ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
5 ಹುಲಿಗಳನ್ನು ವಿಷಪ್ರಾಶನ ಮಾಡಿ ಕೊಂದ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹುಲಿಯನ್ನು ಕೊಂದು ಕೊಡಲಿಯಿಂದ ಮೂರು ಭಾಗ ಕತ್ತರಿಸಿ ಹೂತಿಟ್ಟ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪಚ್ಚೆದೊಡ್ಡಿ ಗ್ರಾಮದ ಸಮೀಪ ನಡೆದಿದೆ.ಮಲೆ ಮಹದೇಶ್ವರ ವನ್ಯಜೀವಿಧಾಮದ ಹನೂರು ವಲಯದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಸ್ತು ನಡೆಸುವಾಗ ಮಣ್ಣಿನಲ್ಲಿ ಹುದುಗಿಸಿದ್ದ ಅರ್ಧ ಕಳೆಬರ ಪತ್ತೆಯಾಗಿತ್ತು. ಅರಣ್ಯ ಇಲಾಖೆ ಸಿಬ್ಬಂದಿ ಹುಡುಕಾಡಿದಾಗ ಉಳಿದ ಭಾಗಗಳು ಪತ್ತೆಯಾಗಿದ್ದು ಹುಲಿಯ ಉಗುರು, ಹಲ್ಲು ಹಾಗೂ 4 ಕಾಲುಗಳು ಸುರಕ್ಷಿತವಾಗಿದೆ. ಮೃತ ಹುಲಿಯು ಗಂಡಾಗಿದ್ದು 12 ವರ್ಷದ ಪ್ರಾಯದ್ದು ಆಗಿರಬಹುದು ಎಂದು ಅಂದಾಜು ಮಾಡಲಾಗಿದೆ.ಪ್ರತೀಕಾರಕ್ಕೆ ಹತ್ಯೆ- ಹುಲಿಯ ದೇಹ ಪೀಸ್- ಪೀಸ್: ಹುಲಿಯ ದಾಳಿ ಅಥವಾ ಉಪಟಳಕ್ಕೆ ಬೇಸತ್ತು ಹುಲಿಯನ್ನು ಪ್ರತೀಕಾರಕ್ಕೆ ಕೊಲ್ಲಲಾಗಿದೆ ಎಂದು ಶಂಕಿಸಲಾಗಿದೆ. ಹುಲಿ ಕೊಂದ ಬಳಿಕ ಕೊಡಲಿಯಿಂದ ಹುಲಿಯನ್ನು ಮೂರು ಭಾಗಗಳಾಗಿ ಮಾಡಿ ಎರಡು ಭಾಗವನ್ನು ಮಣ್ಣಿನಿಂದ ಮತ್ತೊಂದು ಭಾಗವನ್ನು ಎಲೆಗಳಿಂದ ಮುಚ್ಚಲಾಗಿದ್ದನ್ನು ಪತ್ತೆ ಹಚ್ಚಲಾಗಿದೆ.ಎನ್ ಟಿಸಿಎ ನಿಯಮಾನುಸಾರ ಬಂಡೀಪುರದ ಪಶು ವೈದ್ಯ ಡಾ.ವಾಸಿಂ ಮಿರ್ಜಾ, ಹನೂರಿನ ಪಶು ವೈದ್ಯಾಧಿಕಾರಿ ಸಿದ್ದರಾಜು, ಎನ್ ಜಿಒ ಸದಸ್ಯರ ಸಮಕ್ಷಮ ಮರಣೋತ್ತರ ಪರೀಕ್ಷೆ ನಡೆಸಿ ಹುಲಿಯ ಅಂಗಾಂಗಗಳನ್ನು ವಿಧಿ-ವಿಜ್ಞಾನ ಪ್ರಯೋಗಲಾಯಕ್ಕೆ ಕಳುಹಿಸಲಾಗಿದೆ, ಹುಲಿ ಹತ್ಯೆ ಮಾಡಿರುವವರ ಬಗ್ಗೆ ಈಗಾಗಲೇ ಸುಳಿವು ಗೊತ್ತಾಗಿದ್ದು ಬಂಧಿಸುವ ಕೆಲಸ ಮಾಡುತ್ತೇವೆ ಎಂದು ಮಲೆ ಮಹದೇಶ್ವರ ವನ್ಯಜೀವಿಧಾಮ ಡಿಸಿಎಫ್ ಭಾಸ್ಕರ್ ಮಾಹಿತಿ ನೀಡಿದ್ದಾರೆ.4 ತಿಂಗಳಲ್ಲಿ ಎಂಟು ಹುಲಿಗಳ ಸಾವು: ಮಲೆ ಮಹದೇಶ್ವರ ವನ್ಯಜೀವಿ ವಿಭಾಗದ ಹೂಗ್ಯಂ ವನ್ಯಜೀವಿ ವಲಯ ವ್ಯಾಪ್ತಿಯ ಮಹದೇಶ್ವರ ದೇವಸ್ಥಾನದ ಸಮೀಪ ಹುಲಿ ಬೇಟೆಯಾಡಿದ್ದ ಹಸುವಿಗೆ ಕ್ರಿಮಿನಾಶಕ ಹಾಕಿ ಐದು ಹುಲಿಗಳನ್ನು ಹತ್ಯೆ ಮಾಡಲಾಗಿತ್ತು, ಇದಾದ ನಂತರ ಆಗಸ್ಟ್ 12ರಂದು ಕಾವೇರಿ ವನ್ಯಜೀವಿ ಧಾಮ ವ್ಯಾಪ್ತಿಯಲ್ಲಿ ಎರಡು ಮರಿಗಳು ಮೃತಪಟ್ಟಿದ್ದವು. ಇದಾದ ನಂತರ ಮಲೆ ಮಹದೇಶ್ವರ ವನ್ಯಜೀವಿಧಾಮ ವ್ಯಾಪ್ತಿಯ ಪಚ್ಚೆದೊಡ್ಡಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಬೇಟೆಗಾರರ ಕೃತ್ಯಕ್ಕೆ ಮತ್ತೊಂದು ಹುಲಿ ಬಲಿಯಾಗಿದೆ. ಒಟ್ಟಾರೆ ಕಳೆದ ನಾಲ್ಕು ತಿಂಗಳ ಅವಧಿಯಲ್ಲಿ ಮಲೆ ಮಹದೇಶ್ವರ ವನ್ಯಜೀವಿಧಾಮ ಹಾಗೂ ಕಾವೇರಿ ವನ್ಯಜೀವಿಧಾಮ ವ್ಯಾಪ್ತಿಯಲ್ಲಿ ಎಂಟು ಹುಲಿಗಳು ಮೃತಪಟ್ಟಿರುವುದು ವನ್ಯಜೀವಿ ಪ್ರಿಯರಲ್ಲಿ ಆತಂಕ ತಂದಿದೆ.