ಲಕ್ಷ್ಮೇಶ್ವರ ಬಂದ್ ಬಹುತೇಕ ಶಾಂತಿಯುತ

| Published : Oct 20 2024, 01:47 AM IST

ಸಾರಾಂಶ

ಜನ ಸಾಮಾನ್ಯರು ಬಿಗುವಿನ ವಾತಾವರಣದಲ್ಲಿ ತಮ್ಮ ದೈನಂದಿನ ಚಟುವಟಿಕೆ ನಡೆಸಿದರು

ಲಕ್ಷ್ಮೇಶ್ವರ: ಗೋಸಾವಿ ಸಮಾಜದ ಮೇಲೆ ಲಕ್ಷ್ಮೇಶ್ವರ ಪಟ್ಟಣದ ಪಿಎಸ್‌ಐ ಈರಪ್ಪ ರಿತ್ತಿ ಲಾಠಿ ಪ್ರಹಾರ ಮಾಡಿದ್ದನ್ನು ಖಂಡಿಸಿ ಶನಿವಾರ 19 ರಂದು ಲಕ್ಷ್ಮೇಶ್ವರ ಬಂದ್‌ಗೆ ಶ್ರೀರಾಮ ಸೇನೆ, ಗೋಸಾವಿ ಸಮಾಜ ಹಾಗೂ ವಿವಿಧ ಹಿಂದೂಪರ ಸಂಘಟನೆಗಳ ಕರೆ ನೀಡಿದ್ದರ ಹಿನ್ನೆಲೆ ಬಂದ್ ಬಹುತೇಕ ಶಾಂತಿಯುತವಾಗಿ ನಡೆಯಿತು.

ಪಟ್ಟಣದ ಬಾನು ಮಾರ್ಕೆಟ್ ಹಾಗೂ ಬಜಾರ್‌ನ ಪ್ರಮುಖ ಅಂಗಡಿ ಮುಂಗಟ್ಟುಗಳ ವ್ಯಾಪಾರಸ್ಥರು ಮತ್ತು ಹೊಸ ಬಸ್ ನಿಲ್ದಾಣದ ರಸ್ತೆಯ ವ್ಯಾಪಾರಸ್ಥರು ತಮ್ಮ ಅಂಗಡಿಗಳನ್ನು ಸ್ವಯಂ ಪ್ರೇರಿತ ಬಂದ್ ಮಾಡಿದ್ದು ಕಂಡು ಬಂದಿತು.

ಸದಾ ಗಿಜಿಗುಡುತ್ತಿದ್ದ ಪಟ್ಟಣದ ರಸ್ತೆಗಳು ಬಂದ್ ಹಿನ್ನೆಲೆಯಲ್ಲಿ ಬಿಕೋ ಎನ್ನುತ್ತಿದ್ದವು. ಬಸ್ ಸಂಚಾರ ವಿರಳವಾಗಿ ಓಡಾಟ ನಡೆಸಿದ್ದು ಕಂಡು ಬಂದಿತು. ಪಟ್ಟಣದಲ್ಲಿ ಎಲ್ಲೆಂದರಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯಂತೆ ಮುಂಜಾಗ್ರತೆ ಕ್ರಮವಾಗಿ ಸ್ವತಃ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಮುಕ್ಕಾಂ ಹೂಡಿದ್ದರು.

ಪಟ್ಟಣದಲ್ಲಿ ಭಾರಿ ಬಿಗಿ ಬಂದೋಬಸ್ತ್ ನಡುವೆ ನಡೆದ ಲಕ್ಷ್ಮೇಶ್ವರ ಬಂದ್ ಬಹುತೇಕ ಶಾಂತಿಯುತವಾಗಿ ನಡೆಯಿತು.ಪಟ್ಟಣದಲ್ಲಿ ಬಿಗುವಿನ ವಾತಾವರಣ ಕಂಡು ಬಂದಿತು. ಜನ ಸಾಮಾನ್ಯರು ಬಿಗುವಿನ ವಾತಾವರಣದಲ್ಲಿ ತಮ್ಮ ದೈನಂದಿನ ಚಟುವಟಿಕೆ ನಡೆಸಿದರು. ಪಟ್ಟಣದ ವ್ಯಾಪಾರಸ್ಥರು ತಮ್ಮ ಅಂಗಡಿ ಮುಂಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡಿ ಬಂದ್‌ಗೆ ಬೆಂಬಲ ಸೂಚಿಸಿದ್ದು ಕಂಡು ಬಂದಿತು.