ವಿಘ್ನೇಶ್ ಎಂ. ಭೂತನಕಾಡು ಮಡಿಕೇರಿ: ಅತ್ಯುತ್ತಮ ಸಾಧನೆ‌ ಮಾಡಿದ ಗ್ರಾಮ ಪಂಚಾಯಿತಿಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಗಾಂಧಿ ಗ್ರಾಮ ಪುರಸ್ಕಾರ ನೀಡುತ್ತಿದ್ದು, ದಕ್ಷಿಣ ಕೊಡಗಿನ ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಜಿಲ್ಲಾ ಪುರಸ್ಕಾರಕ್ಕೆ ಭಾಜನವಾಗಿದೆ. ತಾಲೂಕು ಮಟ್ಟದ ಪುರಸ್ಕಾರಕ್ಕೆ ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ, ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಗ್ರಾಮ ಪಂಚಾಯಿತಿ, ಮಡಿಕೇರಿ ತಾಲೂಕಿನ ಕರಿಕೆ ಹಾಗೂ ವಿರಾಜಪೇಟೆ ತಾಲೂಕಿನ ಬೇಟೋಳಿ ಗ್ರಾಮ ಪಂಚಾಯಿತಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. ಗ್ರಾಮ ಪಂಚಾಯಿತಿಗಳು ಸ್ಥಳೀಯ ಮಟ್ಟದಲ್ಲಿ ಸ್ವಯಂ ಆಡಳಿತ ಸಂಸ್ಥೆಗಳಾಗಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಬೇಕೆಂಬ ಸದುದ್ದೇಶದಿಂದ ರಾಜ್ಯದಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಗ್ರಾಮ ಪಂಚಾಯಿತಿಗಳನ್ನು ಪ್ರೋತ್ಸಾಹಿಸಲು 2013-14ನೇ ಸಾಲಿನಿಂದ ಪತಿ ತಾಲ್ಲೂಕಿಗೆ ಒಂದರಂತೆ ಗ್ರಾಮ ಪಂಚಾಯತಿಯನ್ನು ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆ ಮಾಡಿ ರು. 5 ಲಕ್ಷಗಳ ಪ್ರೋತ್ಸಾಹ ಧನ ನೀಡಿ ಗೌರವಿಸಲಾಗುತ್ತಿದೆ.

ಪ್ರಸ್ತುತ 2024-2025ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ, ವಿಭಾಗ ಮಟ್ಟದಲ್ಲಿ 12, ಜಿಲ್ಲಾ ಮಟ್ಟದ ಪುರಸ್ಕಾರಕ್ಕೆ 31 ಹಾಗೂ ತಾಲ್ಲೂಕು ಮಟ್ಟದ ಪುರಸ್ಕಾರಕ್ಕೆ 195 ಗ್ರಾಮ ಪಂಚಾಯತಿಗಳು ಸೇರಿದಂತೆ ಒಟ್ಟು 238 ಗ್ರಾಮ ಪಂಚಾಯತಿಗಳನ್ನು 2024-25 ನೇ ಸಾಲಿನ ಗಾಂಗ್ರಾಮ ಪುರಸ್ಕಾರಕ್ಕಾಗಿ ರಾಜ್ಯ ಮಟ್ಟದ ಪರಾಮರ್ಶೆ ಸಮಿತಿ ಸಭೆಯಲ್ಲಿ ಆಯ್ಕೆ ಮಾಡಲಾಗಿದೆ. ಬೆಂಗಳೂರಿನಲ್ಲಿ ನಡೆಯಲಿರುವ ವಿಶೇಷ ಸಮಾರಂಭದಲ್ಲಿ ಸರ್ಕಾರದ ವತಿಯಿಂದ ಗಾಂಧಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಗುವುದು. ಪ್ರಶಸ್ತಿಯ ಮೊತ್ತವನ್ನು ಗ್ರಾಮದ ಮೂಲಭೂತ ಸೌಕರ್ಯಗಳ ಮತ್ತಷ್ಟು ಅಭಿವೃದ್ಧಿಗಾಗಿ ಬಳಸಲು ಸಹಕಾರಿಯಾಗಲಿದೆ.


ಜಿಲ್ಲಾ ಮಟ್ಟದಲ್ಲಿ ಬಿ ಶೆಟ್ಟಿಗೇರಿ ಗ್ರಾಪಂ: 2024- 25 ನೇ ಸಾಲಿನ ರಾಜ್ಯಮಟ್ಟದ ಗಾಂಧಿ ಗ್ರಾಮ ಪುರಸ್ಕಾರ ವಿಭಾಗದಲ್ಲಿ ಕೊಡಗು ಜಿಲ್ಲೆಯ ಐದು ತಾಲೂಕುಗಳಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದು ದಕ್ಷಿಣ ಕೊಡಗಿನ ಬಿ. ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ಜಿಲ್ಲಾಮಟ್ಟದ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗಿದೆ. ಆ ಮೂಲಕ 8 ಲಕ್ಷ ರೂ ಗಳ ನಗದು ಬಹುಮಾನ ಮತ್ತು ಪ್ರಶಸ್ತಿ ಸ್ವೀಕರಿಸಲಿದೆ. ಗ್ರಾಮ ಪಂಚಾಯತಿಯ ಹಿಂದಿನ ಅಧ್ಯಕ್ಷರಾದ ಕೊಲ್ಲೀರ ಬೋಪಣ್ಣ ಮತ್ತು ಆಡಳಿತ ಮಂಡಳಿ ಅಪಾರ ಶ್ರಮ ವಹಿಸಿದೆ. ಜಿಲ್ಲೆಯ 104 ಪಂಚಾಯಿತಿಗಳ ಪೈಕಿ ಬಿ. ಶೆಟ್ಟಿಗೇರಿ ಗ್ರಾಪಂ ಅತ್ಯುತ್ತಮ ಜನಸ್ನೇಹಿ ಆಡಳಿತವನ್ನು ನೀಡುವ ಮೂಲಕ ಮಾದರಿ ಗ್ರಾಪಂ ಎನಿಸಿದೆ. ಪಂಚಾಯಿತಿ ವ್ಯಾಪ್ತಿಯಲ್ಲಿ ಹಲವು ಮೂಲ ಸೌಕರ್ಯಕ್ಕೆ ಆದ್ಯತೆ ನೀಡಿ ಕೆಲಸ ಮಾಡಿದೆ.

ಗುಡ್ಡೆಹೊಸೂರು ಗ್ರಾಪಂ ಹ್ಯಾಟ್ರಿಕ್ ಸಾಧನೆ: ಕುಶಾಲನಗರ ತಾಲೂಕಿನ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. ಈ ಮೂಲಕ ಪಂಚಾಯಿತಿಯು ಸತತ ಮೂರನೇ ಬಾರಿಗೆ ಈ ಗೌರವವನ್ನು ಪಡೆದು ಹ್ಯಾಟ್ರಿಕ್ ಸಾಧನೆ ಮಾಡಿದೆ.

​ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಗ್ರಾಮೀಣಾಭಿವೃದ್ಧಿ ಯೋಜನೆಗಳನ್ನು ಅತ್ಯುತ್ತಮವಾಗಿ ಅನುಷ್ಠಾನಗೊಳಿಸಿರುವುದನ್ನು ಪರಿಗಣಿಸಿ ಈ ಆಯ್ಕೆ ಮಾಡಲಾಗಿದೆ.

ವಿಶೇಷವಾಗಿ ಸ್ವಚ್ಛತೆ, ಕುಡಿಯುವ ನೀರು ಪೂರೈಕೆ, ತೆರಿಗೆ ಸಂಗ್ರಹಣೆ, ಪಂಚಾಯಿತಿ ಆಡಳಿತದಲ್ಲಿ ಪಾರದರ್ಶಕತೆ ಮತ್ತು ಡಿಜಿಟಲೀಕರಣದಂತಹ ಮಾನದಂಡಗಳಲ್ಲಿ ಗುಡ್ಡೆಹೊಸೂರು ಪಂಚಾಯಿತಿ ಮುಂಚೂಣಿಯಲ್ಲಿದೆ. ಈ ಸಾಧನೆಯು ಜಿಲ್ಲೆಯ ಇತರೆ ಪಂಚಾಯಿತಿಗಳಿಗೆ ಮಾದರಿಯಾಗಿದೆ ಎಂದು ಸಾರ್ವಜನಿಕರು ಶ್ಲಾಘಿಸಿದ್ದಾರೆ.ಶನಿವಾರಸಂತೆ ಗ್ರಾಪಂ: ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಗ್ರಾಪಂ ಹಲವು ಅಭಿವೃದ್ಧಿ ಕೆಲಸಗಳ ಮೂಲಕ ಗಮನ ಸೆಳೆದಿದೆ. ವೈಜ್ಞಾನಿಕ ಹಸಿ ಕಸ ಹಾಗೂ ಒಣ ಕಸವನ್ನು ವಿಂಗಡಿಸಿ ಸಂಸ್ಕರಣೆ ಮಾಡಲಾಗುತ್ತಿದೆ. ರು. 5 ಲಕ್ಷ ವೆಚ್ಚದಲ್ಲಿ ನರೇಗಾ ಯೋಜನೆಯಡಿಯಲ್ಲಿ ವಾಲಿಬಾಲ್ ಅಂಕಣವನ್ನು ನಿರ್ಮಾಣ ಮಾಡಲಾಗಿದೆ. ಸರ್ಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಗೆ ರು.5 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಶೌಚಾಲಯ ನಿರ್ಮಾಣ ಮಾಡಲಾಗಿದೆ. ಗ್ರಾಮ ಪಂಚಾಯಿತಿ ನೂತನ ಕಟ್ಟಡವನ್ನು ರು.35 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಸ್ಥಳೀಯ ಪಂಚಾಯಿತಿ ನಿಧಿಯಿಂದ ಶನಿವಾರಸಂತೆ-ಹೊಸೂರು ರಸ್ತೆ ಬದಿಯಲ್ಲಿ ಇಂಟರ್ ಲಾಕ್ ವ್ಯವಸ್ಥೆ ಮಾಡಲಾಗಿದೆ. ಸ.ಹಿ.ಪ್ರಾ ಶಾಲೆಗೆ ಬೋರ್ವೆಲ್ ವ್ಯವಸ್ಥೆ ಮಾಡಲಾಗಿದೆ. ಕೈ ತೊಳೆಯುವ ತೊಟ್ಟಿಯನ್ನು ನಿರ್ಮಿಸಲಾಗಿದೆ.ಬೇಟೋಳಿ ಗ್ರಾಪಂ: ವಿರಾಜಪೇಟೆ ತಾಲೂಕಿನ ಬೇಟೋಳಿ ಗ್ರಾಮ ಪಂಚಾಯಿತಿ ರಸ್ತೆ, ಕುಡಿಯುವ‌ ನೀರು, ಚರಂಡಿ ಸೇರಿದಂತೆ ಮೂಲ ಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡಿದೆ.‌ ನರೇಗಾ ಯೋಜನೆಯ ಕೆಲಸದಲ್ಲಿ ತಾಲೂಕಿನಲ್ಲಿ 2ನೇ ಸ್ಥಾನದಲ್ಲಿದ್ದೇವೆ. ರು.30 ಲಕ್ಷ ವೆಚ್ಚದಲ್ಲಿ ಪಂಚಾಯಿತಿಗೆ ಆಧುನಿಕ ಕಟ್ಟಡವನ್ನು ನಿರ್ಮಿಸಲಾಗಿದೆ. ವಿಶೇಷ ಚೇತನರಿಗೆ ಶೇ.100 ಸೌಲಭ್ಯ ಒದಗಿಸಲಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರು ಸವಲತ್ತು ನೀಡಲಾಗಿದೆ. ಹೆಗ್ಗಳ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನರೇಗಾ ಯೋಜನೆಯಡಿಯಲ್ಲಿ ಉದ್ಯಾನವನ ನಿರ್ಮಾಣ ಮಾಡಲಾಗಿದೆ. ಕೇರಳ ಗಡಿ ಪ್ರದೇಶವಾಗಿರುವುದರಿಂದ ಗಡಿ ನಾಡಿನ ಲೈಬ್ರರಿ ಕೂಡಾ ಮಾಡಲಾಗಿದೆ.ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ಹಲವು ಕೆಲಸಗಳನ್ನು ಮಾಡಲಾಗಿದೆ. ಶಾಲೆಗೆ ಉದ್ಯಾನವನ, ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಪಂಚಾಯಿತಿ ಕಟ್ಟಡವನ್ನು ನವೀಕರಣ ಮಾಡಲಾಗಿದೆ. ಎಲ್ಲರ ಸಹಕಾರದಿಂದ ಈ ಪುರಸ್ಕಾರ ದೊರಕಿದೆ. -ಕೊಲ್ಲೀರ ಬೋಪಣ್ಣ, ಮಾಜಿ ಅಧ್ಯಕ್ಷರು ಬಿ. ಶೆಟ್ಟಿಗೇರಿ ಗ್ರಾಪಂಪಂಚಾಯಿತಿಯಲ್ಲಿ ವೈಜ್ಞಾನಿಕ ಮಾದರಿಯಲ್ಲಿ ಹಸಿ ಕಸ, ಒಣ ಕಸವನ್ನು ಸಂಸ್ಕರಿಸಲಾಗುತ್ತಿದೆ. ಪಂಚಾಯಿತಿಯಲ್ಲಿ ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಲಾಗಿದೆ. ಆಡಳಿತ ಮಂಡಳಿ ಸಹಕಾರದಿಂದ ಈ ಪ್ರಶಸ್ತಿ ಬರಲು ಕಾರಣವಾಗಿದೆ. -ಹರೀಶ್, ಪಿಡಿಒ ಶನಿವಾರಸಂತೆ

ಪಂಚಾಯಿತಿಯಿಂದ ಹಲವು ಮೂಲ ಸೌಕರ್ಯಕ್ಕೆ ಆದ್ಯತೆ ನೀಡಿ ಕೆಲಸ ಮಾಡಲಾಗಿದೆ. ಡಿಜಿಟಲ್ ಲೈಬ್ರರಿಯೊಂದಿಗೆ ಕೇರಳ ಗಡಿ ಪ್ರದೇಶ ಇರುವುದರಿಂದ ಗಡಿ ನಾಡ ಲೈಬ್ರರಿಯನ್ನು ವಿಶೇಷವಾಗಿ ಮಾಡಲಾಗಿದೆ. ಪಂಚಾಯಿತಿ ಆಡಳಿತ ಮಂಡಳಿ ಸಹಕಾರದಿಂದ ಗಾಂಧಿಗ್ರಾಮ ಪ್ರಶಸ್ತಿ ದೊರಕಿದೆ. -ಬಿ. ಮಣಿ, ಪಿಡಿಓ ಬೇಟೋಳಿ ಗ್ರಾಪಂ

ಸ್ವಚ್ಛತೆ, ಪಾರದರ್ಶಕ ಆಡಳಿತ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳ ಮೂಲಕ ನಮ್ಮ ಪಂಚಾಯಿತಿಗೆ ಸತತ ಮೂರನೇ ಬಾರಿಗೆ ಗಾಂಧಿ ಗ್ರಾಮ ಪುರಸ್ಕಾರ ದೊರಕಿದ್ದು, ಪಂಚಾಯಿತಿ ಆಡಳಿತ ಮಂಡಳಿ ಹಾಗೂ ಸಿಬ್ಬಂದಿಗಳ ಶ್ರಮಕ್ಕೆ ದೊರೆತ ಪ್ರತಿಫಲವಾಗಿದೆ- ಸುಮೇಶ್, ಪಿಡಿಒ ಗುಡ್ಡೆಹೊಸೂರು ಗ್ರಾಪಂಹಿಂದಿನ ಆಡಳಿತ ಮಂಡಳಿಯ ಸಹಕಾರಿಂದ ಪಂಚಾಯಿತಿಯಲ್ಲಿ ಹಲವು ಅಭಿವೃದ್ಧಿ ಕೆಲಸ ಮಾಡಲಾಗಿದೆ. ಪಂಚಾಯಿತಿ ಕಟ್ಟಡ ನವೀಕರಣ ಮಾಡಲಾಗಿದೆ. ಇದೇ ಮೊದಲ ಬಾರಿಗೆ ಪಂಚಾಯಿತಿಗೆ ಜಿಲ್ಲಾ ಮಟ್ಟದ ಪುರಸ್ಕಾರ ದೊರಕಿದ್ದು, ಮತ್ತಷ್ಟು ಕೆಲಸ ಮಾಡಲು ಸಹಕಾರಿಯಾಗಿದೆ. -ಪರಮೇಶ್ ಎನ್ .ಜಿ, ಪಿಡಿಒ ಬಿ. ಶೆಟ್ಟಿಗೇರಿ ಗ್ರಾಪಂ