ಎಳೆಯರಿಗೆ ತುಳು ಸಂಸ್ಕೃತಿಯ ಪರಿಚಯ ಅತ್ಯಗತ್ಯ: ಡಾ.ಇಂದಿರಾ ಹೆಗ್ಗಡೆ

| Published : Aug 05 2024, 12:33 AM IST

ಸಾರಾಂಶ

‘ಆಟಿದ ಗೇನ’ (ಆನಿದ ಕಾಲದ ಆಟಿದ ನೆಂಪು) ಕಾರ್ಯಕ್ರಮದಲ್ಲಿ ಅವರು ಆಟಿ ತಿಂಗಳ ಮಹತ್ವ ಬಗ್ಗೆ ತಿಳಿಸಿದರು,

ಕನ್ನಡಪ್ರಭ ವಾರ್ತೆ ಮಂಗಳೂರುಎಳೆಯರಿಗೆ ತುಳು ಸಂಸ್ಕೃತಿಯ ವೈಶಿಷ್ಟ್ಯಗಳ ಬಗ್ಗೆ ತಿಳಿವಳಿಕೆ ನೀಡುವುದು ಅತ್ಯಗತ್ಯ ಎಂದು ಹಿರಿಯ ಸಂಶೋಧಕಿ , ತುಳು ವಿದ್ವಾಂಸ ಡಾ.ಇಂದಿರಾ ಹೆಗ್ಗಡೆ ಹೇಳಿದರು.

ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಅಖಿಲ ಭಾರತ ಮುಂಡಾಲ ಯುವ ವೇದಿಕೆಯ ಸಹಭಾಗಿತ್ವದಲ್ಲಿ ನಗರದ ತುಳು ಭವನದಲ್ಲಿ ಭಾನುವಾರ ‘ಆಟಿದ ಗೇನ’ (ಆನಿದ ಕಾಲದ ಆಟಿದ ನೆಂಪು) ಕಾರ್ಯಕ್ರಮದಲ್ಲಿ ಅವರು ಆಟಿ ತಿಂಗಳ ಮಹತ್ವ ಬಗ್ಗೆ ಮಾತನಾಡಿದರು.

ಹಿಂದೆ ಆಟಿ ತಿಂಗಳು ಅಂದರೆ ಕಷ್ಟದ ದಿನಗಳು ಎಂದು ಅರ್ಥ. ಬೇಸಾಯ ಇದ್ದವನಿಗೂ ಕಷ್ಟ, ಇಲ್ಲದವನಿಗೂ ಕಷ್ಟ. ಈಗ ಆಟಿ ತಿಂಗಳಲ್ಲೇ ನಾಗರ ಪಂಚಮಿ ಬರುತ್ತಿದೆ. ಇದು ಹೊಸ ಪ್ರಭಾವ. ಮೂಲ ಪದ್ಧತಿ ಪ್ರಕಾರ ಆಟಿ ತಿಂಗಳು ಮದುವೆ ಯಾವುದೇ ಶುಭ ಕೆಲಸ ಕಾರ್ಯಗಳು ನಡೆಯುವುದಿಲ್ಲ. ಭೂತಗಳಿಗೂ ಆಗುವುದಿಲ್ಲ. ಭೂಮಿ ಬಿಸಿಯಾಗಿರುವ ಸಂದರ್ಭ ನಾಗನಿಗೆ ತನು ಹೊಯ್ಯಲಾಗುತ್ತದೆ. ಆಟಿ ತಿಂಗಳು ಮಳೆ ಸುರಿದು ಭೂಮಿ ತಂಪಾಗಿರುತ್ತದೆ ಎಂದರು.ನಾಗಬನದ ಸ್ವರೂಪದಲ್ಲೂ ಸಾಕಷ್ಟುಬದಲಾವಣೆಗಳಾಗಿವೆ. ನಾಗಬನ ಸಮೀಪ ತನಕ ಬುಲ್ಡೋಜರ್‌ಗಳು ತಲುಪಿವೆ. ಗಿಡ, ಮರಗಳ ನಡುವೆ ಇದ್ದ ನಾಗಬನದ ಸುತ್ತ ಇಂದು ಕಾಂಕ್ರಿಟ್‌ ನೆಲ ಆವರಿಸಿದೆ. ಮೇಲೆ ನೆರಳಿಗೆ ಶೀಟು ಹಾಕಲಾಗುತ್ತದೆ ಎಂದು ತುಳು ನಾಡಿನ ಆಚರಣೆಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಬದಲಾವಣೆಗಳನ್ನು ಅವರು ವಿವರಿಸಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಾರ್ತಾ ಮತ್ತು ಪ್ರಸಾರ ಇಲಾಖೆಯ ಸಹಾಯಕ ನಿರ್ದೇಶಕ ಬಿ.ಎ.ಖಾದರ್‌ ಶಾ ಮಾತನಾಡಿ, ತುಳುನಾಡಿನ ಸಂಸ್ಕೃತಿಯ ಭಾಗವಾಗಿರುವ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಹೆತ್ತವರು ಮತ್ತು ಪೋಷಕರು ಮಕ್ಕಳಿಗೆ ಪ್ರೋತ್ಸಾಹಿಸುವುದು ಅಗತ್ಯ. ಈ ಜ್ಞಾನವನ್ನು ಮುಂದಿನ ಜನಾಂಗಕ್ಕೆ ತಲುಪಿಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ಹೇಳಿದರು. ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ತಾರಾನಾಥ್‌ ಗಟ್ಟಿ ಕಾಪಿಕಾಡ್‌ ಅಧ್ಯಕ್ಷತೆ ವಹಿಸಿದ್ದರು.ಯುನೈಟೆಡ್‌ ಇಂಡಿಯಾ ಇನ್ಶೂರೆನ್ಸ್‌ ಡೆಪ್ಯೂಟಿ ಮೆನೇಜರ್‌ ರತ್ನಾವತಿ ಎ.ರಂಜನ್‌, ಶ್ವಾಸಕೋಶ ತಜ್ಞೆ ಡಾ.ಅಲ್ಕಾ ಸಿ.ಭಟ್‌, ಎನ್‌ಎಂಪಿಎ ಸೀನಿಯರ್‌ ಟ್ರಾನ್ಸ್‌ಲೇಟರ್‌ ಲತಾ ಎಸ್‌.ಬಿ, ಬಿಡಬ್ಲ್ಯೂಸಿ ನಿವೃತ್ತ ಅಧಿಕಾರಿ ಚಂದ್ರಪ್ರಭಾ ಶೇಖರ್‌, ಕುದ್ಮಲ್‌ ರಂಗರಾವ್‌ ಮೆಮೋರಿಯಲ್‌ ಎಜುಕೇಶನ್‌ ಟ್ರಸ್ಟ್‌ ಟ್ರಸ್ಟಿ ಅನಿತಾ ದಯಾಕರ್‌, ಅಖಿಲ ಭಾರತ ಮುಂಡಾಲ ಯುವ ವೇದಿಕೆ ಅಧ್ಯಕ್ಷ ರವಿ ಕುದ್ಮುಲ್‌ ಗಾರ್ಡನ್‌ ಆಗಮಿಸಿದ್ದರು.