ಸಾರಾಂಶ
ಕನ್ನಡಪ್ರಭ ವಾರ್ತೆ ಹಾಸನ
ಜೆಡಿಎಸ್‌ನೊಳಗಿನ ಭಾರೀ ಹಗ್ಗಜಗ್ಗಾಟದ ನಂತರ ಬುಧವಾರ ಹಾಸನ ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ 8ನೇ ವಾರ್ಡ್‌ನ ಗಿರೀಶ್ ಚನ್ನವೀರಪ್ಪ ಮೇಯರ್ ಆಗಿ ಅವಿರೋಧವಾಗಿ ಆಯ್ಕೆಯಾದರು.ಬುಧವಾರ ನಡೆದ ಚುನಾವಣೆಯಲ್ಲಿ ಗಿರೀಶ್ ಒಬ್ಬರೇ ನಾಮಪತ್ರ ಸಲ್ಲಿಸಿದ್ದು, ಮಧ್ಯಾಹ್ನದ ನಂತರ ಚುನಾವಣಾಧಿಕಾರಿಗಳಾದ ಮೈಸೂರು ಪ್ರಭಾರಿ ಪ್ರಾದೇಶಿಕ ಆಯುಕ್ತ ವೆಂಕಟರಾಜ ಅವರು ಗಿರೀಶ್ ಅವರ ಆಯ್ಕೆ ಘೋಷಿಸಿದರು.ನೂತನ ಮೇಯರ್ ಗಿರೀಶ್ ಅವರನ್ನು ಸ್ಥಳೀಯ ಶಾಸಕ ಎಚ್.ಪಿ. ಸ್ವರೂಪ್, ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ, ಉಪ ಮೇಯರ್ ಹೇಮಲತಾ, ಜೆಡಿಎಸ್ ಸದಸ್ಯರು ಹಾಗೂ ಕುಟುಂಬದವರು ಅಭಿನಂದಿಸಿದರು. ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಹಿಂದಿನ ಮೇಯರ್ ಎಂ. ಚಂದ್ರೇಗೌಡ ಅವರು ಸದಸ್ಯತ್ವದಿಂದ ಅನರ್ಹಗೊಂಡ ಹಿನ್ನೆಲೆಯಲ್ಲಿ ಖಾಲಿಯಾದ ಮೇಯರ್ ಸ್ಥಾನಕ್ಕೆ ಮೊದಲು ಸೆಪ್ಟೆಂಬರ್ ೧೦ರಂದು ಚುನಾವಣೆ ನಿಗದಿಯಾಗಿದ್ದರೂ, ಮೈಸೂರು ಪ್ರಾದೇಶಿಕ ಆಯುಕ್ತರ ವರ್ಗಾವಣೆಯಿಂದ ಇಂದಿಗೆ ಮುಂದೂಡಲಾಗಿತ್ತು. ಮೇಯರ್ ಚುನಾವಣೆಯಿಂದ ಬಿಜೆಪಿ ಸಂಪೂರ್ಣವಾಗಿ ಹಿಂದೆ ಸರಿದಿದ್ದು, ಅವರ ಯಾವುದೇ ಸದಸ್ಯರು ಸಭೆಗೆ ಹಾಜರಾಗಲಿಲ್ಲ. ಪಾಲಿಕೆಯಲ್ಲಿ ಒಟ್ಟು 34 ಸದಸ್ಯರಿದ್ದು, ಜೆಡಿಎಸ್ 16, ಬಿಜೆಪಿ 13, ಕಾಂಗ್ರೆಸ್ 2 ಹಾಗೂ ಪಕ್ಷೇತರ 3 ಮಂದಿ ಸದಸ್ಯರು ಇದ್ದಾರೆ. ಬಿಜೆಪಿ ಇತರರ ಬೆಂಬಲ ಪಡೆದು ಸ್ಪರ್ಧಾ ಅಖಾಡಕ್ಕಿಳಿಯಬಹುದೆಂದು ನಿರೀಕ್ಷಿಸಿದ್ದರೂ, ಕೊನೆಯಲ್ಲಿ ತಟಸ್ಥವಾಯಿತು. ವಿಧಾನ ಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಮಾಧ್ಯಮದೊಂದಿಗೆ ಮಾತನಾಡಿ, ಇಂದು ಒಮ್ಮತವಾಗಿ ಮೇಯರ್ ಚುನಾವಣೆ ನಡೆದಿದೆ. ನೂತನ ಮೇಯರ್‌ಗೆ ಅಭಿನಂದನೆಗಳು, ಉತ್ತಮ ಕೆಲಸ ಮಾಡಲಿ. ಎಂ.ಚಂದ್ರೇಗೌಡ ಅವರ ಬಗ್ಗೆ ನಮಗೆ ಸಿಟ್ಟಿಲ್ಲ. ಪಕ್ಷ ವಿರೋಧಿ ಚಟುವಟಿಕೆ ಮಾಡಿದ್ದರಿಂದ ಅವರ ವಿರುದ್ಧ ಕೊರ್ಟ್‌ಗೆ ಹೋಗಬೇಕಾಯಿತು. ರಾಷ್ಟ್ರದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾಗಿದ್ದರೂ ಸ್ಥಳೀಯವಾಗಿ ಒಮ್ಮತ ಸಾಧ್ಯವಾಗಿಲ್ಲ. ಇದನ್ನು ಮಾಜಿ ಶಾಸಕರು ಅರಿಯಬೇಕು. ಸಭೆ, ಸಮಾರಂಭಗಳಲ್ಲಿ 3 ಸಂಸದರು ಸಹ ಮಾಜಿ ಶಾಸಕರೊಂದಿಗೆ ಕುಣಿದು ಕುಪ್ಪಳಿಸುತ್ತಾರೆ. ಇದು ಪವಿತ್ರ ಮೈತ್ರಿಯೋ ಅಪವಿತ್ರ ಮೈತ್ರಿಯೋ ಎಂಬುದನ್ನು ಜನರೇ ನಿರ್ಧರಿಸಲಿ ಎಂದು ಪರೋಕ್ಷವಾಗಿ ಮಾಜಿ ಶಾಸಕ ಪ್ರೀತಂಗೌಡ-ಸಂಸದ ಶ್ರೇಯಸ್ ಪಟೇಲ್ ನಡೆಗೆ ಕಿಡಿಕಾರಿದರು. ಕ್ಷೇತ್ರದ ಶಾಸಕ ಎಚ್.ಪಿ. ಸ್ವರೂಪ್ ಮಾತನಾಡಿ, ಈ ಹಿಂದೆ ನಮ್ಮ ತಂದೆ ಶಾಸಕರಾಗಿದ್ದಾಗ ಹಿರಿಯರಾದ ಚನ್ನವೀರಪ್ಪ ಅವರು ನಗರಸಭೆ ಅಧ್ಯಕ್ಷರಾಗಿದ್ದರು. ಅವರು ಹಲವು ಉತ್ತಮ ಕೆಲಸ ಮಾಡಿದ್ದರು. ಈಗ ಅವರ ಪುತ್ರ ಗಿರೀಶ್ ಅವರು ಅಧ್ಯಕ್ಷರಾಗಿದ್ದಾರೆ. ನಮ್ಮೆಲ್ಲರಿಗೂ ಸಂತೋಷ ತಂದಿದೆ. ಅವರೂ ಕೂಡ ನಗರದ ಜನರ ಪರವಾಗಿ ಕೆಲಸ ಮಾಡಲಿ. ಹಿಂದೆ ಚಂದ್ರೇಗೌಡರನ್ನು ಅಧ್ಯಕ್ಷರನ್ನಾಗಿ ಮಾಡಿದ್ದು ಇದೇ ಜೆಡಿಎಸ್. ಆ ಬಿಜೆಪಿ ಸದಸ್ಯರಿಗೆ ಉಪಾಧ್ಯಕ್ಷ ಸ್ಥಾನ ನೀಡಿದ್ದೆವು. ಆದರೆ ಅವರು ಒಪ್ಪಂದದಂತೆ ಅಧಿಕಾರ ಬಿಟ್ಟು ಕೊಡದೇ ಇದ್ದಾಗ ಅವಿಶ್ವಾಸ ನಿರ್ಣಯ ಮಂಡಿಸಿದ್ದೆವು. ಆಗ ಅವರು ಬಿಜೆಪಿ-ಕಾಂಗ್ರೆಸ್ ಸಹಕಾರ ಪಡೆದು ಮೇಯರ್ ಆಗುವ ಮೂಲಕ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರು. ಇದರ ವಿರುದ್ಧ ನಾವು ಕೋರ್ಟ್ ಮೊರೆ ಹೋದಾಗ ನಮಗೆ ನ್ಯಾಯ ಸಿಕ್ಕಿತ್ತು. ಇಂದು ನಡೆದ ಚುನಾವಣೆಯಲ್ಲಿಯಲ್ಲಿ ಆ ರೀತಿಯ ಯಾವುದೇ ಪಕ್ಷ ವಿರೋಧಿ ಚಟುವಟಿಕೆ ನಡೆಯಲಿಲ್ಲ. ಆದರೆ ಬಿಜೆಪಿಯವರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲಿಲ್ಲ ಎಂದರು. ನೂತನ ಮೇಯರ್ ಗಿರೀಶ್ ಚನ್ನವೀರಪ್ಪ ಮಾತನಾಡಿ, ನಮ್ಮ ಪಕ್ಷದ ನಾಯಕರ ಸೂಚನೆಯಂತೆ ಇಂದು ನಾನು ಮೇಯರ್ ಆಗಿ ಅವಿರೋಧ ಆಯ್ಕೆಯಾಗಿದ್ದೇನೆ. ಇದಕ್ಕೆ ಸಹಕಾರ ನೀಡಿದ ಮಾಜಿ ಸಚಿವ ಎಚ್.ಡಿ. ರೇವಣ್ಣ, ಶಾಸಕ ಸ್ವರೂಪ್ ಪ್ರಕಾಶ್, ಎಂಎಲ್‌ಸಿ ಸೂರಜ್ ರೇವಣ್ಣ ಸೇರಿದಂತೆ ಹಾಸನ ಜನತೆಗೆ ವಿಶೇಷವಾಗಿ ನನ್ನನ್ನು ಗೆಲ್ಲಿಸಿರುವ 8 ನೇ ವಾರ್ಡ್ ಜನತೆಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
*ಬಾಕ್ಸ್12003-04ರ ಅವಧಿಯಲ್ಲಿ ಗಿರೀಶ್ ಅವರ ತಂದೆ ಚನ್ನವೀರಪ್ಪ ನಗರಸಭೆ ಅಧ್ಯಕ್ಷರಾಗಿದ್ದರು. ಅಂದು ಕಾಂಗ್ರೆಸ್‌ನಲ್ಲಿದ್ದ ಚನ್ನವೀರಪ್ಪ ಕಾಂಗ್ರೆಸ್ ಹಿರಿಯ ಮುಖಂಡ ಹಾಗೂ ಸಚಿವರೂ ಆಗಿದ್ದ ಶ್ರೀಕಂಠಯ್ಯ ಅವರ ಸಖ್ಯದಲ್ಲಿದ್ದರು. ಅದಾದ ನಂತರದಲ್ಲಿ ಅವರು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಸಖ್ಯ ಬೆಳೆಸಿದರು. ಆನಂತರದಲ್ಲಿ ಅವರ ಸೊಸೆ (ಈಗಿನ ಮೇಯರ್ ಗಿರೀಶ್ ಅವರ ಪತ್ನಿ) ನೇತ್ರಾವತಿ ಕೂಡ ಜೆಡಿಎಸ್ ಕಡೆಯಿಂದಲೇ ಗೆದ್ದು ನಗರಸಭೆ ಅಧ್ಯಕ್ಷರಾಗಿದ್ದರು. ಇದೀಗ ಗಿರೀಶ್ ಮಹಾನಗರ ಪಾಲಿಕೆಯ ಮೇಯರ್ ಆಗಿದ್ದಾರೆ. ಇದರೊಂದಿಗೆ ಒಂದೇ ಕುಟುಂಬದ ಮೂವರಲ್ಲಿ ಇಬ್ಬರು ಅಧ್ಯಕ್ಷರಾಗಿಯೂ, ಒಬ್ಬರು ಮೇಯರ್ ಆಗಿಯೂ ಆಯ್ಕೆಯಾಗಿದ್ದು ವಿಶೇಷ.
---------ಬಾಕ್ಸ್2
- ಜೆಡಿಎಸ್‌ನಿಂದಲೇ ಗೆದ್ದು ಅಧ್ಯಕ್ಷರಾದ ಚಂದ್ರೇಗೌಡ ಅವರು ಬಿಜೆಪಿ ಸಖ್ಯ ಬೆಳೆಸಿ ಅಧ್ಯಕ್ಷ ಸ್ಥಾನ ಬಿಡದೆ ಹಠ ಹಿಡಿದಾಗ ಜೆಡಿಎಸ್ ನಾಯಕರಾದ ಎಚ್.ಡಿ.ರೇವಣ್ಣ ಅವರು, ನಮ್ಮ ಪಕ್ಷದಿಂದ ಅಲ್ಪಸಂಖ್ಯಾತರಿಗೆ ಅವಕಾಶ ಒದಗಿಸುವ ನಿಟ್ಟಿನಲ್ಲಿ ಚಂದ್ರೇಗೌಡರನ್ನು ಕೆಳಗಿಳಿಸಬೇಕಿದೆ ಎನ್ನುವ ಮಾತನಾಡಿದ್ದರು. ರೇವಣ್ಣ ಅವರ ಈ ಒಂದು ಮಾತು ನಗರಸಭೆಯ ಜೆಡಿಎಸ್ ಮುಸ್ಲಿಂ ಸದಸ್ಯರಲ್ಲಿ ಆಶಾಭಾವನೆ ಮೂಡಿಸಿತ್ತು. ಹಾಗಾಗಿ ಮೇಯರ್ ಸ್ಥಾನಕ್ಕಾಗಿ ಭಾರೀ ಪೈಪೋಟಿ ನಡೆದಿತ್ತು.