ದಾಸ ಸಾಹಿತ್ಯ ಕ್ಷೇತ್ರಕ್ಕೆ ಸಂತಶ್ರೇಷ್ಠ ಕನಕದಾಸರ ಕೊಡುಗೆ ಅಪಾರ: ಜಿ.ಆದರ್ಶ

| Published : Nov 09 2025, 02:00 AM IST

ಸಾರಾಂಶ

ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡಿದ ಕನಕದಾಸರು ತಮ್ಮ ಜೀವಿತಾವಧಿಯ ಉದ್ದಕ್ಕೂ ಮನುಕುಲದ ಒಳಿತಿಗಾಗಿಯೇ ಶ್ರಮಿಸಿದ್ದಾರೆ. ಹಲವು ಮಹಾನ್ ಸಾಧಕರು ನಾಡಿನ ಇತಿಹಾಸವನ್ನು ಜಗತ್ತಿಗೆ ಪರಿಚಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ನಾಡಿನ ಭಾಷೆ, ಸಂಸ್ಕೃತಿ ಬೆಳವಣಿಗೆ ಜೊತೆಗೆ ದಾಸ ಸಾಹಿತ್ಯ ಕ್ಷೇತ್ರಕ್ಕೆ ಸಂತಶ್ರೇಷ್ಠ ಕನಕದಾಸರ ಕೊಡುಗೆ ಅಪಾರವಾಗಿದೆ ಎಂದು ತಹಸೀಲ್ದಾರ್ ಜಿ.ಆದರ್ಶ ತಿಳಿಸಿದರು.

ಪಟ್ಟಣದ ತಾಲೂಕು ಆಡಳಿತಸೌಧದ ನ್ಯಾಯಾಲಯ ಸಭಾಂಗಣದಲ್ಲಿ ತಾಲೂಕು ಆಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಭಾಗಿತ್ವದಲ್ಲಿ ಶನಿವಾರ ಆಯೋಜಿಸಿದ್ದ ಸಂತ ಶ್ರೇಷ್ಠ ಭಕ್ತ ಕನಕದಾಸರ ಜಯಂತ್ಯುತ್ಸವದಲ್ಲಿ ಕನಕದಾಸರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಿ ಮಾತನಾಡಿದರು.

ಕೀರ್ತನೆಗಳ ಮೂಲಕ ಸಮಾಜದ ಅಂಕುಡೊಂಕು ತಿದ್ದುವ ಕೆಲಸ ಮಾಡಿದ ಕನಕದಾಸರು ತಮ್ಮ ಜೀವಿತಾವಧಿಯ ಉದ್ದಕ್ಕೂ ಮನುಕುಲದ ಒಳಿತಿಗಾಗಿಯೇ ಶ್ರಮಿಸಿದ್ದಾರೆ. ಹಲವು ಮಹಾನ್ ಸಾಧಕರು ನಾಡಿನ ಇತಿಹಾಸವನ್ನು ಜಗತ್ತಿಗೆ ಪರಿಚಯಿಸಿದ್ದಾರೆ ಎಂದರು.

ದಾಸ ಸಾಹಿತ್ಯವನ್ನು ಪರಿಚಯಿಸಿದ ಸಂತ ಶ್ರೇಷ್ಠ ಕನಕದಾಸರು ಒಂದು ಜಾತಿ ವರ್ಗಕ್ಕೆ ಸೀಮಿತವಾಗಿರಲಿಲ್ಲ. ತಮ್ಮ ಕೀರ್ತಿನೆಗಳ ಮೂಲಕ ಭಕ್ತಿ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ರವಾನಿಸಿರುವ ಕನಕದಾಸರ ಸಾಧನೆ ಎಷ್ಟಿರಬೇಕೆಂಬುದನ್ನು ಪ್ರತಿಯೊಬ್ಬರೂ ಅರ್ಥೈಸಿಕೊಳ್ಳಬೇಕು ಎಂದರು.

ತಾಲೂಕು ಕುರುಬ ಸಮುದಾಯದ ಅಧ್ಯಕ್ಷ ಎಂ.ಪ್ರಸನ್ನ ಮಾತನಾಡಿ, ಸಮಾಜ ಸುಧಾರಣೆಗಾಗಿ ಶ್ರಮಿಸಿದ ಮಹಾನ್ ವ್ಯಕ್ತಿಗಳ ವ್ಯಕ್ತಿತ್ವ ಮತ್ತು ಸಾಧನೆ ಇಂದಿನ ಹಾಗೂ ಮುಂದಿನ ಪೀಳಿಗೆಗೂ ಪರಿಚಯಿಸುವ ಸಲುವಾಗಿ ಹಲವು ಮಹನೀಯರ ಜಯಂತಿಯನ್ನು ಸರ್ಕಾರ ಆಚರಣೆಗೆ ತಂದಿದೆ. ಸರ್ಕಾರ ಆಯೋಜಿಸುವ ಯಾವುದೇ ಮಹನೀಯರ ಜಯಂತಿಯಲ್ಲಿ ಎಲ್ಲ ಸಮುದಾಯದವರು ಹೆಚ್ಚಾಗಿ ಪಾಲ್ಗೊಳ್ಳುವ ಸಂಪ್ರದಾಯ ರೂಢಿಸಿಕೊಳ್ಳಬೇಕು ಎಂದರು.

ಜಿಪಂ ಮಾಜಿ ಸದಸ್ಯೆ ಸಾವಿತ್ರಮ್ಮ ಮಾತನಾಡಿದರು. ಈ ವೇಳೆ ತಾಪಂ ಇಓ ಬಿ.ಎಸ್.ಸತೀಶ್, ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್, ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಮಂಜುನಾಥ್, ತಾಲೂಕು ಶಿರಸ್ತೇದಾರ್ ಉಮೇಶ್, ಟಿಎಪಿಸಿಎಂಎಸ್ ಮಾಜಿ ಅಧ್ಯಕ್ಷೆ ಚಿಕ್ಕಮ್ಮ, ದಸಂಸ ಮುಖಂಡರಾದ ಬಿ.ಜೆ.ನಾಗರಾಜು, ಪುಟ್ಟಸ್ವಾಮಿ, ಡಾ.ಬಾಬು ಜಗಜೀವನ್‌ರಾಂ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಕಂದಾಯ ಇಲಾಖೆ ಯೋಗೇಶ್ ಸೇರಿದಂತೆ ಸಮುದಾಯದ ಮುಖಂಡರು ಇದ್ದರು.