ಸಾರಾಂಶ
ನರಸಿಂಹರಾಜಪುರ: ಕಳೆದ 1 ವಾರದಿಂದ ಸುರಿಯುತ್ತಿದ್ದ ಮಳೆ ಶನಿವಾರ ಕ್ಷೀಣಿಸಿದ್ದರೂ ಕೆಲವು ಗ್ರಾಮಗಳಲ್ಲಿ ಗಾಳಿಗೆ ಮನೆಯ ಮೇಲೆ ಮರಗಳು ಉರುಳಿ ಬಿದ್ದು ಹಾನಿಯಾಗಿದೆ.
ನರಸಿಂಹರಾಜಪುರ: ಕಳೆದ 1 ವಾರದಿಂದ ಸುರಿಯುತ್ತಿದ್ದ ಮಳೆ ಶನಿವಾರ ಕ್ಷೀಣಿಸಿದ್ದರೂ ಕೆಲವು ಗ್ರಾಮಗಳಲ್ಲಿ ಗಾಳಿಗೆ ಮನೆಯ ಮೇಲೆ ಮರಗಳು ಉರುಳಿ ಬಿದ್ದು ಹಾನಿಯಾಗಿದೆ.
ಕಡಹಿನಬೈಲು ಗ್ರಾಮ ಪಂಚಾಯಿತಿಯ ನವ ಗ್ರಾಮದಲ್ಲಿ ಭಾರೀ ಗಾಳಿಯಿಂದ ಮರ ಉರುಳಿ ಬಿದ್ದು ದೇವೇಂದ್ರ ಹಾಗೂ ತಾರ ಎಂಬುವರ ಮನೆಗೆ ಹಾನಿಯಾಗಿದೆ. ಇದೇ ಗ್ರಾಮ ಪಂಚಾಯಿತಿಯ ಭದ್ರಾ ಕಾಲೋನಿಯ ಐಸಮ್ಮ ಎಂಬುವರ ಮನೆಯೆ ಗೋಡೆ ಕುಸಿದಿದೆ. ಕಡಹಿನ ಬೈಲು ಗ್ರಾಮ ಪಂಚಾಯಿತಿಯ ಶೆಟ್ಟಿಕೊಪ್ಪ-ದಾಸನಗದ್ದೆಗೆ ಹೋಗುವ ಹಿರೇಬಿಸು ರಸ್ತೆಯಲ್ಲಿ ಮರವೊಂದು ವಿದ್ಯುತ್ ತಂತಿ ಮೇಲೆ ಬಿದ್ದು ನಾಲ್ಕು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಇದರಿಂದ ಹಿರೇಬಿಸು ಎಲಿಯಮ್ಮ ಎಂಬುವರ ಮನೆಗೆ ಹಾನಿಯಾಗಿದೆ. ಇದರಿಂದ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ವಿಠಲ ಗ್ರಾಮದ ಜೇಮ್ಸ್ ಅವರ ಮನೆಯ ಮೇಲೆ ಮರ ಉರುಳಿ ಮನೆ ಮೇಲ್ಚಾವಣಿಗೆ ಹಾನಿಯಾಗಿದೆ.ವಗ್ಗಡೆ ಗ್ರಾಮದ ಚಂದ್ರಶೇಖರ ಎಂಬುವರ ಮನೆ ಮಳೆಯಿಂದ ಕುಸಿದಿದೆ.ನರಸಿಂಹರಾಜಪುರ ಪಟ್ಟಣದ ವಾರ್ಡ 10 ರಲ್ಲಿ ಜಬೀನ ಎಂಬುವರ ಮನೆಯ ಮೇಲೆ ಅಡಿಕೆ ಮರ ಬಿದ್ದು ಮೇಲ್ಛಾವಣಿಗೆ ಹಾನಿಯಾಗಿದೆ.