ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಗೀತೆ ಸಿದ್ಧ: ಡಾ: ಮಹೇಶ್ ಜೋಷಿ

| Published : Oct 21 2024, 12:46 AM IST

ಸಾಹಿತ್ಯ ಸಮ್ಮೇಳನಕ್ಕೆ ಆಹ್ವಾನಗೀತೆ ಸಿದ್ಧ: ಡಾ: ಮಹೇಶ್ ಜೋಷಿ
Share this Article
  • FB
  • TW
  • Linkdin
  • Email

ಸಾರಾಂಶ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡ ನಾಡು, ನುಡಿಯ ಹಬ್ಬವಾಗಿದ್ದು, ನೋಂದಣಿ ಮಾಡಿಕೊಂಡಿರುವವರು ಡಿ.೨೦, ೨೧ ಹಾಗೂ ೨೨ ರಂದು ೩ ದಿನ ಸಂಪೂರ್ಣವಾಗಿ ಭಾಗವಹಿಸಿ ಸಂಭ್ರಮಿಸಬೇಕು. ಬಹಳಷ್ಟು ಜನರು ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೆ ಆಗಮಿಸಿ ನಂತರ ಜಿಲ್ಲೆಯ ಪ್ರವಾಸಿ ತಾಣಕ್ಕೆ ತೆರಳಿ ಸಮಾರೋಪ ಸಮಾರಂಭಕ್ಕೆ ಬರುತ್ತಾರೆ,

ಕನ್ನಡಪ್ರಭ ವಾರ್ತೆ ಮಂಡ್ಯ

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಎಲ್ಲರನ್ನೂ ಆತ್ಮೀಯವಾಗಿ ಆಹ್ವಾನಿಸಲು ಗೀತೆಯೊಂದನ್ನು ಸಿದ್ಧಪಡಿಸಿದ್ದು, ಅ.೨೩ ರಂದು ನಡೆಯಲಿರುವ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬಿಡುಗಡೆ ಮಾಡಲಾಗುವುದು. ನ.೧ ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವದ ಕಾರ್ಯಕ್ರಮದಲ್ಲಿ ೨೦೦ ರಿಂದ ೩೦೦ ಮಕ್ಕಳು ನೃತ್ಯ ಪ್ರದರ್ಶನ ಮಾಡಲಿದ್ದಾರೆ ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ಮಹೇಶ್ ಜೋಷಿ ಹೇಳಿದರು.

ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಮಂಡ್ಯ ತಾಲೂಕು ಮಟ್ಟದ ಪ್ರಚಾರ ಸಭೆಯಲ್ಲಿ ಭಾಗವಹಿಸಿ ಮಾತನಾಡಿ, ಪತ್ರ ಅಭಿಯಾನದಲ್ಲಿ ಹೊರ ರಾಜ್ಯ ಹಾಗೂ ದೇಶದಲ್ಲಿರುವ ಜಿಲ್ಲೆಯ ಶಾಲಾ ಕಾಲೇಜು ವಿದ್ಯಾರ್ಥಿಗಳ ಕುಟುಂಬಸ್ಥರಿಗೆ ವಿದ್ಯಾರ್ಥಿಗಳಿಂದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾಗವಹಿಸುವಂತೆ ಗೌರವಪೂರ್ವಕವಾಗಿ ಆಹ್ವಾನಿಸಿ ಶಿಕ್ಷಕರು ಪತ್ರ ಬರೆಸುವಂತೆ ತಿಳಿಸಿದರು.

ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಕನ್ನಡ ನಾಡು, ನುಡಿಯ ಹಬ್ಬವಾಗಿದ್ದು, ನೋಂದಣಿ ಮಾಡಿಕೊಂಡಿರುವವರು ಡಿ.೨೦, ೨೧ ಹಾಗೂ ೨೨ ರಂದು ೩ ದಿನ ಸಂಪೂರ್ಣವಾಗಿ ಭಾಗವಹಿಸಿ ಸಂಭ್ರಮಿಸಬೇಕು. ಬಹಳಷ್ಟು ಜನರು ಸಾಹಿತ್ಯ ಸಮ್ಮೇಳನದ ಉದ್ಘಾಟನೆಗೆ ಆಗಮಿಸಿ ನಂತರ ಜಿಲ್ಲೆಯ ಪ್ರವಾಸಿ ತಾಣಕ್ಕೆ ತೆರಳಿ ಸಮಾರೋಪ ಸಮಾರಂಭಕ್ಕೆ ಬರುತ್ತಾರೆ, ಹಾಜರಾತಿ ಪ್ರಮಾಣ ಪತ್ರ ಪಡೆಯುತ್ತಾರೆ. ಇದು ದುರದೃಷ್ಟಕರ ಸಂಗತಿ. ಕನ್ನಡದ ಹಬ್ಬದಲ್ಲಿ ಭಾಗವಹಿಸುವುದು ಹೆಮ್ಮೆಯ ವಿಷಯ ಎಂದು ಮನದಟ್ಟು ಮಾಡಿಕೊಳ್ಳಬೇಕು ಎಂದು ಹೇಳಿದರು.

ಕಳೆದ ಬಾರಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸುಮಾರು ೬ ಕೋಟಿ ರು. ಮೊತ್ತದ ಪುಸ್ತಕ ಮಾರಾಟವಾಗಿತ್ತು. ಇನ್ನೂ ಹೆಚ್ಚಿನ ಪುಸ್ತಕ ಮಾರಾಟ ತಾಂತ್ರಿಕ ತೊಂದರೆಯಿಂದ ಆಗಲಿಲ್ಲ. ಈ ಬಾರಿ ವಿಶೇಷ ನಿಗಾ ವಹಿಸಿ ಯಾವುದೇ ತಾಂತ್ರಿಕ ತೊಂದರೆಯಾಗದಂತೆ ಕನ್ನಡ ಪುಸ್ತಕ ಮಾರಾಟ ಮಾಡಲು ವ್ಯವಸ್ಥೆ ಮಾಡಲಾಗುವುದು ಎಂದು ಸ್ಪಷ್ಟಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್ತು ಕನ್ನಡದ ಕಂಪನ್ನು ಎಲ್ಲ ಕಡೆ ಸಾರುವ ಪ್ರಯತ್ನ ಮಾಡುತ್ತಿದೆ. ಬೆಂಗಳೂರಿನಿಂದ ವಿವಿಧ ದೇಶಗಳಿಗೆ ತೆರಳುವ ವಿಮಾನಗಳಲ್ಲಿ ಕನ್ನಡ ಭಾಷೆಯಲ್ಲಿ ಸಂದೇಶಗಳನ್ನು ನೀಡುವಂತೆ ಮನವಿ ಮಾಡಲಾಗಿತ್ತು. ಅದರಂತೆ ಎಮರೈಟ್ಸ್ ಹಾಗೂ ಬ್ರಿಟಿಷ್ ಏರ್‌ಲೈನ್ಸ್‌ಗಳಲ್ಲಿ ಸಂದೇಶ ಹಾಗೂ ಮೆನುವಿನಲ್ಲೂ ಕನ್ನಡ ಭಾಷೆ ಬಳಸುತ್ತಿರುವುದು ಸಂತೋಷದ ವಿಷಯ ಎಂದರು.

ಸಾರಿಗೆ ಬಸ್ ಟಿಕೆಟ್, ನಂದಿನಿ ಹಾಲಿನ ಪ್ಯಾಕೇಟ್, ವಿದ್ಯುತ್ ಬಿಲ್‌ಗಳ ಮೇಲೆ ೮೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಮಂಡ್ಯ ಜಿಲ್ಲೆಯಲ್ಲಿ ನಡೆಯಲಿದೆ. ‘ಬನ್ನಿ- ಭಾಗವಹಿಸಿ- ಯಶಸ್ವಿಗೊಳಿಸಿ’ ಎಂದು ಮುದ್ರಿಸಿ ಪ್ರಚಾರ ನೀಡುವಂತೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಡಾ.ಕುಮಾರ, ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು, ಆಹಾರ ಇಲಾಖೆ ಉಪನಿರ್ದೇಶಕ ಕೃಷ್ಣಕುಮಾರ್, ತಹಸೀಲ್ದಾರ್ ಶಿವಕುಮಾರ್ ಬಿರಾದಾರ್ , ಕನ್ನಡ ಸಾಹಿತ್ಯ ಸಮ್ಮೇಳನದ ಸಮನ್ವಯ ಸಮಿತಿ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ, ಕನ್ನಡ ಸಾಹಿತ್ಯ ಪರಿಷತ್ತಿನ ಪಟೇಲ್ ಪಾಂಡು, ಚಂದ್ರಲಿಂಗು, ಅಪ್ಪಾಜಪ್ಪ, ಹುಸ್ಕೂರು ಕೃಷ್ಣೇಗೌಡ, ಪದ್ಮಿನಿ ನಾಗರಾಜು ಇತರರಿದ್ದರು.