ಕುವೆಂಪು, ಯುಆರ್ ಅನಂತಮೂರ್ತಿ ಜನಿಸಿದ ಈ ಮಣ್ಣಲ್ಲಿ ವಿಶೇಷ ಶಕ್ತಿ
KannadaprabhaNewsNetwork | Published : Oct 22 2023, 01:00 AM IST
ಕುವೆಂಪು, ಯುಆರ್ ಅನಂತಮೂರ್ತಿ ಜನಿಸಿದ ಈ ಮಣ್ಣಲ್ಲಿ ವಿಶೇಷ ಶಕ್ತಿ
ಸಾರಾಂಶ
ಪ್ರಜಾತಂತ್ರ ವ್ಯವಸ್ಥೆ ಆಡಳಿತ ಜಾರಿಗೆ ಬಂದ ನಂತರದಲ್ಲೂ ಈ ಸಂಪ್ರದಾಯ ಎಂದಿನಂತೆ ಮುಂದುವರಿದಿರುವುದು ಸಂತಸದ ಸಂಗತಿ
ಕನ್ನಡಪ್ರಭ ವಾರ್ತೆ ತೀರ್ಥಹಳ್ಳಿ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಕುವೆಂಪು, ಯು.ಆರ್. ಅನಂತಮೂರ್ತಿ ಅವರು ಜನ್ಮತಾಳಿದ ಈ ಮಣ್ಣಿನಲ್ಲಿ ವಿಶೇಷ ಶಕ್ತಿ ಇದೆ. ಸಾಹಿತ್ಯ ಸಾಂಸ್ಕೃತಿಕ ಮತ್ತು ರಾಜಕೀಯವಾಗಿಯೂ ಈ ನೆಲದಿಂದ ಮಹಾನ್ ವ್ಯಕ್ತಿಗಳು ಜನಿಸಿದ್ದಾರೆ. ಆ ದಾರ್ಶನಿಕರ ಸಾಲಿನಲ್ಲಿ ನಾಡಿಗೆ ಕೊಡುಗೆ ನೀಡಬಲ್ಲ ಯುವ ಪ್ರತಿಭೆಗಳು ಹೆಚ್ಚೆಚ್ಚು ಮೂಡಿಬರುವಂತಾಗಬೇಕು ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು. ಶ್ರೀ ರಾಮೇಶ್ವರ ದೇವರ ದಸರಾ ಉತ್ಸವ ಸಮಿತಿಯ ಸಾಂಸ್ಕೃತಿಕ ವಿಭಾಗದ ವತಿಯಿಂದ ಶನಿವಾರ ಪಟ್ಟಣದ ಗೋಪಾಲಗೌಡ ರಂಗಮಂದಿರದಲ್ಲಿ ನಡೆದ ಶಿವಮೊಗ್ಗ ಜಿಲ್ಲಾಮಟ್ಟದ ಕವಿಗೋಷ್ಠಿಯನ್ನು ಉದ್ಘಾಟಿಸಿ, ರಾಜಮಹಾರಾಜರ ಕಾಲದಿಂದ ಅನೂಚಾನವಾಗಿ ನಡೆದುಕೊಂಡು ಬರುತ್ತಿರುವ ನಾಡಹಬ್ಬ ಸಾಹಿತ್ಯ ಸಾಂಸ್ಕೃತಿಕ ಕಲೆಗಳಿಂದ ಮೆರಗು ಪಡೆದಿದೆ. ಪ್ರಜಾತಂತ್ರ ವ್ಯವಸ್ಥೆ ಆಡಳಿತ ಜಾರಿಗೆ ಬಂದ ನಂತರದಲ್ಲೂ ಈ ಸಂಪ್ರದಾಯ ಎಂದಿನಂತೆ ಮುಂದುವರಿದಿರುವುದು ಸಂತಸದ ಸಂಗತಿ ಎಂದರು. ಪಪಂ ಅಧ್ಯಕ್ಷೆ ಮಾತನಾಡಿ, ಸರಿ-ತಪ್ಪುಗಳ ಬಗ್ಗೆ ಜನಜಾಗೃತಿ ಮೂಡಿಸಿ, ಸಮಾಜವನ್ನು ಸರದಾರಿಯಲ್ಲಿ ಕೊಂಡೊಯ್ಯ ಬಲ್ಲ ಮಾಂತ್ರಿಕ ಶಕ್ತಿಯನ್ನು ಸಾಹಿತ್ಯ ಹೊಂದಿದೆ. ಈ ಕವಿಗೋಷ್ಠಿಯಲ್ಲಿ ಜಿಲ್ಲಾದ್ಯಂತ ಕವಿಗಳು ಪಾಲ್ಗೊಂಡಿರುವುದು ಕವಿಗೋಷ್ಠಿಗೆ ವಿಶೇಷ ಮೆರಗು ತಂದಿದೆ ಎಂದರು. ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ ಮಾತನಾಡಿ, ಸ್ವರ್ಗೀಯರಾಗಿರುವ ಹಿಂದಿನ ತಹಸೀಲ್ದಾರ್ 80ರ ದಶಕದಲ್ಲಿ ಪ್ರಾರಂಭಿಸಿದ ಅದ್ಧೂರಿ ದಸರಾ ಆಚರಣೆ ವರ್ಷದಿಂದ ವರ್ಷಕ್ಕೆ ಮೆರಗು ಪಡೆದುಕೊಳ್ಳುತ್ತಿದೆ. ನವೆಂಬರ್ ಕೊನೆ ವಾರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೆಳನ ನಡೆಸಲಾಗುವುದು ಎಂದರು. ದಸರಾ ಉತ್ಸವ ಸಮಿತಿ ಸಂಚಾಲಕ ಸಂದೇಶ್ ಜವಳಿ ಮಾತನಾಡಿ, ಈ ಮೊದಲು ಒಂದು ಎರಡು ದಿನಕ್ಕೆ ಮೀಸಲಾಗಿದ್ದ ಉತ್ಸವವನ್ನು ಈ ಬಾರಿ ನಾಲ್ಕು ದಿನಗಳಿಗೆ ವಿಸ್ತರಿಸಲಾಗಿದೆ. ಮುಂದಿನ ದಿನಗಳಲ್ಲಿ ಕ್ರೀಡೆ ಮತ್ತಿತರ ಚಟುವಟಿಕೆಗಳಿಗೂ ವಿಸ್ತರಿಸಬೇಕಿದೆ. ಮತ್ತು ಇಂದಿಲ್ಲಿ ವಾಚಿಸುವ ಕವನಗಳನ್ನು ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು ಎಂದರು. ಆರ್ಥಿಕ ಸಮಿತಿ ಸಂಚಾಲಕ ಸೊಪ್ಪುಗುಡ್ಡೆ ರಾಘವೇಂದ್ರ ವೇದಿಕೆಯಲ್ಲಿದ್ದರು. ತೀರ್ಪುಗಾರರಾಗಿ ತುಂಗಾ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಡಾ. ಬಿ.ಗಣಪತಿ ಹಾಗೂ ರಾಷ್ಟ್ರ ಪ್ರಶಸ್ತಿ ಪುರಸ್ಕøತ ನಿವೃತ್ತ ಶಿಕ್ಷಕಿ ಸುಧೀಷ್ಣಾಕುಮಾರಿ ಕಾರ್ಯನಿರ್ವಹಿಸಿದರು. ಸಾಂಸ್ಕೃತಿಕ ಸಮಿತಿ ಸಂಚಾಲಕ ಡಾನ್ ರಾಮಣ್ಣ ಸ್ವಾಗತಿಸಿ ವಂದಿಸಿದರು. ಸಹ ಸಂಚಾಲಕರಾದ ಜ್ಯೋತಿ ಮೋಹನ್ ನಿರೂಪಿಸಿದರು. ಪ್ರಶಸ್ತಿ ಪುರಸ್ಕೃತರು: ಪ್ರಥಮ: ಬಿ.ಟಿ.ಅಂಬಿಕಾ ಶಿವಮೊಗ್ಗ, ದ್ವಿತೀಯ: ಡಾ. ಮುರುಳೀಧರ ಕಿರಣಕೆರೆ. ತೃತೀಯ: ಕೃಷ್ಣಾ ಎಂ ಜಾದವ್ ತೀರ್ಥಹಳ್ಳಿ. - - - -21ಟಿಟಿಎಚ್01: ಕವಿಗೋಷ್ಠಿಯಲ್ಲಿ ವಿಜೇತರಾದವರೊಂದಿಗೆ ಸಾಂಸ್ಕೃತಿಕ ಸಮಿತಿ ಸದಸ್ಯರು.