ಮೇಕೆದಾಟು ಯೋಜನೆಗೆ ಸುಪ್ರೀಂ ಕೋರ್ಟ್ ನಿಂದ ಹಸಿರು ನಿಶಾನೆ ತೋರಿಸಿದ್ದು, ಮೇಕೆದಾಟು ಯೋಜನೆಯಿಂದ ರಾಜ್ಯಕ್ಕೆ ಅನುಕೂಲವಾಗಲಿದೆ
ಕನ್ನಡಪ್ರಭ ವಾರ್ತೆ ಶಿರಾ
ಮೇಕೆದಾಟು ಯೋಜನೆಗೆ ಸುಪ್ರೀಂ ಕೋರ್ಟ್ ನಿಂದ ಹಸಿರು ನಿಶಾನೆ ತೋರಿಸಿದ್ದು, ಮೇಕೆದಾಟು ಯೋಜನೆಯಿಂದ ರಾಜ್ಯಕ್ಕೆ ಅನುಕೂಲವಾಗಲಿದ್ದು, ಶಿರಾ ಕ್ಷೇತ್ರದ ಗೌಡಗೆರೆ ಮತ್ತು ಹುಲಿಕುಂಟೆ ಹೋಬಳಿ ಕೆರೆಗಳಿಗೂ ಸಹ ನೀರು ಸಿಗುವಂತಹ ಸೌಭಾಗ್ಯ ಸಿಗಲಿದೆ ಶಾಸಕ ಟಿ.ಬಿ. ಜಯಚಂದ್ರ ಹೇಳಿದರು.ಅವರು ತಾಲೂಕಿನ ಗೌಡಗೆರೆ ಹೋಬಳಿಯ ಗಜ್ಜಿಗರಹಳ್ಳಿ ಗ್ರಾಮದಲ್ಲಿ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ತುಮಕೂರು ಹಾಲು ಒಕ್ಕೂಟ ಸಹಯೋಗದೊಂದಿಗೆ ನಡೆದ ಬರಡು ರಾಸುಗಳ ಚಿಕಿತ್ಸಾ ಶಿಬಿರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಪಶುಸಂಗೋಪನೆ ಜೊತೆಗೆ ಕುರಿ ಸಾಕಾಣಿಕೆ ಇಂತಹ ಉಪಕಸುಬುಗಳನ್ನು ಮಾಡುವ ಮೂಲಕ ರೈತರು ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ಬದಲಾದ ಪರಿಸ್ಥಿತಿಯಲ್ಲಿ ಜನಸಾಮಾನ್ಯರ ಆಹಾರ ಪದ್ಧತಿಯಲ್ಲಿ ಬದಲಾವಣೆಯಾಗಬೇಕಿದ್ದು ಸಿರಿಧಾನ್ಯಗಳ ಬಳಕೆ ಆರೋಗ್ಯಕ್ಕೆ ವರದಾನವಾಗಿದೆ. ಕಡಿಮೆ ಮಳೆ ಪ್ರಮಾಣದಲ್ಲಿ ಬೆಳೆಯುವಂತಹ ಸಿರಿ ಧಾನ್ಯಗಳ ಬೆಳೆಯಲು ರೈತರು ಉತ್ಸುಕರಾಗಬೇಕು. ಗ್ರಾಮ ಮಟ್ಟದಲ್ಲಿ ನಡೆಯುವ ಬರಡು ರಾಸುಗಳ ಶಿಬಿರ ಹೈನುಗಾರಿಕೆ ಮಾಡುವಂತಹ ರೈತರಿಗೆ ಸಹಕಾರಿಯಾಗಿದ್ದು ತಮ್ಮ ರಾಸುಗಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಅವಶ್ಯಕತೆ ಇದೆ. ಹಾಲು ಉತ್ಪಾದನೆ ಕೇವಲ ಆರ್ಥಿಕ ಲಾಭ ಗಳಿಸಲು ಮಾತ್ರ ಬಳಸದೆ, ಹಾಲನ್ನು ಮಕ್ಕಳಿಗೆ ನಿತ್ಯ ನೀಡುವ ಮೂಲಕ ಮಕ್ಕಳ ಪೌಷ್ಟಿಕತೆ ಹೆಚ್ಚಳಕ್ಕೆ ಕಾರಣರಾಗಬೇಕು ಎಂದರು.
ಮುಖ್ಯ ಪಶು ವೈದ್ಯಾಧಿಕಾರಿ ಡಾ ಜೆ. ಸಂಪತ್ ಕುಮಾರ್ ಮಾತನಾಡಿ ಬರಡು ರಾಸುಗಳ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಿ ಪಶು ವೈದ್ಯರಿಂದ ಸೂಕ್ತ ಸಲಹೆ ಪಡೆದು, ಚಿಕಿತ್ಸೆ ಕೊಡಿಸಿದಾಗ ಬರಡು ರಾಸುಗಳು ಕೂಡ ಸಂತಾನ ನೀಡುವಂತಾಗುತ್ತವೆ. ಈ ನಿಟ್ಟಿನಲ್ಲಿ ವೈದ್ಯರ ಸಲಹೆ ಜೊತೆಗೆ ಪಶುಗಳಿಗೆ ಗುಣಮಟ್ಟದ ಆಹಾರ ನೀಡಿದಾಗ ಹಾಲಿನ ಉತ್ಪಾದನೆ ಹೆಚ್ಚಳವಾಗಲಿದ್ದು ರೈತರು ಆರ್ಥಿಕವಾಗಿ ಸದೃಢರಾಗಬಹುದು ಎಂದರು.ಬರಡು ರಾಸು ತಪಾಸಣಾ ಶಿಬಿರದಲ್ಲಿ ನೂರು ರಾಸುಗಳು ಪಾಲ್ಗೊಂಡಿದ್ದವು, ಇದೇ ಸಂದರ್ಭದಲ್ಲಿ ೯೦೦ ಕುರಿಗಳಿಗೆ ಜಂತು ನಾಶಕ ಔಷಧಿ ವಿತರಣೆ ಮಾಡಲಾಯಿತು. ಮುಖ್ಯ ಪಶು ವೈದ್ಯಾಧಿಕಾರಿ ಡಾ .ಎಚ್. ನಾಗೇಶ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಆರ್ .ನಾಗರಾಜು, ಶಿರಾ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಬಲರಾಮ್, ತಾವರೆಕೆರೆ ಗ್ರಾಮ ಪಂಚಾಯತಿ ಸದಸ್ಯ ನಿತ್ಯಾನಂದ, ತಾವರೆಕೆರೆ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಟಿ.ಬಿ. ಗಂಗಾಧರ್, ಡಾ ತಿಮ್ಮರಾಜು, ದಾ ನಂದೀಶ್ ಡಾ. ಸಚಿನ್ ಡಾ. ಪುಣ್ಯಶ್ರೀ ಡಾ. ನವೀನ್ ಡಾ. ಮಂಜುನಾಥ ಪಟೇಲ್ ಡಾ.ನವೀನ್ ಡಾ. ವಸಂತಕುಮಾರ್ ಸೇರಿದಂತೆ ಹಲವರು ರೈತರು ಮುಖಂಡರು ಹಾಜರಿದ್ದರು.