ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಭಾಗವಹಿಸಲಿ: ಜಿಪಂ ಸಿಇಒ

| Published : Nov 15 2024, 12:39 AM IST

ಸಾರಾಂಶ

ಮಕ್ಕಳು ವಿದ್ಯಾಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು.

ಮಕ್ಕಳ ದಿನಾಚರಣೆ ನಿಮಿತ್ತ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ಕೊಪ್ಪಳ

ಮಕ್ಕಳು ವಿದ್ಯಾಭ್ಯಾಸದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಜಿಪಂ ಸಿಇಒ ಹಾಗೂ ಜಿಲ್ಲಾ ಬಾಲ ಭವನ ಸಮಿತಿ ಅಧ್ಯಕ್ಷ ರಾಹುಲ್ ರತ್ನಂ ಪಾಂಡೇಯ ಹೇಳಿದರು.

ನಗರದ ಕೃಷಿ ವಿಸ್ತರಣಾ ಶಿಕ್ಷಣ ಕೇಂದ್ರದಲ್ಲಿ ಬೆಂಗಳೂರು ಬಾಲಭವನ ಸೊಸೈಟಿ, ಜಿಲ್ಲಾಡಳಿತ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾ ಬಾಲ ಭವನ ಸಮಿತಿ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಮಕ್ಕಳ ದಿನಾಚರಣೆ ಅಂಗವಾಗಿ ಮಕ್ಕಳಿಗೆ ಹಮ್ಮಿಕೊಂಡ ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮತನಾಡಿದರು.

ಕ್ರೀಡೆ, ಸಾಂಸ್ಕೃತಿಕ ಕಾರ್ಯಕ್ರಮಗಳು ಜೀವನದ ಒಂದು ಭಾಗವಾಗಿರಬೇಕು. ಇದರಿಂದ ನಮಗೆ ಆರೋಗ್ಯ ಮತ್ತು ಮಾನಸಿಕ ನೆಮ್ಮದಿ ಸಿಗುತ್ತದೆ. ಮಕ್ಕಳು ವಿದ್ಯಾಭ್ಯಾಸದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಚಿತ್ರಕಲೆ, ಯೋಗ, ಕರಾಟೆ, ನೃತ್ಯ, ಹಾಡುವುದು, ಕ್ರೀಡೆಗಳಲ್ಲಿ ಭಾಗವಹಿಸುವುದು, ಕಾದಂಬರಿ ಹಾಗೂ ವಿಶೇಷ ಪುಸ್ತಕಗಳನ್ನು ಓದುವ ಹವ್ಯಾಸ ರೂಡಿಸಿಕೊಳ್ಳಬೇಕು.

ಮಕ್ಕಳು ಮೊಬೈಲ್ ಬಳಕೆ ಕಡಿಮೆ ಮಾಡಬೇಕು. ಸ್ವಚ್ಛತೆಯ ಬಗ್ಗೆಯೂ ಗಮನ ಹರಿಸಬೇಕು. ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿಟ್ಟುಕೊಳ್ಳಬೇಕು. ಯಾರೂ ಬಯಲು ಶೌಚಕ್ಕೆ ಹೋಗಬಾರದು. ಕಡ್ಡಾಯವಾಗಿ ಶೌಚಾಲಯವನ್ನೇ ಬಳಕೆ ಮಾಡಬೇಕು, ಇದರ ಕುರಿತು ಅರಿವು ಮೂಡಿಸಬೇಕು ಎಂದರು. ಮಕ್ಕಳ ಸೃಜನಾತ್ಮಕತೆಗೆ ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಿದ್ದು, ಮಕ್ಕಳ ಪ್ರತಿಭೆಯನ್ನು ಹೊರಹಾಕಲು ಅನುಕೂಲವಾಗುವಂತಹ ಕಾರ್ಯಕ್ರಮಗಳನ್ನು ಹೆಚ್ಚಾಗಿ ಹಮ್ಮಿಕೊಳ್ಳಬೇಕು ಎಂದು ಹೇಳಿದರು.

ಮಹಿಳಾ ಮತ್ತು ಮಕ್ಕಳ ಇಲಾಖೆಯ ಉಪನಿರ್ದೇಶಕ ಪರಶುರಾಮ ಶೆಟ್ಟೆಪ್ಪನವರ ಮಾತನಾಡಿ, ಬಾಲ ಭವನ ಸೊಸೈಟಿಯಿಂದ ನಡೆಯುವ ಕಾರ್ಯಕ್ರಮಗಳು ಮಕ್ಕಳ ಪ್ರತಿಭೆಗಳನ್ನು ಗುರುತಿಸಲು ಸಹಕಾರಿಯಾಗಿವೆ. ಮಕ್ಕಳು ಇಂತಹ ಕಾರ್ಯಕ್ರಮಗಳ ಸದುಪಯೋಗ ಪಡೆದುಕೊಳ್ಳಬೇಕು. ಮಕ್ಕಳ ದಿನಾಚರಣೆ ನಿಮಿತ್ತ ವಿವಿಧ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಗಿದ್ದು, ಭಾಗವಹಿಸಿದ ಎಲ್ಲ ಮಕ್ಕಳಿಗೆ ಪ್ರಶಂಸನಾ ಪತ್ರ ನೀಡಿ ಪ್ರೋತ್ಸಾಹಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಮಕ್ಕಳನ್ನು ರಾಜ್ಯಮಟ್ಟದ ಸ್ಪರ್ಧೆಗೆ ಕಳುಹಿಸಿಕೊಡಲಾಗುವುದು ಎಂದು ಮಾಹಿತಿ ನೀಡಿದರು.

ಪ್ರಶಸ್ತಿ ಪತ್ರ ವಿತರಣೆ:

ಸೃಜನಾತ್ಮಕ ಕಲೆ ಪ್ರದರ್ಶನದಲ್ಲಿ ವೈಷ್ಣವಿ ಕಮ್ಮಾರ ಪ್ರಥಮ, ತೇಜಸ್ವಿನಿ ದ್ವಿತೀಯ ಹಾಗೂ ಪುಟ್ಟರಾಜ ವೈ ನಿಡೋಣಿ ತೃತೀಯ ಸ್ಥಾನ ಪಡೆದರು. ಚಿತ್ರಕಲೆ ವಿಭಾಗದಲ್ಲಿ ವಿದ್ಯಾರ್ಥಿ ಪುಟ್ಟರಾಜ ಗಂಗಾಧರ ಪ್ರಥಮ, ಚೇತನ ಚಿತ್ರಗಾರ ದ್ವಿತೀಯ ಹಾಗೂ ಶ್ರೀನಿವಾಸ ಬಸವಂತಪ್ಪ ತೃತೀಯ ಸ್ಥಾನ ಗಳಿಸಿದರು. ವಿಜ್ಞಾನದಲ್ಲಿ ಸೃಜನಾತ್ಮಕ ಆವಿಷ್ಕಾರ ಸ್ಪರ್ಧೆಯಲ್ಲಿ ಪ್ರದೀಪ್ ನಡೂಲರ ಪ್ರಥಮ, ಬಂಗಾರಿ ದ್ವಿತೀಯ ಹಾಗೂ ಅಭಿಷೇಕ ತೃತೀಯ ಸ್ಥಾನ ಮತ್ತು ವಾದ್ಯ ಸಂಗೀತ ಸ್ಪರ್ಧೆಯಲ್ಲಿ ಸಮರ್ಥ ಎಸ್.ಎಂ ಪ್ರಥಮ , ಕೃಷ್ಣಚೈತನ್ಯ ದೇಸಾಯಿ ದ್ವಿತೀಯ ಹಾಗೂ ತರುಣಾ ತೃತೀಯ ಸ್ಥಾನ ಪಡೆದಿದ್ದಾರೆ. ವಿಜೇತರಾದ ಮಕ್ಕಳಿಗೆ ಜಿಪಂ ಸಿಇಒ ಪ್ರಶಸ್ತಿ ಪತ್ರ ವಿತರಿಸಿದರು.

ಮಹಿಳಾ ಮತ್ತು ಮಕ್ಕಳ ಇಲಾಖೆಯ ಜಿಲ್ಲಾ ನಿರೂಪಣಾಧಿಕಾರಿ ಗಂಗಪ್ಪ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ಅನ್ನಪೂರ್ಣ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿಠ್ಠಲ ಜಾಬಗೌಡರ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ರೋಹಿಣಿ ಕೊಟಗಾರ ಸೇರಿದಂತೆ ಮತ್ತಿತರರಿದ್ದರು.

ಮಕ್ಕಳ ಸಹಾಯವಾಣಿಯ ಜಿಲ್ಲಾ ಸಂಯೋಜಕ ಶರಣಪ್ಪ ಸಿಂಗನಾಳ ಕಾರ್ಯಕ್ರಮದ ನಿರೂಪಿಸಿದರು. ಕೊಪ್ಪಳ ಸಿಡಿಪಿಒ ಸ್ವಾಗತಿಸಿದರು. ಬಾಲ ಭವನದ ಕಾರ್ಯಕ್ರಮ ಸಂಯೋಜಕ ಮೆಹಬೂಬಸಾಬ ಇಲಾಹಿ ವಂದಿಸಿದರು. ತೀರ್ಪುಗಾರರು, ವಿವಿಧ ಶಾಲಾ ಮಕ್ಕಳು, ಶಿಕ್ಷಕರು ಪಾಲಕರು ಹಾಗೂ ಇಲಾಖೆಯ ಸಿಬ್ಬಂದಿ ಇತರರಿದ್ದರು.