ಸರ್ಕಾರಿ ಶಾಲೆಗಳು ದೇಶಕ್ಕೆ ಅನರ್ಘ್ಯ ರತ್ನಗಳನ್ನು ನೀಡುವ ಕೇಂದ್ರಗಳು: ಶಾಸಕ ಶಿವಣ್ಣನವರ

| Published : Mar 04 2025, 12:33 AM IST

ಸರ್ಕಾರಿ ಶಾಲೆಗಳು ದೇಶಕ್ಕೆ ಅನರ್ಘ್ಯ ರತ್ನಗಳನ್ನು ನೀಡುವ ಕೇಂದ್ರಗಳು: ಶಾಸಕ ಶಿವಣ್ಣನವರ
Share this Article
  • FB
  • TW
  • Linkdin
  • Email

ಸಾರಾಂಶ

ಸರ್ಕಾರಿ ಶಾಲೆಗಳಲ್ಲಿ ಓದಿದವರು ತಮ್ಮ ಸಾಧನೆ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ. ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಕರ್ತವ್ಯ.

ಬ್ಯಾಡಗಿ: ಪ್ರಸ್ತುತ ದೇಶದ ಭವಿಷ್ಯ ಶಿಕ್ಷಕರ ಕೈಯಲ್ಲಿದೆ, ಸರ್ಕಾರಿ ಶಾಲೆಗಳು ದೇಶಕ್ಕೆ ಅನರ್ಘ್ಯ ರತ್ನಗಳನ್ನು ನೀಡುವ ಕೇಂದ್ರಗಳಾಗಿವೆ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.

2024-25ನೇ ಸಾಲಿನ 3ನೇ ಹಂತದಲ್ಲಿ ಪಿಎಂಶ್ರೀ ಶಾಲೆಗಾಗಿ(ಪ್ರಧಾನಮಂತ್ರಿ ಸ್ಕೂಲ್ ಫಾರ್ ರೈಸಿಂಗ್‌ ಇಂಡಿಯಾ) ಆಯ್ಕೆಯಾದ ಪಟ್ಟಣದ ಶಾಸಕರ ಮಾದರಿ ಬಡಾವಣೆ ಶಾಲೆ ಹಾಗೂ ವಾರ್ಷಿಕ ಸ್ನೇಹ ಸಮ್ಮೇಳನ ಉದ್ಘಾಟಿಸಿ ಅವರು ಮಾತನಾಡಿದರು. ಸರ್ಕಾರಿ ಶಾಲೆಗಳಲ್ಲಿ ಓದಿದವರು ತಮ್ಮ ಸಾಧನೆ ಮೂಲಕ ಜಗತ್ತಿನ ಗಮನ ಸೆಳೆದಿದ್ದಾರೆ. ಅವುಗಳನ್ನು ಉಳಿಸಿ ಬೆಳೆಸುವ ಜವಾಬ್ದಾರಿ ನಮ್ಮ ನಿಮ್ಮೆಲ್ಲರ ಕರ್ತವ್ಯ ಎಂದರು.

ಪುರಸಭೆ ಅಧ್ಯಕ್ಷ ಬಾಲಚಂದ್ರಗೌಡ ಪಾಟೀಲ ಮಾತನಾಡಿ, ಇದೇ ಶಾಲೆಯಲ್ಲಿ ನಾನು ಸಹ ಕಲಿತಿದ್ದೇನೆ. ನಾನು ಕಲಿತ ಶಾಲೆಗೆ ಬೇಕಾದ ಎರಡು ನೂತನ ಕೊಠಡಿ, ಯುಜಿಡಿ, ಗುಣಮಟ್ಟದ ರಸ್ತೆ, ಸ್ಮಾರ್ಟ್‌ ಕ್ಲಾಸ್ ಮತ್ತಿತರ ಮೂಲಭೂತ ಸೌಕರ್ಯ ಒದಗಿಸಲು ಸಿದ್ಧನಾಗಿದ್ದೇನೆ ಎಂದರು.

ಪುರಸಭೆ ಉಪಾಧ್ಯಕ್ಷ ಸುಭಾಸ ಮಾಳಗಿ, ಫಕ್ಕೀರಮ್ಮ ಛಲವಾದಿ, ರಫೀಕ ಮುದಗಲ್, ಆಶ್ರಯ ಸಮಿತಿ ಅಧ್ಯಕ್ಷ ಅಬ್ದುಲ್ ಮುನಾಫ್ ಎರೇಶಿಮಿ, ದುರ್ಗೇಶ ಗೋಣೆಮ್ಮನವರ, ಎಸ್‌ಡಿಎಂಸಿ ಅಧ್ಯಕ್ಷರು, ಪದಾಧಿಕಾರಿಗಳು, ಶಿಕ್ಷ ಣಾಧಿಕಾರಿ ಎಸ್.ಜಿ. ಕೋಟಿ, ಮುಖ್ಯಶಿಕ್ಷಕಿ ರಾಜಶ್ರೀ ಸಜ್ಜೆಶ್ವರ ಉಪಸ್ಥಿತರಿದ್ದರು.ದ್ವಿತೀಯ ಪಿಯು ಪರೀಕ್ಷೆ, 300 ವಿದ್ಯಾರ್ಥಿಗಳು ಗೈರು

ಹಾವೇರಿ: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ ನಡೆಯುತ್ತಿದ್ದು, ಸೋಮವಾರ ಜಿಲ್ಲೆಯ 22 ಪರೀಕ್ಷಾ ಕೇಂದ್ರಗಳಲ್ಲಿ ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ತಲಾ ಒಂದೊಂದರಂತೆ ಮೂರು ಪರೀಕ್ಷೆಗಳು ಸುಗಮವಾಗಿ ನಡೆದವು.

ಕಲಾ ವಿಭಾಗದ ಶಿಕ್ಷಣಶಾಸ್ತ್ರ ವಿಷಯದ ಪರೀಕ್ಷೆಗೆ ಒಟ್ಟು 1,513 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 1,386 ವಿದ್ಯಾರ್ಥಿಗಳು ಹಾಜರಾಗಿದ್ದು, 127 ವಿದ್ಯಾರ್ಥಿಗಳು ಗೈರಾಗಿದ್ದರು.ವಾಣಿಜ್ಯ ವಿಭಾಗದ ಬಿಸಿನೆಸ್ ಸ್ಟಡೀಸ್ ವಿಷಯದ ಪರೀಕ್ಷೆಗೆ ಒಟ್ಟು 3,693 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 3,573 ವಿದ್ಯಾರ್ಥಿಗಳು ಹಾಜರಾಗಿದ್ದು, 120 ವಿದ್ಯಾರ್ಥಿಗಳು ಗೈರಾಗಿದ್ದರು.ಇನ್ನೂ ವಿಜ್ಞಾನ ವಿಭಾಗದ ಗಣಿತಶಾಸ್ತ್ರ ವಿಷಯದ ಪರೀಕ್ಷೆಗೆ ಒಟ್ಟು 4,056 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 4,003 ವಿದ್ಯಾರ್ಥಿಗಳು ಹಾಜರಾಗಿದ್ದು, 53 ವಿದ್ಯಾರ್ಥಿಗಳು ಗೈರಾಗಿದ್ದರು.ಒಟ್ಟಾರೆಯಾಗಿ ಮೂರು ವಿಭಾಗದ ಪರೀಕ್ಷೆಗಳಿಗೆ 9,262 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದರು. ಈ ಪೈಕಿ 8,962 ವಿದ್ಯಾರ್ಥಿಗಳು ಹಾಜರಾಗಿದ್ದು, 300 ವಿದ್ಯಾರ್ಥಿಗಳು ಗೈರಾಗಿದ್ದರು. ಶೇ. 96.76ರಷ್ಟು ವಿದ್ಯಾರ್ಥಿಗಳು ಹಾಜರಾಗಿದ್ದರು.