ಹಿಂದುತ್ವಕ್ಕೆ ಧಕ್ಕೆ ಬಂದರೆ ನಾನು ಸಹಿಸುವುದಿಲ್ಲ: ಈಶ್ವರಪ್ಪ ಗುಡುಗು

| Published : May 02 2024, 12:20 AM IST

ಸಾರಾಂಶ

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರು ವಿಧಾನಸಭಾ ಕ್ಷೇತ್ರದ ಕಿರಿ ಮಂಜೇಶ್ವರದಲ್ಲಿ ನಡೆದ ವಿಜಯ ಸಂಕಲ್ಪ ಬೃಹತ್ ಸಮಾವೇಶವನ್ನು ಸ್ವತಂತ್ರ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪ ಉದ್ಘಾಟಿಸಿದರು. ಸಮಾವೇಶದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳು ಭಾಗವಹಿಸಿದ್ದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ / ತೀರ್ಥಹಳ್ಳಿ/ ಶಿರಾಳಕೊಪ್ಪ

ಹಿಂದುತ್ವಕ್ಕೆ ಧಕ್ಕೆ ಬಂದರೆ ನಾನು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ ಎಂದು ಸ್ವತಂತ್ರ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪ ಗುಡುಗಿದ್ದಾರೆ.

ಬೈಂದೂರು ವಿಧಾನಸಭಾ ಕ್ಷೇತ್ರದ ಕಿರಿ ಮಂಜೇಶ್ವರದಲ್ಲಿ ನಡೆದ ವಿಜಯ ಸಂಕಲ್ಪ ಬೃಹತ್ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇಂತಹ ದಬ್ಬಾಳಿಕೆ, ದೌರ್ಜನ್ಯವನ್ನು ನಾನು ಹಿಂದೆಯೂ ಸಹಿಸಿರಲಿಲ್ಲ, ಈಗಲೂ ಸಹಿಸುವುದಿಲ್ಲ. ರಾಜ್ಯದಲ್ಲಿ ಹಿಂದುತ್ವದ ಉಳಿಸಲು ಸಾಧ್ಯವಾಗುವುದು ಈಶ್ವರಪ್ಪರವರಿಂದ ಮಾತ್ರ ಎಂದು ಪ್ರತಿಯೊಬ್ಬರಿಗೂ ಗೊತ್ತಾಗಿದೆ. ಹೀಗಾಗಿ ಹಿಂದುತ್ವದ ಪರ ಇರುವ ಎಲ್ಲ ಮತದಾರರು, ಕಾರ್ಯಕರ್ತರು ರಾಷ್ಟ್ರ ಭಕ್ತ ಬಳಗ ಅಭ್ಯರ್ಥಿಯಾದ ನನ್ನನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ ಎಂದರು.

ನನ್ನ ಗೆಲುವು ನಿಶ್ಚಿತ: ಎರಡೂ ಪಕ್ಷಗಳ ನಾಯಕರ ವರ್ತನೆಯಿಂದ ಮತದಾರರು ಬೇಸತ್ತಿದ್ದಾರೆ. ಹೀಗಾಗಿ ಬದಲಿ ಆಯ್ಕೆಯಾಗಿ ನನ್ನ ಕಡೆಗೆ ತಿರುಗಿದ್ದಾರೆ. ನನ್ನನ್ನು ಗೆಲ್ಲಿಸಲು ನಿರ್ಧರಿಸಿದ್ದಾರೆ. ನನ್ನ ಗೆಲುವು ನಿಶ್ಚಿತ ಎಂದು ಹೇಳಿದ ಅವರು ಬೇಸತ್ತಿರುವ ಮತದಾರರು ಹೊಸ ಆಯ್ಕೆಯನ್ನು ಬಯಸಿದ್ದಾರೆ ಎಂದು ಹೇಳಿದರು.

ಮೀನುಗಾರರ ಋಣ ತೀರಿಸುತ್ತೇನೆ: ಇಲ್ಲಿಯವರೆಗೂ ಇದ್ದ ಸಂಸದರು ಇಲ್ಲಿನ ಮೀನುಗಾರರ ಸಮಸ್ಯೆ ಬಗೆ ಹರಿಸುವಲ್ಲಿ ವಿಫಲರಾಗಿದ್ದಾರೆ. ಆದ್ದರಿಂದ ಮೀನುಗಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ನನಗೆ ಬೆಂಬಲ ನೀಡುತ್ತಿದ್ದಾರೆ. ಚುನಾವಣೆಯಲ್ಲಿ ಗೆದ್ದ ನಂತರ ಮೀನುಗಾರರ ಸಮಸ್ಯೆ ಬಗೆ ಹರಿಸಿ ಅವರ ಋಣ ತೀರಿಸುತ್ತೇನೆ ಎಂದು ಭರವಸೆ ನೀಡಿದರು.

ಕೇಂದ್ರ ಸರ್ಕಾರ ಪ್ರವಾಸೋದ್ಯಮಕ್ಕೆ ಸಾಕಷ್ಟು ಹಣ ಬಿಡುಗಡೆ ಮಾಡಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮಾಡಲು ಹೆಚ್ಚಿನ ಒತ್ತುಕೊಡುವಲ್ಲಿ ಗಮನ ಹರಿಸಿದ್ದರೂ ಇಲ್ಲಿನ ಸಂಸದರು ಇದರ ಬಗ್ಗೆ ಗಮನ ಹರಿಸಿಲ್ಲ ಎಂದು ದೂರಿದರು.

ನಾನು ಸಂಸದನಾಗಿ ಆಯ್ಕೆಯಾದ ಬಳಿಕ ಈ ಕ್ಷೇತ್ರದ ಅಭಿವೃದ್ಧಿಗೆ ಕಂಕಣ ತೊಡಲಿದ್ದೇನೆ. ಯಾವ್ಯಾವ ಕೆಲಸ ಆಗಬೇಕು ಎಂದು ಒಂದು ಸಮೀಕ್ಷೆ ನಡೆಸಿ, ಇದನ್ನು ಕಾರ್ಯ ಗತ ಮಾಡಲು ಕೇಂದ್ರದ ಸಂಬಂಧಪಟ್ಟ ಸಚಿವರು ಹಾಗೂ ಅಧಿಕಾರಿಗಳನ್ನು ಇಲ್ಲಿಗೆ ಕರೆದುಕೊಂಡು ಬಂದು ಪ್ರವಾಸೋದ್ಯಮ ಅಭಿವೃದ್ಧಿಗೆ ಒತ್ತು ನೀಡುವ ಕೆಲಸ ಮಾಡಲಿ ದ್ದೇನೆ ಎಂದು ಹೇಳಿದರು.

2238 ಬೂತ್ ಕಮಿಟಿ ಪೂರ್ಣ: ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಲ್ಲ 2238 ಬೂತ್ ಕಮಿಟಿ ರಚನೆಯನ್ನು ಪೂರ್ಣಗೊಳಿಸಿದ್ದೇವೆ. ಯಾವ ರಾಷ್ಟ್ರೀಯ ಪಕ್ಷಗಳಿಂದಲೂ ಇಷ್ಟು ಬೂತ್ ಕಮಿಟಿಗಳು ಆಗಿಲ್ಲ. ರಾಷ್ಟ್ರಭಕ್ತರ ಬಳಗದ ವತಿಯಿಂದ ಈ ಕಾರ್ಯ ಆಗಿದ್ದರಿಂದ ಆ ಬಳಗಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ನನ್ನ ಗುರುತು ಕಬ್ಬಿನ ಜೊತೆ ಇರುವ ರೈತ. ನನ್ನ ಕ್ರಮ ಸಂಖ್ಯೆ 8 ಎಂದು ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳಿ ಜನ ಸಾಮಾನ್ಯರಿಗೆ ಹೇಳುತ್ತಿದ್ದಾರೆ. ಜನರಿಗೆ ನನ್ನ ಚಿಹ್ನೆ ಪರಿಚಯ ಆಗಿದೆ ಎಂದು ಹೇಳಿದರು.

ಬಿಜೆಪಿ- ಕಾಂಗ್ರೆಸ್‌ ಹೊಂದಾಣಿಕೆ: ರಾಜ್ಯ ಬಿಜೆಪಿ ನಾಯಕರು ಕಾಂಗ್ರೆಸ್ ಜೊತೆ ಹೊಂದಾಣಿಕೆ ಮಾಡಿಕೊಂಡು ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್‌ ಅಭ್ಯರ್ಥಿಯನ್ನಾಗಿ ಗೀತಾ ಅವರನ್ನು ಹಾಕಿಸಿ, ಕಣಕ್ಕೆ ಬಂದಿದ್ದಾರೆ. ಇದರಿಂದ ಅಸಮಾಧಾನಪಟ್ಟ ಕಾಂಗ್ರೆಸ್ಸಿಗರು ನನಗೆ ಕರೆ ಮಾಡಿ ಗೀತಾ ಅವರಿಗೆ ಮತ ಹಾಕಲು ಮನಸ್ಸಿಲ್ಲ. ಹೀಗಾಗಿ ಈ ಬಾರಿ ಕೆ.ಎಸ್.ಈಶ್ವರಪ್ಪಗೆ ಮತ ಹಾಕುವುದಾಗಿ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ ಎಂದರಲ್ಲದೆ, ಈ ಸಂಖ್ಯೆಯಲ್ಲಿ ಜನರು ಸೇರಿರುವುದು ಸಂತೋಷ ತಂದಿದೆ ಎಂದರು.

ಬಾಯಲ್ಲಿ ಹುಳ ಬೀಳುತ್ತೆ!: ಪೆನ್ ಡ್ರೈವ್ ಪ್ರಕರಣ ಒಂದು ದರಿದ್ರ ವಿಷಯ. ಅಂತಹ ವಿಷಯದ ಬಗ್ಗೆ ಮಾತನಾಡಿದ್ರೆ ನಮ್ಮ ಬಾಯಲ್ಲಿ ಹುಳ ಬೀಳುತ್ತೆ. ಸ್ತ್ರೀಯರನ್ನು ನಾವು ಸೀತೆ, ಸಾವಿತ್ರಿಯರಂತೆ ಪೂಜ್ಯ ಭಾವನೆಯಿಂದ ನೋಡುವಾಗ ಅವರ ಮೇಲಿನ ಈ ರೀತಿಯ ದೌರ್ಜನ್ಯ ಅಕ್ಷಮ್ಯ ಅಪರಾಧ ಎಂದರಲ್ಲದೆ, ಇವರಿಗೆ ಸರಿಯಾದ ಶಿಕ್ಷೆ ಆಗಬೇಕು, ಆಗುತ್ತದೆ ಎಂದು ವಾಗ್ದಾಳಿ ನಡೆಸಿದರು.

ಸಮಾವೇಶದಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ‌ ಮಾಜಿ ಸದಸ್ಯರಾದ ಆರತಿ ಅ.ಮ ಪ್ರಕಾಶ್, ಸೀತಾಲಕ್ಷ್ಮಿ, ಮಾಜಿ ಮೇಯರ್ ಸುವರ್ಣ ಶಂಕರ್, ದಿನಕರ್ ಗಂಗೊಳ್ಳಿ ಕಾರ್ಮಿಕ ಮುಖಂಡರು, ಜಿ.ಪಂ ಪ್ರಮುಖ ಸದಸ್ಯರು ಉಪಸ್ಥಿತರಿದ್ದರು.

ಜನ ಸಾಮಾನ್ಯರೇ ನನ್ನ ಸ್ಟಾರ್ ಪ್ರಚಾರಕರು: .ಈಶ್ವರಪ್ಪ

ತೀರ್ಥಹಳ್ಳಿ: ಕಾಂಗ್ರೆಸ್‌ ಅಭ್ಯರ್ಥಿ ಪರ ಪ್ರಚಾರ ಮಾಡಲು ಸಿನಿಮಾ ನಟರು ಬರುತ್ತಾರೆ, ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಲು ರಾಷ್ಟ್ರ ನಾಯಕರು ಬರುತ್ತಾರೆ. ಆದರೆ, ನನ್ನ ಪರ ಪ್ರಚಾರ ಮಾಡಲು ಶ್ರೀಸಾಮಾನ್ಯರು ಬರುತ್ತಾರೆ. ಅವರೇ ನನ್ನ ಸ್ಟಾರ್ ಪ್ರಚಾರಕರು ಎಂದು ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌ ಹೇಳಿದರು.ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯ ವಿವಿಧೆಡೆ ಮತಯಾಚನೆ ನಡೆಸಿ, ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಈ ಬಾರಿ ಚುನಾವಣೆಯಲ್ಲಿ ಕೆ.ಎಸ್. ಈಶ್ವರಪ್ಪ ರವರನ್ನು ಗೆಲ್ಲಿಸಬೇಕು. ಅಪ್ಪ ಮಕ್ಕಳ ಕೈಯಿಂದ ಪಕ್ಷವನ್ನು ಮುಕ್ತ ಮಾಡಬೇಕೆಂದು ಜಿಲ್ಲೆಯ ಜನರೇ ತೀರ್ಮಾನ ಮಾಡಿದ್ದಾರೆ ಎಂದರು.ಈಶ್ವರಪ್ಪ ತೆಗೆದುಕೊಂಡ ನಿರ್ಣಯ ಸರಿಯಾಗಿದೆ ಜನರು ನನಗೆ ಬೆಂಬಲವಾಗಿ ನಿಂತಿದ್ದಾರೆ. ಚುನಾವಣೆ ನಂತರ ರಾಘವೇಂದ್ರ ಮನೆಗೆ ಹೋಗುತ್ತಾರೆ. ಈಶ್ವರಪ್ಪ ಗೆದ್ದು ಮೋದಿ ಬಳಿ ಹೋಗುತ್ತಾರೆ ಎಂದು ಸಾಮಾನ್ಯ ಜನರ ಅಭಿಪ್ರಾಯವಾಗಿದೆ ಎಂದು ವಾಗ್ದಾಳಿ ನಡೆಸಿದರು.

ಶಿವಮೊಗ್ಗದ ಜನ ನನ್ನ ಜಾತಿ ನೋಡದೆ ಹಿಂದುತ್ವವಾದಿ ಎಂದು ಐದು ಬಾರಿ ಗೆಲ್ಲಿಸಿದ್ದಾರೆ. ನಾನು ಯಾವುದೇ ಜಾತಿಯ ಬಳಿ ಮತ ಕೇಳುತ್ತಿಲ್ಲ. ಎಲ್ಲಾ ಜಾತಿಗಳು ಸೇರಿದ ಹಿಂದೂ ಸಮಾಜದ ಮತ ಕೇಳುತ್ತಿದ್ದೇನೆ. ಹಿಂದುತ್ವ ಉಳಿಸಲು ಮತ ಕೇಳುತ್ತಿದ್ದೇನೆ. ಮೋದಿಯವರ ಅಪೇಕ್ಷೆಗೆ ತಕ್ಕಂತೆ, ರಾಜ್ಯ ಬಿಜೆಪಿಯಲ್ಲಿ ಕುಟುಂಬ ರಾಜಕಾರಣ ಮಟ್ಟ ಹಾಕಿ ಅಪ್ಪ ಮಕ್ಕಳ ಹಿಡಿತದಲ್ಲಿರುವ ಬಿಜೆಪಿ ಪಕ್ಷವನ್ನು ಮುಕ್ತ ಮಾಡುತ್ತೇನೆ. ಇದರಲ್ಲಿ ಯಾವುದೇ ಅನುಮಾನ ಬೇಡ ಎಂದರು.ತೀರ್ಥಹಳ್ಳಿ ವಿಧಾನ ಸಭಾ ಕ್ಷೇತ್ರದ ಬೆಜ್ಜವಳ್ಳಿ, ಆಗುಂಬೆ, ಮೇಗರವಳ್ಳಿ, ಕೈಮರ, ದೇವಂಗಿ, ಮೇಲಿನ ಕುರುವಳ್ಳಿ, ಕೋಣಂದೂರಿನಲ್ಲಿ ಸಾರ್ವಜನಿಕ ಸಭೆ ನಡೆಸಿ ಮತಯಾಚಿಸಿ ದರು. ಇದೇ ವೇಳೆ ಕೋಣಂದೂರಿನಲ್ಲಿ ಕೆ.ಎಸ್.ಈಶ್ವರಪ್ಪ ಅಭಿಮಾನಿ ಕಿಶೋರ್ ಪ್ರಧಾನಿ ಮೋದಿ ಹಾಗೂ ಕೆ.ಎಸ್.ಈಶ್ವರಪ್ಪ ಇರುವ ಫೋಟೋ ನೀಡಿ ಶುಭ ಹಾರೈಸಿದರು.

ಈ ಸಂಧರ್ಭದಲ್ಲಿ ಮಹೇಶ್, ಶಿವು, ಸಾತ್ವಿಕ್ ಪೂಜಾರಿ, ಮಂಜುನಾಥ್ ಜೋಗಿ, ಗಣೇಶ್ ಪ್ರಸಾದ್, ಅವಿನಾಶ್, ರಾಜು, ನವುಶಾ, ಶಶಿ, ಉದಯ್, ಶಶಿ ಕುಂದರ್, ಅರುಣ್, ಕಿರಣ್, ಕವನ, ಪ್ರವೀಣ್, ನೀಲಕಂಠ, ಅಭಿಷೇಕ್ ಉಪಸ್ಥಿತರಿದ್ದರು.ಜಾನಪದ ಹಾಡು ಹಾಡಿ ಕಲಾವಿದರಿಂದ ಈಶ್ವರಪ್ಪ ಪರ ಮತಯಾಚನೆ

ರಿಪ್ಪನ್‍ಪೇಟೆ: ಮೇ 7ರಂದು ನಡೆಯುವ ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರಿಗೆ ಮತ ಹಾಕುವಂತೆ ಜಾನಪದ ಹಾಡಿನ ಮೂಲಕ ಕಲಾವಿದರ ತಂಡ ಮತ ಯಾಚಿಸುವ ಮೂಲಕ ಮತದಾರರ ಮನವೊಲಿಸುತ್ತಿ ರುವುದು ವಿಶೇಷವಾಗಿ ಕಂಡುಬಂತು.ಇಲ್ಲಿನ ವಿನಾಯಕ ವೃತ್ತದಲ್ಲಿ ಶಿವಮೊಗ್ಗದ ಕಲಾವಿದರ ತಂಡ ಇಂದು ಬಿಸಲಿನಲ್ಲಿಯೇ ಪಿಕ್‍ಆಪ್ ಮೇಲೆ ನಿಂತು ಪಕ್ಷೇತರ ಆಭ್ಯರ್ಥಿ ಕೆ.ಎಸ್.ಈಶ್ವರಪ್ಪನವರ ಪರವಾದ ಜಾನಪದ ಹಾಡು ಹಾಡುವುದರೊಂದಿಗೆ ಕ್ರಮಸಂಖ್ಯೆ 8ಕ್ಕೆ ಮತಹಾಕುವಂತಹ ಹಾಡು ಹಾಡಿ ಮತದಾರರನ್ನು ಸೆಳೆಯುತ್ತಿದ್ದು ವಿಶೇಷವಾಗಿತ್ತು.

ಸಭೆಗೆ ಅಡ್ಡಿ: ನಡು ರಸ್ತೆಯಲ್ಲೇ ವಾಹನದಲ್ಲಿ ಈಶ್ವರಪ್ಪ ಭಾಷಣ

ಶಿರಾಳಕೊಪ್ಪ: ಅನುಮತಿ ಇದ್ದರೂ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರ ಸಭೆ ನಡೆಸಲು ಅಡ್ಡಿಪಡಿಸಿ ಏಕಾಏಕಿ ವೇದಿಕೆ ತೆರವು ಮಾಡಿದ ಹಿನ್ನೆಲೆ ಈಶ್ವರಪ್ಪ ಅವರು ನಡುರಸ್ತೆಯಲ್ಲೇ ವಾಹನದಲ್ಲಿ ನಿಲ್ಲಿಸಿ ಭಾಷಣ ಮಾಡಿದ ಘಟನೆ ಶಿರಾಳಕೊಪ್ಪದಲ್ಲಿ ಜರುಗಿತು.ಬುಧವಾರ ಸೊರಬ ರಸ್ತೆಯ ಮೈಲಾರ ಲಿಂಗೇಶ್ವರ ದೇವಸ್ಥಾನದ ಬಳಿ ಬುಧವಾರ ಸಂಜೆ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಪರ ಸಾರ್ವಜನಿಕ ಸಭೆ ಆಯೋಜಿಸಲಾಗಿತ್ತು. ಸಭೆಗೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು.ಈ ಓ ವೇಳೆ ಒತ್ತಾಯಪೂರ್ವಕವಾಗಿ ಕೆಲವರು ವೇದಿಕೆ ಮತ್ತು ಮೈಕ್‌ಗಳನ್ನು ತೆರವು ಮಾಡಿಸಿದ್ದಾರೆ.ಈ‍ಶ್ವರಪ್ಪ ಅವರು ಸಭೆ ನಿಗದಿಯಾಗಿದ್ದ ಸ್ಥಳಕ್ಕೆ ಬಂದಾಗ ವಿಷಯ ತಿಳಿದು ಕೆಂಡಾಮಂಡಲವಾದರು. ವೇದಿಕೆ ಇರದ ಹಿನ್ನೆಲೆಯಲ್ಲಿ ನಡು ರಸ್ತೆಯಲ್ಲೇ ತೆರದ ವಾಹನದಲ್ಲಿ ನಿಂತು ಮಾತನಾಡಿದ ಅವರು, ಇದು ಕಾಂಗ್ರೆಸ್ ನವರು ಮಾಡಿದ್ದಾರೋ, ಬಿಜೆಪಿಯವರು ಮಾಡಿದ್ದಾರೋ ನನಗೆ ಗೊತ್ತಿಲ್ಲ. ನೀವು ಎಷ್ಟೇ ಅಡ್ಡಿಪಡಿಸಿದರೂ ಈ ಚುನಾವಣೆ ನಾನು ಗೆದ್ದೇ ಗೆಲ್ಲುತ್ತೇನೆ ಎಂದು ಕಿಡಿಕಾರಿದರು. ಕಾರ್ಯಕರ್ತರು ಚೇರುಗಳನ್ನು ಎಳೆದು ತಂದು ರಸ್ತೆ, ಪಕ್ಕದ ಖಾಲಿ ಜಾಗದಲ್ಲಿ ಕುಳಿತು ಭಾಷಣ ಕೇಳಿದರು.