ಕೆಸಿಸಿ ಬ್ಯಾಂಕ್‌: ₹ 25 ಕೋಟಿ ಲಾಭ ಗಳಿಸುವ ಗುರಿ

| Published : Sep 18 2024, 01:48 AM IST

ಸಾರಾಂಶ

ಸಹಕಾರಿ ಬ್ಯಾಂಕ್‌ಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಇನ್ನೂ ಹೆಚ್ಚಿನ ಆರ್ಥಿಕ ನೆರವು ಅಗತ್ಯವಿದ್ದು, ಸದಸ್ಯ ಸಂಘಗಳು ಬ್ಯಾಂಕಿನಲ್ಲಿಯೇ ಆರ್ಥಿಕ ವಹಿವಾಟು ನಡೆಸುವುದು ಸೇರಿದಂತೆ ಅಗತ್ಯ ಸಹಕಾರ ನೀಡಬೇಕು ಎಂದು ಅಧ್ಯಕ್ಷರು ಹೇಳಿದ್ದಾರೆ.

ಧಾರವಾಡ:

ಜಿಲ್ಲಾ ಮಧ್ಯವರ್ತಿ ಸಹಕಾರಿ ಬ್ಯಾಂಕ್‌ ಆಗಿರುವ ಪ್ರತಿಷ್ಠಿತ ಕೆಸಿಸಿ ಬ್ಯಾಂಕಿನ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಇಲ್ಲಿನ ಜೆಎಸ್‌ಎಸ್ ಸಂಸ್ಥೆಯ ಆವರಣದಲ್ಲಿನ ಸನ್ನಿಧಿ ಹಾಲ್‌ನಲ್ಲಿ ಜರುಗಿತು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕ್‌ ಅಧ್ಯಕ್ಷ ಶಿವಕುಮಾರಗೌಡ ಪಾಟೀಲ ಮಾತನಾಡಿ, ಬ್ಯಾಂಕ್‌ ತನ್ನ ಕ್ರೋಡೀಕರಿಸಿದ ಠೇವು ಮತ್ತು ಇತರೆ ಸಂಪನ್ಮೂಲಗಳಿಂದ ನಬಾರ್ಡ್ ಮತ್ತು ಅಪೆಕ್ಸ್ ಬ್ಯಾಂಕ್‌ಗಳ ಪುನರ್ದನ ಸಾಲ ಸೌಲಭ್ಯಗಳಿಂದ ರೈತ ಸದಸ್ಯರಿಗೆ ಬೆಳೆಸಾಲ, ಮಾಧ್ಯಮಿಕ ಸಾಲ, ರೈತರ ಉಪಕಸುಬಗಳಿಗೆ ಕಿಸಾನ್‌ ಬಳಕೆ ಸಾಲ, ವಿವಿಧ ಸಂಘ-ಸಂಸ್ಥೆ, ವ್ಯಾಪಾರಸ್ಥರು, ವೃತ್ತಿಪರರಿಗೆ ಕೃಷಿಯೇತರ ಸಾಲ, ಸ್ವಸಹಾಯ ಮತ್ತು ಜಂಟಿ ಬಾಧ್ಯತಾ ಗುಂಪುಗಳಿಗೆ ಸಾಲ ನೀಡುತ್ತಿದೆ. ಅಲ್ಲದೇ ಠೇವಣಾತಿಗಳ ಮೇಲೆ ಸ್ಪರ್ಧಾತ್ಮಕ ದರದಲ್ಲಿ ಬಡ್ಡಿ ನೀಡಲಾಗುತ್ತಿದೆ ಎಂದರು.

ಬ್ಯಾಂಕಿನ ಎಲ್ಲ ಶಾಖೆಗಳನ್ನು ಸಿಬಿಎಸ್ ವ್ಯವಸ್ಥೆಯಡಿ ಗಣಕೀಕೃತಗೊಳಿಸಲಾಗಿದೆ. ಗ್ರಾಹಕರಿಗೆ ಆರ್‌ಟಿಜಿಎಸ್, ನೆಫ್ಟ್ ಮತ್ತು ಎಸ್‌ಎಂಎಸ್ ಬ್ಯಾಂಕಿಂಗ್ ಸೌಲಭ್ಯ ಗಳನ್ನು ಕಲ್ಪಿಸಲಾಗಿದೆ. ಬ್ಯಾಂಕು ಪ್ರತಿವರ್ಷ ಲಾಭದಲ್ಲಿ ಮುನ್ನಡೆಯುತ್ತಿದ್ದು, ಈ ವರ್ಷ ₹25 ಕೋಟಿ ನಿವ್ವಳ ಲಾಭ ಗಳಿಸುವ ಗುರಿ ಹೊಂದಲಾಗಿದೆ. ಈ ಗುರಿ ಸಾಧನೆಗೆ ಎಲ್ಲರೂ ಸೇರಿ ಶ್ರಮವಹಿಸಬೇಕಿದೆ ಎಂದರು.

ಇದೇ ವೇಳೆ ವಸೂಲಾತಿಯನ್ನು ಕೂಡ ಕಟ್ಟುನಿಟ್ಟಾಗಿ ಮಾಡುವ ಮೂಲಕ ಬ್ಯಾಂಕಿನ ಬಂಡವಾಳ ವೃದ್ಧಿಸಲು ಕ್ರಮಕೈಕೊಳ್ಳಲಾಗಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಂದ ಇನ್ನೂ ಹೆಚ್ಚಿನ ಆರ್ಥಿಕ ನೆರವು ಅಗತ್ಯವಿದ್ದು, ಸದಸ್ಯ ಸಂಘಗಳು ಬ್ಯಾಂಕಿನಲ್ಲಿಯೇ ಆರ್ಥಿಕ ವಹಿವಾಟು ನಡೆಸುವುದು ಸೇರಿದಂತೆ ಅಗತ್ಯ ಸಹಕಾರ ನೀಡಬೇಕು ಎಂದು ಪಾಟೀಲ ಮನವಿ ಮಾಡಿದರು.

ಮಧ್ಯವರ್ತಿ ಬ್ಯಾಂಕ್‌ಗಳಿಗೆ ಶೇ. 8ರಷ್ಟು ಬಡ್ಡಿ ಸಹಾಧನ ಒದಗಿಸಬೇಕು. ಬ್ಯಾಂಕಿಗೆ ಬೇಡಿಕೆ ಪ್ರಕಾರ ಶೇ.100ರಷ್ಟು ಅಲ್ಪಾವಧಿ ಬೆಳೆಸಾಲ ಪುನರ್ದನ ಸಾಲವನ್ನು ನಬಾರ್ಡ್ ನೀಡಬೇಕು. ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಸರ್ಕಾರದ ಹಣವನ್ನು ಡಿಸಿಸಿ ಬ್ಯಾಂಕ್‌ಗಳಲ್ಲಿ ಇಡಬೇಕು. ಎಪಿಎಂಸಿಗಳ ವ್ಯವಹಾರದ ಸಂಪೂರ್ಣ ಹಣವನ್ನು ಡಿಸಿಸಿ ಬ್ಯಾಂಕ್‌ಗಳಲ್ಲಿ ತೊಡಗಿಸಬೇಕು ಎಂದು ಆಗ್ರಹಿಸಿ ಸಭೆಯಲ್ಲಿ ನಿರ್ಣಯ ಕೈಕೊಳ್ಳಲಾಯಿತು.

ಸಭೆಯಲ್ಲಿ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳ ವಿವಿಧ ಸಹಕಾರ ಸಂಘ-ಸಂಸ್ಥೆಗಳ ಪ್ರತಿನಿಧಿಗಳು ಹಾಜರಿದ್ದರು. ಉಪಾಧ್ಯಕ್ಷ ನಿಂಗನಗೌಡ ಮರಿಗೌಡ್ರ ವಂದಿಸಿದರು. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಸುನೀತಾ ಸಿದ್ರಾಮ ಸ್ವಾಗತಿಸಿದರು. ಪ್ರಧಾನ ವ್ಯವಸ್ಥಾಪಕ ಎಸ್.ವಿ.ಹೂಗಾರ ನಿರೂಪಿಸಿದರು.