ಸಾರಾಂಶ
.ಕಾರ್ಯಕ್ರಮದ ಮೂಲಕ ಅತಿಹೆಚ್ಚು ಜನ ಸೇರುವ ದೊಡ್ಡದಾದ ಸ್ವಾಮಿಯ ಬೃಹತ್ ಮಹಾ ರಥೋತ್ಸವ ಫೆ.22ರಂದು ನಡೆಯುವ ಕಾರ್ಯಕ್ರಮಕ್ಕೆ ಚಾಲನೆ ಪಡೆದುಕೊಂಡಿತು.
ಕೊಟ್ಟೂರು: ಕೊಟ್ಟೂರೇಶ್ವರ ಸ್ವಾಮಿಯ ರಥೋತ್ಸವದ ತೇರು ಗಡ್ಡೆಯನ್ನು ಹೊರಗೆ ಹಾಕುವ ಧಾರ್ಮಿಕ ಕಾರ್ಯಕ್ರಮ ಸೋಮವಾರ ಸಂಜೆ ಅಸಂಖ್ಯಾತ ಭಕ್ತರ ಭಕ್ತಿ ಸಮರ್ಪಣೆಯೊಂದಿಗೆ ನೆರವೇರಿತು.ಕಾರ್ಯಕ್ರಮದ ಮೂಲಕ ಅತಿಹೆಚ್ಚು ಜನ ಸೇರುವ ದೊಡ್ಡದಾದ ಸ್ವಾಮಿಯ ಬೃಹತ್ ಮಹಾ ರಥೋತ್ಸವ ಫೆ.22ರಂದು ನಡೆಯುವ ಕಾರ್ಯಕ್ರಮಕ್ಕೆ ಚಾಲನೆ ಪಡೆದುಕೊಂಡಿತು.
ರಥೋತ್ಸವಕ್ಕೆ ಈ ತೇರುಗಡ್ಡೆಯನ್ನು ಪೂರ್ಣ ಪ್ರಮಾಣದಲ್ಲಿ ತಯಾರು ಮಾಡಲು ಪ್ರತಿ ವರ್ಷದ ಧಾರ್ಮಿಕ ಪದ್ಧತಿಯಂತೆ ತೇರು ಗಡ್ಡೆಯನ್ನು ಹೊರಗೆಳೆಯುವ ಕಾರ್ಯಕ್ರಮ ಕ್ರಿಯಾಮೂರ್ತಿ ಪ್ರಕಾಶ್ ಕೊಟ್ಟೂರು ದೇವರು ಮತ್ತು ಧರ್ಮಕರ್ತ ಬಳಗದ ಪೂಜಾ ಸೇವಕರು ಗಡ್ಡೆಯ ಮೇಲೆ ಕುಳಿತುಕೊಳ್ಳುತ್ತಿದ್ದಂತೆ ನೆರೆದಿದ್ದ ಭಕ್ತರು ಕೊಟ್ಟೂರೇಶ್ವರ ಸ್ವಾಮಿಯ ಜಯಕಾರಗಳನ್ನು ಕೂಗುತ್ತಾ ಹಗ್ಗದ ಮೂಲಕ ಎಳೆದೊಯ್ದರು. ಈ ಪ್ರಕ್ರಿಯೆ ಜರುಗಿ ಸರಾಗವಾಗಿ ತೇರು ಗಡ್ಡೆ ರಥ ಬೀದಿಗುಂಟ ಸಾಗುತ್ತಿದಂತೆ ಆಂಜನೇಯ ದೇವಸ್ಥಾನದ ರಸ್ತೆ ಬದಿಯಲ್ಲಿ ವ್ಯಕ್ತಿಯೊಬ್ಬ ನಿಲ್ಲಿಸಿದ್ದ ಸ್ಕೂಟರ್ ಮೇಲೆ ತೇರುಗಡ್ಡೆ ಗಾಲಿಯೊಂದು ಹರಿದ ಪರಿಣಾಮ ಸ್ಕೂಟರ್ ಸಂಪೂರ್ಣ ನಜ್ಜುಗುಜ್ಜಾಗಿತ್ತು. ಈ ಪ್ರಕರಣ ಬಿಟ್ಟರೆ ಬೇರೆ ಯಾವ ಅಪಾಯವೂ ಸಂಭವಿಸಲಿಲ್ಲ. ನಂತರ ತೇರುಗಡ್ಡೆಯನ್ನು ಭಕ್ತರು ಎರಾಬಿರ್ರಿ ಎಳೆಯಲು ಮುಂದಾಗುತ್ತಿದಂತೆ ತೇರು ಬೀದಿಯ ಬಲ ಭಾಗದ ಬೀದಿಬದಿಯ ಅಂಗಡಿಗಳ ಮೇಲೆ ವಾಲಿತು. ಇದನ್ನು ಗಮನಿಸಿದ ಕೆಲವರು ತೇರಿನ ಚಕ್ರಗಳಿಗೆ ಹೆಜ್ಜೆ ಹಾಕುವವರು ಕೂಡಲೇ ಅಂಗಡಿಗಳತ್ತ ಹೋಗದಂತೆ ತೇರುಗಡ್ಡೆಯನ್ನು ಕಷ್ಟಪಟ್ಟು ನಿಲ್ಲಿಸಿದ್ದರು. ಹೀಗಾಗಿ ಮತ್ತೆ ಅರ್ಧಗಂಟೆವರೆಗೂ ತೇರುಗಡ್ಡೆ ಎಳೆಯುವ ಪ್ರಕ್ರಿಯೆ ನಿಲುಗಡೆಗೊಂಡಿತು. ಹಗ್ಗವನ್ನು ಸರಿ ಪ್ರಮಾಣದಲ್ಲಿ ಮತ್ತೆ ಭಕ್ತರು ಎಳೆಯಲು ಅನುವು ಮಾಡಿಕೊಟ್ಟ ನಂತರ ತೇರು ಮುಂದೆ ಸಾಗಿತು. ಭಕ್ತರು ಖುಷಿಯಿಂದ ಮತ್ತೆ ಸ್ವಾಮಿ ಜಯಕಾರ ಕೂಗಿ ನಮಿಸಿದರು.