ನೆರೆ ಜಿಲ್ಲೆಗಳಿಗೆ ತುಂಗಾನದಿ ನೀರು ಕೊಡಿ: ಎಸ್ಸೆಸ್ಸೆಂ ಒತ್ತಾಯ

| Published : Sep 13 2025, 02:04 AM IST

ನೆರೆ ಜಿಲ್ಲೆಗಳಿಗೆ ತುಂಗಾನದಿ ನೀರು ಕೊಡಿ: ಎಸ್ಸೆಸ್ಸೆಂ ಒತ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾ ಬಲದಂಡೆ ನಾಲೆಯಿಂದ ನೆರೆಯ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯಿಂದ ದಾವಣಗೆರೆ, ಶಿವಮೊಗ್ಗ, ವಿಜಯನಗರ ಜಿಲ್ಲೆಯ ಅಚ್ಚುಕಟ್ಟು ಕೊನೆ ರೈತರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಬಲದಂಡೆ ನಾಲೆಯಿಂದ ನೀರು ಲಿಫ್ಟ್ ಮಾಡುವ ಬದಲು ತುಂಗಾ ನದಿಯಿಂದಲೇ ನೀರು ಪೂರೈಸುವಂತೆ ಜಲ ಸಂಪನ್ಮೂಲ ಸಚಿವ ಡಿಸಿಎಂ ಡಿ.ಕೆ.ಶಿವಕುಮಾರ ಅವರಿಗೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು, ರೈತರು ಮನವಿ ಅರ್ಪಿಸಿದ್ದಾರೆ.

- ಭದ್ರಾ ನಾಲೆಗಳ ದುರಸ್ತಿಗೆ ₹100 ಕೋಟಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಸಂಸದೆ ಡಾ.ಪ್ರಭಾ ಮನವಿ - - -

ಕನ್ನಡಪ್ರಭ ವಾರ್ತೆ ದಾವಣಗೆರೆ ಭದ್ರಾ ಬಲದಂಡೆ ನಾಲೆಯಿಂದ ನೆರೆಯ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯಿಂದ ದಾವಣಗೆರೆ, ಶಿವಮೊಗ್ಗ, ವಿಜಯನಗರ ಜಿಲ್ಲೆಯ ಅಚ್ಚುಕಟ್ಟು ಕೊನೆ ರೈತರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಬಲದಂಡೆ ನಾಲೆಯಿಂದ ನೀರು ಲಿಫ್ಟ್ ಮಾಡುವ ಬದಲು ತುಂಗಾ ನದಿಯಿಂದಲೇ ನೀರು ಪೂರೈಸುವಂತೆ ಜಲ ಸಂಪನ್ಮೂಲ ಸಚಿವ ಡಿಸಿಎಂ ಡಿ.ಕೆ.ಶಿವಕುಮಾರ ಅವರಿಗೆ ದಾವಣಗೆರೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ನೇತೃತ್ವದಲ್ಲಿ ಜಿಲ್ಲೆಯ ಶಾಸಕರು, ರೈತರು ಮನವಿ ಅರ್ಪಿಸಿದರು.

ಜಲ ಸಂಪನ್ಮೂಲ ಇಲಾಖೆ, ಕರ್ನಾಟಕ ನೀರಾವರಿ ನಿಗಮದಿಂದ ಶುಕ್ರವಾರ ಬಿ.ಆರ್. ಪ್ರಾಜೆಕ್ಟ್‌ನಲ್ಲಿ ಭದ್ರಾ ಜಲಾಶಯಕ್ಕೆ ಬಾಗಿನ ಸಮರ್ಪಿಸಿದ ನಂತರ ಸಚಿವ ಎಸ್.ಎಸ್‌. ಮಲ್ಲಿಕಾರ್ಜುನ ನೇತೃತ್ವದಲ್ಲಿ ಸಂಸದ ಡಾ.ಪ್ರಭಾ ಮಲ್ಲಿಕಾರ್ಜುನ, ಶಾಸಕರಾದ ಡಿ.ಜಿ.ಶಾಂತನಗೌಡ, ಬಸವರಾಜ ವಿ.ಶಿವಗಂಗಾ, ಕೆ.ಎಸ್.ಬಸವಂತಪ್ಪ, ಜಿಲ್ಲೆಯ ರೈತ ಮುಖಂಡರು, ರೈತರು ಮನವಿ ಅರ್ಪಿಸಿ, ಭದ್ರಾ ಬಲದಂಡೆ ನಾಲೆ ಬದಲಿಗೆ ತುಂಗಾ ನದಿಯಿಂದಲೇ ನೀರು ಪೂರೈಸಲು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಮನವಿ ಅರ್ಪಿಸಿ, ದಾವಣಗೆರೆ ಜಿಲ್ಲೆಯ ಭದ್ರಾ ಅಚ್ಚುಕಟ್ಟಿನ ನಾಲೆಗಳು ನಿರ್ವಹಣೆ ಕೊರತೆಯಿಂದ ರೈತರು ತೀವ್ರ ಸಂಕಷ್ಟ ಅನುಭವಿಸುತ್ತಿದ್ದಾರೆ. ಕೆಲವೆಡೆ ನಾಲೆಗಳು ಕುಸಿದು ನೀರು ವ್ಯರ್ಥವಾಗಿ ಹೊರಹೋಗುತ್ತಿದೆ. ಮತ್ತಿತರೆ ಕಡೆಗಳಲ್ಲಿ ಹೂಳು ತುಂಬಿರುವುದರಿಂದ ಕೊನೆಯ ಭಾಗಕ್ಕೆ ನೀರು ತಲುಪುತ್ತಿಲ್ಲ. ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಡಿಸಿಎಂ ಡಿ.ಕೆ.ಶಿವಕುಮಾರಗೆ ಒತ್ತಾಯಿಸಿದರು.

ಕಳೆದ ವರ್ಷ ಭದ್ರಾ ಎಂಜಿನಿಯರ್‌ಗಳನ್ನು ಕರೆಸಿ, ಚರ್ಚಿಸಿದಾಗ ಸುಮಾರು ₹100 ಕೋಟಿ ಅನುದಾನದ ಅಗತ್ಯ ಇರುವುದನ್ನು ಹೇಳಿದ್ದರು. ಆಗಲೇ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ, ತಾವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದು, ₹100 ಕೋಟಿ ಅನುದಾನಕ್ಕೆ ಮನವಿ ಸಲ್ಲಿಸಿದ್ದೆವು. ಭದ್ರಾ ಅಚ್ಚುಕಟ್ಟು ಕೊನೆ ಭಾಗವು 4 ಉಪ ವಿಭಾಗಗಳನ್ನು ಒಳಗೊಂಡಿದೆ. ಒಟ್ಟಾರೆ, 32 ಸಾವಿರ ಹೆಕ್ಟೇರ್‌ ಜಮೀನಿಗೆ ನೀರು ಸಿಗುತ್ತದೆ. ಆದರೆ, ಸುಮಾರು 5700 ಹೆಕ್ಟೇರ್‌ ಜಮೀನಿಗೆ ಬೇಸಿಗೆ ವೇಳೆ ನೀರು ತಲುಪದ ಕಾರಣ ರೈತರು ವರ್ಷಕ್ಕೆ ಕೇವಲ ಒಂದೇ ಬೆಳೆಗೆ ಮಾತ್ರ ಸೀಮಿತವಾಗುತ್ತಿದ್ದಾರೆ. ಇದರಿಂದ ರೈತರಿಗೆ ತೀವ್ರ ಆರ್ಥಿಕ ನಷ್ಟವಾಗುತ್ತಿದೆ ಎಂದು ವಿವರಿಸಿದರು.

ದಾವಣಗೆರೆ, ಶಿವಮೊಗ್ಗ, ವಿಜಯನಗರ ಜಿಲ್ಲೆಗಳ ರೈತರ ಬದುಕು, ಭವಿಷ್ಯ ಮತ್ತು ಕೃಷಿ ಆರ್ಥಿಕತೆಯ ಹಿತದೃಷ್ಟಿಯಿಂದ ತಕ್ಷಣವೇ ಅನುದಾನವನ್ನು ಬಿಡುಗಡೆ ಮಾಡಬೇಕು. ಭದ್ರಾ ಬಲದಂಡೆ ನಾಲೆಯಿಂದ ಪಕ್ಕದ ಜಿಲ್ಲೆಗಳಿಗೆ ಕುಡಿಯುವ ನೀರು ಪೂರೈಸುವ ಯೋಜನೆಯಿಂದ ಅಚ್ಚುಕಟ್ಟು ವ್ಯಾಪ್ತಿಯ ಕೊನೆ ಭಾಗದ ರೈತರಿಗೆ ತೊಂದರೆಯಾಗುವ ಸಾಧ್ಯತೆ ಇದೆ. ಹಾಗಾಗಿ. ಬಲದಂಡೆ ನಾಲೆಯಿಂದ ನೀರು ಲಿಫ್ಟ್ ಮಾಡುವ ಬದಲು ತುಂಗಾ ನದಿಯಿಂದ ನೀರು ಪೂರೈಸಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಪತ್ರ ನೀಡಿ, ಡಾ.ಪ್ರಭಾ ಮಲ್ಲಿಕಾರ್ಜುನ ಒತ್ತಾಯಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ, ಹಿರಿಯ ನಾಯಕರಾದ ಟಿ.ಬಿ.ಜಯಚಂದ್ರ, ಶಾಸಕರಾದ ಡಿ.ಜಿ. ಶಾಂತನಗೌಡ, ಕೆ.ಎಸ್.ಬಸವಂತಪ್ಪ, ಬಸವರಾಜ ವಿ.ಶಿವಗಂಗಾ, ಬಿ.ಕೆ. ಸಂಗಮೇಶ, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಇದ್ದರು.

- - -

-12ಕೆಡಿವಿಜಿ6.ಜೆಪಿಜಿ:

ಲಕ್ಕವಳ್ಳಿಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ಗೆ ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಭದ್ರಾ ಡ್ಯಾಂ ದುರಸ್ತಿಗೆ ₹100 ಕೋಟಿ ಅನುದಾನ ಕೋರಿ ಮನವಿ ಅರ್ಪಿಸಿದರು.