ಬ್ಯಾಡಗಿ ತಾಲೂಕಿನ ಅಳಲಗೇರಿಯಲ್ಲಿ ಕಾಡು ಹಂದಿಗಳ ದಾಳಿಗೆ ಅಪಾರ ಬೆಳೆಹಾನಿ

| Published : Jul 28 2025, 12:33 AM IST

ಬ್ಯಾಡಗಿ ತಾಲೂಕಿನ ಅಳಲಗೇರಿಯಲ್ಲಿ ಕಾಡು ಹಂದಿಗಳ ದಾಳಿಗೆ ಅಪಾರ ಬೆಳೆಹಾನಿ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ 5 ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ್ದ 20ಕ್ಕೂ ಹೆಚ್ಚು ತೆಂಗಿನ ಮರಗಳನ್ನು ನೆಲಕ್ಕುರುಳಿಸಿ ನಾಶಪಡಿಸಿದೆ. ಕಾಡುಹಂದಿಯ ಭಯದಿಂದ ಹೊಲಗಳಿಗೆ ಹೋಗಲು ಕೂಡ ಆಗುತ್ತಿಲ್ಲ.

ಬ್ಯಾಡಗಿ: ಕಾಡುಹಂದಿಗಳ (ಮಿಕ) ದಾಳಿಗೆ ಗೋವಿನಜೋಳ ಬೆಳೆ ಸೇರಿದಂತೆ ತೆಂಗಿನಮರಗಳನ್ನು ನಾಶಪಡಿಸಿದ ಘಟನೆ ತಾಲೂಕಿನ ಅಳಲಗೇರಿ ಗ್ರಾಮದಲ್ಲಿ ನಡೆದಿದೆ.

ಕಾಡುಪ್ರಾಣಿಗಳ ಹಾವಳಿಗೆ ರೈತರ ಬೆಳೆಗಳು ಹೈರಾಣಾಗುತ್ತಿರುವ ವಿಷಯ ಹೊಸದೇನಲ್ಲ. ಕೃಷ್ಣಮೃಗ, ಆನೆ, ಚಿರತೆ, ಸೈನಿಕ ಹುಳು ಸೇರಿದಂತೆ ಇನ್ನಿತರ ಜೀವ ಸಂಕುಲಗಳ ಕಾಟಕ್ಕೆ ರೈತರು ಕೃಷಿಯನ್ನೇ ಬಿಟ್ಟು ಹೋಗುತ್ತಿರುವ ಪ್ರಕರಣಗಳು ನಿತ್ಯ ಒಂದಿಲ್ಲೊಂದು ಕಡೆ ನಡೆಯುತ್ತಿವೆ. ಆದರೆ ಇದೀಗ ಬೆಳೆಹಾನಿಗೆ ಹೊಸ ಪ್ರಾಣಿಯೊಂದು ಸೇರ್ಪಡೆಯಾಗಿದ್ದು, ಕಾಡುಹಂದಿಗಳ ದಾಳಿಗೆ ಗ್ರಾಮದ ಸೆದಿಯಪ್ಪ ಅಯ್ಯಮ್ಮನವರಿಗೆ ಸೇರಿದ 2 ಎಕರೆ ಗೋವಿನಜೋಳ ಹಾಗೂ ಅಶೋಕ ಕರ್ಜಗಿ ಅವರಿಗೆ ಸೇರಿದ ಸುಮಾರು 20ಕ್ಕೂ ಹೆಚ್ಚಿದ ತೆಂಗಿನಮರಗಳು ನಾಶವಾಗಿವೆ.

ಕಾಡುಹಂದಿ ನೋಡಲು ಇತರೆ ಹಂದಿಗಳಂತೆ ಕಂಡರೂ ಬಿತ್ತನೆ ಮಾಡಿದ ಕೆಲವೇ ದಿನಗಳಲ್ಲಿ ಗೋವಿನಜೋಳದ ಬೇರಿನಲ್ಲಿರುವ ಸಿಹಿಯಾದ ಪದಾರ್ಥ ಇಷ್ಟವಾಗುತ್ತದೆ. ಹೀಗಾಗಿ ಗೋವಿನಜೋಳ ಸೇರಿದಂತೆ ತೆಂಗಿನಮರದ ಬೇರಿನ ಬಳಿ ಬುಡದಲ್ಲಿನ ಸಿಹಿಯಾದ ಪದಾರ್ಥಗಳನ್ನು ತಿನ್ನಲು ದಾಳಿ ನಡೆಸಿರುವುದಾಗಿ ಸಂತ್ರಸ್ತ ರೈತರು ಅಳಲು ತೋಡಿಕೊಂಡಿದ್ದಾರೆ.

ಅರಣ್ಯಕ್ಕೆ ಹೊಂದಿಕೊಂಡಿರುವ ಜಮೀನುಗಳಲ್ಲಿ ಕೃಷಿ ನಡೆಸುವುದಂತೂ ದುಸ್ತರವಾಗಿದೆ. ಈ ಕುರಿತು ಅರಣ್ಯ ಇಲಾಖೆಗೆ ಮನವಿ ಸಲ್ಲಿಸಿ ಅಷ್ಟಿಷ್ಟು ಪರಿಹಾರ ಪಡೆದುಕೊಳ್ಳುತ್ತಿದ್ದರಾದರೂ ಅದನ್ನು ಪಡೆದುಕೊಳ್ಳಲು ಕಚೇರಿಗಳಿಗೆ ಅಲೆದಾಟ ಮಾತ್ರ ತಪ್ಪಿದ್ದಲ್ಲ. ಅಷ್ಟಕ್ಕೂ ಈ ಪ್ರಕರಣದಲ್ಲಿ ಕಾಡುಹಂದಿಗೆ ಎರಡು ಬಲವಾದ ಕೋರೆಗಳನ್ನು ಹೊಂದಿರುತ್ತವೆ. ಒಂದು ವೇಳೆ ದಾಳಿ ನಡೆಸಿದಲ್ಲಿ ರೈತರು ಜೀವ ಉಳಿಸಿಕೊಳ್ಳುವುದು ಕಷ್ಟಸಾಧ್ಯ. ಹೀಗಾಗಿ ಜೀವಭಯಕ್ಕೆ ರೈತರು ಮೈಮರೆತು ಕೃಷಿ ನಡೆಸುವಂತಿಲ್ಲ.

ಕಳೆದ 5 ವರ್ಷಗಳಿಂದ ಕಷ್ಟಪಟ್ಟು ಬೆಳೆಸಿದ್ದ 20ಕ್ಕೂ ಹೆಚ್ಚು ತೆಂಗಿನ ಮರಗಳನ್ನು ನೆಲಕ್ಕುರುಳಿಸಿ ನಾಶಪಡಿಸಿದೆ. ಕಾಡುಹಂದಿಯ ಭಯದಿಂದ ಹೊಲಗಳಿಗೆ ಹೋಗಲು ಕೂಡ ಆಗುತ್ತಿಲ್ಲ. ಈ ಕುರಿತು ಹಲವು ಬಾರಿ ಅರಣ್ಯ ಇಲಾಖೆಯ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಅರಣ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿರುವ ಸ್ಥಳೀಯ ಶಾಸಕರು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕೊಡಿಸುವ ಕೆಲಸವಾಗಬೇಕು ಎಂದು ರೈತ ಅಶೋಕ ಕರ್ಜಗಿ ಆಗ್ರಹಿಸಿದ್ದಾರೆ.