ಮನೆ ಮನೆಗೆ ತೆರಳಿ ಮತದಾನ ಮಾಡುವಂತೆ ಜಿಪಂ ಸಿಇಒ ಮನವಿ

| Published : Mar 22 2024, 01:01 AM IST

ಮನೆ ಮನೆಗೆ ತೆರಳಿ ಮತದಾನ ಮಾಡುವಂತೆ ಜಿಪಂ ಸಿಇಒ ಮನವಿ
Share this Article
  • FB
  • TW
  • Linkdin
  • Email

ಸಾರಾಂಶ

ಕಡ್ಡಾಯ ಮತದಾನದಲ್ಲಿ ಪಾಲ್ಗೊಳ್ಳಿ, ಮತದಾನ ಅರಿವು ನಿಮಗೂ ಇರಲಿ ಏ. 26 ರಂದು ತಪ್ಪದೇ ಮತದಾನ ಮಾಡಿ ಎಂಬ ಮತದಾನ ಕರೆಯೋಲೆ ಕರಪತ್ರಗಳನ್ನುಹಿಡಿದು ಮನೆ ಮನೆಗೂ ತೆರಳಿದ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಪಂ ಸಿಇಒ ಕೆ.ಎಂ. ಗಾಯಿತ್ರಿ ಮತ್ತು ಅವರ ತಂಡ ಮತದಾನ ಮಾಡುವಂತೆ ಮತದಾರರಿಗೆ ಮನವಿ.

ಕನ್ನಡಪ್ರಭ ವಾರ್ತೆ ಮೈಸೂರುಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮತ್ತು ಜಿಲ್ಲಾ ಸ್ವೀಪ್ ವತಿಯಿಂದ ಏರ್ಪಡಿಸಿದ್ದ ಮನೆ ಮನೆಗೆ ಭೇಟಿ ಕಾರ್ಯಕ್ರಮದಲ್ಲಿ ಕಡ್ಡಾಯ ಮತದಾನದಲ್ಲಿ ಪಾಲ್ಗೊಳ್ಳಿ, ಮತದಾನ ಅರಿವು ನಿಮಗೂ ಇರಲಿ ಏ. 26 ರಂದು ತಪ್ಪದೇ ಮತದಾನ ಮಾಡಿ ಎಂಬ ಮತದಾನ ಕರೆಯೋಲೆ ಕರಪತ್ರಗಳನ್ನುಹಿಡಿದು ಮನೆ ಮನೆಗೂ ತೆರಳಿದ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರೂ ಆಗಿರುವ ಜಿಪಂ ಸಿಇಒ ಕೆ.ಎಂ. ಗಾಯಿತ್ರಿ ಮತ್ತು ಅವರ ತಂಡ ಮತದಾನ ಮಾಡುವಂತೆ ಮತದಾರರಿಗೆ ಮನವಿ ಮಾಡಿದರು.

ಜಿಲ್ಲಾಡಳಿತ ಹಾಗೂ ಜಿಲ್ಲಾ ಸ್ವೀಪ್ ಸಮಿತಿ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ವತಿಯಿಂದ ಲೋಕಸಭಾ ಚುನಾವಣೆ 2024ರ ಅಂಗವಾಗಿ ಸ್ವೀಪ್ ಜಾಗೃತಿಗೆ ಗುರುವಾರ ಬೋಗಾದಿ ಪಪಂ ಜೆಟ್ಟಿಹುಂಡಿ ಗ್ರಾಮದಲ್ಲಿ ಅವರು ಚಾಲನೆ ನೀಡಿದರು.

ಅಂಗನವಾಡಿ ಕಾರ್ಯಕರ್ತೆಯರು, ಪಪಂ ಅಧಿಕಾರಿಗಳು ಹಾಗೂ ಸಾರ್ವಜನಿಕರ ಜತೆಗೂಡಿ ಮಾನವ ಸರಪಳಿ ನಿರ್ಮಿಸಿದರದಲ್ಲೇ ಮತದಾನದ ಪ್ರತಿಜ್ಞಾವಿಧಿ ಬೋಧಿಸುವ ಮೂಲಕ ಮತದಾನ ಕುರಿತು ಅರಿವು ಮೂಡಿಸಲಾಯಿತು.

ಇದೇ ವೇಳೆ ಮನೆ ಮನೆಗೆ ತೆರಳಿದ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷರು ವೃದ್ಧ ಮತದಾರರಿಗೆ, ಮಹಿಳಾ ಮತದಾರರಿಗೆ ಮುಕ್ತ ಮತದಾನಕ್ಕೆ ಜಿಲ್ಲಾಡಳಿತವು ಸೌಲಭ್ಯಗಳನ್ನು ಕಲ್ಪಿಸಿರುವ ಬಗ್ಗೆ ತಿಳಿಸಿಕೊಟ್ಟರು.

ಪ್ರತಿಯೊಬ್ಬರೂ ಮತದಾನದಲ್ಲಿ ಕಡ್ಡಾಯವಾಗಿ ಪಾಲ್ಗೊಳ್ಳುವಂತೆ ತಿಳಿಸಿದರು. ಎಲ್ಲಾ ಮತದಾರರು ನಿಮ್ಮ ಹೆಸರು ಮತದಾರರ ಪಟ್ಟಿಯಲ್ಲಿ ಇರುವ ಬಗ್ಗೆ ವೋಟಾರ್ ಹೆಲ್ಪ ಲೈನ್ ಆಪ್ ಮೂಲಕ ಖಚಿತ ಪಡಿಸಿಕೊಳ್ಳಬಹುದಾಗಿದೆ. ಸಿ ವಿಜಲ್ ಆಪ್ ಮೂಲಕ ಚುನಾವಣಾ ಅಕ್ರಮಗಳನ್ನು ಜಿಲ್ಲಾಡಳಿತಕ್ಕೆ ತಿಳಿಸಿಕೊಡುವ ಮೂಲಕ ನ್ಯಾಯ ಸಮ್ಮತ ಚುನಾವಣೆಗೆ ಸಹಕಾರ ನೀಡಬೇಕು ಎಂದು ಜಾಗೃತಿ ಮೂಡಿಸಿದರು.

ಇದೇ ವೇಳೆ ಮತದಾನ ಜಾಗೃತಿ ಮೂಡಿಸುವ ಸ್ವಚ್ಛತಾ ವಾಹನಗಳಿಗೂ ಚಾಲನೆ ನೀಡಿದರಲ್ಲದೆ, ಮನೆ ಮನೆಗೆ ಮತದಾನದ ಅರಿವಿನ ಕರಪತ್ರಗಳನ್ನು ವಿತರಿಸಲಾಯಿತು.

ಸಹಾಯಕ ಸ್ವೀಪ್ ನೋಡೆಲ್ ಅಧಿಕಾರಿ ಎಂ. ಶಾಂತಾ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕ ಎಚ್.ಆರ್. ಸುರೇಶ್, ಶಿಶು ಅಭಿವೃದ್ಧಿ ಯೋಜನಾಧಿಕಾರಿ ತಿಬ್ಬಯ್ಯ, ಪಪಂ ಮುಖ್ಯಾಧಿಕಾರಿ ಸಿ. ಕುರಿಯಕೋಷ್, ಜಿಲ್ಲಾ ನಿರೂಪಣಾಧಿಕಾರಿ ಮಂಜುನಾಥ್, ಅಂಗನವಾಡಿ ಕಾರ್ಯಕರ್ತೆಯರು ಇದ್ದರು.ಏ.24 ರಿಂದ 26 ರವರೆಗೆ ಮದ್ಯ ಮಾರಾಟ ನಿಷೇಧ

ಲೋಕಸಭಾ ಚುನಾವಣೆಯನ್ನು ಸುಸೂತ್ರವಾಗಿ ನಡೆಸಲು, ಕಾನೂನು. ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಮತದಾನದ ಅಂಗವಾಗಿ ಏ. 24 ರಂದು ಸಂಜೆ 5 ಗಂಟೆಯಿಂದ ಏ. 26ರ ಮಧ್ಯರಾತ್ರಿ 12 ಗಂಟೆಯವರೆಗೆ ನಗರದ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜಿನಲ್ಲಿ ಮತ ಎಣಿಕೆ ಅಂಗವಾಗಿ ಜೂ. 3ರಂದು ಮಧ್ಯರಾತ್ರಿ 12 ಗಂಟೆಯಿಂದ ಜೂ. 4ರ ಮಧ್ಯರಾತ್ರಿ 12 ಗಂಟೆಯವರೆಗೆ ನಗರ ವ್ಯಾಪ್ತಿ ಹಾಗೂ ನಗರ ವ್ಯಾಪ್ತಿಯಿಂದ 5 ಕಿ.ಮೀ ವ್ಯಾಪ್ತಿಯಲ್ಲಿನ ಎಲ್ಲಾ ವಿಧದ ಮದ್ಯದಂಗಡಿಗಳನ್ನು ಮುಚ್ಚಲು ಮತ್ತು ಮದ್ಯ ಮಾರಾಟ, ಸಾಗಾಣಿಕೆ, ಶೇಖರಣೆಯನ್ನು ನಿಷೇಧಿಸಿ ಒಣ ದಿವಸ(ಡ್ರೈ ಡೇಸ್) ಗಳೆಂದು ಘೋಷಿಸಲಾಗಿದೆ.ಎಲ್ಲಾ ಮದ್ಯದ ಅಂಗಡಿಗಳನ್ನು ಹಾಗೂ ಮದ್ಯ ತಯಾರಿಕಾ ಘಟಕಗಳನ್ನು ಮುಚ್ಚಿಸಿ ಮೊಹರು ಮಾಡಿ ಅದರ ಕೀ ಯನ್ನು ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟರಿಗೆ ಒಪ್ಪಿಸಬೇಕು. ನಗರ ಮತ್ತು ಮೈಸೂರು ಗ್ರಾಮಾಂತರ ಅಬಕಾರಿ ಉಪ ಆಯುಕ್ತರಿಗೆ ನಿರ್ದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮತ್ತು ದಂಡಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.ಶಸ್ತ್ರಾಸ್ತ್ರ, ಸ್ಫೋಟಕ ವಸ್ತುಗಳು ಹಾಗೂ ಮಾರಕಾಸ್ತ್ರಗಳ ಬಳಕೆ ನಿಷೇಧಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಯಲ್ಲಿರುವ ಪ್ರಯುಕ್ತ ಜೂ. 6 ರವರೆಗೆ ಸ್ಕ್ರೀನಿಂಗ್ ಕಮಿಟಿಯ ಸಭೆಯಲ್ಲಿ ಬಂದೂಕನ್ನು ಠೇವಣಿ ಇಡುವುದರಿಂದ ವಿನಾಯಿತಿ ನೀಡಲು ತಿರ್ಮಾನಿಸಲಾದ ಅರ್ಜಿದಾರರನ್ನು ಹೊರತುಪಡಿಸಿ ಯಾವುದೇ ವ್ಯಕ್ತಿಗಳು ಶಸ್ತ್ರಾಸ್ತ್ರಗಳು, ಸ್ಫೋಟಕ ವಸ್ತುಗಳು ಹಾಗೂ ಮಾರಕಾಸ್ತ್ರಗಳನ್ನು ಒಯ್ಯುವ, ಅಥವಾ ಹಿಡಿದುಕೊಂಡು ಓಡಾಡುವುದನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ.ಎಲ್ಲಾ ಸ್ವರೂಪದ ಆಯುಧ ರಹದಾರಿ ಹೊಂದಿರುವವರು ಆಯುಧಗಳನ್ನು ಸಂಬಂಧಪಟ್ಟ ಪೊಲೀಸ್ ಠಾಣೆಗಳಲ್ಲಿ ಡಿಪಾಸಿಟ್ ಮಾಡಲು ಆದೇಶಿಸಲಾಗಿದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.