ಸಾರಾಂಶ
ಕಲ್ಕೆರೆ ಗ್ರಾಮದಿಂದ ಕಡೂರು ಪಟ್ಟಣದ ತಾಲೂಕು ಕಚೇರಿಯವರೆಗೆ
ಕನ್ನಡಪ್ರಭ ವಾರ್ತೆ, ಕಡೂರುರೈತರಿಗೆ ವಿತರಣೆಯಾಗಬೇಕಿದ್ದ ನೆರೆಪರಿಹಾರದ ಹಣವನ್ನು ದುರುಪಯೋಗಪಡಿಸಿ ಕೊಂಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕಾಗಿ ಆಗ್ರಹಿಸಿ ಕರ್ನಾಟಕ ರೈತ ಸಂಘ ಮತ್ತು ಹಸಿರು ಸೇನೆ ಸಹಯೋಗದಲ್ಲಿ ಶುಕ್ರವಾರ ಗ್ರಾಮಸ್ಥರು ಕಲ್ಕೆರೆ ಗ್ರಾಮದಿಂದ ಕಡೂರು ಪಟ್ಟಣದ ತಾಲೂಕು ಕಚೇರಿಯವರೆಗೆ ಪಾದಯಾತ್ರೆ ನಡೆಸಿದರು. ಸುಮಾರು ನೂರಕ್ಕೂ ಅಧಿಕ ರೈತರು ಒಳಗೊಂಡ ಪಾದಯಾತ್ರೆ, ಅಂತರಘಟ್ಟೆ, ಹಡಗಲು, ಕಳ್ಳಿಹೊಸಳ್ಳಿ, ಬಿಸಲೆರೆ, ಅರೇಹಳ್ಳಿ, ಬಾಸೂರು, ಚಿಕ್ಕಬಾಸೂರು, ಕಲ್ಲಾಪುರ ಮಾರ್ಗವಾಗಿ ಕಡೂರು ಪಟ್ಟಣಕ್ಕೆ ತಲುಪಿತು.
ಪಾದಾಯಾತ್ರೆಯುದ್ದಕ್ಕೂ ಅಕ್ರಮವೆಸಗಿದ ಕಲ್ಕೆರೆ ಗ್ರಾಮ ಲೆಕ್ಕಾಧಿಕಾರಿ ಹಾಗೂ ಮದ್ಯವರ್ತಿಗಳ ವಿರುದ್ಧ ಘೋಷಣೆ ಕೂಗುತ್ತಾ ಕಾಲ್ನಡಿಗೆಯಲ್ಲಿ ಹೆಜ್ಜೆಹಾಕಿದರು. ಶನಿವಾರ ಬೆಳಿಗ್ಗೆ ತಾಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳ ಲಾಗುವುದು. ಸಮಿತಿ ವರದಿಯಲ್ಲಿ ನೀಡಿರುವ ತಪ್ಪಿತಸ್ಥ ಅಧಿಕಾರಿಗಳ ಬಂಧನವಾಗಬೇಕು. ಅಲ್ಲಿಯವರೆಗೆ ಪ್ರತಿಭಟನೆ ಮುಂದುವರೆಸಲಾಗುವುದು. ಬಳಿಕ ನ್ಯಾಯಯುತ ಪರಿಹಾರ ಕಲ್ಕೆರೆ ರೈತರಿಗೆ ದೊರಕಬೇಕೆಂಬುದು ನಮ್ಮ ಹಕ್ಕೋತ್ತಾಯ ವಾಗಿದೆ ಎಂದು ರೈತ ಸಂಘದ ತಾಲೂಕು ಅಧ್ಯಕ್ಷ ಕೋಡಿಹಳ್ಳಿ ಪ್ರದೀಪ್ ತಿಳಿಸಿದರು.ಕರ್ನಾಟಕ ರೈತ ಸಂಘದ ಯುವ ಘಟಕದ ರಾಜ್ಯಾಧ್ಯಕ್ಷ ಫೈಯಾಜ್, ತಾಲೂಕು ಅಧ್ಯಕ್ಷ ಕೋಡಿಹಳ್ಳಿಪ್ರದೀಪ್, ರವಿ ಕುಮಾರ್, ಗ್ರಾಮದ ಮುಖಂಡರಾದ ಯತೀಶ್, ಶಶಿಧರ್, ಪ್ರಭು, ಕನ್ಯಾನಾಯ್ಕ್, ಲಕ್ಷ್ಮಣ್, ಕುಮಾರಪ್ಪ, ಆನಂದ್ ಮತ್ತಿತರಿದ್ದರು.
2ಕೆಕೆಡಿಯು4.ಕಡೂರು ತಾಲೂಕಿನ ಕಲ್ಕರೆ ಗ್ರಾಮದಿಂದ ರೈತ ಸಂಘ ಹಾಗೂ ಹಸಿರು ಸೇನೆ ಸಹಯೋಗದೊಂದಿಗೆ ನೆರೆಪರಿಹಾರದ ಹಣ ದುರುಪಯೋಗಪಡಿಸಿಕೊಂಡಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮಕ್ಕಾಗಿ ಒತ್ತಾಯಿಸಿ ಅಂತರಘಟ್ಟೆ ದೇವಾಲಯದಿಂದ ರೈತರು ಪಾದಯಾತ್ರೆ ಆರಂಭಿಸಿದರು.