- ಬುಕ್ಕಾಂಬುಧಿ ಬೆಟ್ಟದ ಪವಿತ್ರ ತಪೋಕ್ಷೇತ್ರದಲ್ಲಿ ಧರ್ಮ ಸಮಾರಂಭ
ಕನ್ನಡಪ್ರಭ ವಾರ್ತೆ ತರೀಕೆರೆಪಾದಯಾತ್ರೆ ಬದುಕಿನ ಮೌಲ್ಯ ಅರಿಯುವ ಆತ್ಮಯಾತ್ರೆ. ಮನುಷ್ಯನೊಳಗಿನ ಮಾನವೀಯತೆ ಜಾಗೃತಗೊಳಿಸುವುದೇ ನಿಜ ಯಾತ್ರೆ ಎಂದು ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಅಭಿಪ್ರಾಯಪಟ್ಟರು.
ಸೋಮವಾರ ಅಜ್ಜಂಪುರ ತಾಲೂಕಿನ ಬುಕ್ಕಾಂಬುಧಿ ಬೆಟ್ಟದ ಪವಿತ್ರ ತಪೋಕ್ಷೇತ್ರದಲ್ಲಿ ಧರ್ಮ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಭಾರತದ ಆಧ್ಯಾತ್ಮಿಕ ಪರಂಪರೆಯಲ್ಲಿ ಪಾದಯಾತ್ರೆಗೆ ವಿಶೇಷ ಸ್ಥಾನವಿದೆ. ಇದು ಕೇವಲ ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಸಾಗುವ ದೈಹಿಕ ಪ್ರಯಾಣವಲ್ಲ. ಅದು ಭಕ್ತಿ ಅಭಿವ್ಯಕ್ತಿ ಶ್ರದ್ಧೆಯ ಸಂಕೇತ, ಶ್ರೀ ಜಗದ್ಗುರು ರೇಣುಕಾಚಾರ್ಯರು ಯಾವುದೇ ಒಂದು ವರ್ಗಕ್ಕೆ ಸೀಮಿತರಾದವರಲ್ಲ. ಅವರು ಸಮಸ್ತ ಮನುಕುಲದ ಕಲ್ಯಾಣ ಬಯಸುವ ವಿಶ್ವ ಮಾನವ ಸಂದೇಶ ಸಾರಿದ್ದಾರೆ, ಗುರು ಪರಂಪರೆ ಉಳಿದರೆ ಧರ್ಮದ ಜ್ಞಾನ ಪರಂಪರೆ ಮುಂದಿನ ಪೀಳಿಗೆಗೆ ಹರಿದು ಹೋಗುತ್ತದೆ. ಪಂಚ ಪೀಠದ ಗುರು ಪರಂಪರೆ ನಮ್ಮ ಧರ್ಮದ ಶಕ್ತಿ. ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶಿವಾಚಾರ್ಯ ಸ್ವಾಮಿಗಳು ಹಾಸನ ಜಿಲ್ಲೆ ಅಲೂರು ತಾಲೂಕಿನ ಕಾರ್ಜುವಳ್ಳಿ ಹಿರೇಮಠದಿಂದ ಅಜ್ಜಂಪುರ ತಾಲೂಕಿನ ಬುಕ್ಕಾಂಬುಧಿ ಕ್ಷೇತ್ರಕ್ಕೆ ಭಕ್ತರೊಡಗೂಡಿ 136 ಕಿ.ಮೀ. ಪಾದಯಾತ್ರೆ ಕೈಗೊಂಡು ಇಂದು ಮಂಗಲಗೊಳಿಸಿರುವುದು ಅವರ ಧರ್ಮ ಶ್ರದ್ಧೆಗೆ ಸಾಕ್ಷಿ ಎಂದು ಹರುಷ ವ್ಯಕ್ತಪಡಿಸಿದರು.
ಸಮಾರಂಭ ಉದ್ಘಾಟಿಸಿದ ಎಡೆಯೂರು ಕ್ಷೇತ್ರದ ರೇಣುಕ ಶಿವಾಚಾರ್ಯ ಸ್ವಾಮಿ ಮಾತನಾಡಿ ವೀರಶೈವ ಧರ್ಮ ಮಾನವೀಯ ಮೌಲ್ಯ ಬಿತ್ತುವ ಜೀವಂತ ಪರಂಪರೆ ಪ್ರತೀಕ. ಜ್ಞಾನ ಸಂಸ್ಕಾರ ಮತ್ತು ಮಾನವೀಯ ಮೌಲ್ಯವನ್ನು ಜನಮನಕ್ಕೆ ಮನವರಿಕೆ ಮಾಡಿಕೊಡುವುದೇ ಗುರುವಿನ ಧ್ಯೇಯ. ಕಾರ್ಜುವಳ್ಳಿ ಶ್ರೀಗಳವರು ಪಾದಯಾತ್ರೆ ಮೂಲಕ ಜನರಲ್ಲಿ ಧರ್ಮಾಸಕ್ತಿ ಮತ್ತು ಕ್ರಿಯಾಶೀಲ ಬದುಕಿಗೆ ಪ್ರೇರಣೆ ನೀಡುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದರು.
ಕಡೇನಂದಿಹಳ್ಳಿ-ದುಗ್ಲಿ ಕ್ಷೇತ್ರದ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮಿ ಮಾತನಾಡಿ ಪಾದಯಾತ್ರೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರೂ ತಮ್ಮ ಊರಿಗೆ ಮರಳುವಾಗ ಕೇವಲ ಪ್ರಸಾದ ಕೊಂಡೊಯ್ಯದೇ ಒಂದು ಒಳ್ಳೆಯ ವಿಚಾರ, ಮಾನವೀಯ ಸಂಕಲ್ಪ ಮತ್ತು ಸಮಾಜಕ್ಕೆ ಒಳಿತು ಮಾಡುವ ಚಿಂತನ ಜವಾಬ್ದಾರಿ ಹೊತ್ತುಕೊಂಡು ಹೋದರೆ ಪಾದಯಾತ್ರೆ ಸಾರ್ಥಕಗೊಳ್ಳುತ್ತದೆ ಎಂದರು.
ಕಾರ್ಜುವಳ್ಳಿ ಹಿರೇಮಠದ ಸದಾಶಿವ ಶ್ರೀಗಳು ಮಾತನಾಡಿ ಸನಾತನ ಧಾರ್ಮಿಕ ಪರಂಪರೆಯ ಆಚಾರ್ಯರಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರು ಅಗ್ರಗಣ್ಯರು. ಮಹರ್ಷಿ ಅಗಸ್ತ್ಯರಿಗೆ ಬೋಧಿಸಿದ ಶಿವಜ್ಞಾನ, ಧರ್ಮತತ್ವ ಮತ್ತು ಆಧ್ಯಾತ್ಮ ವಿಚಾರ ಧಾರೆಗಳು ಮನುಷ್ಯನ ಬದುಕನ್ನು ಪವಿತ್ರಗೊಳಿಸುವ ಸಾಧನ. ಅವರ ಸಂದೇಶವನ್ನು ಪಾದಯಾತ್ರೆ ಮೂಲಕ ಎಲ್ಲರಿಗೂ ತಲುಪಿಸುವ ಉದ್ದೇಶ ನಮ್ಮದು ಎಂದರು.ಬೀರೂರು ರುದ್ರಮುನಿ ಶಿವಾಚಾರ್ಯರು ನುಡಿ ನಮನ ಸಲ್ಲಿಸಿದರು. ಹುಣಸಘಟ್ಟದ ಗುರುಮೂರ್ತಿ ಶ್ರೀ, ಚನ್ನಗಿರಿಯ ಶಿವಶಾಂತವೀರ ಶ್ರೀ , ನುಗ್ಗೇಹಳ್ಳಿ ಮಹೇಶ್ವರ ಶ್ರೀ, ಹಾರನಹಳ್ಳಿ ಶಿವಯೋಗಿ ಶ್ರೀ, ಯಸಳೂರು ಚನ್ನಸಿದ್ಧೇಶ್ವರ ಶ್ರೀ, ಗೋವಿನಕೋವಿ ವಿಶ್ವಾರಾಧ್ಯ ಹಾಲಸ್ವಾಮಿಗಳು ಮತ್ತು ಅರಕೆರೆ ಚನ್ನವೀರ ಶ್ರೀ, ಹಾಸನದ ದೇವರಾಜ ಶಾಸ್ತ್ರಿಗಳು ಪಾಲ್ಗೊಂಡಿದ್ದರು. 2ಕೆಟಿಆರ್.ಕೆ.20ಃ
ಅಜ್ಜಂಪುರದ ಬುಕ್ಕಾಂಬುದಿ ಬೆಟ್ಟದ ಪವಿತ್ರ ತಪೋಕ್ಷೇತ್ರದಲ್ಲಿ ಧರ್ಮ ಸಮಾರಂಭದ ಸಾನಿಧ್ಯವಹಿಸಿದ್ದ ಬಾಳೆಹೊನ್ನೂರು ಶ್ರೀ ರಂಭಾಪುರಿ ಡಾ. ವೀರಸೋಮೇಶ್ವರ ಜಗದ್ಗುರು ಆಶೀರ್ವಚನ ನೀಡಿದರು.