ಸಾರಾಂಶ
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಸಮೀಪದ ಚಿಮ್ಮಡ ಗ್ರಾಮದ ಸರ್ಕಾರಿ ಗೋಮಾಳ ಜಮೀನು ಖಾಸಗಿ ವ್ಯಕ್ತಿಗಳ ಹೆಸರಿಗೆ ಪರಭಾರೆ ಮಾಡಿಕೊಂಡಿರುವ ಭೂಗಳ್ಳರನ್ನು ಹಾಗೂ ಅವರಿಗೆ ಸಹಕಾರ ನೀಡಿದ ಅಧಿಕಾರಿಗಳನ್ನು ಬಂಧಿಸುವಂತೆ ಆಗ್ರಹಿಸಿ ಗ್ರಾಮದ ಪ್ರಮುಖರು ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಸೋಮವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪೂರಗೆ ಮನವಿ ಸಲ್ಲಿಸಿ ಒತ್ತಾಯಿಸಿದರು.ಗ್ರಾಮದ ವ್ಯಾಪ್ತಿಯಲ್ಲಿರುವ ಸರ್ವೇ ನಂ. ೫೯/೧ ರಲ್ಲಿನ ಸುಮಾರು ೧೯ ಎಕರೆ ೨೩ ಗುಂಟೆ ಜಮೀನು ಸರ್ಕಾರಿ ಗೋಮಾಳ ಜಾಗವಾಗಿದ್ದು, ದಾಖಲೆಗಳಲ್ಲಿ ಗುರುಚರಣ (ಸರ್ಕಾರಿ ಜಮೀನು) ಎಂದು ನೋಂದಣಿಯಾಗಿದೆ. ಈ ಭಾಗದಲ್ಲಿ ಬಹುತೇಕ ಗೋಮಾಳ ಜಾಗೆಗಳು ಗುರುಚರಣ ಎಂದೇ ದಾಖಲಾಗಿವೆ. ಇದನ್ನೇ ದುರುಪಯೋಗ ಪಡಿಸಿಕೊಂಡ ಶಿವಮೊಗ್ಗದ ಗುರುಚರಣ ಉರ್ಫ ಮುರುಳಪ್ಪ ಎನ್ನುವ ವ್ಯಕ್ತಿ ಆ.೧೪ರಂದು ಶಿವಮೊಗ್ಗದ ಉಪನೋಂದನಾಧಿಕಾರಿ ಕಚೇರಿಯಲ್ಲಿ ತಮ್ಮ ಹೆಸರಿಗೆ ಮುಕ್ತಾರ ಪತ್ರ (ಜಿಪಿಎ) ಮಾಡಿಕೊಂಡು ಆ.೨೬ರಂದು ಮುಧೋಳ ತಾಲೂಕಿನ ಮುಗಳಖೋಡದ ಶ್ರೀಶೈಲ ದುಂಡಪ್ಪ ಪಶ್ಚಾಪೂರ ಎಂಬುವವರಿಗೆ ಖರೀದಿ ಕೊಟ್ಟಿದ್ದಾರೆ. ಸರ್ಕಾರಿ ಜಮೀನು ಕಬಳಿಸುತ್ತಿರುವ ಭೂಗಳ್ಳರನ್ನು ಹಾಗೂ ಪ್ರಕರಣದಲ್ಲಿ ಭಾಗಿಯಾದ ಉಪ ನೋಂದನಾಧಿಕಾರಿಗಳು, ದಸ್ತು ಬರಹಗಾರರು ಹಾಗೂ ಈ ಅಕ್ರಮಕ್ಕೆ ಸಹಾಯ, ಸಹಕಾರ ನೀಡಿದ ಪ್ರತಿಯೊಬ್ಬರನ್ನು ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಬಕಾರಿ ಸಚಿವ ಆರ್.ಬಿ. ತಿಮ್ಮಾಪೂರ, ಸಂಸದ ಪಿ.ಸಿ. ಗದ್ದಿಗೌಡರ, ಡಿಸಿ, ಎಸ್ಪಿಗೆ ಮನವಿ ಸಲ್ಲಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷ ಶಂಕರ ಬಟಕುರ್ಕಿ, ಪರಪ್ಪ ಪಾಲಭಾವಿ, ಬೀರಪ್ಪ ಹಳೆಮನಿ, ಬಸವರಾಜ ಕುಂಚನೂರ, ವಿಜಯಕುಮಾರ ಪೂಜಾರಿ, ಮನೋಜ ಹಟ್ಟಿ, ಬಾಳೆಶ ಬ್ಯಾಕೋಡ, ಮಹಾಂತೇಶ ಜಾಲಿಕಟ್ಟಿ, ಸುರೇಶ ಪೂಜಾರಿ, ನಾಗಪ್ಪ ಆಲಕನೂರ, ಪ್ರಭು ಗೋವಿಂದಗೋಳ, ಯಮನಪ್ಪ ಮಾದರ, ಹಣಮಂತ ಬಜಂತ್ರಿ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.