ಮಕ್ಕಳಿಗೆ ಮೌಲ್ಯಧಾರಿತ ಶಿಕ್ಷಣ ನೀಡಿ-ಶಾಸಕ ಪಾಟೀಲ

| Published : Sep 13 2025, 02:05 AM IST

ಸಾರಾಂಶ

ಮಕ್ಕಳಿಗೆ ಉತ್ತಮ ಸಂಸ್ಕೃತಿ ಸಂಸ್ಕಾರದ ಜೊತೆ ಮೌಲ್ಯಧಾರಿತ ಶಿಕ್ಷಣ ನೀಡಬೇಕೆಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು.

ನರಗುಂದ: ಮಕ್ಕಳಿಗೆ ಉತ್ತಮ ಸಂಸ್ಕೃತಿ ಸಂಸ್ಕಾರದ ಜೊತೆ ಮೌಲ್ಯಧಾರಿತ ಶಿಕ್ಷಣ ನೀಡಬೇಕೆಂದು ಶಾಸಕ ಸಿ.ಸಿ. ಪಾಟೀಲ ಹೇಳಿದರು. ಅವರು ಪಟ್ಟಣದ ಆರೂಢ ಕಲ್ಯಾಣ ಮಂಟಪದಲ್ಲಿ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಆನಂತರ ಮಾತನಾಡಿ, ರಾಜಕಾರಣಿಗಳು ಕೇವಲ ರಾಜಕಾರಣ ಮಾಡದೆ ಮುಂದಿನ ಪೀಳಿಗೆಗೆ ಮಾದರಿಯಾಗುವಂಥ ಮಹತ್ತರ ಕೊಡುಗೆ ನೀಡಿ ಹೋಗಬೇಕು. ನಮ್ಮ ದೇಶ ಅಭಿವೃದ್ಧಿಯಲ್ಲಿ ಶಿಕ್ಷಕರ ಪಾತ್ರ ಬಹಳ ಮಹತ್ವದ್ದಾಗಿದೆ. ಆದ್ದರಿಂದ ವಿದ್ಯಾರ್ಥಿಗಳಗೆ ಉತ್ತಮ ಶಿಕ್ಷಣ ನೀಡಿದರೆ ಮಾತ್ರ ನಾವು ಮುಂದಿನ ದಿನಗಳಲ್ಲಿ ಈ ವಿದ್ಯಾರ್ಥಿಗಳಿಂದ ದೇಶಕ್ಕೆ ಕೊಡುಗೆ ನಿರೀಕ್ಷೆ ಮಾಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಫ್. ಮಜ್ಜಿಗಿ ಮಾತನಾಡಿ, ಸಮಾಜ ಎಷ್ಟೇ ಅವಮಾಮಾನಿಸಿದರೂ ಧೃತಿಗೆಡದೆ

ಸಾವಿತ್ರಿ ಬಾಯಿ ಪುಲೆ ಮಕ್ಕಳಿಗೆ ಅಕ್ಷರಜ್ಞಾನ ನೀಡುವ ಮೂಲಕ ದೇಶಕ್ಕೆ ಮಾದರಿಯಾದಂತೆ ಮಕ್ಕಳ ಭರವಸೆಯ ಬೆಳಕಾಗಿ ಶಿಕ್ಷಕರು ನಿಲ್ಲಬೇಕು. ನಮ್ಮಲ್ಲಿ ಎಷ್ಟೇ ಜ್ಞಾನಇದ್ದರೂ ಕೂಡ ನಮಗೆ ಅಹಂಕಾರ ಇರಬಾರದೆಂದು ಹೇಳಿದರು. ತಹಸೀಲ್ದಾರ್ ಶ್ರೀಶೈಲ ತಳವಾರ ಮಾತನಾಡಿ, ಗುರುವಿನ ಸ್ಥಾನ ಅತ್ಯಂತ ಪವಿತ್ರ ಹಾಗೂ ಗೌರವಯುತ ಸ್ಥಾನ, ನಿಸ್ವಾರ್ಥ ಮನೋಭಾವನೆಯಿಂದ ಮಕ್ಕಳಿಗೆ ಶಿಕ್ಷಣ ನೀಡಿಬೇಕು, ಯೋಧರು ಮತ್ತು ಅವರ ಮಕ್ಕಳಗೆ ಶಿಕ್ಷಕರು ಗೌರವ ನೀಡಬೇಕೆಂದು ಕರೆ ನೀಡಿದರು. ಸಾನಿಧ್ಯ ವಹಿಸಿದ್ದ ಭೈರನಹಟ್ಟಿ ದೊರೆಸ್ವಾಮಿ ವಿರಕ್ತಮಠದ ಶಾಂತಲಿಂಗ ಶ್ರೀಗಳು ಕಾರ್ಯಕ್ರಮ ಉದ್ದೇಶಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.

ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯಿಂದ ನಿವೃತ್ತಿ ಹೊಂದಿದ ಶಿಕ್ಷಕರು ಮತ್ತು ಶಿಕ್ಷಕಿಯರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಮೌನಾಚರಣೆ. ನರಗುಂದ ವಿಧಾನ ಸಭೆ ಮತಕ್ಷೇತ್ರದ ಹಿರೇಕೊಪ್ಪದ ಗ್ರಾಮದ ವೀರ ಯೋಧ ಮಂಜುನಾಥ ಗಿಡ್ಡಮಲ್ಲಣ್ಣವರ ಕರ್ತವ್ಯದಲ್ಲಿದ್ದಾಗಲೇ ವೀರ ಮರಣ ಹೊಂದಿದ ವೀರ ಯೋಧನಿಗೆ ಮೌನಾಚರಣೆ ಮಾಡಲಾಯಿತು.

ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ನೀಲವ್ವ ವಡ್ಡಗೇರಿ, ಉಪಾಧ್ಯಕ್ಷ ಚಂದ್ರಗೌಡ ಪಾಟೀಲ, ಸದಸ್ಯರಾದ ಅಪ್ಪಣ್ಣ ನಾಯ್ಕರ, ರಾಚನಗೌಡ ಪಾಟೀಲ, ಫಕೀರಪ್ಪ ಹಾದಿಮನಿ, ಹನಮಂತ ಹವಾಲ್ದಾರ, ಪವಾಡಪ್ಪ ವಡ್ಡಿಗೇರಿ, ಶಿಕ್ಷಕರ ಸಂಘದ ಹಾಗೂ ತಾಲೂಕು ನೌಕರರ ಸಂಘದ ಪದಾಧಿಕಾರಿಗಳು ಸೇರಿದಂತೆ ಮುಂತಾದವರು ಇದ್ದರು. ಶಿಕ್ಷಕಿ ಅನ್ನಪೂರ್ಣ ತೇಲಿ ಸ್ವಾಗತಿಸಿದರು. ಪ್ರಮೋದ ಜಾಧವ ಕಾರ್ಯಕ್ರಮ ನಿರೂಪಿಸಿದರು.