ಸಾರಾಂಶ
ಮುಳಗುಂದ: ದೇಶಕ್ಕೆ ವಿದ್ಯಾರ್ಜನೆಗಾಗಿ ವಿದೇಶಗಳಿಂದ ವಿದ್ಯಾರ್ಥಿಗಳು ಬರುತ್ತಾರೆ, ಅಂತಹದರಲ್ಲಿ ನಮ್ಮ ದೇಶದ ಬಗ್ಗೆಯೇ ನಮಗೆ ಅಭಿಮಾನದ ಕೊರತೆಯಿದೆ ಎಂದು ಮಣಕವಾಡದ ದೇವಮಂದಿರದ ಅಭಿನವ ಮೃತ್ಯುಂಜಯ ಸ್ವಾಮಿಗಳು ಹೇಳಿದರು.
ಸಮೀಪದ ಹರ್ತಿ ಗ್ರಾಮದ ಬಸ್ಟ್ಯಾಂಡ ಪಕ್ಕದಲ್ಲಿ ಗುರುವಾರ ಸಂಜೆ 12 ದಿನಗಳ ಕಾಲ ನಡೆಯುವ ವಚನ ದರ್ಶನ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರವಚನಕಾರರಾಗಿ ಮಾತನಾಡಿ, ಚಿಕ್ಯಾಗೋ ಪಟ್ಟಣದಲ್ಲಿ ವಿದೇಶದ ಜನರಿಗೆ ಆಧ್ಯಾತ್ಮದ ಬಗ್ಗೆ ತಿಳಿಸಿ ಕೊಟ್ಟ ಶ್ರೇಯಸ್ಸು ವಿವೇಕಾನಂದರಿಗೆ ಸಲ್ಲುತ್ತದೆ. ದೇಶದ ಸಾಹಿತ್ಯ, ಸಂಸ್ಕೃತಿ, ಸಂಪ್ರದಾಯ, ಆಚಾರ-ವಿಚಾರ ಇಲ್ಲಿನ ಪದ್ಧತಿ ವಿದೇಶಿಗರು ಹಾಡಿ ಹೊಗಳಿದ್ದಾರೆ. ಅಂತಹ ವಿಶ್ವಗುರು ಭಾರತ ನಮ್ಮದು ಎಂದರು.ದೇಶದಲ್ಲಿ ಸಂಶೋಧನೆಯ ಪ್ರಕಾರ ಶೇ. 70 ರಷ್ಟು ಜನ ಮೊಬೈಲ್ ಗೀಳಿಗೆ ಬಿದ್ದಿದ್ದಾರೆ. ಈ ಜನರಿಗೆ ಮೊಬೈಲ್ ಬಿಟ್ಟು ದೂರವಾಗುವಂತಿಲ್ಲ. ತಾವು ಪರಮಾತ್ಮನ ಸಾಕ್ಷಾತ್ಕರದ ಜತೆಗೆ ನಿಮ್ಮ ಮನಸ್ಸು ಸಾಕ್ಷಾತ್ಕಾರಗೊಳಿಸಿಕೊಳ್ಳಿ.ಪ್ರವಚನದ ನಂತರ ಮನಸ್ಸನ್ನು ಶಾಂತಗೊಳಿಸಿ ನಮ್ಮಲ್ಲಿರುವ ಅಜ್ಞಾನ ಕಿತ್ತು, ಸುಜ್ಞಾನ ಬೆಳೆಸುವ ಕೆಲಸವಾಗಬೇಕು.ಅದು ಇಂತಹ ಪ್ರವಚನ ಕಾರ್ಯಕ್ರಮದಿಂದ ಸಾಧ್ಯ. ಜೀವನದಲ್ಲಿ ಎಷ್ಟೇ ಕಷ್ಟ ಬಂದರು ದೇವರಲ್ಲಿ ನಂಬಿಕೆ ಇಡಬೇಕು, ಭಗವಂತ ನಿಮಗೆ ಒಳ್ಳೆಯ ಮಾರ್ಗದಲ್ಲಿ ಕೈ ಹಿಡಿದು ನಡೆಸುತ್ತಾನೆ ಎಂದರು.
ಮಾಜಿ ಶಾಸಕ ಡಿ.ಆರ್. ಪಾಟೀಲ ಮಾತನಾಡಿ, ಪ್ರವಚನ ಆಲಿಸಿ ಬದುಕು ಹಸನಾಗಿಸಿಕೊಳ್ಳಬೇಕು. ಇದರಿಂದ ಪ್ರತಿಯೊಬ್ಬರಲ್ಲೂ ಬದಲಾವಣೆ ಕಾಣಬೇಕು ಅಂದಾಗ ಮಾತ್ರ ಪ್ರವಚನ ಆಲಿಸಿದ್ದು ಸಾರ್ಥಕವಾಗುತ್ತದೆ ಎಂದರು.ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜನವರು ಮಾತನಾಡಿ, ಮಕ್ಕಳ ಕೈಯಲ್ಲಿ ಮೊಬೈಲ್ ಬದಲಿಗೆ ಪುಸ್ತಕ ಕೊಡಿ. ಅವರಲ್ಲಿ ಗಣನೀಯ ಬದಲಾವಣೆ ಕಾಣುವಿರಿ. ತಂದೆ ತಾಯಿಗಳನ್ನು ಪ್ರೀತಿ ಗೌರವದಿಂದ ಕಾಣಿ.ಅವರಿಬ್ಬರ ಋಣ ಎಂದಿಗೂ ತೀರಿಸಲಾಗದು ಎಂದರು.
ಬಸವ ಬುತ್ತಿ ಬಸವಣ್ಣನವರ ವಚನ ಗ್ರಂಥಗಳ ಮೆರವಣಿಗೆಯು ಭಜನೆ, ಪುರವಂತರ ಗಗ್ಗರಿ ಕೋಲು, ಕರಡಿ ಮಜಲು ಸೇರಿದಂತೆ ವಾದ್ಯ ವೈಭವಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ನಡೆಯಿತು.ಈ ಸಂದರ್ಭದಲ್ಲಿ ಅಡ್ನೂರು ಹಾಗೂ ರಾಜೂರಿನ ಅಭಿನವ ಪಂಚಾಕ್ಷರ ಶಿವಾಚಾರ್ಯ ಸ್ವಾಮಿಗಳು, ಮಾಜಿ ಶಾಸಕ ಜಿ.ಎಸ್.ಗಡ್ಡದ್ದೇವರಮಠ, ಗಣ್ಯ ಉದ್ದಿಮೆ ವಿಜಯಕುಮಾರ ಗಡ್ಡಿ, ಡಿ.ಕೆ.ಲಕ್ಕಣ್ಣವರ ಹಾಗೂ ಗ್ರಾಮದ ಹಿರಿಯರು ಇದ್ದರು.