ಶಿವಕುಮಾರ ಕುಷ್ಟಗಿ

ಗದಗ: ಜಿಲ್ಲೆಯ ಮುಂಡರಗಿ ಮತ್ತು ಗದಗ ತಾಲೂಕಿನ ರೈತರ ಬಹು ದಶಕಗಳ ಕನಸಿನ ಆಸರೆಯಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯಡಿ ಬ್ಲಾಕ್- 6 (ಕುರ್ತಕೋಟಿ ಬ್ಲಾಕ್) ಕಾಮಗಾರಿಯು ಅನುಷ್ಠಾನದ ಅಂತಿಮ ಹಂತಕ್ಕೆ ತಲುಪಿದೆ.

ಮುಂಡರಗಿ ತಾಲೂಕಿನ ಹಮ್ಮಗಿ ಬ್ಯಾರೇಜ್‌ನಿಂದ ನೀರನ್ನು ಎತ್ತಿ ಕಾಲುವೆಗಳಿಗೆ ಹರಿಸಿ, ಅಲ್ಲಿಂದ ಮತ್ತೆ ಮುಖ್ಯ ಸಂಪ್‌ಗಳಿಗೆ ಸಂಗ್ರಹಿಸಿ ರೈತರ ಹೊಲಗಳಿಗೆ ಹನಿ ನೀರಾವರಿ ಮೂಲಕ ಪೂರೈಸುವ ಮೂಲ ಸ್ವರೂಪದ ಈ ಯೋಜನೆ 6 ತಿಂಗಳಲ್ಲಿ ಸಂಪೂರ್ಣವಾಗಿ ರೈತರ ಕೈಸೇರಲಿದೆ.

ದೇಶದಲ್ಲೇ ಅತಿ ದೊಡ್ಡ ಸೂಕ್ಷ್ಮ ನೀರಾವರಿ ಯೋಜನೆಯ ಭಾಗವಾಗಿರುವ ಈ ಕಾಮಗಾರಿಗಾಗಿ ಈಗಾಗಲೇ 2 ಕೋಟಿ ಲೀಟರ್‌ಗೂ ಅಧಿಕ ಸಾಮರ್ಥ್ಯದ ಬೃಹತ್ ನೀರಿನ ಸಂಗ್ರಹಣಾ ಟ್ಯಾಂಕ್‌ ಅನ್ನು ನಿರ್ಮಿಸಲಾಗಿದೆ. ಈ ಟ್ಯಾಂಕ್‌ನಿಂದ ಗುರುತ್ವಾಕರ್ಷಣೆ ಮೂಲಕ ನೀರನ್ನು ಸಾಗಿಸಿ ಕುರ್ತಕೋಟಿ ಬಳಿ ಬೃಹತ್ ಪಂಪ್ ಹೌಸ್ ನಿರ್ಮಿಸಲಾಗಿದೆ. ವಿಶೇಷವೆಂದರೆ, ಪ್ರತಿಯೊಬ್ಬ ರೈತನ ಹೊಲದಲ್ಲಿ ಅಳವಡಿಸಲಾಗಿರುವ ನೀರು ಪೂರೈಕೆಯ ವಾಲ್ವ್‌ಗಳನ್ನು ಒಂದೇ ಕೇಂದ್ರದಲ್ಲಿ ಕುಳಿತು ಡಿಜಿಟಲ್ ಆಗಿ ನಿರ್ವಹಿಸುವ ಅತ್ಯಾಧುನಿಕ ತಂತ್ರಜ್ಞಾನವನ್ನು ಇಲ್ಲಿ ಬಳಸಲಾಗಿದೆ.

ಸೂಕ್ಷ್ಮ ನೀರಾವರಿ ಸೌಲಭ್ಯ: ಈ ಬ್ಲಾಕ್‌ನಡಿ ಒಟ್ಟು 6500 ಹೆಕ್ಟೇರ್ ಕೃಷಿ ಭೂಮಿಗೆ ನೀರಾವರಿ ಸೌಲಭ್ಯ ಸಿಗಲಿದ್ದು, ಇದು ರೈತರಿಗೆ ಕಡಿಮೆ ವೆಚ್ಚದಲ್ಲಿ ಹೆಚ್ಚಿನ ಬೆಳೆ ಇಳುವರಿ ಪಡೆಯಲು ನೆರವಾಗಲಿದೆ. ಗದಗ ತಾಲೂಕಿನ ದಿಂಡೂರು, ಅಂತೂರು, ಬೆಂತೂರು, ಅಸುಂಡಿ, ಹುಲಕೋಟಿ ಹಾಗೂ ಕುರ್ತಕೋಟಿ ಗ್ರಾಮಗಳ ಬಹುತೇಕ ರೈತರ ಜಮೀನುಗಳಿಗೆ ಇದರಿಂದ ಹನಿ ನೀರಾವರಿ ಆಸರೆ ಸಿಗಲಿದೆ.


ಪ್ರಸ್ತುತ ಮೇಘಾ ಎಂಜಿನಿಯರಿಂಗ್ ಇನ್‌ಫ್ರಾಸ್ಟ್ರಕ್ಚರ್ ಲಿಮಿಟೆಡ್ ಹಾಗೂ ನೆಟಾಫಿಮ್ ಸಂಸ್ಥೆಗಳು ಜಂಟಿಯಾಗಿ ಈ ಯೋಜನೆಯ ಗುತ್ತಿಗೆ ಪಡೆದು ಬಹುತೇಕ ಕಾಮಗಾರಿಗಳನ್ನು ಪೂರ್ಣಗೊಳಿಸಿವೆ.

ವಿಳಂಬಕ್ಕೆ ಕಾರಣವೇನು?: 2015- 16ನೇ ಸಾಲಿನಲ್ಲಿಯೇ ಈ ಬೃಹತ್ ಕಾಮಗಾರಿ ಪ್ರಾರಂಭವಾಗಿತ್ತಾದರೂ ಹಲವು ಅಡೆತಡೆಗಳನ್ನು ಎದುರಿಸಬೇಕಾಯಿತು. 2019ರಲ್ಲಿ ಯೋಜನೆಗೆ ಹೆಚ್ಚುವರಿ ಕಾಮಗಾರಿಗಳ ಸೇರ್ಪಡೆಯೊಂದಿಗೆ ಕ್ಯಾಬಿನೆಟ್ ಅನುಮೋದನೆ ದೊರೆಯಿತು. ಆದರೆ, 2020 ಮತ್ತು 2021ರಲ್ಲಿ ಎದುರಾದ ಕೋವಿಡ್ ಸಾಂಕ್ರಾಮಿಕದ ಬಿಕ್ಕಟ್ಟಿನಿಂದಾಗಿ ಕಾಮಗಾರಿ ತೀವ್ರ ವಿಳಂಬವಾಯಿತು. ಇದರ ಬೆನ್ನಲ್ಲೇ, ಕೆಲವು ಭಾಗಗಳಲ್ಲಿ ರೈತರು ತಮ್ಮ ಜಮೀನುಗಳ ಮೂಲಕ ಬೃಹತ್ ಪೈಪ್‌ಲೈನ್ ಅಳವಡಿಸಲು ಒಪ್ಪಿಗೆ ನೀಡದೆ ಪ್ರತಿರೋಧ ಒಡ್ಡಿದ್ದರಿಂದ ಕಾಮಗಾರಿ ಮತ್ತೆ ನನೆಗುದಿಗೆ ಬಿದ್ದಿತ್ತು.

ಪ್ರಸ್ತುತ ಬಹುತೇಕ ಸವಾಲುಗಳನ್ನು ದಾಟಿ ಕಾಮಗಾರಿ ಮುಕ್ತಾಯದ ಹಂತದಲ್ಲಿದ್ದರೂ, ಕೆಲವು ತಾಂತ್ರಿಕ ಸಮಸ್ಯೆ ಎದುರಾಗಿರುವುದರಿಂದ ಈ ಭಾಗದ ರೈತರು ನೀರಿಗಾಗಿ ಇನ್ನು 4ರಿಂದ 5 ತಿಂಗಳುಗಳ ಕಾಲ ಕಾಯಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಏನೇ ಆದರೂ, ಮುಂದಿನ ಆರು ತಿಂಗಳಲ್ಲಿ ಯೋಜನೆ ಪೂರ್ಣಗೊಂಡು ಒಣಭೂಮಿಗೆ ನೀರು ಹರಿಯುವುದು ನಿಶ್ಚಿತವಾಗಿದ್ದು, ಜಿಲ್ಲೆಯ ಕೃಷಿ ವಲಯದಲ್ಲಿ ಇದೊಂದು ಕ್ರಾಂತಿಕಾರಿ ಹೆಜ್ಜೆಯಾಗಲಿದೆ.

ಹನಿ ನೀರಾವರಿ ಸೌಲಭ್ಯ: ಈಗಾಗಲೇ ಯೋಜನೆಯ ಎಲ್ಲ ಕಾಮಗಾರಿಗಳು ಪೂರ್ಣಗೊಂಡಿದ್ದು, ಕೆಲ ತಾಂತ್ರಿಕ ಸಮಸ್ಯೆಗಳಿಂದ ವಿಳಂಬವಾಗಿದೆ. ಸಾಧ್ಯವಾದಷ್ಟು ಬೇಗನೇ ಈ ಭಾಗದ ರೈತರ ಜಮೀನುಗಳಿಗೆ ಹನಿ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು ಎಂದು ಸಿಂಗಟಾಲೂರು ನೀರಾವರಿ ಯೋಜನೆಯ ಇಇ ಪ್ರಕಾಶ ಐಗೋಳ ತಿಳಿಸಿದರು.