ಕನ್ನಡಪ್ರಭ ವಾರ್ತೆ ಅಥಣಿ
ಉತ್ತರಾಖಂಡದಲ್ಲಿ ಸಂಭವಿಸಿದ ಭೀಕರ ಹೆಲಿಕಾಪ್ಟರ್ ದುರಂತದಲ್ಲಿ ಮೃತಪಟ್ಟ ಬೆಂಗಳೂರಿನ ಅಪರಾಧ ತನಿಖಾ ದಳದ (ಸಿಸಿಬಿ) ಪೊಲೀಸ್ ಇನ್ಸ್ಪೆಕ್ಟರ್ ಅರುಣ ಸಾಳುಂಕೆ ಅವರ ಅಂತ್ಯಕ್ರಿಯೆ ಸೋಮವಾರ ಅವರ ಸ್ವಗ್ರಾಮ ಅಥಣಿ ತಾಲೂಕಿನ ಅರಟಾಳದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.ಅರಟಾಳ ಗ್ರಾಮದ ಹೆಮ್ಮೆಯ ಪುತ್ರ ಅರುಣ ಸಾಳುಂಕೆ ಅವರ ಅಕಾಲಿಕ ನಿಧನದಿಂದ ಕಳೆದ ಎರಡು ದಿನಗಳಿಂದ ಇಡೀ ಗ್ರಾಮ ಶೋಕಸಾಗರದಲ್ಲಿ ಮುಳುಗಿದೆ. ಅವರ ಪಾರ್ಥಿವ ಶರೀರ ಹುಟ್ಟೂರಿಗೆ ಆಗಮಿಸುತ್ತಿದ್ದಂತೆ ಕುಟುಂಬಸ್ಥರು, ಬಂಧುಗಳು, ಸ್ನೇಹಿತರು, ಸಹೋದ್ಯೋಗಿಗಳು ಹಾಗೂ ಗ್ರಾಮಸ್ಥರ ದುಃಖದ ಕಟ್ಟೆಯೊಡೆದಿತ್ತು. ಎಲ್ಲೆಡೆ ಕಣ್ಣೀರಿನ ದೃಶ್ಯ ಕಂಡುಬಂದಿತು. ತಮ್ಮೂರಿನ ಹೆಮ್ಮೆಯ ಮಗನ ಅಂತಿಮ ದರ್ಶನ ಪಡೆಯಲು ಸುತ್ತಮುತ್ತಲಿನ ಗ್ರಾಮಗಳಿಂದಲೂ ಅಪಾರ ಸಂಖ್ಯೆಯಲ್ಲಿ ಜನರು ಆಗಮಿಸಿದ್ದರು.
ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕಣ್ಣೀರಿಡುತ್ತಲೇ ತಮ್ಮ ನೆಚ್ಚಿನ ಮಗನಿಗೆ ಅಂತಿಮ ನಮನ ಸಲ್ಲಿಸಿದರು. ಬಾಲ್ಯದಿಂದಲೇ ಎಲ್ಲರೊಂದಿಗೆ ಬೆರೆತು, ಪ್ರೀತಿ ವಿಶ್ವಾಸ ಗಳಿಸಿದ್ದ ಅರುಣ ಅವರನ್ನು ಕಳೆದುಕೊಂಡ ನೋವು ಗ್ರಾಮಸ್ಥರ ಮುಖದಲ್ಲಿ ಎದ್ದು ಕಾಣುತ್ತಿತ್ತು. ಜೀವನದ ಹಲವು ಸವಾಲುಗಳನ್ನು ಮೆಟ್ಟಿನಿಂತು ಪೊಲೀಸ್ ಇಲಾಖೆಯಲ್ಲಿ ತಮ್ಮದೇ ಆದ ಗುರುತು ಮೂಡಿಸಿಕೊಂಡಿದ್ದ ಅರುಣ ಅವರು ನೂರಾರು ಸ್ನೇಹಿತರ ಮನಸು ಗೆದ್ದಿದ್ದರು. ಅವರ ಅಗಲಿಕೆಯನ್ನು ಅರಗಿಸಿಕೊಳ್ಳಲಾಗದೆ ಸ್ನೇಹಿತರು ಕಣ್ಣೀರಾದರು.ತಂದೆ ಮನೋಹರ ಸಾಳುಂಕೆ ಹಾಗೂ ತಾಯಿ ಸಂಜೀವಿನಿ ಅವರು ಪ್ರೀತಿಯ ಮಗನನ್ನು ಕಳೆದುಕೊಂಡು ದುಃಖದ ಮಡುವಿನಲ್ಲಿ ಮುಳುಗಿದ್ದರು. ಪತ್ನಿ ಅರ್ಚನಾ, ಮಗ ವಲ್ಲಭ, ಮಗಳು ಲಾವಣ್ಯ, ಅಕ್ಕ ಹಾಗೂ ತಮ್ಮ ಕಣ್ಣೀರಿನ ನಡುವೆ ಅಂತಿಮ ದರ್ಶನ ಪಡೆದರು. ಬೆಂಗಳೂರು, ವಿಜಯಪುರ, ಬೆಳಗಾವಿ, ಬಾಗಲಕೋಟೆ, ಹುಬ್ಬಳ್ಳಿ, ಧಾರವಾಡ, ದೆಹಲಿ, ಕೊಲ್ಲಾಪುರ ಹಾಗೂ ಸಾಂಗ್ಲಿ ಸೇರಿದಂತೆ ವಿವಿಧ ನಗರಗಳಿಂದ ಪೊಲೀಸ್ ಅಧಿಕಾರಿಗಳು ಆಗಮಿಸಿ ಅಂತಿಮ ನಮನ ಸಲ್ಲಿಸಿದರು. ಅಥಣಿ ತಾಲೂಕು ದಂಡಾಧಿಕಾರಿ ಸಿದರಾಯ ಬೋಸಗಿ, ಹಿರಿಯ ಅಧಿಕಾರಿಗಳು, ಗ್ರಾಮದ ಮುಖಂಡರು ಹಾಗೂ ಸ್ನೇಹಿತರು ಉಪಸ್ಥಿತರಿದ್ದರು.
ಅಂತಿಮ ದರ್ಶನಕ್ಕೆ ಆಗಮಿಸಿದ ಜನರಿಗೆ ಯಾವುದೇ ತೊಂದರೆಯಾಗದಂತೆ ಪೊಲೀಸ್ ಇಲಾಖೆಯ ವತಿಯಿಂದ ಬ್ಯಾರಿಕೇಡ್, ಪೆಂಡಾಲ್, ಕುಡಿಯುವ ನೀರು, ವಿದ್ಯುತ್ ಹಾಗೂ ವಾಹನಗಳ ನಿಲುಗಡೆಗೆ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ಅರುಣ ಅಷ್ಟೇ ನಿಮ್ಮ ಮಗನಲ್ಲ, ನಾವೆಲ್ಲರೂ ನಿಮ್ಮ ಮಕ್ಕಳು. ನಿಮ್ಮೊಂದಿಗೆ ನಾವಿದ್ದೇವೆ. ಅರುಣ ಅವರು ದಕ್ಷ ಪೊಲೀಸ್ ಅಧಿಕಾರಿಯಾಗಿದ್ದರು. ಅವರ ಇಬ್ಬರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ. ಮಕ್ಕಳ ಭವಿಷ್ಯಕ್ಕಾಗಿ ನಾವು ನಿಮ್ಮೊಂದಿಗಿದ್ದೇವೆ.
- ಅಜಯ್ ಹಿಲ್ಲೋರಿ, ಪೊಲೀಸ್ ಮಹಾನಿರೀಕ್ಷಕರು (ಐಜಿ), ಬೆಳಗಾವಿ