ್ಟೆ ನೀಡಿ ಕೈ ತೊಳೆದುಕೊಂಡ ರಾಜ್ಯ ಸರ್ಕಾರ ಅರ್ಧ ವಾರ್ಷಿಕ ಪರೀಕ್ಷೆ ಮುಗಿದು ಇನ್ನೇನು ದಸರಾ ರಜೆ ಹೊಸ್ತಿಲಲ್ಲಿ ಇದ್ದರೂ ವಿದ್ಯಾರ್ಥಿಗಳಿಗೆ ಶೂ ಹಾಗೂ ಸಾಕ್ಸ್ ನೀಡಿಲ್ಲ.ರಾಜ್ಯ ಸರ್ಕಾರ ಮಗುವಿನ ಶೂ ಹಾಗೂ ಸಾಕ್ಸ್‌ಗೆ ಹಣ ನೀಡುವಲ್ಲಿ ವಿಳಂಬ ನೀತಿ ಅನುಸರಿಸುತ್ತಿರುವುದು ಯಾಕೆ ಎಂದು ವಿದ್ಯಾರ್ಥಿಗಳ ಪೋಷಕರಿಗೆ ತಿಳಿಯದ ವಿಷಯವಾಗಿದೆ. ಪೋಷಕರು ತಮ್ಮ ಮಕ್ಕಳಿಗೆ ಸರ್ಕಾರ ಶೂ ನೀಡದೆ ಇರುವುದರಿಂದ ಪೋಷಕರೆ ಹಣ ಖರ್ಚು ಮಾಡಿ ಶಾಲಾ ಆರಂಭದಲ್ಲಿಯೇ ಹೊಸ ಶೂ ಖರೀದಿಸಿ ಕೊಟ್ಟಿದ್ದಾರೆ.
ವಿದ್ಯಾರ್ಥಿಗಳಿಗೆ ಕೊಡುವ ಶೂ ಹಣ ಎಸ್‌ಸಿ, ಎಸ್ಟಿಗಳಿಗೆ ಮೊದಲ ಹಂತದಲ್ಲಿ ಹಣ ಬಿಡುಗಡೆ ಮಾಡಿದರೆ ಒಬಿಸಿ ಹಾಗೂ ಇತರ ವರ್ಗದವರಿಗೆ ನಂತರದಲ್ಲಿ ಹಣ ಬಿಡುಗಡೆ ಮಾಡುವ ಮೂಲಕ ಜಾತಿಯ ಭೂತ ಬಿತ್ತುವ ಕಾರ್ಯ ಮೊಳಕೆಯಲ್ಲಿಯೇ ಮಾಡುತ್ತಿರುವುದು ಅತ್ಯಂತ ನೋವಿನ ಸಂಗತಿಯಾಗಿದೆ ಎನ್ನುತ್ತಾರೆ ಪೋಷಕರು. ಶೂಗಳಿಗೆ ಕೊಡುವ ಹಣದಲ್ಲಿಯೂ ತಾರತಮ್ಯ ನೀತಿ ಅನುಸರಿಸುತ್ತಿರುವ ರಾಜ್ಯ ಸರ್ಕಾರದ ದ್ವಂದ್ವ ನಿಲುವಿಗೆ ಸಾಕ್ಷಿಯಾಗಿದೆ. ಒಂದು ಜತೆ ಶೂ ಮತ್ತು ಸಾಕ್ಸ್‌ಗೆ ₹ 230. ₹ 250 ಹಾಗೂ ₹ 275ಗಳನ್ನು ನೀಡುವ ಮೂಲಕ ವಿದ್ಯಾರ್ಥಿಗಳಲ್ಲಿ ಭೇದಭಾವದ ಬೀಜ ಬಿತ್ತನೆ ಮಾಡುವ ರಾಜ್ಯ ಸರ್ಕಾರದ ನಿಲುವು ತಿಳಿಯದಾಗಿದೆ ಎನ್ನುತ್ತಾರೆ ವಕೀಲ ಬಸವರಾಜ ಬಾಳೇಶ್ವರಮಠ.ರಾಜ್ಯ ಸರ್ಕಾರ ಶೂ ಮತ್ತು ಸಾಕ್ಸ್‌ಗಳಿಗೆ ಹಂತ ಹಂತವಾಗಿ ಈಗ ಹಣ ಬಿಡುಗಡೆ ಮಾಡಿದ್ದು, ಮುಂದಿನ ದಿನಗಳಲ್ಲಿ ಮಕ್ಕಳಿಗೆ ಶೂ ಹಾಗೂ ಸಾಕ್ಸ್ ನೀಡುವ ಕಾರ್ಯ ಮಾಡುವಂತೆ ಮುಖ್ಯೋಪಾಧ್ಯಾಯರಿಗೆ ತಿಳಿಸಲಾಗಿದೆ. ವಾರದಲ್ಲಿ ವಿದ್ಯಾರ್ಥಿಗಳಿಗೆ ಶೂ ಹಾಗೂ ಸಾಕ್ಸ್ ನೀಡುವ ಕಾರ್ಯ ಮಾಡುವಂತೆ ನೋಡಿಕೊಳ್ಳುತ್ತೇವೆ ಎಂದು ಬಿಇಒ ಎಚ್.ಎನ್. ನಾಯಕ್ ಹೇಳಿದರು.
ರಾಜ್ಯ ಸರ್ಕಾರ ಶೈಕ್ಷಣಿಕ ವರ್ಷ ಆರಂಭವಾಗಿ ಆರು ತಿಂಗಳು ಕಳೆಯುತ್ತ ಬಂದಿದ್ದೂ ಶೂ ಮತ್ತು ಸಾಕ್ಸ್ ನೀಡಿಲ್ಲವೆಂಬುದು ನೋವಿನ ಸಂಗತಿಯಾಗಿದೆ. ವಿದ್ಯಾರ್ಥಿಗಳು ಬರಿಗಾಲಿನಲ್ಲಿ ಶಾಲೆಗೆ ಹೋಗುವ ಅನಿವಾರ್ಯತೆ ರಾಜ್ಯ ಸರ್ಕಾರ ಸೃಷ್ಟಿ ಮಾಡಿರುವುದು ನೋವಿನ ಸಂಗತಿಯಾಗಿದೆ. ಶೂ ಕೊಳ್ಳಲು ಆಗದೆ ಪರಿತಪಿಸುವ ಬಡವರ ಸಹನೆ ಪರೀಕ್ಷೆ ಮಾಡುವ ಸರ್ಕಾರ ಈಗಲಾದರೂ ಶಾಲಾ ಅವಧಿಯ ಅರ್ಧ ವರ್ಷ ಮುಗಿಯುದರೊಳಗೆ ನೀಡಬೇಕು ಎಂದು ಸ್ಥಳೀಯ ಚನ್ನಪ್ಪ ಷಣ್ಮುಖಿ ಹೇಳಿದರು.