ಸಾರಾಂಶ
ಕನ್ನಡಪ್ರಭ ವಾರ್ತೆ ಶಹಾಪುರ
ಅನಧಿಕೃತ ಕೋಚಿಂಗ್ ಶಾಲೆಗಳನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ಖಾಸಗಿ ಅನುದಾನ ರಹಿತ ಕನ್ನಡ ಮಾಧ್ಯಮ ಶಾಲೆಗಳ ಸಂಘದ ವತಿಯಿಂದ ನಗರದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ, ಬಳಿಕ ಕ್ಷೇತ್ರ ಶಿಕ್ಷಣಾಧಿಕಾರಿಗೆ ಮನವಿ ಪತ್ರ ಸಲ್ಲಿಸಲಾಯಿತು.ಈ ವೇಳೆ ಮಾತನಾಡಿದ ಸಂಘದ ಸಂಚಾಲಕ ಮಲ್ಲಿಕಾರ್ಜುನ ಪಾಟೀಲ್ ಕನ್ಯಾಕೋಳೂರು, ಶಿಕ್ಷಣ ಇಲಾಖೆಯ ಅನುಮತಿ ಪಡೆಯದೆ ತಾಲೂಕಿನಲ್ಲಿ ಅನಧಿಕೃತ ಕೋಚಿಂಗ್ ಕೇಂದ್ರಗಳು ರಾಜಾರೋಷವಾಗಿ ನಡೆಯುತ್ತಿವೆ. ಯಾವುದೇ ಸೌಲಭ್ಯಗಳ ಇಲ್ಲದಿದ್ದರೂ ಕೇಂದ್ರಗಳನ್ನು ನಡೆಸುವ ಮೂಲಕ ಮಕ್ಕಳ ಪಾಲಕರಿಂದ ಮನಬಂದಂತೆ ಹಣ ವಸಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ವಿವಿಧ ವಸತಿ ಶಾಲೆಗಳ ಪ್ರವೇಶ ಪರೀಕ್ಷೆ ಬರೆಯಲು ವಿದ್ಯಾರ್ಥಿಗಳನ್ನು ಸಜ್ಜುಗೊಳಿಸುತ್ತೇವೆ. ನವೋದಯ, ಆದರ್ಶದಲ್ಲಿಯೂ ಯಶಸ್ಸು ತಂದು ಕೊಡುತ್ತೇವೆ ಎಂದು ಊರೆಲ್ಲಾ ಬ್ಯಾನರ್ ಕಟ್ಟಿ, ವಸತಿ ಸಹಿತ, ವಸತಿ ರಹಿತವೆಂದು ಮುಗ್ದ ಪಾಲಕರ ಮನವೊಲೈಸಿ ಯಾವುದೇ ಸರ್ಕಾರದ ಮಾನದಂಡ ಪಾಲಿಸದೆ ನಿಯಮ ಬಾಹಿರ ಅನಧಿಕೃತ ಕೋಚಿಂಗ್ ಸೆಂಟರ್ ಮಾಡಿ ಹಣಗಳಿಸುವ ವಾಮಮಾರ್ಗ ಹುಡುಕಿಕೊಂಡಿರುವ ಕೆಲವು ಕೇಂದ್ರಗಳ ಬಗ್ಗೆ ಕಠಿಣ ನಿಲುವು ತಾಳಬೇಕು.ಕಷ್ಟಪಟ್ಟು 25 ವರ್ಷಗಳಿಂದ ನಡೆಸುತ್ತಿರುವ ಕನ್ನಡ ಶಾಲೆಗಳನ್ನು ಉಳಿಸಬೇಕು. ಪರವಾನಿಗೆ ಇಲ್ಲದೆ ಕೋಚಿಂಗ್ ಶಾಲೆಗಳನ್ನು ನಡೆಸುತ್ತಿರುವವರ ಬಗ್ಗೆ ಗೊತ್ತಿದ್ದರೂ ಶಿಕ್ಷಣ ಇಲಾಖೆ ವಿವಿಧ ಹಂತದ ಅಧಿಕಾರಿಗಳು ಅಕ್ರಮಕ್ಕೆ ಕಡಿವಾಣ ಹಾಕಲು ಮುಂದಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈಗಲಾದರೂ ತಾಲೂಕಿನಲ್ಲಿರುವ ಅನಧಿಕೃತ ಕೋಚಿಂಗ್ ಕೇಂದ್ರಗಳನ್ನು ಮುಚ್ಚಿಸಲು ಅಧಿಕಾರಿಗಳು ಮುಂದಾಗಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯವಾಗುತ್ತದೆ ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.ಕಾರ್ಯದರ್ಶಿ ಹೊನ್ನಪ್ಪ ಗಂಗನಾಳ ಮಾತನಾಡಿ, ಅನಧಿಕೃತ ಕೋಚಿಂಗ್ ಶಾಲೆಗಳು ಕಣ್ಣೆದುರೇ ಇದ್ದರೂ, ಕ್ರಮ ಕೈಗೊಳ್ಳುವಲ್ಲಿ ಹಿಂದೇಟು ಹಾಕುತ್ತಿರುವುದು ಸರಿಯಲ್ಲ. ವಿದ್ಯಾರ್ಥಿಗಳ ಭವಿಷ್ಯ ರೂಪಿಸಬೇಕಾಗಿರುವ ವಿದ್ಯಾ ದೇಗುಲಗಳು ಮಕ್ಕಳ ಜೀವನದ ಜೊತೆ ಚೆಲ್ಲಾಟವಾಡ್ತಿವೆ. ಪೋಷಕರ ನೂರಾರು ಕನಸುಗಳು ನುಚ್ಚು ನೂರು ಮಾಡ್ತಿವೆ. ಆದರೂ ಶಾಲಾ ಶಿಕ್ಷಣ ಇಲಾಖೆ ಜಾಣ ಕುರುಡುತನ ಪ್ರದರ್ಶಿಸುತ್ತಿರುವುದು ವಿಷಾದನೀಯ. ಇದು ಹೀಗೆ ಮುಂದುವರೆದರೆ ಅನಿವಾರ್ಯವಾಗಿ ಹೋರಾಟದ ಚುರುಕುಗೊಳಿಸಬೇಕಾಗುತ್ತದೆ ಎಂದರು.
ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಜಾಹಿದಾ ಬೇಗಂ ಮನವಿ ಸ್ವೀಕರಿಸಿ ಮಾತನಾಡಿ, ಖಾಸಗಿ ಕನ್ನಡ ಮಾಧ್ಯಮ ಶಾಲೆಗಳ ಉಳಿಸುವಲ್ಲಿ ಸಾರ್ಥಕ ಪ್ರಯತ್ನ ಹಾಕುವೆ. ಯಾವುದೇ ಅಡೆತಡೆ ಬಂದರೂ ನಾನು ಕನ್ನಡ ಶಾಲೆಗೆ ಧಕ್ಕೆ ಬರದಂತೆ ನೋಡಿಕೊಳ್ಳುತ್ತೇನೆ. ಸ್ವಲ್ಪ ಸಮಯ ಅವಕಾಶ ನೀಡಿ ಎಲ್ಲವೂ ಸರಿಪಡಿಸುತ್ತೇವೆ ಎಂದು ಭರವಸೆ ನೀಡಿದರು.ಪ್ರವೀಣ ಫಿರಂಗಿ, ಮೂರ್ತಿ ಮುದಗಲ್, ಗುರುರಾಜ, ಅಶೋಕ ಘನಾತೆ, ರಾಮು ಸಗರ, ತಿಪ್ಪಣ್ಣ ಕ್ಯಾತನಾಳ, ಆರ್.ಎಸ್. ಹಳಗೊಂಡ, ಮೃತ್ಯುಂಜಯ ಚಿಕ್ಕಮಠ, ಕರೀಂಸಾಬ ದೋರನಹಳ್ಳಿ, ಸಿದ್ರಾಮಪ್ಪ ಬಾರಿಗಿಡ, ಚೆನ್ನಯ್ಯಸ್ವಾಮಿ, ಮಲ್ಲಣ್ಣ ಜಗಂಡಿ, ಮರೆಪ್ಪ, ಶಶಿಕಾಂತ ಮಾನು, ಗುರುಲಿಂಗಯ್ಯ, ನಾರಾಯಣಾಚಾರ್ಯ ಸಗರ ಸೇರಿದಂತೆ ಇತರರಿದ್ದರು.