ಸೊಪ್ಪು, ಕಡ್ಲೇಗಿಡ, ಟೀ ಮಾರಿ ಅತಿಥಿ ಬೋಧಕರ ಧರಣಿ

| Published : Dec 14 2023, 01:30 AM IST

ಸೊಪ್ಪು, ಕಡ್ಲೇಗಿಡ, ಟೀ ಮಾರಿ ಅತಿಥಿ ಬೋಧಕರ ಧರಣಿ
Share this Article
  • FB
  • TW
  • Linkdin
  • Email

ಸಾರಾಂಶ

ಸೊಪ್ಪು, ಕಡ್ಲೇಗಿಡ, ಟೀ ಮಾರಿ ಅತಿಥಿ ಬೋಧಕರ ಧರಣಿ. ಅತಿಥಿ ಉಪನ್ಯಾಸಕರಿಂದ ವಿನೂತನವಾಗಿ ಪ್ರತಿಭಟನೆ. ಸೇವೆ ಕಾಯಮಾತಿಗೆ ಮುಂದುವರಿದ ರಾಜ್ಯವ್ಯಾಪಿ ಹೋರಾಟವಿಪಕ್ಷ ನಾಯಕರಿದ್ದಾಗಿನ ಕಾಳಜಿ ಸಿಎಂ ಆದಾಗ ಇಲ್ವೇ?. ಪ್ರಣಾಳಿಕೆ ಭರವಸೆಯಂತೆ ಸೇವೆ ಕಾಯಂಗೊಳಿಸಲು ಆಗ್ರಹ

ಅತಿಥಿದುಪನ್ಯಾಸಕರಿಂದ ವಿನೂತನವಾಗಿ ಪ್ರತಿಭಟನೆ । ಸೇವೆ ಕಾಯಮಾತಿಗೆ ಮುಂದುವರಿದ ರಾಜ್ಯವ್ಯಾಪಿ ಹೋರಾಟ

ವಿಪಕ್ಷ ನಾಯಕರಿದ್ದಾಗಿನ ಕಾಳಜಿ ಸಿಎಂ ಆದಾಗ ಇಲ್ವೇ? । ಪ್ರಣಾಳಿಕೆ ಭರವಸೆಯಂತೆ ಸೇವೆ ಕಾಯಂಗೊಳಿಸಲು ಆಗ್ರಹಕನ್ನಡಪ್ರಭ ವಾರ್ತೆ, ದಾವಣಗೆರೆ

ಸೊಪ್ಪು, ಕಡ್ಲೇಗಿಡ, ಚಹಾ ಮಾರಾಟ ಮಾಡುವ ಮೂಲಕ ತಮ್ಮ ಸೇವೆ ಕಾಯಂಗೆ ಒತ್ತಾಯಿಸಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಬೋಧಕರು ನಗರದಲ್ಲಿ ಬುಧ‍ವಾರ ವಿನೂತನವಾಗಿ ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಡಳಿತ ಭವನದ ಬಳಿ ಅನಿರ್ಧಿಷ್ಟಾವಧಿಗೆ ತರಗತಿ ಬಹಿಷ್ಕರಿಸಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಘಟಕ ನೇತೃತ್ವದಲ್ಲಿ ಸತ್ಯಾಗ್ರಹ ನಡೆಸಿರುವ ಅತಿಥಿ ಉಪನ್ಯಾಸಕರು ತಮ್ಮ ಸೇವೆ ಕಾಯಂಗೆ ಒತ್ತಾಯಿಸಿ ಘೋಷಣೆ ಕೂಗಿದರು.

ಇದೇ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಡಾ.ಕೊಸಗಿ ಶ್ಯಾಮಪ್ರಸಾದ್‌, ರಾಜ್ಯದ 430 ಸರ್ಕಾರಿ ಪದವಿ ಕಾಲೇಜುಗಳಲ್ಲಿ 11 ಸಾವಿರಕ್ಕೂ ಅಧಿಕ ಅತಿಥಿ ಬೋಧಕರು ಕಳೆದ 2 ದಶಕದಿಂದಲೂ ಕಡಿಮೆ ಗೌರವಧನಕ್ಕೆ ಕೆಲಸ ಮಾಡುತ್ತಿದ್ದೇವೆ. ಆಗಿನಿಂದಲೂ ನಮ್ಮ ಸೇವೆ ಕಾಯಂಗೆ ಒತ್ತಾಯಿಸಿ ರಾಜ್ಯವ್ಯಾಪಿ ವಿವಿಧ ಹಂತದ ಹೋರಾಟ ನಡೆಸಿಕೊಂಡು ಬಂದಿದ್ದರೂ ಸರ್ಕಾರ ಮಾತ್ರ ನಮ್ಮ ಬೇಡಿಕೆಗೆ ಸೊಪ್ಪು ಹಾಕಿಲ್ಲ ಎಂದರು.

ದೆಹಲಿ, ಪಂಜಾಬ್, ಹರಿಯಾಣ, ಆಂಧ್ರ ಪ್ರದೇಶ, ಪಶ್ಚಿಮ ಬಂಗಾಳ ರಾಜ್ಯದಲ್ಲಿ ಅತಿಥಿ ಬೋಧಕರ ಸೇವೆಯನ್ನು ಕಾಯಂಗೊಳಿಸಿದ್ದಾರೆ. ಅದೇ ಮಾದರಿಯಲ್ಲಿ ನಮಗೂ ಸೇವೆ ಕಾಯಂ ಮಾಡಬೇಕು. ಹಿಂದೆ ಬಿಜೆಪಿ ಸರ್ಕಾರವಿದ್ದಾಗ ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ 16 ಸಾವಿರ ಅತಿಥಿ ಬೋಧಕರನ್ನು ದೆಹಲಿ ಇತರೆ ರಾಜ್ಯಗಳ ಮಾದರಿಯಲ್ಲಿ ಕಾಯಂ ಮಾಡದ ಬಗ್ಗೆ ಧ್ವನಿ ಎತ್ತಿದ್ದರು. ಸಿ ಅಂಡ್ ಆರ್‌ ರೂಲ್‌ ತಿದ್ದುಪಡಿ ಮಾಡುವಂತೆಯೂ ಒತ್ತಡ ಹೇರಿದ್ದರು ಎಂದು ತಿಳಿಸಿದರು.

ಸಿದ್ದರಾಮಯ್ಯ ಈಗ ಸಿಎಂ ಆಗಿದ್ದರೂ ಅತಿಥಿ ಬೋಧಕರ ಸೇವೆ ಕಾಯಂಗೆ ಯಾಕೆ ಮನಸ್ಸು ಮಾಡುತ್ತಿಲ್ಲ. ವಿಧಾನಸಭೆ ಚುನಾವಣೆ ಪೂರ್ವದಲ್ಲಿ ಅತಿಥಿ ಬೋಧಕರ ಸೇವೆ ಕಾಯಂ ಮಾಡುವ ಭರವಸೆ ಸಹ ಕಾಂಗ್ರೆಸ್ ಪಕ್ಷ ನೀಡಿತ್ತು. ಈಗ ನಿಮ್ಮದೇ ಸರ್ಕಾರವಿದ್ದು, ನೀವೇ ಸಿಎಂ ಆಗಿದ್ದರೂ ಯಾಕೆ ನಮ್ಮ ಸೇವೆಯನ್ನು ಕಾಯಂ ಮಾಡುತ್ತಿಲ್ಲ? ವಿಪಕ್ಷದಲ್ಲಿದಾಗ ನಮ್ಮ ಮೇಲಿದ್ದ ಕಾಳಜಿ ಅಧಿಕಾರಕ್ಕೆ ಬಂದ ನಂತರ ಇಲ್ಲವಾಯಿತೇ ಎಂದು ಸಿದ್ದರಾಮಯ್ಯ ಮೌನವನ್ನು ಅವರು ಪ್ರಶ್ನಿಸಿದರು.

ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ 11 ಸಾವಿರ ಅತಿಥಿ ಬೋಧಕರಿದ್ದು, ಅವಲಂಬಿತರನ್ನು ಲೆಕ್ಕ ಹಾಕಿದರೆ ರಾಜ್ಯವ್ಯಾಪಿ ಸುಮಾರು 11 ಲಕ್ಷಕ್ಕೂ ಅಧಿಕ ಜನರಿದ್ದಾರೆ. ಇಡೀ ಕುಟುಂಬವೇ ಅತಿಥಿ ಬೋಧಕರ ಅಲ್ಪ ಗೌರವಧನದ ಮೇಲೆ ಅವಲಂಬಿತವಾಗಿದೆ. ಅವರನ್ನೆಲ್ಲ ಸಾಕುವುದಾದರೂ ಹೇಗೆ? ಜುಲೈನಿಂದ ಸಂಬಳವೂ ಇಲ್ಲ. ಹೀಗಾದರೆ ಜೀವನ ಹೇಗೆ ಸಾಧ್ಯ ಎಂದು ಅಸಮಾಧಾನ ವ್ಯಕ್ತಪಡಿಸಿದರು.

12 ತಿಂಗಳ ಪೈಕಿ 8 ತಿಂಗಳಿಗಿಂತ ಕಡಿಮೆ ಅವಧಿಗೆ ವೇತನ ನೀಡುತ್ತಾರೆ. ಜೀವನಕ್ಕಾಗಿ ನಾವು ಸೊಪ್ಪು, ಕಡ್ಲೇಗಿಡ, ಟೀ ಮಾರಿ, ಜನರಿಂದ ಸಹಾಯ ಪಡೆದು ಹೋರಾಟ ಮಾಡುತ್ತಿದ್ದೇವೆ. ಸರ್ಕಾರಿ ಜೀತ, ಆಧುನಿಕ ಜೀತದಂತೆ ನಮ್ಮನ್ನು ದುಡಿಸಿಕೊಂಡು, ಶೋಷಣೆಗೀಡು ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಸಂಘದ ಎಸ್‌.ಶುಭಾ, ಎಂ.ಜಗದೀಶ, ಎಂ.ಕೆ. ಶೀತಲ್‌, ನರೇಂದ್ರ ರಾಥೋಡ್‌, ಬಿ.ಪಿ. ರವೀಂದ್ರ, ಅನಂತಾಚಾರಿ, ಡಾ.ಸಿ.ಎಚ್. ಪ್ರವೀಣಕುಮಾರ, ಆರ್.ಸಂತೋಷಕುಮಾರ, ಎಂ.ಆರ್. ರಾಘವೇಂದ್ರ, ಬಿ.ಜಿ. ಸಿದ್ದೇಶಪ್ಪ, ಎಸ್.ವೆಂಕಟೇಶ, ಇ.ಬೋರೇಶ, ಜಿ.ಬಿ. ಮಂಜುಳಾ, ಇ.ವಿ. ಮಾನಸ, ಎಂ.ಎಸ್. ಸ್ಮಿತಾ, ಜಿ.ಬಿ. ಅರುಣಕುಮಾರಿ, ಸಮೀನಾ ಎಂ.ರಫಿ, ಇ.ರೇಖಾ, ಟಿ.ಎಸ್‌. ಲಕ್ಷ್ಮಿದೇವಿ ಇತರರು ಇದ್ದರು.

- - -

ಉನ್ನತ ಪದವೀಧರರಾದ ನಾವು ನೆಟ್, ಸೆಟ್‌, ಪಿಎಚ್‌ಡಿ, ಡಾಕ್ಟರೇಟ್ ಮಾಡಿದ್ದು, ನಮ್ಮ ಬದುಕು ಈಗ ಬೀದಿಗೆ ಬೀಳುತ್ತಿದೆ. 10-20 ವರ್ಷ ಸೇವೆ ಮಾಡಿದ್ದರೂ, ನಮ್ಮ ಸೇವೆ ಕಾಯಂ ಆಗಿಲ್ಲ. ಕೆಇಬಿ, ಕೃಷಿ ಇಲಾಖೆ ಬೇರೆ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿದ್ದವರಿಗೆ ಕಾಯಂ ಮಾಡಿದ್ದಾರೆ. ನಮ್ಮನ್ನೂ ಅದೇ ರೀತಿ ಸೇವೆ ಕಾಯಂ ಮಾಡಬೇಕು. ಈ ಏಕಮಾತ್ರ ಬೇಡಿಕೆ ಮುಂದಿಟ್ಟುಕೊಂಡು ನಮ್ಮ ಹೋರಾಟ ನಡೆದಿದೆ. ಬೇಡಿಕೆ ಈಡೇರಿಸುವವರೆಗೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ.

-ಡಾ.ಕೊಸಗಿ ಶ್ಯಾಮಪ್ರಸಾದ್

ಜಿಲ್ಲಾಧ್ಯಕ್ಷ , ರಾಸಪ್ರದಕಾ ಅತಿಥಿ ಉಪನ್ಯಾಸಕರ ಸಂಘ

. . . .

12ಕೆಡಿವಿಜಿ-

ದಾವಣಗೆರೆ ಡಿಸಿ ಕಚೇರಿ ಬಳಿ ರಾಜ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾ ಘಟಕದ ನೇತೃತ್ವದಲ್ಲಿ ಸೊಪ್ಪು, ಕಡ್ಲೇಗಿಡ, ಟೀ ಮಾರಿ, ಹೋರಾಟ ಕೈಗೊಂಡ ಅತಿಥಿ ಬೋಧಕರು.

- - -