ಸಾರಾಂಶ
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ರೈತರ ಮಕ್ಕಳು ನಾಯಕರಾಗಿ ಕೃಷಿ ಉತ್ಪಾದಕ ಮಾರುಕಟ್ಟೆಗಳನ್ನು ಆರಂಭಿಸಿ ಆರ್ಥಿಕ ಪ್ರಗತಿಯೊಂದಿಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಬೇಕು ಎಂದು ಮೈಸೂರಿನ ಸಹಜ ಸಂವೃದ್ಧಿ ಕೃಷಿ ಉತ್ಪನ್ನ ಮಾರುಕಟ್ಟೆ ನಿರ್ಮಾಪಕ ಕೃಷ್ಣಪ್ರಸಾದ್ ಸಲಹೆ ನೀಡಿದರು.ಪಟ್ಟಣದ ಹೋಟೆಲ್ ರಾಮದಾಸ್ ಸಭಾಂಗಣದಲ್ಲಿ ಮಾಜಿ ಸ್ಪೀಕರ್ ಕೃಷ್ಣ ಪ್ರತಿಷ್ಠಾನದಿಂದ ಕೃಷ್ಣರ 84ನೇ ಹುಟ್ಟುಹಬ್ಬದ ಅಂಗವಾಗಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಕೃಷಿ ಉದ್ಯಮಗಳನ್ನು ಕಟ್ಟುವುದು ಹೇಗೆ ವಿಷಯ ಕುರಿತು ವಿಚಾರ ಮಂಡಿಸಿದರು.
ಮಾರುಕಟ್ಟೆಯಲ್ಲಿ ರೈತರಿಗಿಂತ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ರೈತರ ಉತ್ಪನ್ನಗಳನ್ನು ಕಡಿಮೆ ಬೆಲೆಗೆ ಕೊಂಡು ಅದರಿಂದ ದಲ್ಲಾಳಿಗಳು ಹೆಚ್ಚು ಲಾಭ ಮಾಡುವ ಮಾರುಕಟ್ಟೆ ವ್ಯವಸ್ಥೆ ರೂಪುಗೊಂಡಿದೆ. ಇದಕ್ಕೆ ರೈತರು ಕೇವಲ ಕೃಷಿಕರಾಗಿರುವುದು ಕಾರಣ ಎಂದರು.ರೈತರು ತಮ್ಮ ಮಕ್ಕಳನ್ನು ಕೇವಲ ರೈತನ್ನಾಗಿಸದೇ ಅವರಲ್ಲಿ ಕನಸುಗಳನ್ನು ತುಂಬಿ ತಮ್ಮ ಉತ್ಪನ್ನಗಳ ಮಾರಾಟಕ್ಕಾಗಿ ಮಾರುಕಟ್ಟೆ ಹುಡುಕುವ ಬದಲು ಮಾರುಕಟ್ಟೆಗಳನ್ನು ಸ್ಥಾಪಿಸಲು ಪ್ರೇರೆಪಿಸಬೇಕು. ಈ ಮೂಲಕ ರೈತರ ಮಕ್ಕಳು ಕೃಷಿ ಉದ್ಯಮಿಗಳಾಗಿ ರೂಪುಗೊಳ್ಳಲು ನೆರವಾಗಬೇಕು ಎಂದರು.
ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಮಾತನಾಡಿ, ಮಾಜಿ ಸ್ಪೀಕರ್ ಕೃಷ್ಣ ಮೌಲ್ಯಾಧಾರಿತ ರಾಜಕಾರಣದ ನೈಜ ಪ್ರತಿನಿಧಿ. ಇಂದು ಮೌಲ್ಯಧಾರಿತ ರಾಜಕಾರಣದ ಕೊಂಡಿಗಳು ಕಳಚುತ್ತಿವೆ. ಇದು ಅಪಾಯಕಾರಿ ಬೆಳವಣಿಗೆ. ಮೌಲ್ಯಾಧಾರಿತ ರಾಜಕಾರಣ ನಾಶವಾದರೆ ಅದನ್ನು ಸರಿದಾರಿಗೆ ತರಲು ಮತದಾರರಿಂದಲೂ ಅಸಾಧ್ಯ ಎಂದು ಎಚ್ಚರಿಸಿದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ಎಚ್.ಟಿ.ಮಂಜು ಮಾತನಾಡಿ, ನಾನು ರೈತ ಚಳವಳಿಯ ಮೂಲಕ ಬೆಳೆದವನು. ಮಂಡ್ಯ ಜಿಲ್ಲೆ ಆದರ್ಶ ರಾಜಕಾರಣಿಗಳಿಗೆ ಹೆಸರಾಗಿದೆ. ಹಿರಿಯರ ದಾರಿಯಲ್ಲಿ ನಾನು ನಡೆದು ಕೃಷ್ಣ ಪ್ರತಿಷ್ಠಾನದ ಕಾರ್ಯ ಚಟುವಟಿಕೆಗಳಿಗೆ ಅಗತ್ಯ ಸಹಕಾರ ನೀಡುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಸಾಹಿತಿ ಬಲ್ಲೇನಹಳ್ಳಿ ಮಂಜುನಥ್, ಜಲತಜ್ಞ ನವಿಲುಮಾರನಹಳ್ಳಿ ರಾಮೇಗೌಡ ಮತ್ತು ಪೌರ ಕಾರ್ಮಿಕೆ ಕರ್‍ಪಮ್ಮ ಅವರಿಗೆ ಕೃಷ್ಣ ನಾಗರೀಕ ಪ್ರಶಸ್ತಿ ನೀಡಿ ಅಭಿನಂದಿಸಲಾಯಿತು. ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕಗಳಿಸಿದ ಸರ್ಕಾರಿ ಶಾಲೆ ಮಕ್ಕಳಿಗೆ ಹಾಗೂ ಭಾರತೀಯ ನೌಕಾ ದಳದಲ್ಲಿ ಸಬ್ ಲೆಪ್ಟಿನೆಂಟ್ ಆಗಿ ಆಯ್ಕೆಯಾಗಿರುವ ತಾಲೂಕಿನ ಬೂಕಹಗಳ್ಳಿ ಗ್ರಾಮದ ಬಿ.ಎಂ.ಸಾಗರ್ ಅವರಿಗೆ ಕೃಷ್ಣ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.ಸಮಾರಂಭದಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಬಿ.ಎಲ್.ದೇವರಾಜು, ಮನ್ಮುಲ್ ನಿರ್ದೇಶಕ ಡಾಲು ರವಿ, ರೈತ ಮುಖಂಡ ಕೆ.ಆರ್.ಜಯರಾಂ, ಆರ್.ಟಿ.ಓ ಅಧಿಕಾರಿ ಮಲ್ಲಿಕಾರ್ಜುನ್, ಕೃಷ್ಣ ಪ್ರತಿಷ್ಟಾನದ ಅಧ್ಯಕ್ಷ ಜವರಾಯಿಗೌಡ, ಇಂದಿರಾ ಕೃಷ್ಣ, ಮಂಡ್ಯ ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್‌ಗೌಡ, ಅಂ.ಚಿ.ಸಣ್ಣಸ್ವಾಮೀಗೌಡ ಸೇರಿದಂತೆ ನೂರಾರು ಸಂಖ್ಯೆಯಲ್ಲಿ ಕೃಷ್ಣ ಅಭಿಮಾನಿಗಳು ಭಾಗವಹಿಸಿದ್ದರು.