ಸಾರಾಂಶ
ನಮ್ಮ ಜೀವನಶೈಲಿ ಪರಿಣಾಮ ಇಂದು ಚಿಕ್ಕ ವಯಸ್ಸಿಗೆ ಮುಟ್ಟಾಗುವವರ ಸಂಖ್ಯೆ ಹೆಚ್ಚಿದೆ. ಇದು ನಮ್ಮ ಆಹಾರ ಪದ್ಧತಿಯಲ್ಲಿನ ಬದಲಾವಣೆಯೇ ಕಾರಣ. ಮುಟ್ಟಾಗುವ ಹಾಗೂ ಮುಟ್ಟು ನಿಲ್ಲುವ ಸಮಯದ ನಡುವೆ ನಾವು ವೈಯಕ್ತಿಕ ಶುಚಿತ್ವ ಹಾಗೂ ನೈರ್ಮಲ್ಯ ಕಡೆಗೆ ಹೆಚ್ಚು ಗಮನ ಕೊಡಬೇಕು.
ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಹೆಣ್ಣಿನ ದೇಹದಲ್ಲಿ ನೈಸರ್ಗಿಕವಾಗಿ ಆಗುವ ಋತುಚಕ್ರದ ಬಗ್ಗೆ ಯಾವುದೇ ಅತಂಕಕ್ಕೊಳಗಾಗದೆ ಎಚ್ಚರಿಕೆ ವಹಿಸುವಂತೆ ಜಿಲ್ಲಾ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞ ವೈದ್ಯರ ಸಂಘದ ಅಧ್ಯಕ್ಷ ಹಾಗೂ ಮಿಮ್ಸ್ ಸಹ ಪ್ರಾಧ್ಯಾಪಕ ಡಾ.ಮನೋಹರ್ ಸಲಹೆ ನೀಡಿದರು.ಮಾದರಹಳ್ಳಿ ಗ್ರಾಪಂ ಕಚೇರಿ ಸಭಾಂಗಣದಲ್ಲಿ ಮದ್ದೂರು ತಾಲೂಕು ಪಂಚಾಯ್ತಿ ವತಿಯಿಂದ ಆಯೋಜಿಸಿದ್ದ ಋತುಚಕ್ರ ಕುರಿತು ಅರಿವು ಹಾಗೂ ಉಚಿತ ಮುಟ್ಟಿನ ಕಪ್ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.ನಮ್ಮ ಜೀವನಶೈಲಿ ಪರಿಣಾಮ ಇಂದು ಚಿಕ್ಕ ವಯಸ್ಸಿಗೆ ಮುಟ್ಟಾಗುವವರ ಸಂಖ್ಯೆ ಹೆಚ್ಚಿದೆ. ಇದು ನಮ್ಮ ಆಹಾರ ಪದ್ಧತಿಯಲ್ಲಿನ ಬದಲಾವಣೆಯೇ ಕಾರಣ. ಮುಟ್ಟಾಗುವ ಹಾಗೂ ಮುಟ್ಟು ನಿಲ್ಲುವ ಸಮಯದ ನಡುವೆ ನಾವು ವೈಯಕ್ತಿಕ ಶುಚಿತ್ವ ಹಾಗೂ ನೈರ್ಮಲ್ಯ ಕಡೆಗೆ ಹೆಚ್ಚು ಗಮನ ಕೊಡಬೇಕು ಎಂದರು.
ದೇಹದ ಹಾರ್ಮೋನುಗಳ ಅಸಮತೋಲನದ ಪರಿಣಾಮ ಮುಟ್ಟಾಗುವ ಸಂದರ್ಭ ವ್ಯತ್ಯಾಸಗಳಾಗುತ್ತವೆ. ಇದರಿಂದ ಆತಂಕಕ್ಕೊಳಗಾಗದೇ ಎಚ್ಚರಿಕೆಯಿಂದ ಇರಬೇಕು. ತೀವ್ರತರಹದ ರಕ್ತ ಸ್ರಾವ ಸಂಭವಿಸಿದರೆ ತಕ್ಷಣ ತಜ್ಞ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು ಎಂದರು.ತಾಪಂ ಸಹಾಯಕ ನಿರ್ದೇಶಕ ಮಂಜುನಾಥ್ ಮಾತನಾಡಿ, ಮಹಿಳಾ ಸಬಲೀಕರಣ ಮಾಡುವ ನಿಟ್ಟಿನಲ್ಲಿ ಪಂಚಾಯ್ತಿಗಳಲ್ಲಿ ಹಲವು ಜಾಗೃತಿ ಕಾರ್ಯಕ್ರಮಗಳು ನಡೆಯುತ್ತಿವೆ. ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಜಾಗೃತಿ ವಹಿಸಿ ಸ್ವಾಸ್ತ್ಯ ಸಮಾಜದ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದರು.
ಸ್ತ್ರೀ ರೋಗ ತಜ್ಞೆ ಡಾ.ಚಂಪಾ, ಮುಟ್ಟಿನ ಕಪ್ ಉಪಯೋಗ, ಬಳಕೆ ಹಾಗೂ ಅದರ ಪ್ರಯೋಜನಗಳ ಕುರಿತು ಮಾತನಾಡಿದರು.ಗ್ರಾಪಂ ಅಧ್ಯಕ್ಷೆ ಗೀತಾ ಸತೀಶ್ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮದಲ್ಲಿ 250ಕ್ಕೂ ಹೆಚ್ಚು ಮಹಿಳೆಯರಿಗೆ ಉಚಿತ ಮುಟ್ಟಿನ ಕಪ್ ವಿತರಿಸಲಾಯಿತು.
ಈ ವೇಳೆ ತಾಪಂ ಯೋಜನಾಧಿಕಾರಿ ಸುರೇಶ್, ಮಿಮ್ಸ್ ವೈದ್ಯರಾದ ಡಾ.ಸುಹಾಸ್, ಡಾ.ತೇಜಸ್ವಿನಿ, ಗ್ರಾಪಂ ಸಂಜೀವಿನಿ ಮಹಿಳಾ ಒಕ್ಕೂಟದ ಪದಾಧಿಕಾರಿಗಳಾದ ಗಾಯತ್ರಿ, ಸವಿತಾ, ಸರಿತಾ, ಸಿದ್ದಮ್ಮ, ಲಕ್ಷ್ಮಿ, ಗ್ರಾಪಂ ಸದಸ್ಯರಾದ ಸುಧಾ, ಪೂರ್ಣಿಮಾ, ಮಂಚಶೆಟ್ಟಿ ಅಂಗನವಾಡಿ ಮೇಲ್ವಿಚಾರಕಿ ಜಯಲಕ್ಷ್ಮಿ, ಎನ್‌ಆರ್‌ಎಲ್‌ಎಎಂ ಸಿಬ್ಬಂದಿ ರವೀಂದ್ರಗೌಡ, ಅಮೃತ್ ರಾಜ್, ಅಂಬರಹಳ್ಳಿ ಸ್ವಾಮಿ, ವಿನುತಾ, ಎಂಬಿಕೆ ರಾಧಾ ಇದ್ದರು.