ರಂಭಾಪುರಿ ಪೀಠಕ್ಕೆ ಕಡೇನಂದಿಹಳ್ಳಿ ಶ್ರೀಗಳ ಪಾದಯಾತ್ರೆ

| Published : Nov 08 2025, 02:15 AM IST

ಸಾರಾಂಶ

ಗುರುಬಲ ಪ್ರಾಪ್ತಿಗಾಗಿ, ಮನೋವಾಂಛಿತ ಫಲ ಸಿದ್ಧಿಗಾಗಿ ನ. 22ರಂದು ಕಡೇನಂದಿಹಳ್ಳಿಯಿಂದ ಶ್ರೀ ಜಗದ್ಗುರು ರಂಭಾಪುರಿ ಪೀಠಕ್ಕೆ ಪಾದಯಾತ್ರೆ ಮಾಡುವ ಸಂಕಲ್ಪವನ್ನು ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಪ್ರಕಟಿಸಿದರು.

ಹಿರೇಕೆರೂರು: ಗುರುಬಲ ಪ್ರಾಪ್ತಿಗಾಗಿ, ಮನೋವಾಂಛಿತ ಫಲ ಸಿದ್ಧಿಗಾಗಿ ನ. 22ರಂದು ಕಡೇನಂದಿಹಳ್ಳಿಯಿಂದ ಶ್ರೀ ಜಗದ್ಗುರು ರಂಭಾಪುರಿ ಪೀಠಕ್ಕೆ ಪಾದಯಾತ್ರೆ ಮಾಡುವ ಸಂಕಲ್ಪವನ್ನು ಕಡೇನಂದಿಹಳ್ಳಿ ರೇವಣಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಪ್ರಕಟಿಸಿದರು.

ತಾಲೂಕಿನ ಚನ್ನಳ್ಳಿ ಸಮೀಪದ ಕಡೆನಂದಿಹಳ್ಳಿ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಲ್ಲಿ ನಡೆದ 12ನೇ ವರ್ಷದ ಕಾರ್ತಿಕ ದೀಪೋತ್ಸವ ಹಾಗೂ ಬರುವ ಜನವರಿ 19-20ರಂದು ನಡೆಯಲಿರುವ ಶ್ರೀ ಜಗದ್ಗುರು ರೇಣುಕಾಚಾರ್ಯ ಗುರುಪರಂಪರೆ ಜಾತ್ರೋತ್ಸವ ಮತ್ತು ಶ್ರೀ ರಂಭಾಪುರಿ ಜಗದ್ಗುರು ರೇವಣಸಿದ್ಧೇಶ್ವರ ರಾಷ್ಟ್ರೀಯ ಪ್ರಶಸ್ತಿ ಪ್ರದಾನ-ಧಾರ್ಮಿಕ ಸಾಂಸ್ಕೃತಿಕ ಸಮಾರಂಭದ ಕುರಿತು ಜರುಗಿದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಇದೇ ನ. 22ರಿಂದ ಐದು ದಿನಗಳ ಕಾಲ ಶಿಕಾರಿಪುರ ತಾಲೂಕಿನ ತಪೋಕ್ಷೇತ್ರ ಕಡೇನಂದಿಹಳ್ಳಿ ಶ್ರೀ ಗುರು ರೇವಣಸಿದ್ಧೇಶ್ವರ ಪುಣ್ಯಾಶ್ರಮದಿಂದ ಶ್ರೀ ಜಗದ್ಗುರು ರಂಭಾಪುರಿ ಪೀಠಕ್ಕೆ 171 ಕಿಮೀ ಪಾದಯಾತ್ರೆ ಮಾಡುವ ಸಂಕಲ್ಪ ಪ್ರಕಟಿಸಿದರು. ಪಾದಯಾತ್ರೆ ನವೆಂಬರ್‌ 27ರಂದು ಶ್ರೀ ರಂಭಾಪುರಿ ಪೀಠವನ್ನು ತಲುಪಿ ಅಲ್ಲಿ ಜರುಗುವ ಶ್ರೀ ರಂಭಾಪುರಿ ಪೀಠದ ನವ ನಿರ್ಮಾಣ ಶಿಲ್ಪಿ ಲಿಂ. ರಂಭಾಪುರಿ ಜಗದ್ಗುರು ಶಿವಾನಂದ ರಾಜೇಂದ್ರ ಭಗವತ್ಪಾದರ ಪೀಠಾರೋಹಣ ಶತಮಾನೋತ್ಸವ ಸಮಾರಂಭದಲ್ಲಿ ಭಾಗವಹಿಸುವುದಾಗಿ ತಿಳಿಸಿದರು.

ತಮ್ಮ ಜತೆಗೆ ಭಕ್ತಾದಿಗಳು ಪಾಲ್ಗೊಳ್ಳುವರೆಂದು ತಿಳಿಸಿದರು.

ಸಮಾರಂಭದ ನೇತೃತ್ವ ವಹಿಸಿದ್ದ ಹಾರನಹಳ್ಳಿ ಶಿವಯೋಗಿ ಶಿವಾಚಾರ್ಯ ಸ್ವಾಮಿಗಳು ಮಾತನಾಡಿ, ಧರ್ಮ ಜಾಗೃತಿಗಾಗಿ ಕಡೇನಂದಿಹಳ್ಳಿ ಶ್ರೀಗಳು ಮಾಡುವ ಎಲ್ಲ ಧರ್ಮ ಕಾರ್ಯಗಳಲ್ಲಿ ಜೊತೆಯಾಗಿ ಸಾಗಿದ್ದೇವೆ. ಈ ಹಿಂದೆ ಕೊಲನುಪಾಕ ಕ್ಷೇತ್ರಕ್ಕೆ ಪಾದಯಾತ್ರೆ ಕೈಗೊಂಡಾಗ ನಾವು ಸಹ ಪಾದಯಾತ್ರೆ ಮಾಡಿದ್ದೆವು. ಪ್ರಸ್ತುತದಲ್ಲಿ ಬಾಳೆಹೊನ್ನೂರು ಶ್ರೀ ಜಗದ್ಗುರು ರಂಭಾಪುರಿ ಪೀಠಕ್ಕೆ ಕೈಗೊಂಡ ಧರ್ಮ ಜಾಗೃತಿ ಪಾದಯಾತ್ರೆಯಲ್ಲಿ ನಾವು ಮತ್ತು ಚನ್ನಗಿರಿ ಹಿರೇಮಠದ ಶ್ರೀಗಳು ಭಾಗವಹಿಸುತ್ತಿದ್ದೇವೆ. ನೂರಾರು ಸಂಖ್ಯೆಯಲ್ಲಿ ಭಕ್ತರು ಪಾದಯಾತ್ರೆ ಕೈಗೊಂಡು ಗುರುಕೃಪೆಗೆ ಪಾತ್ರರಾಗಬೇಕೆಂದು ಕರೆ ನೀಡಿದರು.

ಶ್ರೀ ಪುಣ್ಯಾಶ್ರಮದಿಂದ ಪ್ರತಿ ವರ್ಷ ಕೊಡಮಾಡುವ ಶ್ರೀ ರಂಭಾಪುರಿ ಜಗದ್ಗುರು ರೇವಣಸಿದ್ಧೇಶ್ವರ ರಾಷ್ಟ್ರೀಯ ಪ್ರಶಸ್ತಿಗಾಗಿ ಸ್ವಾತಂತ್ರ‍್ಯ ಹೋರಾಟಗಾರ ಕುಟುಂಬದ ಹಿನ್ನೆಲೆಯುಳ್ಳ ಶಿಕಾರಿಪುರ ತಾಲೂಕ ಈಸೂರು ಗ್ರಾಮದ ಆರ್.ಎಸ್. ಬಸವಾರಾಧ್ಯ ಸಾಹುಕಾರ ಅವರನ್ನು ಆಯ್ಕೆ ಮಾಡಲಾಯಿತು. ದ್ವಾದಶ ಪಟ್ಟಾಧಿಕಾರದ ಸವಿ ನೆನಪಿಗಾಗಿ 9 ಅಡಿ ಎತ್ತರದ ಶ್ರೀ ಜಗದ್ಗುರು ರೇಣುಕಾಚಾರ್ಯರ ಹರಕೆ ರಥದ ಉದ್ಘಾಟನೆ ಮಾಡುವುದು ಮತ್ತು 16 ವಿಧವಾದ ಸೇವೆಗಳ ಮಾಹಿತಿಯನ್ನು ಭಕ್ತರಿಗೆ ತಿಳಿಸಿ ಸೇವೆ ಪಡೆಯುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಇದಕ್ಕೂ ಮುನ್ನ ಬೆಳಗ್ಗೆ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ, ಶ್ರೀ ಸೋಮೇಶ್ವರ ಮಹಾಲಿಂಗಕ್ಕೆ, ಕ್ಷೇತ್ರನಾಥ ಶ್ರೀ ಮಳೆಮಲ್ಲೇಶ್ವರ ಸ್ವಾಮಿಗೆ, ಪರಿವಾರ ದೈವಗಳಿಗೆ ವಿಶೇಷ ರುದ್ರಾಭಿಷೇಕ, ಶಿವಾಷ್ಟೋತ್ತರ ಮಹಾಮಂಗಳಾರತಿ ಪೂಜಾ ಕಾರ್ಯಕ್ರಮಗಳು ನೆರವೇರಿದವು.

ಶ್ರೀ ಗುರು ರೇವಣಸಿದ್ಧೇಶ್ವರ ಜನಕಲ್ಯಾಣ ಟ್ರಸ್ಟ್ ನ ಸಲಹಾ ಮತ್ತು ಸೇವಾ ಸಮಿತಿ ಪದಾಧಿಕಾರಿಗಳು ಯುವಕ ಮಂಡಳಿ ಸದಸ್ಯರು ವಿವಿಧ ಗ್ರಾಮದ ಭಕ್ತರು ಭಾಗವಹಿಸಿದ್ದರು.