ನ್ಯಾಯ ಸಿಕ್ಕೇ ಸಿಗುತ್ತದೆ: ಸೊರಕೆ ವಿಶ್ವಾಸ

| Published : Sep 25 2024, 12:50 AM IST

ಸಾರಾಂಶ

ಬಿಜೆಪಿ, ಜೆಡಿಎಸ್‌ನವರು ರಾಜ್ಯಪಾಲರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ಪ್ರಾಸಿಕ್ಯೂಷನ್ ವಿಚಾರವಾಗಿ ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಕ್ಕೇ ಸಿಗುತ್ತದೆಂಬ ಭರವಸೆ ಇದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ, ಮಾಜಿ ಸಚಿವ ವಿನಯಕುಮಾರ ಸೊರಕೆ ಹೇಳಿದ್ದಾರೆ.

- ಮುಡಾ ಸರಿಯಾದ ತನಿಖೆಯಾದರೆ ಮೋದಿ ಬೆಂಬಲಿಗರೂ ಹೊರಬರ್ತಾರೆ ಎಂದ ಸೊರಕೆ - ನರೇಂದ್ರ ಮೋದಿ, ಬಿಜೆಪಿ ರಾಜ್ಯ ನಾಯಕರಿಂದ ಸಿದ್ದರಾಮಯ್ಯ ಮೇಲೆ ಗೂಬೆ ಕೂರಿಸುವ ಕೆಲಸ

- ರಾಜ್ಯಪಾಲರ ಕಚೇರಿಯನ್ನೇ ಬಿಜೆಪಿ ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ ಎಂದು ಆರೋಪ - - -

ಕನ್ನಡಪ್ರಭ ವಾರ್ತೆ ದಾವಣಗೆರೆ

ಬಿಜೆಪಿ, ಜೆಡಿಎಸ್‌ನವರು ರಾಜ್ಯಪಾಲರ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಷಡ್ಯಂತ್ರ ನಡೆಸಿದ್ದಾರೆ. ಪ್ರಾಸಿಕ್ಯೂಷನ್ ವಿಚಾರವಾಗಿ ನ್ಯಾಯಾಲಯದಲ್ಲಿ ನಮಗೆ ನ್ಯಾಯ ಸಿಕ್ಕೇ ಸಿಗುತ್ತದೆಂಬ ಭರವಸೆ ಇದೆ ಎಂದು ಕಾಂಗ್ರೆಸ್‌ ಹಿರಿಯ ನಾಯಕ, ಮಾಜಿ ಸಚಿವ ವಿನಯಕುಮಾರ ಸೊರಕೆ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಸಲ್ಲಿಸಿದ್ದ ಅರ್ಜಿ ಹೈಕೋರ್ಟ್‌ನಲ್ಲಿ ಮಂಗಳವಾರ ವಜಾ ಆಗಿದೆ. ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ನಾವು ಮತ್ತೆ ಫೈಟ್ ಮಾಡುತ್ತೇವೆ ಎಂದರು.

ಹೈಕೋರ್ಟ್‌ ನ್ಯಾಯಾಧೀಶರೇ ಸಿಎಂ ಸಿದ್ದರಾಮಯ್ಯ ವಿರುದ್ಧದ ಎಲ್ಲ ದಾಖಲೆಗಳನ್ನು ಕೇಳಿದ್ದರು. ಈ ದಾಖಲೆಗಳನ್ನು ಇಟ್ಟುಕೊಂಡು, ಪ್ರಾಸಿಕ್ಯೂಷನ್ ಜಾರಿ ಮಾಡಿದ್ದಾರಾ? ಸರಿಯಾಗಿ ತನಿಖೆ ನಡೆಸಿದರೆ, ನರೇಂದ್ರ ಮೋದಿ ಬೆಂಬಲಿಗರೂ ಮುಡಾ ಹಗರಣದಲ್ಲಿ ಹೊರಬರುತ್ತಾರೆ ಎಂದು ಸೂಚ್ಯವಾಗಿ ಹೇಳಿದರು.

ಸಿದ್ದರಾಮಯ್ಯ ಮೇಲೆ ಗೂಬೆ ಕೂರಿಸುವ ಕೆಲಸವನ್ನು ನರೇಂದ್ರ ಮೋದಿ ಹಾಗೂ ಬಿಜೆಪಿ ರಾಜ್ಯ ನಾಯಕರು ಮಾಡಿದ್ದಾರೆ. ರಾಜ್ಯಪಾಲರ ಕಚೇರಿಯನ್ನೇ ಬಿಜೆಪಿ ಕಚೇರಿಯನ್ನಾಗಿ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯರ ಪತ್ನಿಯನ್ನು ನಾನು ಇದುವರೆಗೂ ನೋಡಿಲ್ಲ. ನಾನೂ ನಗರಾಭಿವೃದ್ಧಿ ಸಚಿವನಿದ್ದಾಗ ಮೈಸೂರಿನಲ್ಲಿ ಅದು ಮಾಡಿಸು, ಇದು ಮಾಡಿಸು ಅಂತ ಸಹ ಸಿದ್ದರಾಮಯ್ಯ ಯಾವತ್ತಿಗೂ ಹೇಳಿಲ್ಲ ಎಂದು ಸೊರಕೆ ತಿಳಿಸಿದರು.

- - - ಕೋಟ್‌

ಬಿಜೆಪಿಯವರಿಗೆ ಸಿದ್ದರಾಮಯ್ಯನವರ ರಾಜೀನಾಮೆ ಕೇಳುವ ಯಾವುದೇ ನೈತಿಕ ಹಕ್ಕು ಇಲ್ಲ. ತಮ್ಮ ತಟ್ಟೆಯಲ್ಲೇ ಆನೆ ಬಿದ್ದಿದ್ದರೂ, ನಮ್ಮ ತಟ್ಟೆಯನ್ನು ನೋಡಲು ಬರುತ್ತಾರೆ. ಯಾರೋ ರಾಜೀನಾಮೆ ಕೇಳುತ್ತಾರೆಂದರೆ, ರಾಜೀನಾಮೆ ನೀಡುವುದಿಲ್ಲ. ಅದನ್ನು ಪಕ್ಷದ ವರಿಷ್ಠರು ತೀರ್ಮಾನ ಮಾಡುತ್ತಾರೆ

- ವಿನಯಕುಮಾರ ಸೊರಕೆ, ಹಿರಿಯ ಮುಖಂಡ

- - -