ಸಾರಾಂಶ
ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನೀಡಿದ ಪತ್ರಿಕಾ ಪ್ರಕಟನೆಯಲ್ಲಿ ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಆಯೋಗವು ಪ್ರಕಟಿಸಿದ ಪಟ್ಟಿಯಲ್ಲಿ ಬಂಟ ಮತ್ತು ನಾಡವ ಜಾತಿಯನ್ನು ಬೇರೆ ಬೇರೆ ಜಾತಿಯಾಗಿ ತೋರಿಸಿದ್ದಾರೆ. ಇವೆರಡು ಬೇರೆ ಬೇರೆಯಲ್ಲ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಹಾಗೂ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಪುತ್ತೂರು
ಕಾಂತರಾಜ್ ನೇತೃತ್ವದ ಆಯೋಗ ಅವೈಜ್ಞಾನಿಕವಾಗಿ ವರದಿ ತಯಾರಿಸಿರುವುದರಿಂದ ಮತ್ತು ಅದು ಕಾಲ ಬಾಧಿತವಾಗಿರುವ ಕಾರಣ ಅದನ್ನು ಮಂಡಿಸಬಾರದು ಮತ್ತು ಮಾನ್ಯ ಮಾಡಬಾರದು ಎಂದು ಮುಖ್ಯಮಂತ್ರಿ ಹಾಗೂ ಉಪ ಮುಖ್ಯ ಮಂತ್ರಿಯವರಿಗೆ ಮನವಿ ನೀಡಿದ್ದೇವೆ ಎಂದು ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಹಾಗೂ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷ ಕಾವು ಹೇಮನಾಥ್ ಶೆಟ್ಟಿ ತಿಳಿಸಿದ್ದಾರೆ. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ನೀಡಿದ ಪತ್ರಿಕಾ ಪ್ರಕಟನೆಯಲ್ಲಿ ರಾಜ್ಯದ ಜನರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ. ಆಯೋಗವು ಪ್ರಕಟಿಸಿದ ಪಟ್ಟಿಯಲ್ಲಿ ಬಂಟ ಮತ್ತು ನಾಡವ ಜಾತಿಯನ್ನು ಬೇರೆ ಬೇರೆ ಜಾತಿಯಾಗಿ ತೋರಿಸಿದ್ದಾರೆ. ಇವೆರಡು ಬೇರೆ ಬೇರೆಯಲ್ಲ ಎಂದರು.ಪ್ರಜ್ಞಾವಂತರಾದ ಸಮಾಜ ಬಾಂಧವರು ಮೀಸಲಾತಿ ಮತ್ತು ಇತರ ವಿಷಯಗಳಲ್ಲಿ ನಮಗಾದ ಕಷ್ಟ-ನಷ್ಟಗಳನ್ನು ಮನವರಿಕೆ ಮಾಡಿಕೊಂಡು ಮುಂದಿನ ದಿನಗಳಲ್ಲಿ ಸರಕಾರದ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಮೀಕ್ಷೆಗೆ ಬರುವವರ ಮೊಬೈಲ್ ಆಪ್‌ನಲ್ಲಿರುವ ೮ನೇ ಕಾಲಂನಲ್ಲಿ ಧರ್ಮ ಎಂದಿರುವ ಜಾಗದಲ್ಲಿ ಹಿಂದೂ ಎಂದು ನಮೂದಿಸಿ, ೯ನೇ ಕಾಲಂನಲ್ಲಿ ಜಾತಿ ಎಂದಿರುವ ಜಾಗದಲ್ಲಿ ಬಂಟ್ ಎಂದು ನಮೂದಿಸಿ. ೧೧ನೇ ಕಾಲಂನಲ್ಲಿರುವ ಸಮಾನಾರ್ಥದ (ಪರ್ಯಾಯ) ಹೆಸರು ಎಂದಿರುವ ಜಾಗದಲ್ಲಿ ನಾಡವ ಎಂದು ನಮೂದಿಸಬೇಕು. ೯ನೇ ಕಾಲಂನಲ್ಲಿ ಜಾತಿ ಎಂದಿರುವ ಜಾಗದಲ್ಲಿ ನಾಡವ ಎಂದು ನಮೂದಿಸುವ ಸಮಾಜ ಬಾಂಧವರು, ೧೧ನೇ ಕಾಲಂನಲ್ಲಿರುವ ಸಮಾನಾರ್ಥದ (ಪರ್ಯಾಯ) ಹೆಸರು ಎಂದಿರುವ ಜಾಗದಲ್ಲಿ ಬಂಟ್ ಎಂದು ನಮೂದಿಸಬೇಕು ಎಂದು ವಿನಂತಿಸಿದರು. ಸಂಘದ ಸಂಚಾಲಕ ಕುಂಬ್ರ ದುರ್ಗಾಪ್ರಸಾದ್ ರೈ, ಪ್ರಧಾನ ಕಾರ್ಯದರ್ಶಿ ನಿತ್ಯಾನಂದ ಮನವಳಿಕೆ, ಕೋಶಾಧಿಕಾರಿ ಸಂತೋಷ್ ಕುಮಾಋ ಶೆಟ್ಟಿ, ಮಹಿಳಾ ವಿಭಾಗದ ಅಧ್ಯಕ್ಷೆ ಗೀತಾ ಮೋಹನ್ ರೈ ಇದ್ದರು.