ಚಿಕ್ಕಮಗಳೂರು ಜಗತ್ತಿನ ಸಕಲ ಜೀವರಾಶಿಗೆ ಸರ್ವೇ ಜನೋ ಸುಖಿನೋ ಭವಂತು ಎಂಬ ಒಳಿತನ್ನೇ ಬಯಸುವ ಹಿಂದೂ ಧರ್ಮ ವೈಶಿಷ್ಟತೆಯಿಂದ ಕೂಡಿದೆ. ಪರಸ್ಪರ ಪ್ರೀತಿ, ಸ್ನೇಹತ್ವ ಹಾಗೂ ಬದುಕಿನ ಮೌಲ್ಯಗಳನ್ನು ತುಂಬುವ ಶಕ್ತಿ ಹಿಂದುತ್ವದಲ್ಲಿ ಅಡಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಭಂಜನ್ ಸೂರ್ಯ ಹೇಳಿದರು.
- ಗಾಯತ್ರಿದೇವಿ ಕಲ್ಯಾಣ ಮಂಟಪದಲ್ಲಿ ಹಿಂದೂ ಸಮಾಜೋತ್ಸವ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಜಗತ್ತಿನ ಸಕಲ ಜೀವರಾಶಿಗೆ ಸರ್ವೇ ಜನೋ ಸುಖಿನೋ ಭವಂತು ಎಂಬ ಒಳಿತನ್ನೇ ಬಯಸುವ ಹಿಂದೂ ಧರ್ಮ ವೈಶಿಷ್ಟತೆಯಿಂದ ಕೂಡಿದೆ. ಪರಸ್ಪರ ಪ್ರೀತಿ, ಸ್ನೇಹತ್ವ ಹಾಗೂ ಬದುಕಿನ ಮೌಲ್ಯಗಳನ್ನು ತುಂಬುವ ಶಕ್ತಿ ಹಿಂದುತ್ವದಲ್ಲಿ ಅಡಗಿದೆ ಎಂದು ಸಾಮಾಜಿಕ ಕಾರ್ಯಕರ್ತ ಪ್ರಭಂಜನ್ ಸೂರ್ಯ ಹೇಳಿದರು.ನಗರದ ಗಾಯತ್ರಿದೇವಿ ಸಮುದಾಯ ಭವನದಲ್ಲಿ ಭಾನುವಾರ ಕೆಂಪನಹಳ್ಳಿಯ ಹಿಂದೂ ಸಮಾಜೋತ್ಸವ ಸಮಿತಿ ಆಯೋಜಿಸಿದ್ಧ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.ಸನಾತನ ಹಿಂದೂ ರಾಷ್ಟ್ರದ ಮೇಲೆ ಅನೇಕ ವಿದೇಶಿಗರು ಭೂತಕಾಲದಲ್ಲಿ ಆಕ್ರಮಣ ಮತ್ತು ಆಘಾತ ನಡೆಸಿ ಕೋಟ್ಯಂತರ ಮೌಲ್ಯದ ಸಂಪತ್ತು ಲೂಟಿ ಮಾಡಿದರೂ ಸೋಲದೇ, ಭವ್ಯ ಭಾರತ ಶ್ರೀಮಂತಿಕೆ ಉಳಿಸಿಕೊಂಡಿದೆ. ಪೂರ್ವಿಕರ ಬಲಿಷ್ಟ ಆತ್ಮಶಕ್ತಿ, ಸಂಘರ್ಷ ಮತ್ತು ಒಗ್ಗಟ್ಟಿನ ಸಾಮರ್ಥ್ಯದಿಂದ ರಾಷ್ಟ್ರ ಜೀವಂತಿಕೆ ಕಾಪಾಡಿಕೊಂಡಿದೆ ಎಂದರು.ವಿಶ್ವದ ಎದುರು ಹಿಂದೂ ಸಮಾಜವನ್ನು ಕುಗ್ಗಿಸುವ ಸಲುವಾಗಿ ಕೆಲವು ಕುತಂತ್ರಿಗಳು ಜಾತಿ, ಧರ್ಮದ ನಡುವೆ ಬೀಜ ಬಿತ್ತಿ ಒಡೆದಾಳಿಸುತ್ತಿದೆ. ಭಾರತದ ಹಿಂದೂ ಸಂಸ್ಕೃತಿ, ಸಂಪ್ರದಾಯ, ಪದ್ಧತಿ ಬುಡಮೇಲು ಮಾಡಿ ಹಿಂದುತ್ವದ ಅಳಿವಿಗೆ ಕೆಲಸ ಮಾಡುತ್ತಿದೆ. ಈ ಬಗ್ಗೆ ಹಿಂದೂ ಸಮಾಜ ಎಚ್ಚೆತ್ತುಕೊಂಡು ಹಿಂದುತ್ವದ ಉಳಿವಿಗೆ ಶ್ರಮಿಸಬೇಕು ಎಂದು ಕರೆ ನೀಡಿದರು.ರಾಮಾಯಣ ನಿರ್ಮಾತೃ ವಾಲ್ಮೀಕಿಯವರು ಪರಿಶಿಷ್ಟ ಪಂಗಡದ ಸಮುದಾಯದ ಶ್ರೇಷ್ಠ ವ್ಯಕ್ತಿ. ಹೀಗಾಗಿ ಹಿಂದುತ್ವದಲ್ಲಿ ಜಾತಿ ತಾರತಮ್ಯವಿಲ್ಲ. ಎಲ್ಲರೂ ನಮ್ಮವರೆಂದು ಭಾವಿಸಿಕೊಂಡು ಮುನ್ನೆಡೆಯಬೇಕು. ಆಗ ಭಾರತ ಹಿಂದುತ್ವದ ನೆಲೆಯಲ್ಲಿ ಜೀವಿಸಲು ಸಾಧ್ಯ. ಆ ನಿಟ್ಟಿನಲ್ಲಿ ರಾಷ್ಟ್ರೀಯ ಸ್ವಯಂಸೇವಾ ಸಂಘ ನಿರಂತರವಾಗಿ ಪರಂಪರೆ ಉಳಿಸಲು ಕಾರ್ಯ ಪ್ರವೃತ್ತವಾಗಿದೆ ಎಂದರು.ಭಾರತ ಸ್ವಾತಂತ್ರ್ಯ ಪೂರ್ವ ಹಾಗೂ ಮಧ್ಯಕಾಲಘಟ್ಟದಲ್ಲಿ ನಿವಾಸಿಗಳಿಗೆ ವಿದ್ಯುತ್ ಸೌಲಭ್ಯವಿರಲಿಲ್ಲ. ಈ ಬಗ್ಗೆ ಸಂಘ ಮನೆಗಳಿಗೆ ಬೆಳಕನ್ನು ಚೆಲ್ಲುವ, ಕಾಗದ ಪತ್ರ ತಲುಪಿಸುವ ಸೇವಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿತು. ಅಲ್ಲದೇ ವೈಭವ ಯುತ ಕಾರ್ಯದಲ್ಲಿ ಸಂಘ ನಿರತವಾಗಿ ವ್ಯಕ್ತಿ ನಿರ್ಮಾಣ ಜೊತೆಗೆ ಪರಿವರ್ತನೆ ದಾರಿಯಲ್ಲಿ ಸಾಗಿತ್ತು ಎಂದು ಹೇಳಿದರು. ಭಾರತೀಯರು ಜೀವನದಲ್ಲಿ ರಾಷ್ಟ್ರಾಭಿವೃದ್ಧಿಗೆ ಪಂಚ ಪರಿವರ್ತನೆ ಅಂಶಗಳನ್ನು ಅಳವಡಿಸಿಕೊಳ್ಳಬೇಕು. ಕುಟುಂಬ ಪ್ರಬೋಧನೆ, ಸಾಮಾಜಿಕ ಸಾಮರಸ್ಯ, ಪರ್ಯಾವರ್ಣ, ನಾಗರಿಕರ ಶಿಷ್ಟಾಚಾರ ಹಾಗೂ ಸ್ವದೇಶಿ ವಸ್ತುಗಳ ಬಳಕೆ ಹೆಚ್ಚಿಸಿಕೊಂಡು ಆತ್ಮನಿರ್ಭಾರವಾಗಬೇಕು. ಇದು ರಾಷ್ಟ್ರದ ಅಭಿವೃದ್ಧಿ ಮತ್ತು ಏಕತೆಗೆ ಪ್ರತೀಕ ಎಂದು ತಿಳಿಸಿದರು.ಜೀವನದಲ್ಲಿ ಮಾನವರು ಸಕುಟುಂಬ ಪದ್ಧತಿ, ಸ್ವದೇಶಿ ವಸ್ತು ಉಪಯೋಗ, ಪರಿಸರಕ್ಕೆ ಹಾನಿಯಾಗುವ ಕಾರ್ಯಕ್ಕೆ ಕೈ ಹಾಕದಿರುವುದು, ಫಲವತ್ತತೆ ಭೂಮಿಗೆ ಕೆಮಿಕಲ್‌ನಿಂದ ವಿಷ ಉಣಿಸದಿರುವುದು, ದೇಶದ ಅಭಿವೃದ್ಧಿ ಕಾನೂನುಪಾಲನೆ, ಸಮಯಕ್ಕೆ ಸರಿಯಾಗಿ ತೆರಿಗೆ ಪಾವತಿಸಿದರೆ ಮಾತ್ರ ಭಾರತ ಜಗತ್ತಿನ ಮುಂದೆ ಗಟ್ಟಿಯಾಗಿ ನೆಲೆಯೂರಲಿದೆ ಎಂದರು.ಮಾತೃಶಕ್ತಿ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಸಾಮಾಜಿಕ ಕಾರ್ಯಕರ್ತೆ ರುಕ್ಮಿಣಿ ನಾಗರಿಕ ಸಮಾಜದಲ್ಲಿ ಹೆಣ್ಣೆಂಬ ಕೀಳರಿಮೆ ಇರಕೂಡದು. ಹೆತ್ತು ಹೊತ್ತ ತಾಯಿಯಿಂದ, ಮಾತು ಕಲಿಸಿದ ಕನ್ನಡ ತಾಯಿವರೆಗೂ ಹೆಣ್ಣೆಂಬುದು ಮರೆಯದಿರಿ. ತಾಯಿಯೇ ಮೊದಲು ಗುರು, ಮೊದಲ ಪಾಠಶಾಲೆ ಎಂಬ ಸಾಮಾಜಿಕ ಜ್ಞಾನ ಮೂಡಿಸಿಕೊಳ್ಳಬೇಕು ಎಂದು ಹೇಳಿದರು.ಹೆಣ್ಣು ಸಂಸ್ಕಾರ, ಸಂಸ್ಕೃತಿಯ ಕಣ್ಣು. ಮಗು ಮೊದಲು ಜನಿಸಿ ನೋಡುವುದೇ ತಾಯಿಯನ್ನೇ ಹೊರತು ಬೇರೆಯವರಲ್ಲ. ಪುಟ್ಟ ಪುಟ್ಟ ಹೆಜ್ಜೆಗಳನ್ನು ಮಕ್ಕಳಿಗೆ ಕಲಿಸುವ ಕರುಣಾಮಯಿ ತಾಯಿ. ಆಕೆಗೆ ಅಗಾಧವಾದ ಶಕ್ತಿ, ಸಹನೆ, ಜಾಣ್ಮೆಯಿದೆ. ಮಕ್ಕಳಿಗೆ ಸಮಾಜದಲ್ಲಿ ಯಾವುದೇ ಸಮಸ್ಯೆಗಳನ್ನು ಎದುರಿಸುವ ಶಕ್ತಿ ತುಂಬುವ ಸಾಮರ್ಥ್ಯ ತಾಯಿಗಿದೆ ಎಂದರು.ನಗರ ಹಿಂದೂ ಸಮಾಜೋತ್ಸವ ಆಯೋಜನ ಸಮಿತಿ ಉಪಾಧ್ಯಕ್ಷ ಪಿಂಚಡಿ ಅಧ್ಯಕ್ಷತೆ ವಹಿಸಿದ್ದರು . ಬಳಿಕ ಯುವತಿಯರು ಮತ್ತು ಪುಟಾಣೀ ಮಕ್ಕಳಿಂದ ಭರತನಾಟ್ಯ, ನೃತ್ಯ ಸೇರಿದಂತೆ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆಯಿತು.ಈ ಸಂದರ್ಭದಲ್ಲಿ ಕಾಫಿ ಬೆಳೆಗಾರ ಗುರುವೇಶಗೌಡ, ರಾಮೇಶ್ವರ ದೇವಸ್ಥಾನ ಅರ್ಚಕ ಕೃಷ್ಣಭಟ್ರು, ಅಬಕಾರಿ ಇಲಾಖೆಯ ನಿವೃತ್ತ ಅಧಿಕಾರಿ ಓಂಕಾರಪ್ಪ, ಸಮಿತಿ ಉಪಾಧ್ಯಕ್ಷರಾದ ರಮೇಶ್ ಅರದೊಳ್ಳಿ, ರಘು, ನಿವೃತ್ತ ಸೈನಿಕ ಮೋಹನ್‌ಶೆಟ್ಟಿ, ಮುಖಂಡರಾದ ಲಕ್ಷ್ಮೀಶಾಮರಾವ್, ಸುಶೀಲಮ್ಮ, ಶಶಿ ಅಶೋಕ್, ರುದ್ರೇಶ್, ಪ್ರೇಮಲತಾ ನಾಗರಾಜ್, ರಾಜು ಉಪಸ್ಥಿತರಿದ್ದರು. 18 ಕೆಸಿಕೆಎಂ 1
ಚಿಕ್ಕಮಗಳೂರಿನ ಗಾಯತ್ರಿದೇವಿ ಸಮುದಾಯ ಭವನದಲ್ಲಿ ಭಾನುವಾರ ನಡೆದ ಹಿಂದೂ ಸಮಾಜೋತ್ಸವ ಕಾರ್ಯಕ್ರಮದಲ್ಲಿ ಪ್ರಭಂಜನ್ ಸೂರ್ಯ ಮಾತನಾಡಿದರು.