‘ಎಕ್ಸ್‌ಪರ್ಟ್‌ ಮಾಸ್ಟರ್‌ ಚೆಫ್‌ ಸ್ಪರ್ಧೆ-2024’ ಸಂಪನ್ನ

| Published : Jul 29 2024, 12:52 AM IST

ಸಾರಾಂಶ

ಸ್ಪರ್ಧೆಯಲ್ಲಿದ್ದ ಎಂಟು ತಂಡಗಳು ಅಡುಗೆಗೆ ಬೇಕಾದ ತರಕಾರಿ, ದಿನಸಿ ಸಾಮಾನು ಹಾಗೂ ಇತರ ವಸ್ತುಗಳನ್ನು ತಾವೇ ಆಯ್ಕೆ ಮಾಡಿ ಸ್ಥಳದಲ್ಲೇ ಅಡುಗೆ ಮಾಡಿದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಪ್ರತಿಯೊಬ್ಬರು ಅಡುಗೆ, ಸಂಗೀತ, ನೃತ್ಯ ಮೊದಲಾದ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ವಿದ್ಯಾರ್ಥಿಗಳು ಸಮಯವಿದ್ದಾಗ ಮನೆಯಲ್ಲಿ ಅಡುಗೆಯಲ್ಲಿ ತೊಡಗಿಸಿಕೊಳ್ಳುವುದು ಉತ್ತಮವಾಗಿ ಹವ್ಯಾಸವೂ ಹೌದು. ಇದು ಭವಿಷ್ಯದ ಜೀವನದಲ್ಲಿಯೂ ಸಾಕಷ್ಟು ನೆರವಾಗುತ್ತದೆ ಎಂದು ಎಕ್ಸ್‌ಪರ್ಟ್‌ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಪ್ರೊ. ನರೇಂದ್ರ ಎಲ್‌. ನಾಯಕ್‌ ಹೇಳಿದರು.

ನಗರದ ಕೊಡಿಯಾಲಬೈಲ್‌ ಎಕ್ಸ್‌ಪರ್ಟ್‌ ಪ.ಪೂ. ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ ‘ಎಕ್ಸ್‌ಪರ್ಟ್‌ ಮಾಸ್ಟರ್‌ ಚೆಫ್‌ ಸ್ಪರ್ಧೆ-2024’ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಂಗಳೂರು ಓಶಿಯನ್‌ ಪರ್ಲ್‌ನ ಜನರಲ್‌ ಮೆನೇಜರ್‌ ಮಿಲನ್‌ ಸ್ಯಾಮುಯೆಲ್‌ ಮಾತನಾಡಿ, ನಮ್ಮ ಜೀವನಕ್ಕೆ ಆಹಾರ ಅತೀ ಅಗತ್ಯ. ‘ಚೆಫ್‌’ ಎಂದರೆ ಕೇವಲ ಅಡುಗೆ ತಯಾರಿಸುವವ ಮಾತ್ರ ಅಲ್ಲ. ಆತ ಒಬ್ಬ ಕಲಾವಿದ. ತನ್ನ ಕೈಚಳಕದ ಮೂಲಕ ಉತ್ತಮ ಅಡುಗೆಯೊಂದನ್ನು ಸಿದ್ಧಪಡಿಸಿ ನಮಗೆ ಒದಗಿಸುತ್ತಾನೆ ಎಂದರು.ಎಕ್ಸ್‌ಪರ್ಟ್‌ ಸಂಸ್ಥೆಯ ಉಪಾಧ್ಯಕ್ಷೆ ಡಾ. ಉಷಾ ಪ್ರಭಾ ಎನ್‌. ನಾಯಕ್‌ ಮಾತನಾಡಿ, ಹೋಟೆಲ್‌ ಮೆನೇಜ್‌ಮೆಂಟ್‌ ಅಥವಾ ಇತರ ಕಾಲೇಜು ಆಯೋಜಿಸುವ ಅಡುಗೆ ಸ್ಪರ್ಧೆಗಿಂತ ವಿಜ್ಞಾನ ಕಾಲೇಜು ಆಗಿರುವ ನಮ್ಮ ಸ್ಪರ್ಧೆ ಭಿನ್ನವಾಗಿದೆ. ಸ್ಪರ್ಧೆಗೆ 500 ಮಂದಿ ನೋಂದಣಿ ಮಾಡಿದ್ದರು. ವಿವಿಧ ಪರೀಕ್ಷೆಗಳ ಮೂಲಕ ಅಂತಿಮ ಸುತ್ತಿಗೆ 8 ತಂಡಗಳನ್ನು ಆಯ್ಕೆ ಮಾಡಲಾಗಿದೆ. ಜಗತ್ತಿನಲ್ಲಿ ಪ್ರತಿ ಜೀವಿಗೂ ಆಹಾರ ಅಗತ್ಯ. ಅದರಲ್ಲಿ ಮನುಷ್ಯ ಮಾತ್ರ ಅಡುಗೆ ಮಾಡಿ ತಿನ್ನುವುದರಿಂದ ಪ್ರಾಣಿ ಪಕ್ಷಿಗಳಿಗಿಂತ ಭಿನ್ನವಾಗಿದ್ದೇವೆ. ಅಡುಗೆ ಕೆಲವರಿಗೆ ಮಾತ್ರ ಸೀಮಿತವಾಗಿರದೆ ಎಲ್ಲರೂ ಅಡುಗೆ ಕಲಿಯಬೇಕು ಎಂದರು.ಸಂಸ್ಥೆಯ ಟ್ರಸ್ಟಿ ಉಸ್ತಾದ್‌ ರಫೀಕ್‌ ಖಾನ್‌ ಅಶುಭ ಕೋರಿದರು. ಸ್ಪರ್ಧೆಯ ಪ್ರಾಯೋಜಕ ಸ್ಪೈಸೀಸ್‌ ಅಂಡ್‌ ಚೆಫ್‌ನ ನಿರ್ದೇಶಕ ಅಶ್ವಿನ್‌ ಪಾಯಸ್‌ ಹಾಗೂ ಕಾಲೇಜು ಪ್ರಾಂಶುಪಾಲ ಪ್ರೊ. ರಾಮಚಂದ್ರ ಭಟ್‌, ಸ್ಪರ್ಧೆಯ ತೀರ್ಪುಗಾರರಾದ ಮಹಾರಾಜಾ ಫ್ಯಾಮಿಲಿ ರೆಸ್ಟೋರೆಂಟ್‌ನ ಪಾಲುದಾರ ಸುಧೀಂದ್ರ ಪ್ರಭು, ಬೇಕರ್‌ ಸ್ಟ್ರೀಟ್‌ನ ಫೌಂಡರ್‌ ಮರಿಯಮ್‌ ಮೊಹಿದೀನ್‌, ಮಂಗಳೂರು ಮೇರಿ ಜಾನ್‌ನ ಅಭಿಷೇಕ್‌ ಶೆಟ್ಟಿ, ದೇರೆಬೈಲ್‌ ಬೇಕರ್‌ ಔಟ್‌ಲೆಟ್‌ನ ಸ್ಮಿತಾ ಡಿ’ಸೋಜಾ ಹಾಗೂ ಫುಡ್‌ ಡೆಲಿವರಿ ಕ್ಷೇತ್ರದ ಉದ್ಯಮಿ ಭಾರತಿ ಶೆಟ್ಟಿ, ಕಾಲೇಜಿನ ಮಾಹಿತಿ ತಂತ್ರಜ್ಞಾನ ನಿರ್ದೇಶಕ ಅಂಕುಶ್‌ ಎನ್‌.ನಾಯಕ್‌, ಆರ್ಕಿಟೆಕ್ಟ್ ದೀಪಿಕಾ ಎ. ನಾಯಕ್‌, ಪ್ರೇಮಲತಾ ಕಾಮತ್‌ ಇದ್ದರು. ಉಜ್ವಲಾ ಪ್ರದೀಪ್‌ ಸ್ವಾಗತಿಸಿ, ನಿರೂಪಿಸಿದರು.ಸ್ಪರ್ಧೆಯಲ್ಲಿದ್ದ ಎಂಟು ತಂಡಗಳು ಅಡುಗೆಗೆ ಬೇಕಾದ ತರಕಾರಿ, ದಿನಸಿ ಸಾಮಾನು ಹಾಗೂ ಇತರ ವಸ್ತುಗಳನ್ನು ತಾವೇ ಆಯ್ಕೆ ಮಾಡಿ ಸ್ಥಳದಲ್ಲೇ ಅಡುಗೆ ಮಾಡಿದರು.