ಸಾರಾಂಶ
ವಿರಾಜಪೇಟೆ ಕೊಡವ ಸಮಾಜ ಸಭಾಂಗಣದಲ್ಲಿ ಗೋಣಿಕೊಪ್ಪದ ಕಾವೇರಿ ಕಾಲೇಜಿನಲ್ಲಿ 1982ರ ಶೈಕ್ಷಣಿಕ ವರ್ಷವನ್ನು ಪೂರೈಸಿದ ವಿದ್ಯಾರ್ಥಿಗಳ ಪುನರ್‌ಮಿಲನ, ಸಂತೋಷ ಕೂಟ ಕಾರ್ಯಕ್ರಮ ನಡೆಯಿತು.
ಕನ್ನಡಪ್ರಭ ವಾರ್ತೆ ನಾಪೋಕ್ಲು
ಅಲ್ಲಿ ಸಂಭ್ರಮ ಮನೆ ಮಾಡಿತ್ತು. ಸೇರಿದವರು ಹಳೆಯ ನೆನಪುಗಳನ್ನು ಕೆದಕಿದರು, ಸಂತಸ ಸಂಭ್ರಮಗಳನ್ನು ಹಂಚಿಕೊಂಡರು. ಇದೆಲ್ಲಾ ಜರುಗಿದ್ದು ವಿರಾಜಪೇಟೆಯ ಕೊಡವ ಸಮಾಜ ಸಭಾಂಗಣದಲ್ಲಿ ಜರುಗಿದ ಗೋಣಿಕೊಪ್ಪದ ಕಾವೇರಿ ಕಾಲೇಜಿನಲ್ಲಿ 1982 ರ ಶೈಕ್ಷಣಿಕ ವರ್ಷವನ್ನು ಪೂರೈಸಿದ ವಿಜ್ಞಾನ, ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಪುನರ್ಮಿಲನ ಮತ್ತು ಸಂತೋಷ ಕೂಟದಲ್ಲಿ ಕಂಡು ಬಂತು.2021ರಲ್ಲಿ ಪ್ರಾರಂಭಗೊಂಡ ಹಳೆಯ ವಿದ್ಯಾರ್ಥಿಗಳ ಸಂತೋಷ ಕೂಟ ಹಲವು ವಿವಿಧತೆಯೊಂದಿಗೆ ನಡೆದುಬಂದಿದ್ದು ಇದೀಗ ಐದನೇ ವರ್ಷದ ಆಚರಣೆ ಸಂಭ್ರಮ ಸಡಗರದಿಂದ ಜರುಗಿತು. ವಯಸ್ಸು 65 ರ ಆಸುಪಾಸಿನಲ್ಲಿದ್ದ ಪ್ರತಿಯೊಬ್ಬರೂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದರು.
ಪ್ರಾಸ್ತಾವಿಕ ಭಾಷಣ ಮಾಡಿದ ಹಳೆಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಮುಂಡಂಡ ಸಿ. ನಾಣಯ್ಯ ತಮ್ಮ ಕಾಲೇಜು ದಿವಸಗಳ ಗತವೈಭವವನ್ನು ಮೆಲುಕು ಹಾಕುತ್ತಾ, ತಮ್ಮ ಸಹಪಾಠಿಗಳ ಸಾಮಾಜಿಕ ಕಳಕಳಿ ಮತ್ತು ಬದ್ಧತೆ ಶ್ಲಾಘಿಸುತ್ತಾ ಅವರು ಮಾಡುತ್ತಿರುವ ಸೇವೆಯನ್ನೂ ಸ್ಮರಿಸಿದರು. ಈ ಸಂತೋಷ ಕೂಟ ಕೇವಲ ಸಂಭ್ರಮಕ್ಕೆ ಮೀಸಲಾಗಿರದೆ, ಮುಂದಿನ ದಿನಗಳಲ್ಲಿ ಬಲಿಷ್ಠ ಹಾಗೂ ಸಮೃದ್ಧ ಸಮಾಜವನ್ನು ಕಟ್ಟುವ ಪರಿಕಲ್ಪನೆಯಡಿಯಲ್ಲಿ ಸಂಕಲ್ಪವನ್ನು ಮಾಡಬೇಕು ಎಂದರು.ಹಳೆಯ ವಿಜ್ಞಾನ ವಿದ್ಯಾರ್ಥಿನಿ ನವೀನ್, ಶ್ರೀಧರ್ ಹಾಗೂ ಉದ್ಯಮಿ ಗಣೇಶ ಎಸ್. ಎಚ್ ಮಾತನಾಡಿ, ಇದುವರೆಗೆ ವ್ಯವಸ್ಥಿತವಾಗಿ ನಡೆದ ಈ ಸುಂದರ ಸಂತೋಷ ಕೂಟ ಇನ್ನೂ ಹಲವಷ್ಟು ವರುಷಗಳ ಕಾಲ ನಡೆಯುವಂತಾಗಬೇಕು ಮತ್ತು ನಾವು ಈ ಸಮಾಜದ ಆದರ್ಶ ಪ್ರಜೆಗಳಾಗಿ ಬದುಕಬೇಕು ಎಂದರು.
ಆಯೋಜಕ ವಾಣಿಜ್ಯ ವಿಭಾಗದ ಹಿರಿಯ ವಿದ್ಯಾರ್ಥಿ ಕಾಣತಂಡ ಕುಟ್ಟಪ್ಪ ನವರ ಕಾರ್ಯತತ್ಪರತೆ, ಶ್ರಮ ಎಲ್ಲರ ಮೆಚ್ಚುಗೆಯನ್ನು ಪಡೆಯಿತು. ಕಾರ್ಯಕ್ರಮದ ಪ್ರಾರ್ಥನೆಯನ್ನು ಹಳೆಯ ಕಲಾ ವಿಭಾಗದ ವಿದ್ಯಾರ್ಥಿನಿಯೂ, ಗೋಣಿಕೊಪ್ಪ ಲಯನ್ಸ್ ವಿದ್ಯಾಸಂಸ್ಥೆಯ ನಿವೃತ್ತ ಪ್ರಾಂಶುಪಾಲರಾದ ಚೋಕಿರ ಪವಿತ್ರ ಮಾಡಿ ನಿರೂಪಣೆಯನ್ನು ಹಳೆಯ ಕಲಾ ವಿಭಾಗದ ವಿದ್ಯಾರ್ಥಿನಿಯೂ, ಪ್ರಸ್ತುತ ಬ್ರಹ್ಮಗಿರಿ ಪತ್ರಿಕೆಯ ಸಹ ಸಂಪಾದಕಿಯೂ ಆಗಿರುವ ಉಳ್ಳಿಯಡ ಡಾಟಿ ಪೂವಯ್ಯ ನೆರವೇರಿಸಿದರು.ಮುಂದಿನ ವರುಷದ ಕಾರ್ಯಕ್ರಮದ ಸಂಚಾಲಕರಾಗಿ ಹಳೆಯ ಕಲಾ ವಿಭಾಗದ ವಿದ್ಯಾರ್ಥಿ ಅಪ್ಪುಮಣಿಯಂಡ ಬನ್ಸಿ ಭೀಮಯ್ಯ ಆಯ್ಕೆ ಆದರು.