ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ
ರೈತರು ಬೆಳೆದ ಕಬ್ಬಿನ ಬೆಳೆಗಳಿಗೆ ಸೂಕ್ತ ಬೆಂಬಲ ಬೆಲೆ ದೊರೆಯಬೇಕು ಹಾಗೂ ರೈತರ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿ ಹಳಿಂಗಳಿ ಭದ್ರಗಿರಿ ಬೆಟ್ಟದ ಜೈನಮುನಿ ಆಚಾರ್ಯ ಶ್ರೀ ೧೦೮ ಕುಲರತ್ನ ಭೂಷಣ ಮಹಾರಾಜರು ಆರಂಭಿಸಿರುವ ಉಪವಾಸ ಸತ್ಯಾಗ್ರಹ ನ.೩ಕ್ಕೆ ೧೪ನೇ ದಿನಕ್ಕೆ ಕಾಲಿಟ್ಟಿದೆ. ಉಪವಾಸ ಕೈ ಬಿಟ್ಟು ಆರೋಗ್ಯದತ್ತ ಗಮನ ನೀಡಿರಿ ಎಂದು ಇಲಕಲ್ಲ ಡಾ.ಮಹಾಂತ ಶ್ರೀಗಳು ಮನವಿ ಮಾಡಿದರು.ಮಂಗಳವಾರ ತಾಲೂಕಿನ ಹಳಿಂಗಳಿ ಭದ್ರಗಿರಿ ಬೆಟ್ಟದಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವ ಮುನಿಗಳನ್ನು ಭೇಟಿ ಮಾಡಿ ಅವರು ಮಾತನಾಡಿದರು. ೧೩ ದಿನಗಳಿಂದ ಸಂಪೂರ್ಣ ಉಪವಾಸ ಕೈಗೊಂಡಿದ್ದ ಮುನಿಗಳು, ವೈದ್ಯರು ಹಾಗೂ ಅಧಿಕಾರಿಗಳ ಸಲಹೆಯ ಮೇರೆಗೆ ಎರಡು ದಿನಗಳಿಂದ ಬೆಳಗಿನ ಜಾವ ಅಲ್ಪ ಪ್ರಮಾಣದಲ್ಲಿ ನೀರು ಹಾಗೂ ಎಳನೀರು ಮಾತ್ರ ಸ್ವೀಕರಿಸುತ್ತಿದ್ದಾರೆ. ಇಂದು ಬೆಳಗಿನ ಜಾವ ಅವರು ನೀರು ಸೇವಿಸುವ ಸಂದರ್ಭದಲ್ಲಿ ನೀರಲ್ಲಿ ಸಣ್ಣ ಕೂದಲು ಬಂದಿದ್ದರಿಂದ ನೀರನ್ನು ಸಹ ತ್ಯಾಗ ಮಾಡಿದರು ಎಂದು ಪ್ರತ್ಯಕ್ಷದರ್ಶಿ ಶ್ರಾವಕಿಯರು ತಿಳಿಸಿದರು.ಮುನಿಗಳ ಆರೋಗ್ಯದ ಹಿತದೃಷ್ಟಿಯಿಂದ ತಾಲೂಕು ಆಡಳಿತ ಮಂಡಳಿ ಹಾಗೂ ಸಂಬಂಧಪಟ್ಟ ಆರೋಗ್ಯ ಇಲಾಖೆ ಅಧಿಕಾರಿಗಳು ತಕ್ಷಣ ಸ್ಪಂದಿಸಬೇಕು ಎಂದು ಭಕ್ತರು ಒತ್ತಾಯಿಸಿದ್ದಾರೆ. ಜೈನ ಸಮಾಜದ ಶ್ರಾವಕ-ಶ್ರಾವಕಿಯರು ಹಾಗೂ ಭಕ್ತರು ಉಪಸ್ಥಿತರಿದ್ದರು.