ಮಾತೃಭಾಷೆಯ ಕಲಿಕೆಯ ಜೊತೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಗತ್ಯವಾದ ಉನ್ನತ ಶಿಕ್ಷಣ ಪಡೆಯಲು ಪೂರಕವಾದ ಇಂಗ್ಲಿಷ್ ಕಲಿಕೆಯು ಇರಬೇಕು.

ಕನ್ನಡಪ್ರಭ ವಾರ್ತೆ ಗೋಕರ್ಣ

ಮಾತೃಭಾಷೆಯ ಕಲಿಕೆಯ ಜೊತೆ ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಅಗತ್ಯವಾದ ಉನ್ನತ ಶಿಕ್ಷಣ ಪಡೆಯಲು ಪೂರಕವಾದ ಇಂಗ್ಲಿಷ್ ಕಲಿಕೆಯು ಇರಬೇಕು. ಈ ನಿಟ್ಟಿನಲ್ಲಿ ಗ್ರಾಮೀಣ ಭಾಗದಲ್ಲಿ ಖಾಸಗಿ ಇಂಗ್ಲಿಷ್ ಮಾಧ್ಯಮ ಶಿಕ್ಷಣ ಸಂಸ್ಥೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವುದು ಪ್ರಶಂಸನೀಯ ಎಂದು ಕರುಣಾ ಟ್ರಸ್ಟ್ ಕಾರ್ಯದರ್ಶಿ ಹಾಗೂ ಕಾಂಗ್ರೆಸ್ ನಾಯಕಿ ಸುಮಂಗಲಾ ಹನೇಹಳ್ಳಿ ಹೇಳಿದರು

ಕೆನರಾ ಶಿಕ್ಷಣ ಪ್ರಸಾರಕ ಮಂಡಳದ ಶ್ರೀ ಭದ್ರಕಾಳಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ಎರಡು ದಿನಗಳ ದಶಮಾನೋತ್ಸವದ ದಶದೀಪ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕಲಿಕೆಯಲ್ಲಿ ಆಸಕ್ತಿ ಇಟ್ಟುಕೊಂಡು ನಮ್ಮ ಮುಂದಿನ ಗುರಿ ತಲುಪಲು ಉತ್ತಮ ಅಭ್ಯಾಸ ಮಾಡಬೇಕು. ಮೊಬೈಲ್ ಬಳಕೆಯಿಂದ ದೂರವಿದ್ದು ಪಾಠದ ಕಡೆಗೆ ಒತ್ತು ನೀಡಬೇಕು ಎಂದರು.

ಕೆನರಾ ಶಿಕ್ಷಣ ಪ್ರಚಾರಕ ಮಂಡಳದ ಅಧ್ಯಕ್ಷ ಡಾ. ವಿ.ಆರ್. ಮಲ್ಲನ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂಗ್ಲೀಷ್ ಮಾಧ್ಯಮದ ವಿಭಾಗದ ಎಲ್ಲ ಸಿಬ್ಬಂದಿ ಕಾರ್ಯದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಶಾಲಾ ಆಡಳಿತ ಮಂಡಳಿಯ ಸದಸ್ಯ ಗುರುಪ್ರಕಾಶ ಹೆಗಡೆ ಮಾತನಾಡಿ, ಉತ್ತಮ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆಯನ್ನು ಉಳಿಸಿ ಬೆಳೆಸಲು ಎಲ್ಲರ ಸಹಾಯ ಸಹಕಾರ ಅಗತ್ಯ ಎಂದರು.

ಮಹಾಬಲೇಶ್ವರ ಮಂದಿರದ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಮಹೇಶ ಹಿರೇಗಂಗೆ, ಆರ್.ಎಚ್. ನಾಯಕ ಮಾತನಾಡಿದರು.

ಇದೇ ವೇಳೆ ಶಿಕ್ಷಣ ಸಂಸ್ಥೆಯ ವಿವಿಧ ಕೆಲಸ ಕಾರ್ಯಕ್ಕೆ ಸಹಕರಿಸಿದ ಇಲಾಖೆಯ ಸಿಬ್ಬಂದಿ ಗೌರವಿಸಲಾಯಿತು. ಸಂಸ್ಥೆಯ ಕಾರ್ಯದರ್ಶಿ ಜಿ.ಎನ್. ನಾಯಕ ಅವರಸಂದೇಶ ಸಭೆಯಲ್ಲಿ ತಿಳಿಸಲಾಯಿತು. ಅಲ್ಲದೆ ಒಂದರಿಂದ ೧೦ನೇ ತರಗತಿ ವರೆಗೆ ಇದೇ ಶಾಲೆಯಲ್ಲಿ ಮಕ್ಕಳನ್ನು ಓದಿಸಿದ ಪಾಲಕರಿಗೆ ಗೌರವ ಸಮರ್ಪಣೆ ಮಾಡಲಾಯಿತು.

ನಂತರ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸಾನ್ವಿ ಮತ್ತು ತಂಡದಿಂದ ನಡೆದ ರಕ್ತ ಬೀಜಾಸುರ ರೂಪಕ ಬಹು ಆಕರ್ಷಕವಾಗಿ ಮೂಡಿ ಬಂತು.

ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿಯ ಖಜಾಂಚಿ ರವೀಂದ್ರ ಕೊಡ್ಲೆಕೆರೆ, ಸದಸ್ಯ ರಮೇಶ್ ಪ್ರಸಾದ್, ಡಾ. ರಾಮಚಂದ್ರ ಮಲ್ಲನ್, ಮುಖ್ಯಾಧ್ಯಾಪಕಿ ರೇವತಿ ಮಲ್ಲನ್, ಶಿಕ್ಷಣ ಸಲಹೆಗಾರ ಯೋಗೇಶ್ ಶಾನಭಾಗ್, ಶಿಕ್ಷಣ ಸಂಯೋಜಕಿ ದೀಪಾ ಕಾಮತ, ಸಿ.ಆರ್.ಪಿ. ಮೋಹಿನಿ ಗೌಡ ಉಪಸ್ಥಿತರಿದ್ದರು. ಶಿಕ್ಷಕಿಯರಾದ ಶಿವಾನಿ, ಚೈತ್ರಾ, ಸುನೀತಾ ನಿರ್ವಹಿಸಿದರು. ಶಿಕ್ಷಕರು, ಸಿಬ್ಬಂದಿ ಸಹಕರಿಸಿದರು.