ದಕ್ಷಿಣ ಭಾರತದ ಪವಿತ್ರ ಯಾತ್ರಾ ಸ್ಥಳವಾದ ಕೊಲ್ಲೂರು ಬೈಂದೂರು ತಾಲೂಕಿನ ಪ್ರಮುಖ ಧಾರ್ಮಿಕ ಸ್ಥಳಗಳಲ್ಲೊಂದು. ಪಶ್ಚಿಮ ಘಟ್ಟಗಳ ಕೊಡಚಾದ್ರಿ ಪರ್ವತದ ತಪ್ಪಲಿನಲ್ಲಿ ದುಷ್ಟ ಶಿಕ್ಷಣೆ ಶಿಷ್ಟ ರಕ್ಷಣೆಗಾಗಿ ಅವತಾರವೆತ್ತಿದ ಸಹಸ್ರ ಸಹಸ್ರ ಭಕ್ತರನ್ನು ಹೊಂದಿರುವ ಜಗನ್ಮಾತೆ ಈ ಕ್ಷೇತ್ರದ ಅಧಿದೇವತೆ ಶ್ರೀ ಮೂಕಾಂಬಿಕಾ ಮಾತೆ.ಕ್ಷೇತ್ರ ಇತಿಹಾಸ: ಹಿಂದೆ ಮೂರನೇ ಮನ್ವಂತರದಲ್ಲಿ ಮಹಾತಪಸ್ವಿ ಕೋಲಮಹರ್ಷಿ ಒಂದು ಪರ್ಣಶಾಲೆಯನ್ನು ಸೌಪರ್ಣಿಕಾ ನದಿಯ ದಂಡೆಯಲ್ಲಿ ತಪಸ್ಸನ್ನಾಚರಿಸುತ್ತಿದ್ದನಂತೆ. ಆಶ್ರಮದ ಹಸುವೊಂದು ನಿತ್ಯವೂ ಅಲ್ಲಿಯೇ ಅರಣ್ಯದ ಮಧ್ಯದಲ್ಲಿ ಉದ್ಭವವಾಗಿದ್ದ ಲಿಂಗದಕಲ್ಲಿಗೆ ಹಾಲೆರದು ಬರುತ್ತಿದ್ದುದ್ದನ್ನು ಕಂಡ ಮಹರ್ಷಿಗಳು ಅದನ್ನು ನಿತ್ಯ ನೇಮಗಳಿಂದ ಪೂಜಿಸತೊಡಗಿದರು. ತನ್ನ ತಪೋಬಲದಿಂದ ಶಿವನನ್ನು ಪ್ರತ್ಯಕ್ಷ ಮಾಡಿಕೊಂಡು ಈ ಸ್ಥಳವು ತನ್ನ ಹೆಸರಿನಲ್ಲೇ ಉಳಿಯಬೇಕೆಂದು ಪ್ರಾರ್ಥಿಸಿದರಂತೆ. ಅದರಿಂದಾಗಿ ಕೋಲಾಪುರವೆಂದು ನಾಮಕರಣವಾಯಿತು. ಅದೇ ವೇಳೆಯಲ್ಲಿ ಕಂಹಾಸುರನೆಂಬ ಅಸುರನೊಬ್ಬನೂ ಕೂಡ ಮಹಾಬಲಾಢ್ಯನಾಗಿ ಮಹರ್ಷಿಗಳನ್ನು ಪೀಡಿಸಲಾರಂಭಿಸಿದನಂತೆ. ಆಗ ದಿಕ್ಕೆಟ್ಟ ಕೋಲಋಷಿಯು ಮತ್ತು ಇತರ ಋಷಿವರೇಣ್ಯರು ತ್ರಿಮೂರ್ತಿಗಳ ಮೊರೆಹೊಕ್ಕರಂತೆ. ಅವರು ತ್ರಿಪುರ ಭೈರವಿಯನ್ನು ಸೃಷ್ಟಿಸಿ ಅವನ ವಧೆಗಾಗಿ ಕಳುಹಿಸಿದರು. ಕಾಲಭೈರವಿಯನ್ನು ಕಂಡ ಕಂಹಾಸುರ ಭಯದಿಂದ ಓಡಿಹೋಗಿ ಋಷ್ಯಮೂಕಾಚಲದಲ್ಲಿ ತಪಸನ್ನಾಚರಿಸಿದ. ನಾಲ್ಕು ಮನ್ವಂತರಗಳು ದಾಟಿ ಕೃತಯುಗದ ಅರವತ್ನಾಲ್ಕನೆಯ ಸಂವತ್ಸರದಲ್ಲಿ ಮಹಿಷಾಸುರನೆಂಬ ರಾಕ್ಷಸನು ಇಲ್ಲಿ ಬಂದು ನೆಲಸಿ ಉಪಟಳವನ್ನು ಕೊಡಲಾರಂಭಿಸಿದನಂತೆ. ಕೋಲಮಹರ್ಷಿಯು ಆದಿಶಕ್ತಿಯನ್ನು ಕುರಿತು ತಪ್ಪಸ್ಸನ್ನಾಚರಿಸಿ, ಅವನನ್ನು ಸಂಹಾರ ಮಾಡುವಂತೆ ಬೇಡಿಕೊಂಡ. ಭಕ್ತರ ಬೇಡಿಕೆಯಂತೆ ಮಹಿಷಾಸುರನನ್ನು ಸಂಹರಿಸಿದಳು. ಆ ತ್ರಿಮೂರ್ತಿಗಳು ಶ್ರೀಚಕ್ರವನ್ನು ಮತ್ತು ಭೂಲೋಕ ರಕ್ಷಣೆಗಾಗಿ ದೇವಿಯನ್ನು ಅವರಲ್ಲಿ ಪ್ರತಿಷ್ಠಾಪಿಸಿದರು. ಋಷ್ಯ ಮೂಕಾಚಲದಲ್ಲಿ ದೀರ್ಘತಪ್ಪಸ್ಸನ್ನಾಚರಿಸುತ್ತಿದ್ದ ಕಂಹಾಸುರನಿಗೆ ಪರಶಿವನು ಒಲಿಯುವ ಕಾಲ ಸನ್ನಿಹಿತವಾಗಿತ್ತು. ಇದನ್ನರಿತ ಋಷಿಗಳು ಕಂಗೆಟ್ಟು ಪರಾಶಕ್ತಿಯನ್ನು ಪ್ರಾರ್ಥಿಸಿ, ಶಿವನು ದರ್ಶನವೀಯುವ ಸಂದರ್ಭದಲ್ಲಿ ಅವನ ನಾಲಿಗೆಯಲ್ಲಿ ನೆಲೆಸಿ ಮೂಕನನ್ನಾಗಿ ಮಾಡಬೇಕೆಂದು ಪ್ರಾರ್ಥಿಸಿದರು. ಅದರಂತೆಯೇ ದೇವಿಯು ಆ ಅಸುರನನ್ನು ವರವನ್ನು ಕೇಳಲಾಗದಂತೆ ಮಾಡಿದಳಂತೆ. ಆದ್ದರಿಂದ ದೇವಿಗೆ ಮೂಕಾಂಬಿಕೆ ಎಂದೂ ಹೆಸರಾಯಿತು. ಋಷಿಗಳಿಂದಲೇ ತನಗೆ ಹೀಗಾಯಿತೆಂದು ತಿಳಿದ ಕಂಹಾಸುರ ಮತ್ತೆ ತೊಂದರೆ ಕೊಡಲಾಂಭಿಸಿದನಂತೆ. ಕೊನೆಗೆ ದೇವಿಯು ಬ್ರಾಹ್ಮೀ, ವೈಷ್ಣವೀ, ಶಾಂಭವೀ, ಕುಮಾರಿ, ಇಂದ್ರಾಣಿ, ವರಾಹಿ, ಎಲ್ಲರೊಡಗೂಡಿ ಒಂದೇ ದೇಹವನ್ನು ತಾಳಿ, ಮೂಕಾಸುರನನ್ನು ಸಂಹರಿಸಿದಳಂತೆ. ಋಷಿಗಳೆಲ್ಲರೂ ಕೂಡಿ ತಾವು ಇಲ್ಲಿಯೇ ನೆಲೆಸಬೇಕೆಂದರಂತೆ. ಅವರ ಬೇಡಿಕೆಯಂತೆ ದೇವಿ ಅಲ್ಲಿ ನೆಲೆಸಿದಳು. ದೇಶ ಪರ್ಯಟಣೆ ಮಾಡುತ್ತಾ. ಬಂದ ಶಂಕರಾಚಾರ್ಯರು ಕುಟಚಾದ್ರಿಯಲ್ಲಿ ಬಂದು ತಪಸ್ಸನ್ನಾಚರಿಸಿದ್ದರು. ದೇವಿಯನ್ನು ಕೇರಳಕ್ಕೆ ಕರೆದೊಯ್ಯಬೇಕೆಂದು. ಮನಸ್ಸು ಮಾಡಿ, ಪ್ರತ್ಯಕ್ಷಳಾದ ದೇವಿಗೆ ತನ್ನ ಮನದಿಚ್ಛೆ ತಿಳಿಸಿದರು, ಆಯಿತು ಬರುತ್ತೇನೆ. ಆದರೆ ನಿನ್ನ ಹಿಂದೆ ಬರುತ್ತಿರುವ ನನ್ನನ್ನು ಯಾವ ಕಾರಣಕ್ಕೂ ಹಿಂದಿರುಗಿ ನೋಡಬಾರದೆಂದು ಆಜ್ಞೆ ಮಾಡಿದಳು. ಅದರಂತೆ ಶಂಕರಾಚಾರ್ಯರು ಮುಂದೆ ಮುಂದೆ ಹೋಗುತ್ತಿರುವಾಗ ಗೆಜ್ಜೆ ಸಪ್ಪಳವೇ ಕೇಳಿಸುವುದಿಲ್ಲವಲ್ಲಾ ಎಂದು ಅನುಮಾನ ಬಂದು ತಿರುಗಿ ನೋಡಿದರಂತೆ. ಆಗ ದೇವಿ ತಾನು ಇಲ್ಲಿಯೇ ನೆಲೆಸುವೆನು, ನೀನು ನನ್ನ ಮಾತಿನಂತೆ ನಡೆದುಕೊಳ್ಳಲಿಲ್ಲವೆಂದು ಹೇಳಿದಳಂತೆ. ಹೀಗೆ ದೇವಿಯ ನೆಲೆಸಿಕೆಗೆ ನಾನಾ ಐತಿಹ್ಯಗಳನ್ನು ಹೇಳುತ್ತಾರೆ. ಮಲೆಯಾಳಿಗಳು ಈ ದೇವತೆಗೆ ಹೆಚ್ಚು ಸಂಖ್ಯೆಯಲ್ಲಿ ನಡೆದುಕೊಳ್ಳುತ್ತಿರುವುದಕ್ಕೆ ಇದೇ ಕಾರಣವೆಂದೂ ನಂಬಿದ್ದಾರೆ.ಇಲ್ಲಿಯ ಆಚಾರನುಷ್ಠಾನ ಸಂಪ್ರದಾಯಗಳು ಆದಿಶಂಕರಾಚಾರ್ಯರಿಂದ ನೇಮಕ ಮಾಡಲ್ಪಟ್ಟವುಗಳೆಂದೂ ಹೇಳುವರು. ತಮ್ಮ ಮಹಿಮೆಯಿಂದ ವಿಗ್ರಹ ಪ್ರತಿಷ್ಠಾಪಿಸಿದರೆಂದೂ ಇದಕ್ಕೆ ಮೊದಲು ಸ್ವಯಂಭು ಲಿಂಗ ಮಾತ್ರವಿತ್ತೆಂದೂ ಹೇಳುವರು. ಶಂಕರಾಚಾರ್ಯರು ಧ್ಯಾನ ಮಾಡಿದ ಸ್ಥಳವನ್ನು ಶಂಕರಪೀಠ ಎಂದು ಈಗಲೂ ಕರೆಯುತ್ತಾರೆ. ಉದ್ಭವಲಿಂಗ ಪೂರ್ವದಿಕ್ಕಿಗೆ ಮುಖವಾಗಿದ್ದು, ಅದರ ಎಡಭಾಗ ದೊಡ್ಡದಾಗಿಯೂ ಬಲಭಾಗ ಚಿಕ್ಕದಾಗಿಯೂ ಇದೆ. ಆದರಿಂದ ಇದನ್ನೂ ಸ್ತ್ರೀ ಪ್ರಾಧಾನ್ಯವಾದದ್ದೆನ್ನುವರು. ಈ ದೇವಿಗೆ ಮಂಗಳವಾರ, ಶುಕ್ರವಾರ ಬಹಳ ಜನ ಭಕ್ತಾದಿಗಳು ಬಂದು ಪೂಜೆ ಸಲ್ಲಿಸಿ, ಪ್ರಾರ್ಥಸಿಕೊಳ್ಳುತ್ತಾರೆ.

ಹಬ್ಬ, ಉತ್ಸವ: ಪ್ರತಿವರ್ಷ ಧ್ವಜಾರೋಹಣವು ಮೀನ ಮಾಸದ ಉತ್ತರಾ ನಕ್ಷತ್ರದಲ್ಲಿ ಮತ್ತು ಮೂಲಾ ನಕ್ಷತ್ರದ ದಿನ ವಾರ್ಷಿಕ ರಥೋತ್ಸವ (ಜಾತ್ರೆ) ಜರುಗುತ್ತದೆ. ಉತ್ತರಾ ನಕ್ಷತ್ರ ಇರುವ ದಿನದಿಂದ ಧ್ವಜಾರೋಹಣದೊಂದಿಗೆ ಆರಂಭವಾಗುವ 9 ದಿನದ ಕಾರ್ಯಕ್ರಮಗಳು ಮೂಲ ನಕ್ಷತ್ರದವರೆಗೆ ನಡೆಯುತ್ತವೆ. ಜ್ಯೇಷ್ಠ ಮಾಸದ ಅಷ್ಟಮಿ ದಿನ ಹಾಗೂ ಹಬ್ಬ ಹರಿದಿನಗಳಂದು ದೇವಿಗೆ ವಿಶೇಷ ಪೂಜೆಗಳು ಜರುಗುತ್ತವೆ. ಜಾತ್ರೆಯ ಮಾರನೇದಿನ ರಾತ್ರಿ ಸಂಪ್ರದಾಯದಂತೆ ಓಕುಳಿ, ಸೌಪರ್ಣಿಕಾ ತೀರ್ಥದಲ್ಲಿ ತೆಪ್ಪೋತ್ಸವ ಹಾಗೂ ಅವಭೃತ ಸ್ನಾನ ನಡೆಯುತ್ತದೆ. ಇಲ್ಲಿ ನವರಾತ್ರಿ ಉತ್ಸವವನ್ನು ಬಹಳ ಅದ್ದೂರಿ ಹಾಗೂ ವಿಶಿಷ್ಟ ರೀತಿಯಲ್ಲಿ ಆಚರಿಸಲಾಗುತ್ತದೆ. ನವರಾತ್ರಿಯ ಕಾಲದಲ್ಲಿ ನವಾಕ್ಷರಿ ಕಳಶ, ಚಂಡಿಕಾಹೋಮ, ಪುಷ್ಪರಥೋತ್ಸವ, ಪುರ್ಣಕುಂಭ ಅಭಿಷೇಕ ಮೊದಲಾದವು ಜರುಗುತ್ತವೆ. ಮಹಾನವಮಿಯಂದು ಶತಚಂಡಿಕಾ ಯಾಗ, ಪುಷ್ಪರಥೋತ್ಸವ ಜರುಗುತ್ತದೆ. ನವರಾತ್ರಿಯ ವಿಜಯದಶಮಿಯಂದು ವಿದ್ಯಾರಂಭ ಮಾಡುತ್ತಾರೆ. ಕಾರ್ತಿಕ ದೀಪವು ವೃಶ್ಚಿಕಾ ಮಾಸದ ಅಮವಾಸ್ಯೆಯ ದಿನ ನಡೆಸುತ್ತಾರೆ. ಕೊಲ್ಲೂರು ಶ್ರೀ ಮೂಕಾಂಬಿಕೆ ಕೇರಳದ ಜನರಿಗೆ ಯಾಕೆ ಕುಲದೇವರು..?

ಕಾಲಡಿ ಅಂದಿನ ಕೇರಳದ ಒಂದು ಪುಟ್ಟ ಊರು. ತಂದೆ ಇಲ್ಲದ ತಬ್ಬಲಿಯಾದ ಬಾಲ ಶಂಕರ ತನ್ನ ಎಳವೆಯ ಬಾಲ್ಯದಲ್ಲೇ ಸನ್ಯಾಸ ದೀಕ್ಷೆಯನ್ನು ತೊಡುತ್ತಾನೆ. ಇದ್ದ ಒಬ್ಬನೇ ಮಗ ಸನ್ಯಾಸಿಯಾಗುತ್ತಾನೆ ಅಂದಾಗ ವಿಧವೆಯಾದ ತಾಯಿ ಆರ್ಯಂಬೆ ದಿಕ್ಕು ತೋಚದೆ ಮಗನನ್ನು ಅಪ್ಪಿ ಹಿಡಿದು ಅತ್ತು ಕೇಳುತ್ತಾಳೆ. ನಾನು ಸಾಯುವಾಗ ಒಂದು ತೊಟ್ಟು ನೀರು ಬಿಟ್ಟು ನನ್ನ ಚಿತೆಗೆ ಕೊಳ್ಳಿ ಇಡುವವರು ಯಾರಿದ್ದಾರೆ, ನನಗೆ ಕಡೆಗಾಲ ಬಂದಾಗ ನಿನ್ನನ್ನು ಎಲ್ಲಿ ಹುಡುಕಲಿ ಎನ್ನುತ್ತಾ ಕರುಳು ಕಿತ್ತು ಬರುವ ಹಾಗೆ ಅಳುತ್ತಾಳೆ. ಅಮ್ಮ ನಿನ್ನ ಕಡೆಗಾಲ ಬಂದಾಗ ಏಕ ಮನಸಿನಿಂದ ನನ್ನನ್ನು ಜ್ಞಾಪಿಸು, ನೀನು ಧ್ಯಾನ ಮಾಡಿ ಕರೆದ ಅರೆ ಕ್ಷಣದಲ್ಲಿ ನಿನ್ನ ಕಣ್ಣ ಮುಂದೆ ನಿಂತು ನಿನ್ನ ಕಾರ್ಯಗಳನ್ನೆಲ್ಲಾ ನಡೆಸಿಕೊಡುತ್ತೇನೆ ಎಂದು ತಾಯಿಗೆ ಸಮಾಧಾನದ ಮಾತುಗಳನ್ನು ಹೇಳಿ ಬಾಲ ಶಂಕರ ಹಿಂದೂ ಧರ್ಮದ ಪುನರುತ್ಥಾನಕ್ಕಾಗಿ ದೇಶ ಪರ್ಯಟನೆಗೆ ಹೊರಡುತ್ತಾನೆ.ಅದೊಂದು ದಿನ ತಾಯಿ ಆರ್ಯಂಬೆ ತಾನು ಸಾಯುವ ಕಾಲ ಸಮೀಪಿಸುತ್ತಿದೆ ಅನ್ನುವಾಗ ಮಗ ಶಂಕರ ಹೇಳಿದಂತೆ ಮನಸಿನಲ್ಲೆ ಸಾವಿನ ಮಂಚದಿಂದ ಮಗನನ್ನು ಕೂಗಿ ಕರೆಯುತ್ತಾಳೆ. ತಾಯಿಯ ಕರುಳಿನ ಕೂಗು ಶಂಕರಾಚಾರ್ಯರಿಗೆ ಮುಟ್ಟುತ್ತದೆ. ತಡ ಮಾಡದೆ ತಾಯಿಯ ಮುಂದೆ ನಿಲ್ಲುತ್ತಾರೆ ಶಂಕರಾಚಾರ್ಯರು! ತನ್ನ ಮಗನನ್ನು ಕಣ್ಣು ತುಂಬಾ ನೋಡಿದ ತಾಯಿ ಮಗ ಬಿಟ್ಟ ತುಳಸಿ ನೀರಿನೊಂದಿಗೆ ನೆಮ್ಮದಿಯಿಂದ ಪ್ರಾಣ ಬಿಡುತ್ತಾಳೆ. ತಾಯಿಯ ಸಾವು ಶಂಕರಾಚಾರ್ಯರಿಗೆ ಅಗ್ನಿ ಪರೀಕ್ಷೆಯಾಗುತ್ತದೆ. ನಿಸ್ಸಾಹಯಕರಾಗಿ ತಾಯಿ ಕೊಲ್ಲೂರ ಮೂಕಾಂಬಿಕೆಯನ್ನು ನೆನೆದು ಬಿಡುತ್ತಾರೆ. ಪವಾಡ ನಡೆದೇ ಹೋಗುತ್ತದೆ. ತಾಯಿ ದೇಹ ಯೋಗ ಮಾಯೆಯ ಅಗ್ನಿಯಿಂದ ಸುಡುತ್ತಾರೆ. ಇಂತಹ ಕ್ಲಿಷ್ಟ ಸಮಯದಲ್ಲೂ ಸಹಾಯ ಮಾಡದ ಊರ ಜನರ ಮೇಲೆ ಕೋಪ ತಾನಾಗಿಯೇ ಮೂಡುತ್ತದೆ. ವಿಧವೆ ಎಂದು ತಾತ್ಸಾರದಿಂದ ನೋಡಿದ ಈ ಊರಲ್ಲಿ ಎಲ್ಲರೂ ವಿಧವೆಯರಾಗಿ ಇರಲಿ ಎಂದು ಶಪಿಸಿ ಹೊರಟು ಹೋಗುತ್ತಾರೆ. ದಿನ ಕಳೆದಂತೆ ಶಾಪ ಫಲಿಸುತ್ತದೆ. ಅನೇಕ ಮಾಂಗಲ್ಯಗಳು ಕಳಚಿ ಬೀಳುತ್ತವೆ. ಮೂಢ ನಂಬಿಕೆಗಳ ಗೋಡೆ ನಶಿಸಿ ಹೋಗಿ ತಮ್ಮ ತಪ್ಪಿನ ಅರಿವಾಗುತ್ತದೆ. ಓಡೋಡಿ ಬಂದು ಶಂಕರಾಚಾರ್ಯರಲ್ಲಿ ಕ್ಷಮೆಯನ್ನು ಕೇಳಿ ತಪ್ಪನ್ನು ಮನ್ನಿಸುವಂತೆ ಬೇಡಿಕೊಳ್ಳುತ್ತಾರೆ. ಕರುಣೆಗೊಂಡ ಶಂಕರಾಚಾರ್ಯರು ಕನಿಕರದಿಂದ ಮಂಗಳ ಪ್ರದಾಯಿನಿಯಾದ ಕೊಲ್ಲೂರು ಮೂಕಾಂಬಿಕೆಯ ದರ್ಶನವನ್ನು ಮಾಡಿದರೆ ನಿಮ್ಮ ಸಕಲ ವಿಘ್ನಗಳೂ ದೂರವಾಗಿ, ನಿಮ್ಮ ಮಾಂಗಲ್ಯಗಳು ಗಟ್ಟಿಯಾಗುತ್ತವೆ ಎಂದು ದಾರಿ ತೋರಿಸುತ್ತಾರೆ. ವಿಧವೆಯರು ಅಮಂಗಳೆಯರಲ್ಲ ಅನ್ನುವುದಕ್ಕೆ ಬಿಳಿಯ ಸೀರೆ ಉಡುವ ಸಂಪ್ರದಾಯ ಅಂದಿನಿಂದ ಕೇರಳದಲ್ಲಿ ಶುರುವಾಗುತ್ತದೆ.