ಕಾರ್ಖಾನೆ ಉಳಿಸಿಕೊಂಡರೇ ಕೊಪ್ಪಳ ಸ್ಥಳಾಂತರಿಸಿ: ಅಲ್ಲಮಪ್ರಭು ಬೆಟ್ಟದೂರು

| Published : Mar 06 2025, 12:35 AM IST

ಸಾರಾಂಶ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೌಖಿಕ ಆದೇಶ ಮಾಡಿದರು ಅದರಿಂದ ನಾವು ಮೈಮರೆಯುವುದು ಬೇಡ. ಹೋರಾಟ ಮುಂದುವರಿಸಬೇಕಾಗುತ್ತದೆ. ಜನಪ್ರತಿನಿಧಿಗಳು ಸಹ ಇದರಲ್ಲಿ ಕೇವಲ ಸರ್ಕಾರಕ್ಕೆ ಮನವಿ ಕೊಟ್ಟರೇ ಸಾಲದು, ತಮ್ಮ ರಾಜೀನಾಮೆ ನೀಡಿ, ಹೋರಾಟಕ್ಕೆ ಬರಬೇಕು.

ಕೊಪ್ಪಳ:

ರಾಜ್ಯ ಸರ್ಕಾರ ಎಂಎಸ್‌ಪಿಎಲ್ ಕಾರ್ಖಾನೆ ಉಳಿಸಿಕೊಂಡರೇ ಕೊಪ್ಪಳ ಸ್ಥಳಾಂತರಿಸಬೇಕಾಗುತ್ತದೆ. ಬೃಹತ್ ಕಾರ್ಖಾನೆ ಸ್ಥಾಪನೆಯಾದರೆ ಕೊಪ್ಪಳದಲ್ಲಿ ಇರಲು ಸಾಧ್ಯವೇ ಇಲ್ಲ ಎಂದು ಕೊಪ್ಪಳ ಬಚಾವೋ ಆಂದೋಲನ ಸಮಿತಿ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೌಖಿಕ ಆದೇಶ ಮಾಡಿದರು ಅದರಿಂದ ನಾವು ಮೈಮರೆಯುವುದು ಬೇಡ. ಹೋರಾಟ ಮುಂದುವರಿಸಬೇಕಾಗುತ್ತದೆ. ಜನಪ್ರತಿನಿಧಿಗಳು ಸಹ ಇದರಲ್ಲಿ ಕೇವಲ ಸರ್ಕಾರಕ್ಕೆ ಮನವಿ ಕೊಟ್ಟರೇ ಸಾಲದು, ತಮ್ಮ ರಾಜೀನಾಮೆ ನೀಡಿ, ಹೋರಾಟಕ್ಕೆ ಬರಬೇಕು ಎಂದರು.

ಎಂಎಸ್‌ಪಿಎಲ್ ಕಾರ್ಖಾನೆ ಸ್ಥಾಪಿಸುವುದೇ ಆದರೆ ನಮ್ಮ ರಾಜೀನಾಮೆ ತೆಗೆದುಕೊಳ್ಳಿ ಎಂದು ಜನಪ್ರತಿನಿಧಿಗಳು ಹೇಳಿದರೆ ಸರ್ಕಾರ ಎಚ್ಚೆತ್ತುಕೊಳ್ಳುತ್ತದೆ. ಸರ್ವಪಕ್ಷದ ನಾಯಕರ ಸಮ್ಮುಖದಲ್ಲಿ ಮುಖ್ಯಮಂತ್ರಿ ಜಿಲ್ಲಾಧಿಕಾರಿಗೆ ಮೌಖಿಕವಾಗಿ ಸೂಚನೆ ನೀಡಿರುವುದು ಒಳ್ಳೆಯ ಬೆಳವಣಿಗೆ. ಶ್ರೀಗವಿಸಿದ್ಧೇಶ್ವರ ಶ್ರೀಗಳು ಹೇಳಿದಂತೆ ಜನಪ್ರತಿನಿಧಿಗಳು ಮುಖ್ಯಮಂತ್ರಿ ಭೇಟಿಯಾಗಿ, ಮೌಖಿಕ ಆದೇಶ ಮಾಡಿಸಿದ್ದಾರೆ. ಆದರೆ, ಅದನ್ನೇ ಲಿಖಿತ ಆದೇಶ ಮಾಡಿಸಿಕೊಂಡು ಬರಬೇಕು ಎಂದು ಆಗ್ರಹಿಸಿದರು.

ರಾಜೀನಾಮೆ ನೀಡಿ:

ಜನಪ್ರತಿನಿಧಿಗಳಿಗೆ ಜನರ ಬಗ್ಗೆ ಕಾಳಜಿ ಇದ್ದರೆ ಕೂಡಲೇ ರಾಜೀನಾಮೆ ನೀಡಿ ಹೋರಾಟಕ್ಕೆ ಬರಬೇಕು. ಗದಗ ಜಿಲ್ಲೆಯಲ್ಲಿ ಪೊಸ್ಕೋ ಕಂಪನಿ ಹಾಕಲು ಮುಂದಾದಾಗ ಅಲ್ಲಿ ತೋಂಟದಾರ್ಯ ಶ್ರೀಸಿದ್ದಲಿಂಗ ಸ್ವಾಮೀಜಿ ಹೋರಾಟ ಮಾಡಿದ ಪರಿಣಾಮ ಸಚಿವ ಎಚ್.ಕೆ. ಪಾಟೀಲ್ ಸರ್ಕಾರದಿಂದ ರದ್ದು ಮಾಡಿದ ಆದೇಶ ತಂದು ಶ್ರೀಗಳಿಗೆ ನೀಡಿದ ಬಳಿಕವೇ ಹೋರಾಟ ಕೈಬಿಡಲಾಯಿತು. ಗವಿಸಿದ್ಧೇಶ್ವರ ಶ್ರೀಗಳು ಬಂದಿರುವುದು ಸ್ವಾಗತಾರ್ಹ. ಆದರೆ, ತೋಂಟದಾರ್ಯ ಶ್ರೀಗಳಂತೆ ಗಟ್ಟಿಯಾಗಿ ನಿಲ್ಲಬೇಕು, ಕಾರ್ಖಾನೆ ತೊಲಗುವವರೆಗೂ ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದರು.

ಸ್ಪಂದಿಸದ ಡಿಸಿ:

ಕಾರ್ಖಾನೆ ವಿರುದ್ಧದ ಹೋರಾಟದ ಕುರಿತು ಸೇರಿದಂತೆ ಜಿಲ್ಲೆಯ ಜನರ ಹಿತಕ್ಕಾಗಿ ಹೋರಾಟಗಾರರು ಮನವಿ ನೀಡಲು ಹೋದಾಗ ಜಿಲ್ಲಾಧಿಕಾರಿ ಸ್ಪಂದಿಸುವುದೇ ಇಲ್ಲ. ಅವರನ್ನು ಕೂಡಲೇ ವರ್ಗಾವಣೆ ಮಾಡಬೇಕು. ಜಿಲ್ಲೆಯ ಹಿರಿಯರು ಯಾರೆಂದು ಅವರಿಗೆ ಗೊತ್ತಿಲ್ಲ, ಸಮಸ್ಯೆಗೂ ಸ್ಪಂದಿಸುತ್ತಿಲ್ಲ ಎಂದು ದೂರಿದರು.

ಕಾರ್ಖಾನೆ ಸ್ಥಾಪನೆ ವಿರುದ್ಧ ಹೋರಾಟದೊಂದಿಗೆ ಅಣು ಸ್ಥಾವರ ಸ್ಥಾಪನೆ ಸಹ ವಿರೋಧಿಸಬೇಕು. ಈಗಿರುವ ಕಾರ್ಖಾನೆಗಳಿಂದ ಆಗಿರುವ ದುಷ್ಪರಿಣಾಮದ ಕುರಿತು ಭಾರತೀಯ ವೈದ್ಯಕೀಯ ಅಶೋಸಿಯೇಷನ್‌ ಮೂಲಕ ಅಧ್ಯಯನ ಮಾಡಿಸಬೇಕು. ಆಗಿರುವ ಹಾನಿಗೆ ಪರಿಹಾರ ನೀಡಬೇಕು. ಬಸಾಪುರ ಕೆರೆಯನ್ನು ಸಾರ್ವಜನಿಕರಿಗೆ ಮುಕ್ತವಾಗುವಂತೆ ನೋಡಿಕೊಳ್ಳಬೇಕು ಎಂದರು.

10ರಂದು ಮಾನವ ಸರಪಳಿ:

ಕೈಗಾರಿಕೆ ಸ್ಥಾಪನೆ ವಿರೋಧಿಸಿ ಕೊಪ್ಪಳ ನಗರದ ಅಶೋಕ ವೃತ್ತದಲ್ಲಿ ಮಾ. ೧೦ರಂದು ಮಾನವ ಸರಪಳಿ ಮಾಡುತ್ತೇವೆ. ಮಾ. ೨೨ರಂದು ತಾವರಗೇರಾದ ಬುದ್ಧ ವಿಹಾರದಲ್ಲಿ ಬಾಧಿತ ಹಳ್ಳಿಗಳ ಯುವಕರಿಗೆ ಪರಿಸರ ಜಾಗೃತಿ ಕುರಿತು ಶಿಬಿರ ಮಾಡಲಿದ್ದೇವೆ. ಈ ಮೂಲಕ ನಿರಂತರ ಹೋರಾಟ ಮಾಡುತ್ತೇವೆ ಎಂದರು.

ಸುದ್ದಿಗೋಷ್ಠಿಯಲ್ಲಿ ಸಮಿತಿಯ ಕೆ.ಬಿ. ಗೋನಾಳ, ಮಹಾಂತೇಶ ಕೊತಬಾಳ, ನಜೀರಸಾಬ್‌ ಮೂಲಿಮನಿ, ಜ್ಯೋತಿ ಗೊಂಡಬಾಳ ಇದ್ದರು.