ಮಿನಿ ಬಳ್ಳಾರಿಯಾದ ಕೊರಟಗೆರೆ ರೈತ ಸಂಘ ಆಕ್ರೋಶ

| Published : Mar 14 2025, 12:31 AM IST

ಸಾರಾಂಶ

ಚೀಲಗಾನಹಳ್ಳಿ ಸಮೀಪ ಕಲ್ಲು ಗಣಿಗಾರಿಕೆ ಮತ್ತು ಜಲ್ಲಿಕ್ರಷರ್ ಘಟಕ ಸ್ಥಾಪನೆಗೆ ೧೫ವರ್ಷದಿಂದ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿ ಕೊರಟಗೆರೆ ಆಡಳಿತ ಮತ್ತು ಗಣಿ ಇಲಾಖೆ ವಿರುದ್ಧ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರುಸೇನೆಯ ಕಾರ್ಯಕರ್ತರು ಗುರುವಾರದಿಂದ ಅಹೋರಾತ್ರಿ ಧರಣಿ ಆರಂಭಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಕೊರಟಗೆರೆ

ಚೀಲಗಾನಹಳ್ಳಿ ಸಮೀಪ ಕಲ್ಲು ಗಣಿಗಾರಿಕೆ ಮತ್ತು ಜಲ್ಲಿಕ್ರಷರ್ ಘಟಕ ಸ್ಥಾಪನೆಗೆ ೧೫ವರ್ಷದಿಂದ ಹುನ್ನಾರ ನಡೆಯುತ್ತಿದೆ ಎಂದು ಆರೋಪಿಸಿ ಕೊರಟಗೆರೆ ಆಡಳಿತ ಮತ್ತು ಗಣಿ ಇಲಾಖೆ ವಿರುದ್ಧ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರುಸೇನೆಯ ಕಾರ್ಯಕರ್ತರು ಗುರುವಾರದಿಂದ ಅಹೋರಾತ್ರಿ ಧರಣಿ ಆರಂಭಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು. ಕೊರಟಗೆರೆ ಪಟ್ಟಣದ ಮಿನಿ ವಿಧಾನಸೌಧಕ್ಕೆ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರುಸೇನೆ ಹಾಗೂ ಚೀಲಗಾನಹಳ್ಳಿ ರೈತರಿಂದ ಟ್ರಾಕ್ಟರ್ ಸಮೇತ ಮುತ್ತಿಗೆ ಹಾಕಿದ ರೈತರು ಕಲ್ಲುಗಣಿಗಾರಿಕೆ ಮತ್ತು ಜಲ್ಲಿಕ್ರಷರ್ ಘಟಕ ನಿರ್ಮಾಣಕ್ಕೆ ಸರಕಾರಿ ಅಧಿಕಾರಿಗಳೇ ಪರೋಕ್ಷವಾಗಿ ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಆರೋಪಿಸಿದರು. ಕರ್ನಾಟಕ ರಾಜ್ಯ ರೈತಸಂಘದ ಜಿಲ್ಲಾಧ್ಯಕ್ಷ ಧನಂಜಯರಾಧ್ಯ ಮಾತನಾಡಿ ತುಮಕೂರು ಮತ್ತು ಕೊರಟಗೆರೆ ಕ್ಷೇತ್ರದಲ್ಲಿ ಪ್ರಸ್ತುತ ಇರುವ ಗಣಿಗಾರಿಕೆಯಿಂದ ಪರಿಸರ ಹಾಳಾಗಿದೆ. ಈಗ ಮತ್ತೇ ಕೊರಟಗೆರೆಯಲ್ಲಿ ಗಣಿಗಾರಿಕೆ ಪ್ರಾರಂಭಕ್ಕೆ ಅಧಿಕಾರಿಗಳೇ ಪರೋಕ್ಷವಾಗಿ ಬೆಂಬಲ ನೀಡುತ್ತಿರೋದು ನಮ್ಮ ದುರ್ದೈವ ಎಂದು ಕಿಡಿಕಾರಿದರು. ರೈತಸಂಘದ ಅಧ್ಯಕ್ಷ ಸಿದ್ದರಾಜು ಮಾತನಾಡಿ ಕೊರಟಗೆರೆ ಕ್ಷೇತ್ರವು ಮಿನಿಬಳ್ಳಾರಿ ಆಗುವತ್ತಾ ಹೆಜ್ಜೆ ಇಟ್ಟಿದೆ. ನಮ್ಮ ಕ್ಷೇತ್ರದ ಬೆಟ್ಟಗುಡ್ಡಗಳನ್ನು ಅಧಿಕಾರಿವರ್ಗ ಮಾರಾಟಕ್ಕೆ ಇಟ್ಟಿದ್ದಾರೆ. ಗೃಹಸಚಿವ ಡಾ.ಜಿ.ಪರಮೇಶ್ವರ್ ತಕ್ಷಣವೇ ಗಣಿಗಾರಿಕೆ ನಡೆಸದಂತೆ ಅಧಿಕಾರಿಗಳ ಕಟ್ಟುನಿಟ್ಟಿನ ಆದೇಶ ಮಾಡಬೇಕಿದೆ ಎಂದರು.ಪ್ರತಿಭಟನೆಯಲ್ಲಿ ರೈತಸಂಘದ ಲೊಕೇಶ್, ಪ್ರಸನ್ನ, ರಾಮಚಂದ್ರಪ್ಪ, ಕೆಂಪರಾಜು, ರಾಜಣ್ಣ, ವೀರಕ್ಯಾತರಾಯ, ಶ್ರೀರಂಗಯ್ಯ, ಹನುಮಂತರಾಯಪ್ಪ, ಜುಂಜಣ್ಣ, ದಯಾನಂದ್, ಶಾಂತಮ್ಮ, ವೆಂಕಟಲಕ್ಷ್ಮಮ್ಮ, ಸಿದ್ದಗಂಗಯ್ಯ, ರಾಮಯ್ಯ, ಜಯರಾಮಯ್ಯ, ಕೊಂಡಪ್ಪ, ಸಿದ್ದರಾಜು, ಶ್ರೀನಿವಾಸ ಸೇರಿದಂತೆ ಇತರರು ಇದ್ದರು. ಕಲ್ಲುಗಣಿಗಾರಿಕೆ ವಿರೋಧಿಸಿ ಮಿನಿವಿಧಾಸೌಧ ಕಚೇರಿ ಆವರಣದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹದಲ್ಲಿ ಪಾಲ್ಗೊಂಡ ರೈತರಿಗೆ ಊಟ-ತಿಂಡಿ ಮತ್ತು ನಿದ್ರೆಗೆ ಅಲ್ಲೇ ವ್ಯವಸ್ಥೆ ನಡೆದಿದೆ. ಟ್ರಾಕ್ಟರ್‌ಗಳನ್ನು ಹೊರಗಡೆ ನಿಲ್ಲಿಸಿ ಕಚೇರಿಗೆ ತೆರಳುವ ಮಾರ್ಗದ ಮೆಟ್ಟಿಲುಗಳ ಮೇಲೆಯೇ ರೈತರು ಊಟ ಮಾಡಿ ವಿಶ್ರಾಂತಿ ಪಡೆಯುತ್ತಿದ್ದಾರೆ.