ಹವಾಮಾನ ಆಧಾರಿತ ಬೆಳೆ ವಿಮೆಯು ರೈತರಿಗೆ ಸಮರ್ಪಕವಾಗಿ ಲಭಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಕಳೆದ ಬಾರಿ ವಿಮೆ ಪಡೆಯುವಲ್ಲಿ ರೈತರಿಗೆ ಆದ ಅನ್ಯಾಯವನ್ನೂ ಸರಿಪಡಿಸಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಸೂಚಿಸಿದರು.

ಶಿವಮೊಗ್ಗ: ಹವಾಮಾನ ಆಧಾರಿತ ಬೆಳೆ ವಿಮೆಯು ರೈತರಿಗೆ ಸಮರ್ಪಕವಾಗಿ ಲಭಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಕಳೆದ ಬಾರಿ ವಿಮೆ ಪಡೆಯುವಲ್ಲಿ ರೈತರಿಗೆ ಆದ ಅನ್ಯಾಯವನ್ನೂ ಸರಿಪಡಿಸಬೇಕೆಂದು ಸಂಸದ ಬಿ.ವೈ.ರಾಘವೇಂದ್ರ ಸೂಚಿಸಿದರು.ಇಲ್ಲಿನ ಜಿಪಂ ಸಭಾಂಗಣದಲ್ಲಿ ಮಂಗಳವಾರ ನಡೆದ ಜಿಲ್ಲಾಮಟ್ಟದ ದಿಶಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿ, ಹವಾಮಾನ ಆಧಾರಿತ ಬೆಳೆ ವಿಮೆಯಲ್ಲಿ ಜಿಲ್ಲೆಯ ರೈತರಿಗೆ ಸಾಕಷ್ಟು ಅನ್ಯಾಯವಾಗಿದೆ. ಕಳೆದ ಸಾಲಿನಲ್ಲಿ 70-80 ಕೋಟಿಯಷ್ಟು ವಿಮಾ ಮೊತ್ತ ನಷ್ಟವಾಗಿದೆ. ಆದ್ದರಿಂದ ಬೆಳೆ ನಷ್ಟವನ್ನು ನಿರ್ಧರಿಸುವ ಮಳೆ ಮಾಪನ ಕೇಂದ್ರಗಳು ಸಮರ್ಪಕವಾಗಿ ಕಾರ್ಯ ನಿರ್ವಹಿಸುವಂತೆ ನೋಡಿಕೊಳ್ಳಬೇಕು ಎಂದರು. ಜಿಲ್ಲೆಯಲ್ಲಿ ಒಟ್ಟು 280 ಮಳೆ ಮಾಪನ ಕೇಂದ್ರಗಳಿದ್ದು, ಇದರಲ್ಲಿ 112 ಅಂದರೆ ಕೇವಲ ಶೇ.40 ರಷ್ಟು ಮಾತ್ರ ಕೆಲಸ ಮಾಡುತ್ತಿವೆ ಎಂದು ವರದಿ ನೀಡಲಾಗಿದೆ. ಈ ಕೇಂದ್ರಗಳ ಬ್ಯಾಕ್ ಅಪ್ ಸ್ಟೇಷನ್‌ಗಳೂ ಸರಿ ಇಲ್ಲ. ಈ ಬಗ್ಗೆ ಅಧಿಕಾರಿಗಳು ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ರೈತರಿಗೆ ವಿಮೆ ನೀಡುವಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.ಶಿವಮೊಗ್ಗ -ತುಮಕೂರು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗೆ ಸಂಬಂಧಿಸಿದಂತೆ ಕೆಲಸಗಳನ್ನು ಚುರುಕುಗೊಳಿಸಿ, ಭೂಸ್ವಾಧೀನ ಪ್ರಕ್ರಿಯೆಯನ್ನು ಶೀಘ್ರದಲ್ಲೇ ಮುಗಿಸಬೇಕು. ಈ ಯೋಜನೆ ಮಂಜೂರಾಗಿ 4-5 ವರ್ಷಗಳಾಗಿದ್ದು, ಭೂಸ್ವಾಧೀನ ಪ್ರಕ್ರಿಯೆ ಕುರಿತು ಸ್ಪಷ್ಟತೆ ನೀಡಬೇಕು. ಹಾಲಿನ ಡೈರಿ ಬಳಿಯ ಅಂಡರ್ ಪಾಸ್ ಕೆಲಸವನ್ನು ತ್ವರಿತ ಗತಿಯಲ್ಲಿ ಮಾಡಬೇಕು. ಇಲ್ಲಿ ಜನರು ಮಕ್ಕಳು ಓಡಾಡುವುದು ತುಂಬಾ ಕಷ್ಟವಾಗಿದೆ ಹಾಗೂ ಶಿವನಿ ಮತ್ತು ಬೆಲೇನಹಳ್ಳಿಯಲ್ಲಿಯೂ ಓಡಾಟ ಕಷ್ಟ ಆಗುತ್ತಿದೆ. ಆದ್ದರಿಂದ ಎನ್‌.ಎಚ್ ಅಧಿಕಾರಿಗಳು ಕೆಲಸಗಳನ್ನು ಶೀಘ್ರದಲ್ಲಿ ಮಾಡಿ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸೂಚಿಸಿದರು.

ಶಿಕಾರಿಪುರ ತಾಲೂಕಿನ ಕಲ್ಲಾಪುರ ಗೇಟ್‌ಯಿಂದ ಕುಟ್ರಳ್ಳಿವರೆಗೆ ಕೇವಲ 30 ಕಿಮೀ ಇದ್ದರೂ ಇಲ್ಲಿ ಟೋಲ್ ನಿರ್ಮಿಸಿದ್ದು, ಈ ಟೋಲ್‌ಗೇಟಿನಿಂದಾಗಿ ಗ್ರಾಮಸ್ಥರಿಗೆ ತೊಂದರೆಯಾಗುತ್ತಿದೆ. ನಿಯಮಾವಳಿ ಪ್ರಕಾರ 60 ಕಿ.ಮೀ ಗೆ ಟೋಲ್ ನಿರ್ಮಿಸಬಹುದು ಎಂದಿದೆ. ಆದ್ದರಿಂದ ಈ ಟೋಲ್‌ನ್ನು ಬೇರೆಡೆ ಶಿಫ್ಟ್ ಮಾಡಬೇಕು ಎಂದು ತಿಳಿಸಿದರು. ಶಿವಮೊಗ್ಗದ ಗುಂಡಪ್ಪ ಶೆಡ್ ಅಂಡರ್ ಬ್ರಿಜ್‌ ಅನುಮೋದನೆ ದೊರೆತು ಒಂದು ವರ್ಷವಾಗಿದ್ದು, ಶೀಘ್ರ ಕಾರ್ಯಾರಂಭ ಮಾಡಬೇಕು ಹಾಗೂ 73 ಕೋಟಿ ರು. ವೆಚ್ಚದಲ್ಲಿ ಮಂಜೂರಾಗಿರುವ ಫ್ರೀಡಂ ಪಾರ್ಕ್ ಹಿಂದಿನ ಆರ್‌ಓಬಿ ಕಾಮಗಾರಿಯನ್ನೂ ಶೀಘ್ರದಲ್ಲಿ ಆರಂಭಿಸಬೇಕೆಂದು ರೈಲ್ವೆ ಅಧಿಕಾರಿಗಳು ಮತ್ತು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.ಪಿಎಂಜಿಎಸ್‌ವೈ ಯೋಜನೆಯಡಿ ರಾಜ್ಯಕ್ಕೆ ಒಟ್ಟು 53 ಕಾಮಗಾರಿಗಳು ಮಂಜೂರಾಗಿದ್ದು, ಅದರಲ್ಲಿ ಶೇ.50 ರಷ್ಟು ಅಂದರೆ 25 ಕಾಮಗಾರಿಗಳು ಶಿವಮೊಗ್ಗ ಜಿಲ್ಲೆಗೆ ಮಂಜೂರಾಗಿದ್ದು, ಹೊಸನಗರ 14, ಸಾಗರ 6, ತೀರ್ಥಹಳ್ಳಿ 1 ಸೊರಬ 4 ಕಾಮಗಾರಿಗಳು ಮಂಜೂರಾಗಿದೆ. ಗುಣಮಟ್ಟದೊಂದಿಗೆ ಕಾಮಗಾರಿಗಳನ್ನು ನಿಗದಿತ ಅವಧಿಯೊಳಗೆ ಪೂರ್ಣಗೊಳಿಸುವಂತೆ ತಿಳಿಸಿದರು.

ದಿಶಾ ಸಮಿತಿ ಸದಸ್ಯ ಗಿರೀಶ್ ಭದ್ರಾಪುರ ಮಾತನಾಡಿ, 70 ಗ್ರಾಮಗಳಿಗೆ ಕುಡಿಯುವ ನೀರು ಒದಗಿಸುವ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ ಕೊಳಚೆ ನೀರು ನದಿಗೆ ಸೇರ್ಪಡೆಯಾಗುತ್ತಿರುವ ಕಾರಣ ಆ ನೀರು ತಮಗೆ ಬೇಡವೆಂದು ಪಿಳ್ಳಂಗಿರಿ, ಬುಳ್ಳಾಪುರ ಇತರೆ ಗ್ರಾಮಸ್ಥರು ಈ ನೀರನ್ನು ಬಳಕೆ ಮಾಡಲು ಒಪ್ಪುತ್ತಿಲ್ಲ. ಗುಂಡಪ್ಪ ಶೆಡ್, ರಾಮಣ್ಣಶೆಟ್ಟಿ ಪಾರ್ಕ್ ಮತ್ತು ಚಟ್ನಹಳ್ಳಿಯಲ್ಲಿ ಕೊಳಚೆ ನೀರು ನದಿಗೆ ಸೇರ್ಪಡೆಯಾಗುತ್ತಿದ್ದು ಇದನ್ನು ಕೂಡಲೇ ಪರಿಶೀಲಿಸಿ ಕ್ರಮ ವಹಿಸಬೇಕು ಎಂದರು.

ದಿಶಾ ಸಮಿತಿ ಸದಸ್ಯ ಗುರುಮೂರ್ತಿ ಮಾತನಾಡಿ, ಮಲೆನಾಡಿನಲ್ಲಿ ಎಲೆ ಚುಕ್ಕಿ ರೋಗದಿಂದ ಶೇ.40 ಬೆಳೆ ಇಲ್ಲ. ಇದರಿಂದ ಮಧ್ಯಮ ವರ್ಗದ ರೈತರಿಗೆ ತೊಂದರೆಯಾಗುತ್ತಿದ್ದು, ಹವಾಮಾನ ಆಧಾರಿತ ವಿಮೆ ಕುರಿತು ತಕ್ಷಣ ಪರಿಶೀಲಿಸಿ ನಷ್ಟ ಭರಿಸಬೇಕು ಎಂದು ಮನವಿ ಮಾಡಿದರು.

ದಿಶಾ ಸಮಿತಿ ಸದಸ್ಯ ಮಲ್ಲಿಕಾರ್ಜುನ್ ಮಾತನಾಡಿದರು.

ಸಭೆಯಲ್ಲಿ ದಿಶಾ ಸಮಿತಿ ಸದಸ್ಯರಾದ ದೇವೇಂದ್ರಪ್ಪ, ಮಹಾದೇವಪ್ಪ, ಸುವರ್ಣ, ಗುರುಮೂರ್ತಿ, ಗಿರೀಶ್ ಭದ್ರಾಪುರ, ಆನಂದ್, ಜಿಲ್ಲಾಧಿಕಾರಿಗಳಾದ ಪ್ರಭುಲಿಂಗ ಕವಳಿಕಟ್ಟಿ, ಜಿಪಂ ಸಿಇಒ ಹೇಮಂತ್.ಎನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್.ಬಿ ಮತ್ತಿತರರಿದ್ದರು.

ಜಿಲ್ಲೆಯಲ್ಲಿ ಚಡ್ಡಿ ಗ್ಯಾಂಗ್ ಕಳ್ಳತನ ಹೆಚ್ಚಾಗಿದ್ದು, ಶೇ.10 ರಿಂದ 12 ಮಾತ್ರ ರಿಕವರಿ ಆಗುತ್ತಿದೆ. ಹಾಗೂ ಜಿಲ್ಲೆಯಲ್ಲಿ ಗಾಂಜಾ, ಓಸಿ, ಮಟ್ಕಾ, ಗ್ರಾಮಗಳಲ್ಲಿ ಸೆಕೆಂಡ್ಸ್ ಮದ್ಯ ಮಾರಾಟ ಹೆಚ್ಚಿದ್ದು, ಇದನ್ನು ನಿಯಂತ್ರಿಸಲು ಮತ್ತು ತಡೆಯಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು.- ಬಿ.ವೈ.ರಾಘವೇಂದ್ರ, ಸಂಸದರು