ಹುಲ್ಲೋಳಿ ಅರಿಹಂತ ಬ್ಯಾಂಕ್‌ಗೆ 5.72 ಕೋಟಿ ನಿವ್ಹಳ ಲಾಭ

| Published : Sep 15 2025, 01:01 AM IST

ಹುಲ್ಲೋಳಿ ಅರಿಹಂತ ಬ್ಯಾಂಕ್‌ಗೆ 5.72 ಕೋಟಿ ನಿವ್ಹಳ ಲಾಭ
Share this Article
  • FB
  • TW
  • Linkdin
  • Email

ಸಾರಾಂಶ

ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ನಿಂದ ಗ್ರಾಹಕರಿಗೆ ಮತ್ತಷ್ಟು ಗುಣಮಟ್ಟದ ಸೇವೆ ನೀಡಿ ₹6 ಕೋಟಿ ನಿವ್ವಳ ಲಾಭ ಗಳಿಸುವ ಗುರಿ ಹೊಂದಲಾಗಿದೆ

ಕನ್ನಡಪ್ರಭ ವಾರ್ತೆ ಹುಕ್ಕೇರಿ

ಸಂಘ-ಸಂಸ್ಥೆ ಉಳಿದು ಬೆಳೆಯಬೇಕಾದರೆ ಆ ಸಂಸ್ಥೆಯ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಪ್ರಾಮಾಣಿಕವಾಗಿರಬೇಕು. ಈ ನಿಟ್ಟಿನಲ್ಲಿ ವಾಣಿಜ್ಯ ಚಟುವಟಿಕೆಗಳೊಂದಿಗೆ ಸಮಾಜಮುಖಿ ಕೆಲಸಗಳಲ್ಲಿ ಅದಮ್ಯ ಸೇವೆ ಸಲ್ಲಿಸುತ್ತಿರುವ ಹುಲ್ಲೋಳಿ ಅರಿಹಂತ ಬ್ಯಾಂಕ್ ಗ್ರಾಮೀಣ ಜನರ ಒಡನಾಡಿಯಾಗಿ ಹೊರಹೊಮ್ಮಿದೆ ಎಂದು ಚಿಕ್ಕೋಡಿ ಚರಮೂರ್ತಿ ಚರಂತೇಶ್ವರ ಮಠದ ಸಂಪಾದನಾ ಸ್ವಾಮೀಜಿ ಹೇಳಿದರು.

ತಾಲೂಕಿನ ಹುಲ್ಲೋಳಿ ಗ್ರಾಮದಲ್ಲಿ ಭಾನುವಾರ ನಡೆದ ಅರಿಹಂತ ಸೌಹಾರ್ದ ಸಹಕಾರಿ ಸಂಘದ 26ನೇ ವಾರ್ಷಿಕ ಮಹಾಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಪ್ರದೇಶದಲ್ಲಿ ಸೇವಾನಿರತ ಈ ಬ್ಯಾಂಕ್ ಸದಸ್ಯರ ವಿಶ್ವಾಸ ಗಳಿಸಿ ಗ್ರಾಹಕ ಸ್ನೇಹಿಯಾಗಿ ಹೊರಹೊಮ್ಮಿದೆ. ಅನೇಕ ಸಾಮಾಜಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು.

ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್ ಅಧ್ಯಕ್ಷ ಬಿ.ಬಿ.ಚೌಗಲಾ ಮಾತನಾಡಿ, ಬರುವ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ನಿಂದ ಗ್ರಾಹಕರಿಗೆ ಮತ್ತಷ್ಟು ಗುಣಮಟ್ಟದ ಸೇವೆ ನೀಡಿ ₹6 ಕೋಟಿ ನಿವ್ವಳ ಲಾಭ ಗಳಿಸುವ ಗುರಿ ಹೊಂದಲಾಗಿದೆ ಜೊತೆಗೆ ಇನ್ನೆರೆಡು ಶಾಖೆ, ಕಲ್ಯಾಣ ಮಂಟಪ ನಿರ್ಮಿಸುವ ಉದ್ದೇಶ ಹೊಂದಲಾಗಿದೆ ಎಂದರು.

ಪ್ರಧಾನ ವ್ಯವಸ್ಥಾಪಕ ಆನಂದ ಚೌಗಲಾ ಮಾತನಾಡಿ, ಪ್ರಧಾನ ಕಚೇರಿ ಸೇರಿ ಬ್ಯಾಂಕ್ ಒಟ್ಟು 11 ಶಾಖೆಗಳನ್ನು ಹೊಂದಿರುವ ಬ್ಯಾಂಕ್ ಒಟ್ಟು 18430 ಸದಸ್ಯರನ್ನು ಹೊಂದಿದ್ದು 2024-25ನೇ ಆರ್ಥಿಕ ವರ್ಷದಲ್ಲಿ ಬ್ಯಾಂಕ್ ಒಟ್ಟು ₹1992 ಕೋಟಿ ವಹಿವಾಟು ನಡೆಸಿದೆ. ₹1.17 ಕೋಟಿ ಶೇರು ಬಂಡವಾಳವಿದೆ. ₹30 ಕೋಟಿ ಕಾಯ್ದಿಟ್ಟ ಹಾಗೂ ಇತರೆ ನಿಧಿಗಳಿದ್ದು. ₹327 ಕೋಟಿ ದುಡಿಯುವ ಬಂಡವಾಳವಿದೆ. ₹214 ಕೋಟಿ ಸಾಲ ವಿತರಿಸಲಾಗಿದೆ. ₹296 ಕೋಟಿ ಠೇವುಗಳಿದ್ದು ₹113 ಕೋಟಿ ಗುಂತಾವಣೆಗಳಿವೆ. ₹5.72 ಕೋಟಿ ನಿವ್ಹಳ ಲಾಭ ಗಳಿಸಿದ್ದು ಶೇ.25ರಷ್ಟು ಲಾಭಾಂಶ ವಿತರಿಸಲಾಗಿದೆ. ಶೇ.97ರಷ್ಟು ಸಾಲ ವಸೂಲಾಗಿದ್ದು ಅಡಿಟ್‌ನಲ್ಲಿ ಎ ಕ್ಲಾಸ್ ಬಂದಿದೆ ಎಂದರು.

ಪ್ರಧಾನ ವ್ಯವಸ್ಥಾಪಕ ಆನಂದ ಚೌಗಲಾ ಪ್ರಾಸ್ತಾವಿಕವಾಗಿ ಮಾತನಾಡಿದರು. ರವೀಂದ್ರ ಚೌಗಲಾ ಸ್ವಾಗತಿಸಿದರು. ಜಯಪಾಲ ಚೌಗಲಾ ನಿರೂಪಿಸಿದರು. ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉಪಾಧ್ಯಕ್ಷ ಬಾಹುಬಲಿ ನಾಗನೂರಿ, ನಿರ್ದೇಶಕರಾದ ಪಿ.ಆರ್.ಚೌಗಲಾ, ಜಿನ್ನಪ್ಪಾ ಸಪ್ತಸಾಗರ, ರಾಮಣ್ಣಾ ಗೋಟೂರಿ, ರವೀಂದ್ರ ಚೌಗಲಾ, ಜಯಪಾಲ ಚೌಗಲಾ, ಬಾಬು ಅಕ್ಕಿವಾಟೆ, ಮಾಯಪ್ಪಾ ಹೊಳೆಪ್ಪಗೋಳ, ಶೃತಿ ಪಾಟೀಲ, ಸುಮತಿ ಚೌಗಲಾ, ಬಸವರಾಜ ಪಾಟೀಲ, ಬಾಳಪ್ಪಾ ಸಂಕೇಶ್ವರಿ, ಡಾ.ಶಿವಾಜಿ ಗೋಟೂರೆ. ಈರಣ್ಣಾ ಹೂಗಾರ, ಆಂತರಿಕ ಲೆಕ್ಕ ಪರಿಶೋಧಕ ಮಹಾವೀರ ಚೌಗಲಾ ಮತ್ತಿತರರು ಉಪಸ್ಥಿತರಿದ್ದರು.