ಸಾರಾಂಶ
ಮನೆ ಹಂಚಿಕೆಯಾದ ಕುಟುಂಬಗಳು ಅಕ್ಟೋಬರ್ ೨ರಿಂದ ೪ರ ಒಳಗಾಗಿ ಕಡ್ಡಾಯವಾಗಿ ಹೊಸ ಮನೆಗೆ ಸ್ಥಳಾಂತರವಾಗಬೇಕು. ಅ. ೪ರಂದು ಬೆಳಗಿನ ೧೧ ಗಂಟೆ ಹೊತ್ತಿಗೆ ಎಲ್ಲವನ್ನೂ ಖಾಲಿ ಮಾಡಬೇಕು. ಬಳಿಕ ಮನೆ ನೆಲಸಮಗೊಳಿಸಲಾಗುತ್ತದೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು.
ಹುಬ್ಬಳ್ಳಿ:
ಹೊಸೂರು ವಾಣಿ ವಿಲಾಸ ಸರ್ಕಲ್-ಪ್ರಾದೇಶಿಕ ಸಾರಿಗೆ ಬಸ್ ಟರ್ಮಿನಲ್ ಮಧ್ಯದ ರಸ್ತೆ ಅಗಲೀಕರಣದಲ್ಲಿ ಮನೆ ಕಳೆದುಕೊಳ್ಳುವ ಸಂಸತ್ರಸ್ತರಿಗೆ ಮನೆ ಹಂಚಿಕೆ ಮಾಡಲಾಗಿದೆ. ಸಂತ್ರಸ್ತರು ಒಂದು ವಾರದಲ್ಲಿ ಹೊಸೂರಿನಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯಡಿ ನಿರ್ಮಿಸಿದ ಅಪಾರ್ಟ್‌ಮೆಂಟ್‌ಗೆ ಶಿಫ್ಟ್ ಆಗಲಿದ್ದಾರೆ.ನಗರದ ಪ್ರವಾಸಿ ಮಂದಿರದಲ್ಲಿ ಬುಧವಾರ ಶಾಸಕ ಮಹೇಶ ಟೆಂಗಿನಕಾಯಿ ಸಮ್ಮುಖದಲ್ಲಿ ಫಲಾನುಭವಿಗಳ ಚೀಟಿ ಎತ್ತುವ ಮೂಲಕ ಫಲಾನುಭವಿಗಳನ್ನು ಆಯ್ಕೆ ಮಾಡಲಾಯಿತು. ಖುದ್ದು ಹಾಜರಿದ್ದ ಫಲಾನುಭವಿಗಳು ಚೀಟಿಯಲ್ಲಿ ತಮ್ಮ ಹೆಸರು ಬರುತ್ತಿದ್ದಂತೆ ತಮ್ಮ ಮನೆ ಯಾವುದು, ಯಾವ ನಂಬರ್ ಎನ್ನುವುದನ್ನು ಖಾತರಿಪಡಿಸಿಕೊಂಡರು.
ಈ ಮೂಲಕ ವಿಜಯದಶಮಿ ಹಬ್ಬದಲ್ಲಿ ಸಂತ್ರಸ್ತರಲ್ಲಿ ಸಂತಸ ಮನೆ ಮಾಡಿದೆ. ಇತ್ತ ಸಾರಿಗೆ ಸಂಚಾರಕ್ಕೆ ತೀರಾ ಇಕ್ಕಟ್ಟಾಗಿದ್ದ ರಸ್ತೆ ಅಗಲೀಕರಣಕ್ಕೆ ಹಾದಿ ಸುಗಮವಾದಂತಾಗಿದೆ. ಸಂತ್ರಸ್ತರು ಹೊಸ ಮನೆಗೆ ಶಿಫ್ಟ್ ಆಗುತ್ತಿದ್ದಂತೆ ಹಳೆ ಮನೆಗಳನ್ನು ನೆಲಸಮಗೊಳಿಸಲು ಪಾಲಿಕೆ ಕೂಡ ತುದಿಗಾಲ ಮೇಲೆ ನಿಂತಿದೆ.ರಸ್ತೆ ಅಗಲೀಕರಣದಲ್ಲಿ ೪೫ ಕುಟುಂಬಗಳು ಮನೆ ಕಳೆದುಕೊಳ್ಳಲಿದ್ದು, ಇದರಲ್ಲಿ ದಾಖಲೆಗಳ ಅಸ್ಪಷ್ಟತೆಯಿಂದಾಗಿ ೬ ಜನರ ಹಂಚಿಕೆಯನ್ನು ತಡೆ ಹಿಡಿಯಲಾಗಿದೆ. ಇದನ್ನು ೩-೪ ದಿನಗಳಲ್ಲಿ ಇತ್ಯರ್ಥ ಪಡಿಸುವುದಾಗಿ ಕಮಿಷನರ್ ಡಾ. ರುದ್ರೇಶ ಘಾಳಿ ತಿಳಿಸಿದ್ದಾರೆ.
೨೦೨೪-೨೫ನೇ ಸಾಲಿನಲ್ಲಿ ನಡೆದ ಪಿಯು ಪರೀಕ್ಷೆಯಲ್ಲಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ೪ನೇ ಸ್ಥಾನ ಗಳಿಸಿದ್ದ ನಾಗವೇಣಿ ರಾಯಚೂರ ಹಾಗೂ ಅಶೋಕ ನಗರದಲ್ಲಿ ಬಾಲಕಿ ಕಳೆದುಕೊಂಡ ಕುಟುಂಬಕ್ಕೂ ವಿಶೇಷ ಪ್ರಕರಣ ಅಡಿಯಲ್ಲಿ ಮನೆಗಳನ್ನು ಹಂಚಿಕೆ ಮಾಡಲಾಯಿತು.ಕರೆಂಟ್ ವೆಚ್ಚ ಪಾಲಿಕೆಗೆ
ಹಂಚಿಕೆಯಾದ ಮನೆಗಳಿಗೆ ಮಾಲಿಕರ ಹೆಸರಿನಲ್ಲೇ ವಿದ್ಯುತ್ ಸಂಪರ್ಕ ಕಲ್ಪಿಸಲಾಗುತ್ತದೆ. ಇದಕ್ಕೆ ತಗಲುವ ವೆಚ್ಚ ₹೧೦ ಸಾವಿರ ಪಾವತಿಸಲು ಅಸಾಧ್ಯ ಎಂದು ಫಲಾನುಭವಿಗಳು ತಿಳಿಸಿದರು. ಹಾಗಾಗಿ, ಈ ವೆಚ್ಚವನ್ನು ಪಾಲಿಕೆಯಿಂದಲೇ ಭರಿಸುವುದಾಗಿ ಶಾಸಕ ಟೆಂಗಿನಕಾಯಿ ತಿಳಿಸಿದರು.ಒಂದು ಸಾವಿರ ಕೊಡಬೇಕು:
ಅಪಾರ್ಟ್‌ಮೆಂಟ್ ವಿದ್ಯುತ್ ಬಿಲ್, ಸ್ವಚ್ಛತೆ ಹಾಗೂ ಇತರ ದೈನಂದಿನ ನಿರ್ವಹಣೆಗಾಗಿ ಫಲಾನುಭವಿಗಳು ಪ್ರತಿ ತಿಂಗಳು ತಲಾ ಒಂದು ಸಾವಿರ ವಂತಿಗೆ ಕೊಡಲೇಬೇಕು ಎಂದು ಶಾಸಕರು ತಾಕೀತು ಮಾಡಿದರು. ಕೆಲ ತಿಂಗಳ ಬಳಿಕ ಅಪಾರ್ಟ್‌ಮೆಂಟ್ ನಿರ್ವಹಣೆಗೆ ಫಲಾನುಭವಿಗಳನ್ನೊಳಗೊಂಡು ಅಸೋಸಿಯೇಶನ್ ರಚಿಸಲಾಗುವುದು. ಆ ಮೂಲಕ ವಂತಿಗೆ ಸಂಗ್ರಹಿಸಿ ಹಣವನ್ನು ನಿರ್ವಹಣೆಗೆ ಖರ್ಚು ಮಾಡಬೇಕೆಂದು ತಿಳಿಸಿದರು. ಅಲ್ಲಿಯವರೆಗೂ ನಿರ್ವಹಣೆಗೆ ಮೂವರು ಕಾರ್ಮಿಕರನ್ನು ನಿಯೋಜಿಸಲಾಗುತ್ತದೆ ಎಂದು ಶಾಸಕರು ತಿಳಿಸಿದರು.ಮನೆ ಹಂಚಿಕೆ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಈಶ್ವರಗೌಡ ಪಾಟೀಲ, ಸಿದ್ದು ಮೊಗಲಿಶೆಟ್ಟರ, ರವಿ ನಾಯಕ ಹಾಗೂ ಪಾಲಿಕೆ ಸಿಬ್ಬಂದಿ ಹಾಜರಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))