ಬಿರು ಬೇಸಿಗೆಯಲ್ಲಿ ಸಹಿಸಲು ಪಶು ಪಕ್ಷಿಗಳಿಗೆ ಆಹಾರ ನೀರಿನ ವ್ಯವಸ್ಥೆ

| Published : Mar 25 2024, 12:48 AM IST

ಬಿರು ಬೇಸಿಗೆಯಲ್ಲಿ ಸಹಿಸಲು ಪಶು ಪಕ್ಷಿಗಳಿಗೆ ಆಹಾರ ನೀರಿನ ವ್ಯವಸ್ಥೆ
Share this Article
  • FB
  • TW
  • Linkdin
  • Email

ಸಾರಾಂಶ

ತರೀಕೆರೆ ಪಟ್ಟಣದಲ್ಲಿ ಬೆಳಿಗ್ಗೆ 7 ಗಂಟೆಗೆ ಎಲ್ಲಡೆ ಬಿರು ಬೇಸಿಗೆಯ ಧಗೆ, ದಿನದ 24 ಗಂಟೆಯೂ ಫ್ಯಾನ್ ಹಾಕಿದರೂ ಬರುವ ಗಾಳಿಯೂ ಕೂಡ ಬಿಸಿಯೇ, ಇದೆಲ್ಲದರ ನಡುವೆ ಬೇಸಿಗೆ ಸಹಿಸಲು ಅಸಾಧ್ಯವಾದ ಸಂದರ್ಭದಲ್ಲಿ ಪ್ರಾಣಿ ಪಕ್ಷಿಗಳ ಬಗ್ಗೆ ಚಿಂತಿಸಿರುವ ಮಂಜಯ್ಯ ಅವುಗಳ ಆಹಾರ, ನೀರಿನ ವ್ಯವಸ್ಥೆ ಮಾಡುತ್ತಿರುವುದು ನಿಜಕ್ಕೂ ಮೆಚ್ಚುವಂತದ್ದು.

ಸಮಾಜ ಸೇವಕ ಬಿ.ಎಸ್.ಮಂಜಯ್ಯ ನಿಸ್ವಾರ್ಥ ಸೇವೆ

ಕನ್ನಡಪ್ರಭ ವಾರ್ತೆ, ತರೀಕೆರೆ

ತರೀಕೆರೆ ಪಟ್ಟಣದಲ್ಲಿ ಬೆಳಿಗ್ಗೆ 7 ಗಂಟೆಗೆ ಎಲ್ಲಡೆ ಬಿರು ಬೇಸಿಗೆಯ ಧಗೆ, ದಿನದ 24 ಗಂಟೆಯೂ ಫ್ಯಾನ್ ಹಾಕಿದರೂ ಬರುವ ಗಾಳಿಯೂ ಕೂಡ ಬಿಸಿಯೇ, ಇದೆಲ್ಲದರ ನಡುವೆ ಬೇಸಿಗೆ ಸಹಿಸಲು ಅಸಾಧ್ಯವಾದ ಸಂದರ್ಭದಲ್ಲಿ ಪ್ರಾಣಿ ಪಕ್ಷಿಗಳ ಬಗ್ಗೆ ಚಿಂತಿಸಿರುವ ಮಂಜಯ್ಯ ಅವುಗಳ ಆಹಾರ, ನೀರಿನ ವ್ಯವಸ್ಥೆ ಮಾಡುತ್ತಿರುವುದು ನಿಜಕ್ಕೂ ಮೆಚ್ಚುವಂತದ್ದು.

ಭಾರಿ ಬಿಸಿಲಿನಿಂದ ಕಾಯುವ ಕಟ್ಟಡ-ಟಾರ್ ರಸ್ತೆ, ಬಿಸಿ ಗಾಳಿ ಇವುಗಳಿಂದ ವಾತಾವರಣ ಹೆಚ್ಚು ಉಷ್ಣಾಂಶದಿಂದ ಕೂಡಿದೆ. ಬಿಸಿಲಿನ ಬೇಗೆಯಿಂದ ಎಷ್ಟು ನೀರು ಕುಡಿದರೂ ಬಾಯಾರಿಕೆ ತಣಿಯದು. ಬಿಸಿಲಿನಿಂದ ಇಷ್ಟು ತತ್ತರಿಸುತ್ತಿ ರುವಾಗ ಇನ್ನು ಪಶು ಪಕ್ಷಿಗಳು ಜಾನುವಾರುಗಳ ಸ್ಥಿತಿಯಂತೂ ನಿಜಕ್ಕೂ ಶೋಚನೀಯ. ಜಾನುವಾರುಗಳಿಗೆ ಮೇವು ದೊರೆಯುವ ಮಾತು ಹಾಗಿರಲಿ, ಪಶು ಪಕ್ಷಿಗಳಿಗೆ ಕುಡಿಯಲು ನೀರು ಒಂದಿಷ್ಟು ಆಹಾರ ಸಿಕ್ಕರೆ ಸಾಕು ಹಾಗಾಗಿದೆ ಬೇಸಿಗೆ ಪರಿಸ್ಥಿತಿ.ಇದನ್ನು ಮನಗಂಡ ಪಟ್ಟಣದ ಸಮಾಜ ಸೇವಕ ಬಿ.ಎಸ್.ಮಂಜಯ್ಯ ಅವರ ಮನಸ್ಸಿಗೆ ಹೊಳೆದ ಮೊದಲ ಪರಿಹಾರ ಎಂದರೆ, ಬಾಳೆಹಣ್ಣುಗಳು. ಈ ಬಿರು ಬೇಸಿಗೆ ಯಿಂದ ಪಟ್ಟಣದ ಬಾಳೆಹಣ್ಣು ಮಾರುವ ಅಂಗಡಿಗಳಲ್ಲಿ ಬಾಳೆಗೊನೆ ಮತ್ತು ಹಣ್ಣುಗಳ ಸಿಪ್ಪೆಗಳು ಶೀಘ್ರ ಕಪ್ಪು ಬಣ್ಣಕ್ಕೆ ತಿರುಗಿ ಮಾರಾಟವಾಗದೆ ಉಳಿದುಹೋಗುತ್ತದೆ. ಹೀಗೆ ಮಾರಾಟ ವಾಗದೆ ಉಳಿದುಹೋಗುವ ಕಪ್ಪಾದ ಬಾಳೆಹಣ್ಣುಗಳು ಕಸದ ಟಿಪ್ಪರ್ ಗಳನ್ನು ಸೇರುವ ಮೊದಲೆ ಅವುಗಳನ್ನು ಅಂಗಡಿ ಗಳಿಂದ ಸುರಕ್ಷಿತವಾಗಿ ಸಂಗ್ರಹಿಸಿ ತಂದು ಹಣ್ಣುಗಳನ್ನು ಗೊನೆಯಿಂದ ಸೂಕ್ಷ್ಮವಾಗಿ ಬಿಡಿಸಿ ಪಶು ಪಕ್ಷಿಗಳಿಗೆ ಆಹಾರವಾಗಿ ನೀಡಿದರೆ ಹೇಗೆ ಎಂಬ ಯೋಚನೆ ಮನಸ್ಸಿನಲ್ಲಿ ಮೂಡಿದ್ದನ್ನು ಕಾರ್ಯರೂಪಕ್ಕೂ ತಂದರು.

ಈ ಯೋಚನೆಯಂತೆ ಮಂಜಯ್ಯ ಅವರಿಗೆ ಪಟ್ಟಣದ ಅನೇಕ ಬಾಳೆಹಣ್ಣು ಅಂಗಡಿಯವರು ಹಣ್ಣಾಗಿ ಕಪ್ಪಾಗಿರುವ ಮಾರಾಟವಾಗದೆ ಉಳಿದಿರುವ ಹಣ್ಣು, ಬಾಳೆಗೊನೆಗಳನ್ನು ಉಚಿತವಾಗಿ ನೀಡಲು ಮುಂದೆ ಬಂದರು. ಪರಿಣಾಮವಾಗಿ ಮಂಜಯ್ಯ ಅವರು ಪ್ರತಿನಿತ್ಯ ತಮ್ಮ ಸ್ಕೂಟಿ ವಾಹನದಲ್ಲಿ ಅಂಗಡಿಗಳಿಗೆ ತೆರಳಿ ಕಪ್ಪಾದ ಬಾಳೆಗೊನೆಗಳನ್ನು ಸಂಗ್ರಹಿಸಿ ತಂದು ಅವುಗಳನ್ನು ಸಾಧ್ಯವಾದಷ್ಟು ಹಸುಗಳಿಗೆ ಮತ್ತು ಮನೆಗಳ ಟೆರಸ್ ಮೇಲೆ ಪಕ್ಷಿಗಳಿಗೆ ನೀಡಿ ಆಹಾರ ಹಾಗೂ ನೀರು ಒದಗಿಸುವ ಸಮಾಜ ಸೇವೆ ನಿರ್ವಹಿಸುತ್ತಿದ್ದಾರೆ. ಕಪ್ಪಾಗಿ ಮಾರಾಟವಾಗದೆ ಉಳಿಯುವ ಬಾಳೆಗೊನೆಗಳನ್ನು ನೀಡುತ್ತಿರುವ ಅಂಗಡಿಯವರಿಗೆ ಸಮಾಜ ಸೇವಕರಾದ ಬಿ.ಎಸ್.ಮಂಜಯ್ಯ ಕೃತಜ್ಞತೆಯನ್ನು ತಿಳಿಸಿದ್ದಾರೆ.

ಬಿರು ಬೇಸಿಗೆಯಲ್ಲೂ ಪಶು ಪಕ್ಷಿಗಳಿಗೆ ಆಹಾರ ಮತ್ತು ಕುಡಿಯಲು ನೀರು ಒದಗಿಸುತ್ತಿರುವ ಬಿ.ಎಸ್.ಮಂಜಯ್ಯ ಅವರ ಸಮಾಜ ಸೇವಾ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

24ಕೆಟಿಆರ್.ಕೆ.1ಃ ಸಮಾಜ ಸೇವಕರಾದ ಬಿ.ಎಸ್.ಮಂಜಯ್ಯ ಅವರು ಹಸುಗಳಿಗೆ ಬಾಳೆಹಣ್ಣು ಆಹಾರ ನೀಡುತ್ತಿದ್ದಾರೆ.