ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಜಿಲ್ಲೆಯ ಮುಧೋಳ ತಾಲೂಕಿನ ಮುದ್ದಾಪುರದಲ್ಲಿರುವ ಜಿ.ಕೆ. ಸಿಮೆಂಟ್ ವರ್ಕ ಸಂಸ್ಥೆಯು ಪರ್ಯಾಯ ಇಂಧನ ಮತ್ತು ಕಚ್ಚಾವಸ್ತುಗಳ'''''''' ಯೋಜನೆಯಡಿ ಪ್ಲಾಸ್ಟಿಕ್ ಹಾಗೂ ಇತರ ತ್ಯಾಜ್ಯ ವಸ್ತುಗಳನ್ನು ಇಂಧನವಾಗಿ ಬಳಸುವುದನ್ನು ತಕ್ಷಣವೇ ಸ್ಥಗಿತಗೊಳಿಸಬೇಕು ಹಾಗೂ ಕಾರ್ಖಾನೆ ವಿಸ್ತರಣೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸಿದರು.

ಸೋಮವಾರ ನವನಗರದ ಜಿಲ್ಲಾಡಳಿತ ಭವನ ಎದುರು ರೈತರು ಬೃಹತ್ ಪ್ರತಿಭಟನೆ ನಡೆಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರವೊಂದನ್ನು ಸಲ್ಲಿಸಿದರು.

ಸಿಮೆಂಟ್ ಕಾರ್ಖಾನೆಯಲ್ಲಿ ತ್ಯಾಜ್ಯ ವಸ್ತುಗಳನ್ನು ಸುಡುವುದರಿಂದ ಹೊರಸೂಸುವ ಹೊಗೆ ಮತ್ತು ಮಾಲಿನ್ಯಕಾರಕ ರಾಸಾಯನಿಕಗಳು ಸುತ್ತಮುತ್ತಲಿನ ಪರಿಸರ, ಕೃಷಿ ತೋಟಗಳು, ಗ್ರಾಮಸ್ಥರು ಹಾಗೂ ಜಾನುವಾರುಗಳ ಆರೋಗ್ಯದ ಮೇಲೆ ತೀವ್ರ ರೇಖೆಯ ಪ್ರಭಾವ ಬೀರುತ್ತಿವೆ ಎಂದು ಆರೋಪಿಸಿದ್ದಾರೆ.

ನಿರಂತರವಾಗಿ ಹೆಚ್ಚಾಗುತ್ತಿರುವ ಪರಿಸರ ಮಾಲಿನ್ಯದಿಂದಾಗಿ ಸ್ಥಳೀಯ ಗ್ರಾಮಸ್ಥರಲ್ಲಿ ಭಯ ಮತ್ತು ಆತಂಕದ ವಾತಾವರಣ ನಿರ್ಮಾಣವಾಗಿದೆ. ಅನಧಿಕೃತ ಗಣಿಗಾರಿಕೆ, ಜಲ ಮಾಲಿನ್ಯ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ ಮತ್ತು ದುರ್ವಾಸನೆ ವಿರುದ್ಧ ಕಳೆದ 12 ದಿನಗಳಿಂದ ಅಹೋರಾತ್ರಿ ಧರಣಿ ನಡೆಸಲಾಗಿತ್ತು. ಈಗಾಗಲೇ ಕಾರ್ಖಾನೆಯಿಂದ ಹಾನಿಯಾದ ಬೆಳೆ ಪರಿಹಾರವನ್ನು ತಕ್ಷಣವೇ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದರು.


ಧರಣಿ0ು ಕೊನೆಯ ದಿನದಂದು ನಡೆದ ಸಂಧಾನ ಸಭೆಯಲ್ಲಿ ಒಂದು ವಾರದೊಳಗೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಭರವಸೆ ನೀಡಿದ್ದರು. ಆದರೆ, ಈವರೆಗೂ ಯಾವುದೇ ಶಿಸ್ತುಕ್ರಮ ಕೈಗೊಂಡಿಲ್ಲ ಎಂದು ಮುಖಂಡರು ಮನವಿ ಪತ್ರದಲ್ಲಿ ತಿಳಿಸಿದ್ದಾರೆ.

ಸಾರ್ವಜನಿಕರ ಆರೋಗ್ಯ ಮತ್ತು ಪರಿಸರದ ಹಿತದೃಷ್ಟಿಯಿಂದ ಜಿಲ್ಲಾಡಳಿತವು ಈ ವಿಷಯವನ್ನು ಗಂಭೀರವಾಗಿ ಪರಿಶೀಲಿಸಬೇಕು. ಎಎಫ್ಆರ್ ಬಳಸಿ ಕಾರ್ಯಾಚರಣೆ ನಡೆಸುತ್ತಿರುವ ಘಟಕದ ಅನುಮತಿ / ಪರವಾನಗಿ0ುನ್ನು ಮರುಪರಿಶೀಲಿಸಿ, ತಕ್ಷಣವೇ ಕಟ್ಟುನಿಟ್ಟಿನ ಕಾನೂನುಬದ್ಧ ಕ್ರಮ ಜರುಗಿಸಬೇಕೆಂದು ರೈತರು ತಮ್ಮ ಬೇಡಿಕೆಯನ್ನು ಇಟ್ಟಿದ್ದಾರೆ.

ಕಳೆದ 20 ವರ್ಷಗಳಿಂದ ಕಾರ್ಖಾನೆಯಿಂದ ಸಾಕಷ್ಟು ತೊಂದರೆಗಳು ಉಂಟಾಗಿದ್ದು, ಅದನ್ನು ಗಮನ ಹರಿಸುವಲ್ಲಿ ಸರ್ಕಾರವು ವಿಫಲವಾಗಿದ್ದು, ಈ ನಿಟ್ಟಿನಲ್ಲಿ ಬೆಳೆ, ನೀರಿನ ಮಾಲಿನ್ಯ ಹಾಗೂ ವಾಯು ಮಾಲಿನ್ಯ ಹದಗೆಟ್ಟಿದ್ದು ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತಿದೆ. ಇಲ್ಲಿಯ ರೈತರು ಗುಳೆ ಹೊರಟ್ಟಿದ್ದಾರೆ. ಕಾರ್ಖಾನೆಯಿಂದ 10 ಕ್ಕೂ ಹೆಚ್ಚು ಗ್ರಾಮಗಳು ತೊಂದರೆಯಲ್ಲಿ ಇವೆ ಎಂದು ಆರೋಪಿಸಿದರು.

ನಮ್ಮ ಮಕ್ಕಳಿಗೆ ಕನ್ಯಾ ಕೊಡವಲ್ಲರು...!

ಜೆ.ಕೆ.ಸಿಮೆಂಟ್ ಕಾರ್ಖಾನೆಯಿಂದ ಇಲ್ಲಿನ ಸುಮಾರು 10 ಕ್ಕೂ ಹೆಚ್ಚು ಗ್ರಾಮಗಳಲ್ಲಿ ನಮ್ಮ ಮಕ್ಕಳಿಗೆ ಕನ್ಯಾ ಸಿಗೋಲ್ಲಾ ಎಂದು ರೈತರು ತಮ್ಮ ಅಳಲು ತೊಡಿಕೊಂಡಿದ್ದಾರೆ. ಇಲ್ಲಿನ ವಾಯು, ನೀರು ಮಾಲಿನ್ಯದಿಂದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದ್ದು ಈ ಸಮಸ್ಯೆಯಿಂದ ಗ್ರಾಮದಲ್ಲಿನ ನಮ್ಮ ಮಕ್ಕಳಿಗೆ ಕನ್ಯಾ ಕೊಡುತ್ತಿಲ್ಲ ಎಂದು ರೈತರು ತಮ್ಮ ಆತಂಕ ವ್ಯಕ್ತಪಡಿಸಿದರು.