ಸಾರಾಂಶ
ಕನ್ನಡಪ್ರಭ ವಾರ್ತೆ ಬಂಟ್ವಾಳ
ಚಿನ್ನಾಭರಣ ವ್ಯಾಪಾರಸ್ಥರು ಹಾಗೂ ಬ್ಯಾಂಕ್ ಆಡಳಿತ ಮಂಡಳಿಗಳು ಸುರಕ್ಷತೆಯ ದೃಷ್ಟಿಯಿಂದ ಎಲ್ಲಾ ಬಗೆಯ ವೈಜ್ಞಾನಿಕ ತಾಂತ್ರಿಕ ವ್ಯವಸ್ಥೆಗಳನ್ನು ಅಳವಡಿಸಿಕೊಳ್ಳಬೇಕು ಎಂದು ಅಡಿಷನಲ್ ಎಸ್ಪಿ ಅನಿಲ್ ಕುಮಾರ್ ಎಸ್. ಭೂಮ ರೆಡ್ಡಿ ಹೇಳಿದ್ದಾರೆ. ಬಿ.ಸಿ.ರೋಡ್ ಲಯನ್ಸ್ ಸೇವಾ ಮಂದಿರದಲ್ಲಿ ಶುಕ್ರವಾರ ನಡೆದ ಬ್ಯಾಂಕ್ ಮ್ಯಾನೇಜರ್‌ಗಳು ಹಾಗೂ ಜ್ಯುವೆಲ್ಲರಿ ಶಾಪ್ ಮಾಲಕರ ಸಭೆಯಲ್ಲಿ ಅವರು ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ದ.ಕ. ಜಿಲ್ಲೆಯಲ್ಲಿ ನಡೆಯುತ್ತಿರುವ ಕಳ್ಳತನ ಪ್ರಕರಣದ ಬಗ್ಗೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವ ದೃಷ್ಟಿಯಿಂದ ಅವರು ಮಾಹಿತಿ ನೀಡಿದರು.ಬ್ಯಾಂಕ್ ಹಾಗೂ ಜ್ಯುವೆಲ್ಲರಿ ಶಾಪ್ ಗಳಲ್ಲಿ ಗುಣಮಟ್ಟದ ಸಿಸಿ ಕ್ಯಾಮರಾಗಳನ್ನು ಅಳವಡಿಸಿ. ಮತ್ತು ಯಾವ ರೀತಿಯಲ್ಲಿ ಹಾಕಬೇಕು ಎಂಬುದರ ಬಗ್ಗೆ ಅಗತ್ಯವಿದ್ದಲ್ಲಿ ಪೋಲೀಸರಿಂದ ಮಾಹಿತಿ ಪಡೆದುಕೊಳ್ಳುವಂತೆ ತಿಳಿಸಿದರು.ಅಂಗಡಿ ಮತ್ತು ಬ್ಯಾಂಕ್ ಹಾಗೂ ಎ.ಟಿ.ಎಂ. ಗಳಲ್ಲಿ ಯಾವುದೇ ಘಟನೆಗಳು ನಡೆದ ಸಂದರ್ಭದಲ್ಲಿ ಎಚ್ಚೆತ್ತುಕೊಳ್ಳುವಂತಹ ಸೂಚನೆ ನೀಡುವ ಅಲರಾಮ್ ವ್ಯವಸ್ಥೆ ಕಲ್ಪಿಸಿ ಮತ್ತು ಕಾನೂನಡಿ ನಿಯಮಗಳನ್ನು ಪಾಲಿಸಿಕೊಂಡು ಅರ್ಹ ವ್ಯಕ್ತಿಗಳನ್ನು ಸೆಕ್ಯುರಿಟಿ ಗಾರ್ಡ್ ಗಳನ್ನು ನೇಮಿಸಿ ಎಂದು ಅವರು ತಿಳಿಸಿದರು.ಬಂಟ್ವಾಳ ಡಿ.ವೈ.ಎಸ್.ಪಿ.ವಿಜಯಪ್ರಸಾದ್ ಮಾತನಾಡಿ, ಗ್ರಾಹಕರ ಸೋಗಿನಲ್ಲಿ ಬಂದು ಅಂಗಡಿಗಳಲ್ಲಿ ಕಳವು ಮಾಡುವುದು ಕೂಡ ಕಂಡುಬಂದಿದ್ದು, ಅಂಗಡಿಗಳಿಗೆ ಬರುವ ಗ್ರಾಹಕರು ಮತ್ತು ಅಂಗಡಿ ಕೆಲಸಗಾರರ ಬಗ್ಗೆ ಕೂಡ ಗಮನವಿರಲಿ, ಅಂಗಡಿಯ ಸುತ್ತ ಮುತ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು. ಅಂಗಡಿ ಕೋಣೆಗಳ ಸೂಕ್ಷ್ಮವಾದ ಜಾಗಗಳ ಬಗ್ಗೆ ಮಾಲಕರಿಗೆ ಅರಿವಿರಬೇಕು ಎಂದರು.
ಬಂಟ್ವಾಳ ನಗರ ಪೋಲೀಸ್ ಠಾಣೆಯ ಪೋಲೀಸ್ ಇನ್‌ಸ್ಪೆಕ್ಟರ್ ಅನಂತ ಪದ್ಮನಾಭ, ಗ್ರಾಮಾಂತರ ಪೋಲೀಸ್ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಶಿವಕುಮಾರ್ ಹಾಗೂ ಬಂಟ್ವಾಳ ವೃತ್ತದ ಪೋಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಹಾಗೂ ತಾಲೂಕಿನ ಬ್ಯಾಂಕ್ ನ ಮ್ಯಾನೇಜರ್ ಗಳು, ಜ್ಯುವೆಲ್ಲರಿ ಶಾಪ್ ನ ಮಾಲಕರು ಇದ್ದರು.ವಿಟ್ಲ ಎಸ್.ಐ.ರಾಮಕೃಷ್ಣ ಅವರು ಸ್ವಾಗತಿಸಿದರು. ಸಿಬ್ಬಂದಿ ವಿವೇಕ್ ರೈ ನಿರೂಪಿಸಿದರು.